ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಿಕ್ಕಮಗಳೂರು
ಚಿಕ್ಕಮಗಳೂರು- ಕರ್ನಾಟಕ ರಾಜ್ಯದ ಒಂದು ಜಿಲ್ಲೆ; ಆ ಜಿಲ್ಲೆಯ ಒಂದು ತಾಲ್ಲೂಕು; ಜಿಲ್ಲೆ ಮತ್ತು ತಾಲ್ಲೂಕುಗಳ ಆಡಳಿತ ಕೇಂದ್ರ. ಜಿಲ್ಲೆ: ಉತ್ತರಕ್ಕೆ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳು ಪೂರ್ವಕ್ಕೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳು, ದಕ್ಷಿಣಕ್ಕೆ ಹಾಸನ ಜಿಲ್ಲೆ, ಪಶ್ಚಿಮಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು-ಇವು ಈ ಜಿಲ್ಲೆಯ ಮೇರೆಗಳು. ಕಡೂರು, ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ ಮತ್ತು ತರೀಕೆರೆ - ಇವು ಈ ಜಿಲ್ಲೆಯ ಏಳು ತಾಲ್ಲೂಕುಗಳು. ಜಿಲ್ಲೆಯಲ್ಲಿ ಒಟ್ಟು 32 ಹೋಬಳಿಗಳೂ 1113 ಗ್ರಾಮಗಳೂ 226 ಗ್ರಾಮ ಪಂಚಾಯಿತಿಗಳೂ 10 ಪಟ್ಟಣಗಳೂ ಇವೆ. ಪೂರ್ವ-ಪಶ್ಚಿಮವಾಗಿ ಈ ಜಿಲ್ಲೆಯ ಗರಿಷವಿ ಉದ್ದ 138ಕಿಮೀ. ಉತ್ತರ-ದಕ್ಷಿಣವಾಗಿ ಗರಿಷ್ಠ ಅಗಲ 88ಕಿಮೀ. ಜಿಲ್ಲೆಯ ವಿಸ್ತೀರ್ಣ 7,199ಚ.ಕಿಮೀ. ಜನಸಂಖ್ಯೆ 10,08,057.
ಮಲೆನಾಡು ಮತ್ತು ಮೈದಾನ ಪ್ರದೇಶದಿಂದ ಕೂಡಿರುವ ಈ ಜಿಲ್ಲೆ ಪರ್ವತಮಯ. ಇದರ ಪಶ್ಚಿಮದಂಚಿನಲ್ಲಿ ಪಶ್ಚಿಮಘಟ್ಟಗಳು ಹಬ್ಬಿವೆ. ಇವುಗಳ ಕೆಲವು ಶಿಖರಗಳು ಹಿಮಾಲಯಕ್ಕೂ ನೀಲಗಿರಿಗೂ ನಡುವಿನ ಪ್ರದೇಶದಲ್ಲೇ ಅತ್ಯುನ್ನತವಾದಂಥವು. ಈ ಪರ್ವತಶ್ರೇಣಿಯಿಂದ ಒಳಚಾಚಿ ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ ಮತ್ತು ಚಿಕ್ಕಮಗಳೂರು ತಾಲ್ಲೂಕುಗಳಲ್ಲಿ ಹಬ್ಬಿರುವ ಬೆಟ್ಟಗಳ, ಶಿಖರಗಳ ಪೈಕಿ ಮುಳ್ಳಯ್ಯನಗಿರಿಯ ಎತ್ತರ ಸಮುದ್ರಮಟ್ಟದಿಂದ 1925ಮೀ. ಇದರ ಸಮೀಪದಲ್ಲೇ ಇರುವ ಬಾಬಾಬುಡನ್ ಗಿರಿ ಮತ್ತು ಕಲ್ಲತ್ತಗಿರಿಗಳು ಸಮುದ್ರಮಟ್ಟದಿಂದ ಅನುಕ್ರಮವಾಗಿ 1894ಮೀ ಮತ್ತು 1876ಮೀ ಎತ್ತರವಾಗಿವೆ. ಪಶ್ಚಿಮ ಘಟ್ಟದ ಕುದುರೆಮುಖ ಶಿಖರ 1894ಮೀ. ಎತ್ತರವಾಗಿದೆ. ಕುದುರೆಮುಖದಂತೆ ತೋರುವ ಈ ಶಿಖರ ಕಡಲ ನಾವಿಕರಿಗೆ ಭೂಮಿಯ ಹೆಗ್ಗುರುತಾಗಿತ್ತು. ಇದೇ ಶ್ರೇಣಿಯಲ್ಲಿ ಬಲ್ಲಾಳರಾಯನ ದುರ್ಗ (1505ಮೀ), ಗಂಗಾಮೂಲ (1454ಮೀ), ಒಡ್ಡಿನಗುಡ್ಡ (1526ಮೀ), ಮೈತ್ರಿಗುಡ್ಡ (1661ಮೀ), ಲಕ್ಕೆಪರ್ವತ (1421ಮೀ), ಶಕುನಗಿರಿ (1418ಮೀ), ಕಂಚಿಕಲ್ ದುರ್ಗ (1220ಮೀ) ಮೊದಲಾದ ಶಿಖರಗಳಿವೆ. ಜಿಲ್ಲೆಯ ದಕ್ಷಿಣದಲ್ಲಿ ಎಪ್ಪತ್ತು ಮಂದಿ ಗುಡ್ಡ, ಸಿಸಲುಕುಡಿ ಇವು ಎತ್ತರವಾದ ಶಿಖರಗಳು.
ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರು ತಾಲ್ಲೂಕುಗಳ ಕೆಲವು ಭಾಗಗಳನ್ನು ಬಿಟ್ಟರೆ ಜಿಲ್ಲೆಯ ಉಳಿದೆಲ್ಲ ಮಲೆನಾಡಿನ ಭಾಗ. ಈ ಪ್ರದೇಶ ಬೆಟ್ಟಗುಡ್ಡಗಳಿಂದಲೂ ದಟ್ಟವಾದ ಕಾಡುಗಳಿಂದಲೂ ಕೂಡಿವೆ. ಅಲ್ಲಲ್ಲಿ ಕಿರಿದಾದ ಬಯಲುಗಳಿವೆ. ಇನ್ನು ಕೆಲವು ಕಡೆ ಬರಡು ಕುರುಚಲು ಕಾಡುಗಳಿವೆ. ಬೆಟ್ಟ ಗುಡ್ಡಗಳಲ್ಲಿ ಎತ್ತರಕ್ಕೆ ಹೋದಂತೆ, ಸು.1400ಮೀ ಮೇಲೆ, ಕಾಡು ಕಡಿಮೆಯಾಗಿ ಕುರುಚಲು ಅಥವಾ ಹುಲ್ಲಿನಿಂದ ಕೂಡಿದ ಬೋಳು ಪ್ರದೇಶಗಳಿವೆ. ಜಿಲ್ಲೆಯ ಪ್ರರ್ವಭಾಗಕ್ಕೆ ಹೋದಂತೆಲ್ಲ ಬಯಲಿನ ಲಕ್ಷಣಗಳು ಕಂಡುಬರುತ್ತವೆ. ಬಾಬಾಬುಡನ್ ಗಿರಿಯ ತಪ್ಪಲಿನಿಂದ ಪೂರ್ವಕ್ಕೆ ಥಟ್ಟನೆ ಭೂಮಿಯ ಮಟ್ಟ ಇಳಿಯುತ್ತದೆ. ಮಲೆನಾಡಿನ ಸರಹದ್ದಿನಲ್ಲಿರುವ ಚಿಕ್ಕಮಗಳೂರಿನ ಎತ್ತರ 1061ಮೀ. ಆದರೆ ಬಯಲು ಸೀಮೆಯಲ್ಲಿರುವ ಕಡೂರು 788ಮೀ, ತರೀಕೆರೆ 681ಮೀ ಎತ್ತರದಲ್ಲಿವೆ.
ಕರ್ನಾಟಕದಲ್ಲಿ ಹರಿಯುವ ಅನೇಕ ನದಿಗಳು ಹುಟ್ಟುವುದು ಈ ಜಿಲ್ಲೆಯಲ್ಲೆ. ಇಲ್ಲಿಯ ಜಲಸಂಪತ್ತನ್ನು ಇಲ್ಲಿಯ ಪರ್ವತಪ್ರದೇಶಗಳು ಇಬ್ಭಾಗವಾಗಿ ಒಡೆಯುತ್ತವೆ. ಆಗ್ನೇಯದಂಚಿನಲ್ಲಿ ಬಲ್ಲಾಳರಾಯನದುರ್ಗದಿಂದ ಹಿಡಿದು ಚಿಕ್ಕಮಗಳೂರು ಪಟ್ಟಣದ ಸಮೀಪವಿರುವ ಬಾಬಾಬುಡನ್ ಗಿರಿಯ ವರೆಗೂ ಹಬ್ಬಿರುವ ಪರ್ವತಶ್ರೇಣಿ ಕರ್ನಾಟಕದ ಉತ್ತರ ಮತ್ತು ದಕ್ಷಿಣದ ನದಿಗಳನ್ನು ಪ್ರತ್ಯೇಕಿಸುತ್ತದೆ. ವರಾಹ ಪರ್ವತದ ಗಂಗಾಮೂಲದಲ್ಲಿ ಹುಟ್ಟುವ ತುಂಗಾ ಮತ್ತು ಭದ್ರಾ ನದಿಗಳು ಉತ್ತರ ದಿಕ್ಕಿಗೆ ಹರಿದರೆ, ದಕ್ಷಿಣ ಭಾಗದಲ್ಲಿ ಮೆಲ್ಬಂಗಾಡಿಯ ಜಾವಳಿಯ ಬಳಿ ಹುಟ್ಟುವ ಹೇಮಾವತಿ ನದಿ ಮೂಡಿಗೆರೆ ತಾಲ್ಲೂಕಿನಲ್ಲಿ ದಕ್ಷಿಣ ದಿಕ್ಕಿಗೆ ಹರಿದು ಹಾಸನ ಜಿಲ್ಲೆಯನ್ನು ಪ್ರವೇಶಿಸುತ್ತದೆ. ತುಂಗಾ ಮತ್ತು ಭದ್ರಾ ನದಿಗಳು ಒಂದೇ ಪ್ರದೇಶದಲ್ಲಿ ಹುಟ್ಟಿದ್ದರೂ ಕೊಪ್ಪ ತಾಲ್ಲೂಕಿನಲ್ಲಿ ಇರುವ ಬೆಟ್ಟಗಳ ಸಾಲು ಅವನ್ನು ಪ್ರತ್ಯೇಕಿಸುತ್ತವೆ. ತುಂಗಾ ನದಿ ಶೃಂಗೇರಿಯವರೆಗೂ ಈಶಾನ್ಯ ದಿಕ್ಕಿಗೆ ಹರಿದು ಅನಂತರ ವಾಯವ್ಯ ದಿಕ್ಕಿಗೆ ತಿರುಗಿ ಶಿವಮೊಗ್ಗ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಭದ್ರಾ ನದಿ ಸ್ವಲ್ಪ ದೂರ ಪೂರ್ವದ ಕಡೆ ಹರಿದು ಕಳಸ, ಬಾಳೆಹೊನ್ನೂರು ಮತ್ತು ಖಾಂಡ್ಯಗಳನ್ನು ದಾಟಿ ಹೆಬ್ಬೆಯ ಬಳಿ ಜಾಗರ ಕಣಿವೆಯಿಂದ ಬರುವ ಸೋಮವಾಹಿನಿಯನ್ನು ಕೂಡಿಕೊಂಡು ಲಕ್ಕವಳ್ಳಿಯ ಮೂಲಕ ಶಿವಮೊಗ್ಗ ಜಿಲ್ಲೆಯನ್ನು ಪ್ರವೇಶಿಸುತ್ತದೆ.
ದಕ್ಷಿಣದ ಕಡೆಗೆ ಹರಿಯುವ ಹೇಮಾವತಿ ನದಿಗೆ ಸ್ವಲ್ಪ ದೂರದಲ್ಲೇ ಸೋಮಾವತಿ ಹೊಳೆ ಸೇರುತ್ತದೆ. ಮುಂದೆ ಇದೇ ನದಿಗೆ ದೊಡ್ಡಹಳ್ಳ, ಕಪಿಲ ಮೊದಲಾದ ತೊರೆಗಳು ಸೇರುತ್ತವೆ. ನದಿ ಆಗ್ನೇಯ ದಿಕ್ಕಿಗೆ ಹರಿದು ಹಾಸನ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಮುಳ್ಳಯ್ಯನಗಿರಿಯ ಬಳಿ ಹುಟ್ಟುವ ಯಗಚಿ ನದಿ ಚಿಕ್ಕಮಗಳೂರನ್ನು ದಾಟಿ ಹಾಸನ ಜಿಲ್ಲೆಯನ್ನು ಪ್ರವೇಶಿಸಿ ಗೊರೂರು ಬಳಿ ಹೇಮಾವತಿಯನ್ನು ಸೇರುತ್ತದೆ.
ಮುಳ್ಳಯ್ಯನಗಿರಿ ಶ್ರೇಣಿಯಲ್ಲಿ ಗೌರಿಹಳ್ಳ ಮತ್ತು ಆವತಿಹಳ್ಳ ಎಂಬ ಎರಡು ತೊರೆಗಳು ಹುಟ್ಟುತ್ತವೆ. ಸಕ್ಕರೆಪಟ್ಟಣಕ್ಕೆ ಪಶ್ಚಿಮದಲ್ಲಿ 6ಕಿಮೀ ದೂರದಲ್ಲಿ ಗೌರಿಹಳ್ಳದಿಂದ ಆಗಿರುವ ಅಯ್ಯನಕೆರೆ ಇದೆ. ಅಲ್ಲಿಂದ ಹೊರಬೀಳುವ ನೀರೇ ಹೊಳೆಯಾಗಿ ವೇದಾನದಿ ಎಂದು ಹೆಸರಾಗಿದೆ. ಆವತಿ ಹಳ್ಳದಿಂದಾದದ್ದು ಮದಗ ಕೆರೆ. ಇದರಿಂದ ಹೊರಬಿದ್ದ ನೀರು ಕಡೂರಿನ ಬಳಿ ವೇದಾನದಿಯನ್ನು ಸೇರಿ ಅಲ್ಲಿಂದ ಮುಂದೆ ನದಿ ವೇದಾವತಿ ಎಂಬ ಹೆಸರಿನಿಂದ ಹರಿಯುತ್ತದೆ. (ಡಿ.ಎಸ್.ಜೆ.;ಎಂ.ಆರ್.ಆರ್.)
ಜಿಲ್ಲೆಯ ಸುಮಾರು ಅರ್ಧಭಾಗ ಧಾರವಾಡ ಬಿsನ್ನಸ್ತರ ಶಿಲೆಗಳಿಂದ ಕೂಡಿದೆ. ಬಾಬಾಬುಡನ್ ಗಿರಿ, ಗಂಗಾಮೂಲ, ಮೈತ್ರಿಪರ್ವತ ಹಾಗೂ ಕುದುರೆಮುಖ ಪ್ರದೇಶಗಳಲ್ಲಿ ಈ ಬಗೆಯ ಶಿಲೆಗಳಿವೆ. ಬಾಬಾಬುಡನ್ ಗಿರಿ ಪ್ರದೇಶದ ಕಬ್ಬಿಣದ ಅದುರುಗಳಿರುವುದು ಈ ಶಿಲೆಗಳಲ್ಲಿ. ಕಬ್ಬಿಣದ ಅದುರು ಪದರಗಳು ಒತ್ತಾದ ಏಣುಗಳಾಗಿಯೇ ಪರಿಣಮಿಸಿ ಪರ್ವತಶಿಖರಗಳಾಗಿವೆ. ಈ ಪ್ರದೇಶದಲ್ಲಿರುವ ಕಲ್ಲತ್ತಗಿರಿ ಮತ್ತು ಕೆಮ್ಮಣ್ಣುಗುಂಡಿಯಲ್ಲಿ ಅದುರನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಇದನ್ನು ಭದ್ರಾವತಿಯಲ್ಲಿರುವ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಸಾಗಿಸಲಾಗುತ್ತಿದೆ. ಜಿಲ್ಲೆಯ ಪಶ್ಚಿಮಭಾಗದಲ್ಲಿ ಮೂಡಿಗೆರೆ ಮತ್ತು ಶೃಂಗೇರಿ ತಾಲ್ಲೂಕುಗಳಲ್ಲಿ ವಿಶೇಷವಾಗಿ ಕಪ್ಪು ಹಾರ್ನ್‍ಬ್ಲೆಂಡ್ ಬಿsನ್ನಸ್ತರ ಶಿಲೆಗಳುಂಟು. ಮೂಡಿಗೆರೆ ತಾಲ್ಲೂಕಿನಲ್ಲಿರುವ ಕುದುರೆಮುಖದಲ್ಲಿ ಕಬ್ಬಿಣದ ಅದುರು ತೆಗೆಯುವ ಬೃಹತ್ ಯೋಜನೆ ಅಸ್ತಿತ್ವದಲ್ಲಿದೆ.
ಭಿನ್ನ ಸ್ತರ ಶಿಲೆಗಳಿಲ್ಲದೆಡೆಗಳಲ್ಲಿ ವಿವಿಧ ಬಗೆಯ ಗ್ರಾನೈಟ್‍ಗಳೂ ನೈಸ್ ಶಿಲೆಗಳೂ ಉಂಟು. ಗ್ರಾನೈಟ್ ಶಿಲೆ ಕಡೂರು ಮತ್ತು ಬೀರೂರುಗಳ ಬಳಿ ಹೇರಳವಾಗಿ ದೊರೆಯುತ್ತದೆ. ಮೂಡಿಗೆರೆ ಬಳಿಯ ಕುದುರೆಗುಂಡಿ ಮತ್ತು ಬಾಳೆಗದ್ದೆಗಳಲ್ಲಿ ಅದಿsಕ ಪ್ರಮಾಣದಲ್ಲಿ ಈ ಕಲ್ಲುಗಳನ್ನು ಕಟ್ಟಡ, ಸೇತುವೆ ಮೊದಲಾದವುಗಳಿಗಾಗಿ ತೆಗೆಯುತ್ತಾರೆ. ಬೆಳವಾಡಿಯಲ್ಲೂ ಗ್ರಾನೈಟ್ ಕಲ್ಲು ದೊರೆಯುತ್ತದೆ. ಶೃಂಗೇರಿಗೆ 6ಕಿಮೀ ದೂರದಲ್ಲಿ ಕಾಗೆಬಂಗಾರದ ನಿಕ್ಷೇಪಗಳುಂಟು. ತರೀಕೆರೆಯ ಕೆಲವು ಭಾಗಗಳಲ್ಲಿ ಕುರಂದ ಶಿಲೆಯಿದೆ. ಮ್ಯಾಂಗನೀಸನ್ನು ತೆಗೆಯುವ ಪ್ರಯತ್ನವೂ ನಡೆದಿದೆ.
ಬಾಬಾಬುಡನ್‍ಗಿರಿ ಮತ್ತು ಮುಳ್ಳಯ್ಯನ ಗಿರಿಯ ಉತ್ತರ ಮತ್ತು ಪೂರ್ವಕ್ಕಿರುವ ಬಯಲುಗಳದು ಕಪುï್ಪಮಣ್ಣು. ಚಿಕ್ಕಮಗಳೂರು ಮತ್ತು ತರೀಕೆರೆ ತಾಲ್ಲೂಕುಗಳ ಬಯಲು ಪ್ರದೇಶಗಳಿಂದ ಕಡೂರಿನವರೆಗೂ ಇದು ವ್ಯಾಪಿಸಿದೆ. ಇವು ಫಲವತ್ತಾದ ಪ್ರದೇಶಗಳು. ಚಿಕ್ಕಮಗಳೂರು ತಾಲ್ಲೂಕಿನಲ್ಲಿರುವ ಬೆಟ್ಟ ಪ್ರದೇಶದಲ್ಲಿರುವುದೂ ಹೆಚ್ಚಾಗಿ ಕಪ್ಪುಮಣ್ಣೆ. ಇದು ಕಾಪಿs ಬೆಳೆಗೆ ಅನುಕೂಲಕರ, ತರೀಕೆರೆ ತಾಲ್ಲೂಕಿನ ಪಶ್ಚಿಮಭಾಗದ್ದು ಮರಳು ಮತ್ತು ಸುಣ್ಣಕಲ್ಲು ಮಿಶ್ರಿತ ನೆಲ. ಮೂಡಿಗೆರೆ ತಾಲ್ಲೂಕಿನ ಬಹುಭಾಗ ಕೆಂಪುಮಣ್ಣಿನಿಂದ ಕೂಡಿದ್ದು. ಹೇಮಾವತಿ ನದಿ ಉದ್ದಕ್ಕೂ ಹೊತ್ತು ತಂದ ಹುಯಿಗಲು ಅಥವಾ ಸಣ್ಣ ಮರಳುಮಣ್ಣು ಅಕ್ಕಪಕ್ಕz ಬಯಲಿನಲ್ಲಿ ಹರಡಿದೆ. ಕೊಪ್ಪ, ಶೃಂಗೇರಿ ತಾಲ್ಲೂಕುಗಳಲ್ಲಿ ಅದಿsಕ ಮಳೆಯಿಂದಾಗಿ ಗಟ್ಟಿಮಣ್ಣು ಮತ್ತು ಕೆಮ್ಮಣ್ಣು ಕಂಡುಬರುತ್ತವೆ. ಇಲ್ಲಿಯ ನದೀಬಯಲುಗಳು ಫಲವತ್ತಾದವು. ಅಡಕೆ ಬೆಳೆಗೆ ಅನುಕೂಲಕರವಾದ ಮಣ್ಣು ಈ ಪ್ರದೇಶದ್ದು.
ಚಿಕ್ಕಮಗಳೂರು ಜಿಲ್ಲೆಯ ವಾಯುಗುಣ ಹಿತಕರವಾದ್ದು. ಇದರ ಪಶ್ಚಿಮ ಭಾಗ ಹೆಚ್ಚು ತಂಪು. ಚಳಿಗಾಲದಲ್ಲಿ ಚಳಿ ಹೆಚ್ಚು. ಗರಿಷವಿ ಉಷ್ಣತೆ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ. ಜೂನ್‍ನಿಂದ ಸೆಪ್ಟಂಬರ್ ತಿಂಗಳವರೆಗೆ ಅದಿsಕ ಮಳೆ. ಜುಲೈ ತಿಂಗಳೊಂದರಲ್ಲಿ ವರ್ಷದ ಒಟ್ಟು ಮಳೆಯ ಸುಮಾರು 1/3ರಷ್ಟು ಬೀಳುತ್ತದೆ. ಜಿಲ್ಲೆಯ ಪೂರ್ವ ಭಾಗದಲ್ಲಿ ಮಳೆ ಕಡಿಮೆ; ಕಡೂರು ತಾಲ್ಲೂಕಿನಲ್ಲಿ ಕನಿಷವಿ. ಕೊಪ್ಪ, ಮೂಡಿಗೆರೆ, ಶೃಂಗೇರಿಗಳಲ್ಲಿ 2500ಮಿಮೀ ಗಿಂತ ಹೆಚ್ಚು ಮಳೆಯಾಗುತ್ತದೆ. ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮಳೆಯಾಗುವ ಸ್ಥಳ ಮೂಡಿಗೆರೆ ತಾಲ್ಲೂಕಿನ ಬೈರಾಪುರ. ಅಲ್ಲಿ 8369ಮಿಮೀ ಮಳೆಯಾದ ದಾಖಲೆ ಇದೆ. ಇತರೆಡೆಗಳಲ್ಲಿ 2000ದಲ್ಲಿನ ಸರಾಸರಿ ಮಳೆ ಈ ರೀತಿ ಇದೆ. ಶೃಂಗೇರಿ 3571ಮಿಮೀ, ಕೊಪ್ಪ 2835ಮಿಮೀ, ಮೂಡಿಗೆರೆ 2435ಮಿಮೀ, ನರಸಿಂಹರಾಜಪುರ 1500ಮಿಮೀ, ಚಿಕ್ಕಮಗಳೂರು 1029ಮಿಮೀ, ತರೀಕೆರೆ 874ಮಿಮೀ, ಕಡೂರು 623ಮಿಮೀ.
ಈ ಜಿಲ್ಲೆಯ ಅರಣ್ಯ ಸಂಪತ್ತು ಉತ್ಕøಷ್ಟವಾದದ್ದು. ಅರಣ್ಯ ಪ್ರದೇಶದ ವಿಸ್ತೀರ್ಣ 2,00,485 ಹೆಕ್ಟೇರ್, ಪಶ್ಚಿಮಘಟ್ಟಗಳ ಉದ್ದಕ್ಕೂ ಹಬ್ಬಿರುವ ಈ ಕಾಡುಗಳಲ್ಲಿ ಉತ್ತಮ ಜಾತಿಯ ಮರಗಳುಂಟು. ಅವುಗಳಲ್ಲಿ ತೇಗ, ಶ್ರೀಗಂಧ, ಮತ್ತಿ, ನಂದಿ, ಹಲಸು, ದಬ್ಬೆ, ಹೆಬ್ಬಲಸು, ನೇರಳೆ, ಸಾಗುವಾನಿ, ಕೋಗಿಲೆ ಮುಂತಾದ ಮರಮುಟ್ಟುಗಳಿಗೆ ಉಪಯುಕ್ತವಾದ ಮರಗಳಿವೆ. ಬಾಬಾಬುಡನ್ ಗಿರಿ ಗಿಡಮೂಲಿಕೆ ಸಸ್ಯಗಳಿಗೆ ಹೆಸರುವಾಸಿಯಾದ್ದು. ಹೊರಗಡೆಯಿಂದ ಇಲ್ಲಿಗೆ ನಾಟಿ ವೈದ್ಯರು ಬಂದು ಗಿಡಮೂಲಿಕೆಗಳನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ. ಕೊಪ್ಪ, ನರಸಿಂಹರಾಜಪುರ ತಾಲ್ಲೂಕುಗಳಲ್ಲಿ ವಿಪುಲವಾದ ಬಿದಿರು ಕಾಡುಗಳುಂಟು. ಕಾಗದ ತಯಾರಿಸಲು ಬೊಂಬುಗಳನ್ನು ಇಲ್ಲಿಂದ ಸಾಗಿಸಲಾಗುತ್ತದೆ. ಜಿಲ್ಲೆಯ ಕಾಡುಗಳಲ್ಲಿ ಬೆಳೆಯುವ ಅಂಟುವಾಳ, ಸೀಗೆಕಾಯಿ, ಕಾಡುಮೆಣಸು ಮೊದಲಾದವು ವಾಣಿಜ್ಯ ಫಸಲುಗಳು. ಜಿಲ್ಲೆಯ ಪೂರ್ವಭಾಗದಲ್ಲಿ ಕಾಡು ಕಡಿಮೆ. ಈಚಲು ಮರಗಳು ಸಾಕಷ್ಟು ಬೆಳೆಯುತ್ತವೆ. ಜಿಲ್ಲೆಯಲ್ಲಿರುವ ಮುಖ್ಯ ಮೀಸಲು ಕಾಡುಗಳೆಂದರೆ ಮುತ್ತೋಡಿ, ಗಂಗಗಿರಿ, ಹೆಬ್ಬರಗಿರಿ, ಸಿಂದಗೆರೆ, ಉದುಗೆರೆ, ದಕ್ಷಿಣಭದ್ರ, ತಳಾವರ, ಬಾಳೂರು, ತುಂಗಭದ್ರ, ಲಕ್ಕವಳ್ಳಿ, ನರಸಿಂಹ ಪರ್ವತ, ತೇಗೂರ್ ಗುಡ್ಡ, ಹೊಸಹಳ್ಳಿ, ಕಿತ್ತಲೆಖಾನ್, ಆರಂಬಳ್ಳಿ ಮತ್ತು ಕುಸ್‍ಗಲ್. ಅರಣ್ಯ ಪ್ರದೇಶದ ಅನೇಕ ಕಡೆ ಅರಣ್ಯ ಭೂಮಿಯನ್ನು ಪ್ಲಾಂಟೇಷನ್ ಸಾಗುವಳಿಗಾಗಿ ಒತ್ತುವರಿ ಮಾಡಿರುವದು ಕಂಡು ಬರುತ್ತದೆ. ಬಹುಕಾಲದಿಂದ ಸಾವಿರಾರು ಒಕ್ಕಲುಗಳು ಅರಣ್ಯದಲ್ಲಿ ನೆಲಸಿರುವ ಸಮಸ್ಯೆಯಿದೆ. ಇವೆಲ್ಲ ಅರಣ್ಯ ಪ್ರದೇಶದ ಕ್ಷೀಣಿಸುವಿಕೆಯನ್ನು ಹೆಚ್ಚಿಸಿವೆ. ಎಮ್ಮೆದೊಡ್ಡಿ ಕಾವಲು, ಚುರ್ಚೆ ಗುಡ್ಡ ಮೊದಲಾದ ಮೀಸಲು ಜಮೀನುಗಳಿವೆ. ಜಿಲ್ಲೆಯ ಕಾಡುಗಳಲ್ಲಿ ಹಲಸು, ನೇರಳೆ, ಈಚಲು, ಚೊಟ್ಟೆ, ಸೀಬೆ, ಬಕ್ಕಲ, ಹಾಲಿ ಹಣ್ಣುಗಳ ಮರಗಳಿವೆ. ಮಲೆನಾಡಿನ ಕಾಡಿನಲ್ಲಿ ಬೆಳೆಯುವ ಬಗನಿ ಮರದಿಂದ ಸೇಂದಿಯನ್ನು ತೆಗೆಯುತ್ತಾರೆ.
ಈ ಜಿಲ್ಲೆ ಪ್ರಾಣಿಸಂಪದ್ಭರಿತವಾದ್ದು. ಇಲ್ಲಿಯ ಕಾಡುಗಳಲ್ಲಿ ಆನೆ, ಹುಲಿ, ಕಾಡು ಕೋಣ, ತೋಳ, ಚಿರತೆ, ಹಂದಿ, ಕಡವೆ, ಸಾರಂಗ, ಜಿಂಕೆ, ಮುಸಿಯ, ಕೆಂಜಳಿಲು, ಕರಡಿ, ಮುಳ್ಳುಹಂದಿ, ಕಾಡುಕುರಿ, ಉಡ, ಪುಣುಗ, ಬರ್ಕ, ಮೊಲ, ನರಿ ಮೊದಲಾದ ಮೃಗಗಳೂ ಬಾವಲಿ, ರಣಹದ್ದು, ಕಾಡುಕೋಳಿ, ನವಿಲು, ಕೋಗಿಲೆ, ಗವುಜುಗ, ಗಿಡುಗ, ಕಾಜಾಣ, ಬೆಳ್ಳಕ್ಕಿ, ಕೆಂಭೂತ -ಪಕ್ಷಿಗಳೂ ಬಾತುಜಾತಿಗೆ ಸೇರಿದ ಚರ್ಲೆ, ಕುಂಡಿಮುಳುಗ ಮೊದಲಾದ ನೀರುಹಕ್ಕಿಗಳೂ ಹೆಬ್ಬಾವು, ಮಂಡಲ, ಕಟುಗ, ಕಾಳಿಂಗಸರ್ಪ, ನಾಗರ, ಕೇರೆ ಮುಂತಾದ ಹಾವುಗಳೂ ಕೆರೆಗಳಲ್ಲಿ ಕುರಡಿ, ಮುರುಗೊಡವ, ಬಾಳೆ, ಅವಲು, ಕುಚ್ಚು, ಕೊರೆಮಳಲಿ, ಅರ್ಜು ಮುಂತಾದ ಮೀನುಗಳೂ ಮೊಸಳೆಗಳೂ ಇವೆ. ಇತ್ತೀಚೆಗೆ ಮರಕ್ಕಾಗಿ ಮತ್ತು ಸಾಗುವಳಿಗಾಗಿ ಕಾಡುಗಳು ನಾಶವಾಗುತ್ತಿರುವುದರಿಂದಲೂ ಶಿಕಾರಿಗಳಿಂದಲೂ ವನ್ಯಮೃಗಗಳು ನಶಿಸುತ್ತಿವೆ. ಜಿಲ್ಲೆಯ ಸಾಕುಪ್ರಾಣಿಗಳಲ್ಲಿ ಮುಖ್ಯವಾದವು ದನ, ಎಮ್ಮೆ, ಕುರಿ. ಮಲೆನಾಡಿನ ಹಸುಗಳು ಗಾತ್ರದಲ್ಲಿ ಚಿಕ್ಕವು. ಕಡಿಮೆ ಹಾಲು ಕರೆಯುತ್ತವೆ. ಬಿಳಿಯ ದೊಡ್ಡರಾಸುಗಳಿಗೆ ಮಲೆನಾಡಿನ ವಾಯುಗುಣ ಅಷ್ಟಾಗಿ ಒಗ್ಗುವುದಿಲ್ಲ. ಕೋಣಗಳನ್ನು ಬೇಸಾಯಕ್ಕೆ ಬಳಸುತ್ತಾರೆ.
ಜಿಲ್ಲೆಯ ಮುಖ್ಯ ಕಸಬು ಕೃಷಿ ಮತ್ತು ಪ್ಲಾಂಟೇಷನ್. ಕಾಪಿs ಇಲ್ಲಿಯ ಮುಖ್ಯ ವಾಣಿಜ್ಯ ಬೆಳೆ. ಈ ಜಿಲ್ಲೆಯಲ್ಲಿ ಕಾಪಿs ಬೆಳೆಯಬಹುದಾದ ಪ್ರದೇಶದ ವಿಸ್ತೀರ್ಣ 2,590ಚ.ಕಿಮೀ. ಇದು ಕರ್ನಾಟಕದಲ್ಲಿ ಹೆಚ್ಚು ಕಾಪಿs ಉತ್ಪಾದಿಸುವ ಒಂದು ಜಿಲ್ಲೆ. ಕಾಪಿsಯನ್ನು ದಕ್ಷಿಣ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಬಾಬಾಬುಡನ್ ಎಂಬವನು ಆಪಿs್ರಕದಿಂದ ತಂದು ಈ ಜಿಲ್ಲೆಯಲ್ಲಿರುವ ಬಾಬಾಬುಡನ್ ಗಿರಿಯಲ್ಲಿ ನೆಟ್ಟನೆಂದೂ ಅದರಿಂದ ಈ ಗಿರಿಗೆ ಅವನ ಹೆಸರೇ ಬಂತೆಂದೂ ಪ್ರತೀತಿ. 1820ರ ತರುವಾಯ ಕಾಪಿs ಬೆಳೆ ಯುರೋಪಿಯನ್ ಬೆಳೆಗಾರರಿಂದ ಹೆಚ್ಚು ಪ್ರಚಾರಕ್ಕೆ ಬಂತು. ಸ್ಥಳೀಯ ಬೆಳೆಗಾರರೂ ಇದರಲ್ಲಿ ಆಸಕ್ತಿ ವಹಿಸಿದುದರಿಂದ ಇದು ಹೆಚ್ಚು ವ್ಯಾಪಕವಾಯಿತು. ಕಾಪಿs ಬೆಳೆಯ ಸಂಶೋಧನೆಗಾಗಿ ಬಾಳೆಹೊನ್ನೂರಿನಲ್ಲಿ ಒಂದು ಸಂಶೋಧನೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅತ್ಯದಿsಕ ಮಳೆ ಬೀಳುವ ಕೊಪ್ಪ ಮತ್ತು ಮೂಡಿಗೆರೆ ತಾಲ್ಲೂಕುಗಳಲ್ಲಿ ಕೆಲವು ಎತ್ತರದ ಪ್ರದೇಶಗಳಲ್ಲಿ ಅರ್ಯಾಬಿಕ ಕಾಪಿs ಉತ್ತಮವಾಗಿ ಬೆಳೆಯುತ್ತದೆ. ಉಳಿದಲ್ಲಿ ರೊಬಸ್ಟ ಕಾಪಿs ಚೆನ್ನಾಗಿ ಬೆಳೆಯುತ್ತದೆ. ಕಾವೇರಿ ಎಂಬ ತಳಿ 1990ರ ದಶಕದಲ್ಲಿ ಹೆಚ್ಚು ಪ್ರಚಾರ ಪಡೆದು ಸಾಗುವಳಿಗೆ ಬಂದಿತು. ಆದರೆ ಅದು ಅಷ್ಟು ಫಲಪ್ರದವಾಗಿಲ್ಲ. ಈಗ ಇನ್ನೂ ಅನೇಕ ಹೊಸ ತಳಿಗಳನ್ನು ಸೃಷ್ಟಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳೆಯುವ ಒಟ್ಟು ಕಾಪಿs ಉತ್ಪನ್ನ 77,700 ಮೆಟ್ರಿಕ್‍ಟನ್ ಕಾಪಿs ಬೆಳೆಯುವ ಪ್ರದೇಶ 80,818 ಹೆಕ್ಟೇರ್ (2000).
ಏಲಕ್ಕಿ ಇನ್ನೊಂದು ಮುಖ್ಯ ವಾಣಿಜ್ಯ ಬೆಳೆ. ಮೂಡಿಗೆರೆ ಮತ್ತು ಕೊಪ್ಪ ತಾಲ್ಲೂಕುಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆÉಯಲಾಗುತ್ತಿದೆ. ಮೂಡಿಗೆರೆಯ ಬಳಿ ಒಂದು ಪ್ರಾದೇಶಿಕ ಏಲಕ್ಕಿ ಸಂಶೋಧನಾಲಯವನ್ನು ಸ್ಥಾಪಿಸಲಾಗಿದೆ. ಕಳೆದ ದಶಕದಲ್ಲಿ ಮಳೆ ಕಡಿಮೆಯಾದುದರಿಂದ ಈ ಬೆಳೆಗೆ ಭಾರಿ ಪೆಟ್ಟು ಬಿದ್ದಿದೆ. ಈಗ ಏಲಕ್ಕಿ ಬೆಳೆಯುವ ಸ್ಥಳಗಳಲ್ಲಿ ಹೆಚ್ಚಾಗಿ ಕಾಪಿs ಬೆಳೆಯುವ ಪ್ರಯತ್ನ ನಡೆಯುತ್ತಿದೆ. ಎಲೆ ಮಡ್ಲು ಹಾಗೂ ಕಳಸಕ್ಕೆ ಸಮೀಪದಲ್ಲಿ ಕೆಲವು ಚಹ ತೋಟಗಳಿವೆ.
ಈ ಜಿಲ್ಲೆಯಲ್ಲಿ ಅಡಕೆಯೂ ಹೆಚ್ಚಾಗಿ ಬೆಳೆಯುತ್ತದೆ. ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲ್ಲೂಕುಗಳಲ್ಲಿ ಮತ್ತು ಕಳಸದ ಸುತ್ತಮುತ್ತ ಬಯಲು ಸೀಮೆಯಲ್ಲಿ ಕೆಲವೆಡೆ ಅಡಕೆ ತೋಟಗಳಿವೆ. ಮೆಣಸು ಮತ್ತು ಶುಂಠಿಗಳನ್ನು ತೋಟಗಳಲ್ಲಿ ಗದ್ದೆಗಳಲ್ಲಿ ಉಪ ಬೆಳೆಗಳಾಗಿ ಬೆಳೆಯುವುದುಂಟು. ಕೆಲವೆಡೆ ರಬ್ಬರ್ ತೋಟಗಳಿವೆ. ಇತ್ತೀಚೆಗೆ ವೆನಿಲಾ ಬೆಳೆಯಲು ಒಲವು ಕಂಡುಬಂದಿದೆ.
ಬತ್ತ ಇಲ್ಲಿನ ಮುಖ್ಯ ಆಹಾರ ಬೆಳೆ. ಒಟ್ಟು 53200 ಹೆಕ್ಟೇರುಗಳಲ್ಲಿ ಬತ್ತ ಬೆಳೆಯಲಾಗುತ್ತದೆ. ಚಿಕ್ಕಮಗಳೂರಿನ ಸುತ್ತಣ ಬಯಲಿಗೆ ಹೊಂಜೇವಣಿಗೆ ಸೀಮೆ ಅಥವಾ ಚಿನ್ನ ಹರಿಯುವ ಬಯಲು ಎಂದು ಹೆಸರು ಬಂದಿದೆ. ಇದಕ್ಕೆ ಇಲ್ಲಿಯ ಫಲವತ್ತಾದ ಬತ್ತದ ಬಯಲೇ ಕಾರಣ. ಕಪುŒಮಣ್ಣಿನಿಂದ ಕೂಡಿದ ಪೂರ್ವ ಭಾಗದಲ್ಲಿ ಅದರಲ್ಲೂ ಬಯಲು ನಾಡಿನ ಭಾಗದಲ್ಲಿ ಬತ್ತದ ಇಳುವರಿ ಹೆಚ್ಚು. ಇದನ್ನು ಬೆಳೆಯುವ ಪ್ರದೇಶವೂ ಹೆಚ್ಚು. ಮಲೆನಾಡಿನ ಪ್ರದೇಶಗಳಲ್ಲಿ ಬತ್ತದ ಬಯಲುಗಳು ಕಡಿಮೆ. ಮೂಡಿಗೆರೆ ತಾಲ್ಲೂಕಿನ ಬಹುಭಾಗ ಬತ್ತದ ಬೆಳೆಗೆ ಅನುಕೂಲವಾಗಿಲ್ಲ. ಇದಕ್ಕೆ ಜಿಲ್ಲೆಯ ಅದಿsಕ ಮಳೆಯೂ ಅತಿಯಾದ ತೇವದಿಂದ ಕೂಡಿದ ಕೆಮ್ಮಣ್ಣು ಭೂಮಿಯೂ ಕಾರಣ. ಕಬ್ಬನ್ನು ಕೆಲವೆಡೆ ಬೆಳೆಯಲಾಗುತ್ತಿದೆ. ಕಡೂರು ತಾಲ್ಲೂಕಿನಲ್ಲಿರುವ ಅಯ್ಯನಕೆರೆ ಮತ್ತು ಮದಗಕೆರೆಗಳು ಸಾವಿರಾರು ಎಕರೆ ಪ್ರದೇಶಗಳಿಗೆ ನೀರನ್ನು ಒದಗಿಸುತ್ತವೆ. ಜಿಲ್ಲೆಯ ಒಟ್ಟು ನೀರಾವರಿ ಕ್ಷೇತ್ರ 30,365 ಹೆಕ್ಟೇರ್‍ಗಳು. ತರೀಕೆರೆ ತಾಲ್ಲೂಕಿನಲ್ಲಿ ಭದ್ರಾನದಿಗೆ ಅಡ್ಡಲಾಗಿ ಲಕ್ಕವಳ್ಳಿ ಅಣೆಕಟ್ಟನ್ನು ಕಟ್ಟಲಾಗಿದೆ. ಇದರ ಹೆಚ್ಚಿನ ಸೌಲಭ್ಯ ಶಿವಮೊಗ್ಗ ಜಿಲ್ಲೆಗೆ ದೊರಯುತ್ತದೆ. ಇದೇ ತಾಲ್ಲೂಕಿನಲ್ಲಿ ಜಂಬದಹಳ್ಳ ಯೋಜನೆಯನ್ನು 50 ಲಕ್ಷ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿದೆ.
ರಾಗಿ ಇನ್ನೊಂದು ಪ್ರಮುಖ ಬೆಳೆಯಾಗಿದ್ದು ಇದನ್ನು 55,819 ಹೆಕ್ಟೇರ್‍ಗಳಲ್ಲಿ ಬೆಳೆಯಲಾಗುತ್ತದೆ. ತೆಂಗು 30,161; ದ್ವಿದಳ ಧಾನ್ಯಗಳು 26,699; ಏಕದಳ ಧಾನ್ಯಗಳು 1,19,027 ಹೆಕ್ಟೇರ್‍ಗಳಲ್ಲಿ ಬೆಳೆಯುತ್ತದೆ (1999-2000). ಕಡಲೆ, ತೊಗರಿ, ಕಬ್ಬು, ಹತ್ತಿ, ಬೆಳೆಗಳನ್ನು ಸಣ್ಣ ಪ್ರಮಾಣದಲ್ಲಿ ಬೆಳೆಯುತ್ತಾರೆ. ತರೀಕೆರೆ ವೀಳೆಯದೆಲೆಗೆ ಪ್ರಸಿದ್ಧ.
ಜಿಲ್ಲೆಯ ಪಶ್ಚಿಮದಂಚಿನಲ್ಲಿರುವ ಕುದುರೆಮುಖದ ಬಳಿ ಅದಿsಕ ಪ್ರಮಾಣದಲ್ಲಿ ಕಬ್ಬಿಣದ ಅದುರನ್ನು ತೆಗೆಯುವ ಬೃಹತ್ ಯೋಜನೆ ಇದ್ದು ಕೆಮ್ಮಣ್ಣುಗುಂಡಿಯಲ್ಲಿ ಕಬ್ಬಿಣದ ಅದುರು ತೆಗೆಯುವ ಉದ್ಯಮವಿದ್ದು ನೂರಾರು ಜನರಿಗೆ ಉದ್ಯೋಗ ಒದಗಿದೆ. ಚಿಕ್ಕಮಗಳೂರಿನಲ್ಲಿ ಕಾಪಿs ಹದಮಾಡುವ ಅನೇಕ ಕಾರ್ಖಾನೆಗಳಿವೆ. ಇಲ್ಲಿಂದ ಕಬ್ಬಿಣದ ಅದುರನ್ನು ಮಂಗಳೂರು ಬಂದರಿಗೆ ಸಾಗಿಸಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಗಣಿಗಾರಿಕೆಯಿಂದ ಉಂಟಾಗುವ ಪರಿಸರ ಹಾನಿಯ ಬಗ್ಗೆ ಸಾಮಾಜಿಕ ಚಳವಳಿ ನಡೆದಿದ್ದು ಗಣಿಗಾರಿಕೆ ಸದ್ಯ ಮುಂದುವರಿದಿದೆ. ಚಿಕ್ಕಮಗಳೂರು ಪಟ್ಟಣದಲ್ಲಿ ಮೊದಲ ಬಾರಿಗೆ 1917ರಲ್ಲಿ ಅಕ್ಕಿ ಗಿರಣಿಯನ್ನೂ 1920ರಲ್ಲಿ ಕಾಪಿs ಹದಮಾಡುವ ಕಾರ್ಖಾನೆಯನ್ನೂ ಸ್ಥಾಪಿಸಲಾಯಿತು. ಈಗ ಜಿಲ್ಲೆಯ ಹಲವಾರು ಕಡೆ ಅಕ್ಕಿ ಗಿರಣಿಗಳಿವೆ. ಕಾಪಿs ತೋಟಗಳಿಗೆ ಅಗತ್ಯವಿರುವ ಉಪಕರಣಗಳನ್ನು ತಯಾರಿಸುವ ಕಾರ್ಯಾಗಾರಗಳು ಚಿಕ್ಕಮಗಳೂರಿನಲ್ಲಿವೆ. 1911ರಲ್ಲಿ ಸ್ಥಾಪಿಸಿದ ಒಂದು ಹೆಂಚಿನ ಕಾರ್ಖಾನೆ ಶೃಂಗೇರಿಯಲ್ಲಿತ್ತು. ಚಿಕ್ಕಮಗಳೂರು,ತರೀಕೆರೆ, ಮೂಡಿಗೆರೆ ಮತ್ತಿತರೆಡೆಗಳಲ್ಲಿ ಮರ ಕೊಯ್ಯುವ ಕಾರ್ಖಾನೆಗಳೂ ಅಜ್ಜಂಪುರ, ಶಿವನಿ, ಬೀರೂರುಗಳಲ್ಲಿ ನೂಲಿನ ಮತ್ತು ಕಂಬಳಿ ತಯಾರಿಸುವ ಮಗ್ಗಗಳೂ ಉಂಟು. ಜಿಲ್ಲೆಯಲ್ಲಿ ಕೈಮಗ್ಗಗಳೂ ಕಡೂರು ತಾಲ್ಲೂಕಿನ ಬಿದರೆಯಲ್ಲಿ ಕಚ್ಚಾ ಗಾಜಿನ ಬಳೆಗಳನ್ನು ತಯಾರಿಸುವ ಕಾರ್ಖಾನೆಯೂ ಮೂಡಿಗೆರೆ ತಾಲ್ಲೂಕಿನ ಕೆಳಗೂರಿನಲ್ಲಿ ಚಹ ಪರಿಷ್ಕರಣ ಕಾರ್ಖಾನೆಯೂ ಇವೆ. ಇಲ್ಲಿಯ ಮಲೆನಾಡು ಭಾಗದಲ್ಲಿ ಜೇನು ಸಾಕುವ ಉದ್ಯಮ ಬೆಳೆದಿದೆ. ಮಡಕೆ ಮಾಡುವುದು, ಬಿದಿರಿನ ವಸ್ತುಗಳನ್ನು ತಯಾರಿಸುವುದು, ಗಾಡಿ ಕೂಡಿಸುವುದು ಮೊದಲಾದ ಕೈಗಾರಿಕೆಗಳೂ ಇವೆ. ಜಿಲ್ಲೆಯಲ್ಲಿ ಒಟ್ಟು 269 ಕಾರ್ಖಾನೆಗಳಿದ್ದು 1171ಉದ್ಯೋಗಿಗಳಿದ್ದಾರೆ. ಇತರ ಕೈಗಾರಿಕೆಯಲ್ಲಿ ಜಿಲ್ಲೆಯ ಸ್ಥಾನ ಗೌಣ. ಜಿಲ್ಲೆಯಲ್ಲಿ ಎರಡು ವೃತ್ತಿ ತರಬೇತು ಶಾಲೆಗಳುಂಟು.
ಬೆಂಗಳೂರು-ಪುಣೆ ರೈಲುಮಾರ್ಗ ಕಡೂರಿನ ಮೂಲಕ ಹಾದುಹೋಗುತ್ತದೆ. ಇದಕ್ಕೆ ಕವಲಾಗಿ ಬೀರೂರಿನಿಂದ ತರೀಕೆರೆಯ ಮೂಲಕ ಶಿವಮೊಗ್ಗಕ್ಕೆ ಒಂದು ರೈಲುಮಾರ್ಗವಿದೆ. ಜಿಲ್ಲೆಯಲ್ಲಿ ರೈಲುಮಾರ್ಗದ ಒಟ್ಟು ಉದ್ದ 97ಕಿಮೀ. ಕಡೂರು-ಚಿಕ್ಕಮಗಳೂರು ರೈಲು ಮಾರ್ಗ ಪ್ರಗತಿಯಲ್ಲಿದೆ. ಕಡೂರು-ಮಂಗಳೂರು ಹೆದ್ದಾರಿ ಚಿಕ್ಕಮಗಳೂರಿನ ಮೂಲಕ ಹಾದುಹೋಗುತ್ತದೆ. ಬೆಂಗಳೂರು - ಹೊನ್ನಾವರ ಹೆದ್ದಾರಿ ಕಡೂರಿನ ಮೂಲಕ ಸಾಗುತ್ತದೆ. ಚಿಕ್ಕಮಗಳೂರಿನಿಂದ ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಮಡಿಕೇರಿ, ಬೆಳಗಾಂವಿ, ಚಿತ್ರದುರ್ಗ, ಹರಿಹರ, ಉಡುಪಿ, ಮಂಗಳೂರು ಮೊದಲಾದ ಕಡೆಗಳಿಗೆ ಬಸ್ಸು ಮಾರ್ಗಗಳಿವೆ. ಚಿಕ್ಕಮಗಳೂರು - ಆಲ್ದೂರು - ಬಾಳೆಹೊನ್ನೂರು - ಉರುವಿನಖಾನ್ - ಕೊಟ್ಟಿಗೆಹಾರ ಹೆದ್ದಾರಿ, ಚಿಕ್ಕಮಗಳೂರು - ಜೈಪುರ - ಶೃಂಗೇರಿ - ಮಾರ್ಗ, ಚಿಕ್ಕಮಗಳೂರು - ಮಲ್ಲಂದೂರು - ನರಸಿಂಹರಾಜಪುರ - ಮಾರ್ಗ, ಚಿಕ್ಕಮಗಳೂರು - ಬಾಬಾಬುಡನ್‍ಗಿರಿ ರಸ್ತೆ, ಮಲ್ಲಂದೂರು - ಮತ್ತೋಡಿ - ಕೊಳಗಾವೆ ಗಿರಿ ರಸ್ತೆ, ಮೂಡಿಗೆರೆ - ಸಕಲೇಶಪುರ ರಸ್ತೆ, ಕೊಟ್ಟಿಗೆಹಾರ - ಕಳಸ ರಸ್ತೆ, ಕೊಟ್ಟಿಗೆಹಾರ - ಬಾಳೆಹೊನ್ನೂರು ರಸ್ತೆ, ಮೂಡಿಗೆರೆ - ದಾರದಹಳ್ಳಿ - ದೇವವೃಂದ ರಸ್ತೆ, ಮೂಡಿಗೆರೆ - ಗೆಂಡೆಹಳ್ಳಿ - ಬೇಲೂರು ರಸ್ತೆ, ಬಾಳೆಹೊನ್ನೂರು ಕೊಪ್ಪ -ಆಗುಂಬೆ ರಸ್ತೆ, ತರೀಕೆರೆ - ಲಕ್ಕವಳ್ಳಿ - ನರಸಿಂಹರಾಜಪುರ ರಸ್ತೆ ಇವು ಮಲೆನಾಡು ಭಾಗದ ಮುಖ್ಯ ರಸ್ತೆಗಳು. ಕಡೂರು - ಬೀರೂರು - ಅಜ್ಜಂಪುರ ರಸ್ತೆ, ಚಿಕ್ಕಮಗಳೂರು - ಮಾಗಡಿ - ಜಾವಗಲ್ಲು ರಸ್ತೆ, ತರೀಕೆರೆ - ಶಾಂತವೇರಿ - ಬೀರೂರು - ಕಡೂರು ರಸ್ತೆ; ತರೀಕೆರೆ - ಹೊಸದುರ್ಗ ರಸ್ತೆ - ಇವು ಬಯಲು ಸೀಮೆಯ ಮುಖ್ಯ ರಸ್ತೆಗಳು. ಜಿಲ್ಲೆಯಲ್ಲಿ 34 ದೊಡ್ಡ ಸೇತುವೆಗಳಿವೆ. ಮಲೆನಾಡಿನಲ್ಲಿ ರಸ್ತೆ ನಿರ್ಮಾಣದ ವೆಚ್ಚ ಹೆಚ್ಚು. ಆದ್ದರಿಂದ ಇನ್ನೂ ಅನೇಕ ಊರುಗಳಿಗೆ ರಸ್ತೆ ಸಂಪರ್ಕ ಸರಿಯಾಗಿಲ್ಲ. ಹಲವು ರಸ್ತೆಗಳು ಮಳೆಗಾಲದಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಸರ್ಕಾರ ಈಗ ಈ ರಸ್ತೆಗಳ ವಿಸ್ತರಣೆ ಮತ್ತು ಅಬಿsವೃದ್ಧಿಗೆ ಹೆಚ್ಚು ಗಮನ ನೀಡಿದೆ. ಒಟ್ಟು ರಸ್ತೆಗಳ ಉದ್ದ 7,547ಕಿಮೀ; ಪಕ್ಕಾರಸ್ತೆಗಳು 4,781ಕಿಮೀ (2000).
ಈ ಜಿಲ್ಲೆಯ ಸಾಕ್ಷರತೆ 64.27% (ಪುರುಷರಲ್ಲಿ 71.30% ಸ್ತ್ರೀಯರಲ್ಲಿ 57.13%). 53 ಪ್ರಾಢಶಾಲೆಗಳೂ 46 ಪದವಿಪೂರ್ವ ಕಾಲೇಜುಗಳೂ 14 ಪ್ರಥಮ ದರ್ಜೆ ಕಾಲೇಜುಗಳೂ ಇವೆ. ಒಂದು ಎಂಜಿನಿಯರಿಂಗ್ ಕಾಲೇಜಿದೆ. ಮೂಡಿಗೆರೆಯಲ್ಲಿ ತೋಟಗಾರಿಕಾ ಕಾಲೇಜಿದೆ. 3 ಪಾಲಿಟೆಕ್ನಿಕ್‍ಗಳಿವೆ (2000-01) ಮೂಡಿಗೆರೆ ಮತ್ತು ಶೃಂಗೇರಿಗಳಲ್ಲಿ ನರ್ಸಿಂಗ್ ಶಾಲೆಗಳು ಆರಂಭವಾಗಿವೆ.
ವ್ಯವಸಾಯ ಈ ಜಿಲ್ಲೆಯ ಜನರ ಪ್ರಧಾನ ಕಸಬಾದ್ದರಿಂದ ಗ್ರಾಮಜೀವನದ ಲಕ್ಷಣಗಳನ್ನು ಎಲ್ಲೆಲ್ಲೂ ಕಾಣಬಹುದು. ಬೆಳೆ ಕುಯ್ಲಿಗೆ ಬರುವಾಗ ಡಿಸೆಂಬರ್ ತಿಂಗಳಲ್ಲಿ ಹೊಸ ಅಕ್ಕಿ ಹಬ್ಬವನ್ನು ಮಾಡುತ್ತಾರೆ. ಆಗ ಹೊಸ ಬೆಳೆಯಿಂದ ಮಾಡಿದ ಅನ್ನವನ್ನು ದೇವರಿಗೆ ಮೀಸಲು ಆರ್ಪಿಸುತ್ತಾರೆ. ಗದ್ದೆ ಕುಯಿಲು, ಒಕ್ಕಣೆ ಮುಗಿದ ಮೇಲೆ ಕಣದ ಹಬ್ಬ ಆಚರಿಸುತ್ತಾರೆ. ಈ ಪದ್ಧತಿಯನ್ನೇ ಕಾಪಿs ಫಸಲಿಗೂ ಅನ್ವಯಿಸಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳುಗಳಲ್ಲಿ ಸುಗ್ಗಿಹಬ್ಬವನ್ನು ಆಚರಿಸುತ್ತಾರೆ. ದೇವವೃಂದದಲ್ಲಿ ಉಗಾದಿಯಂದು ನಡೆಯುವ ರಾಮೇಶ್ವರ ಜಾತ್ರೆ ಈ ನಾಡಿನ ಹಬ್ಬ. ಫಲ್ಗುಣಿ ಸುಗ್ಗಿ ಹಬ್ಬ ಮುಕ್ಕುಂದ ನಾಡಿನ ಪ್ರಮುಖ ಉತ್ಸವ. ಒಂದೇ ಊರು ಪ್ರತ್ಯೇಕವಾಗಿ ಹಬ್ಬ ನಡೆಸುವುದೂ ಉಂಟು. ದಾರದಹಳ್ಳಿಯ ಸುಗ್ಗಿಹಬ್ಬ ಇಂಥದು. ಈ ಜಿಲ್ಲೆಯ ಕೊಪ್ಪ ಶೃಂಗೇರಿ ಭಾಗಗಳಲ್ಲಿ ಅಂಟಿಗೆ ಪಂಟಿಗೆ ಸಂಪ್ರದಾಯವಿದೆ. ಕಾರ್ತಿಕದಲ್ಲಿ ಕೋಲಾಟ ನಡೆಯುವುದು. ವೀರಗಾಸೆ ಕುಣಿತ, ಕರಡೆಮಜಲು, ಕರಪಾಲಮೇಳ, ಕೀಲುಕುದುರೆ ನರ್ತನ ಮುಂತಾದವು ಇಲ್ಲಿಯ ಮುಖ್ಯ ಜನಪದ ಆಕರ್ಷಣೆಗಳು. ಬಯಲುಸೀಮೆಯಲ್ಲಿ ಅನೇಕ ಕಡೆ ದೇವರ ದರ್ಶನಗಳು ಬರುತ್ತವೆ. ಮೂಡಿಗೆರೆ ತಾಲ್ಲೂಕು ಕೆಸವೊಳಲಿನ ಮಹಾರುದ್ರ ದೇವರು ದರ್ಶನ ಬರುತ್ತಿದ್ದು ನೂರಾರು ಭಕ್ತರನ್ನು ಆಕರ್ಷಿಸಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಮುಖ್ಯವಾದವು: ನಿರ್ವಾಣಸ್ವಾಮಿ ಜಾತ್ರೆ (ಮುಳ್ಳಯ್ಯನಗಿರಿ), ಸೀತಾಳ ಮಲ್ಲಿಕಾರ್ಜುನಸ್ವಾಮಿ ತೇರು (ಚಿಕ್ಕಮಗಳೂರು ತಾಲ್ಲೂಕು), ಲಕ್ಷ್ಮೀರಂಗನಾಥಸ್ವಾಮಿ ತೇರು (ಸಕ್ಕರೆ ಪಟ್ಟಣ), ಕಾಲಭೈರವ ತೇರು (ಬೀರುವದೇವರು), ಕಳಸೇಶ್ವರಸ್ವಾಮಿ ಜಾತ್ರೆ (ಕಳಸ), ಚಂದ್ರಮೌಳೇಶ್ವರ ಮತ್ತು ಶಾರದಾಂಬ ನವರಾತ್ರಿ ಮಹೋತ್ಸವ (ಶೃಂಗೇರಿ) ಮತ್ತು ಮಲ್ಲಿಕಾರ್ಜುನಸ್ವಾಮಿ ತೇರು (ಪುರ). ಶ್ರೀ ರಾಮೇಶ್ವರ ತೇರು (ದೇವವೃಂದ) ಬೆಳವಾಡಿ, ಬೀರೂರು, ಕಲ್ಮರಡಿ ಮಠ ಬುಕ್ಕಾಂಬುದಿs, ಪಟ್ಟಣಗೆರೆ, ಆಸಂದಿ, ಹಿರೇಮಗಳೂರು, ದತ್ತಾತ್ರೇಯ ಪೀಠ, ಅಮೃತಾಪುರ, ಅಂಗಡಿ, ದೇವನೂರು ಮೊದಲಾದೆಡೆ ಜಾತ್ರೆ, ಉತ್ಸವಗಳು ನಡೆಯುತ್ತವೆ. ಸಿಂಹನಗದ್ದೆ ಜೈನರಿಗೆ ಪವಿತ್ರ ಸ್ಥಳ.
ಅನೇಕ ಸ್ಥಳಗಳು ಪುರಾಣೇತಿಹಾಸಪ್ರಸಿದ್ಧವಾದವು. ಮುಳ್ಳಯ್ಯನಗಿರಿ - ಬಾಬಾಬುಡನ್ ಗಿರಿ ಶ್ರೇಣಿಯೇ ರಾಮಾಯಣ ಕಾಲದ ಚಂದ್ರದ್ರೋಣ ಪರ್ವತವೆಂದು ಹೇಳಲಾಗಿದೆ. ಮೂಡಿಗೆರೆ ತಾಲ್ಲೂಕಿನಲ್ಲಿರುವ ಹೇರಿಕೆಗೆ ಸಮೀಪದಲ್ಲಿರುವ ಪಾಂಡವರ ಗುಡ್ಡದಲ್ಲಿ ಹಿಂದೆ ಪಾಂಡವರು ವನವಾಸಕಾಲದಲ್ಲಿ ಇದ್ದರೆಂಬುದು ಸ್ಥಳಪುರಾಣ. ಅಲ್ಲಿರುವ ಕಲ್ಲಿನ ಉಪಕರಣಗಳನ್ನು ಅವರು ಬಳಸುತ್ತಿದ್ದರು ಎಂದು ನಂಬಲಾಗಿದೆ. ತುಂಗಾನದಿಯ ಅಂಬುತೀರ್ಥ ಎಂಬಲ್ಲಿರುವ ಬಿsೀಮನಕಲ್ಲನ್ನು ಮಧ್ವಾಚಾರ್ಯರು ಒಂದೇ ಕೈಯಲ್ಲಿ ಎತ್ತಿ ಇಟ್ಟರೆಂದು ಮೂಡಿಗೆರೆಯ 89ನೆಯ ಶಾಸನ ತಿಳಿಸುತ್ತದೆ. ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನ ದುರ್ಗದಲ್ಲಿ ಹೊಯ್ಸಳರ ಕಾಲದಲ್ಲಿ ಕಟ್ಟಿದ ಕೋಟೆಯುಂಟು. ಶೃಂಗೇರಿ ನಿಸರ್ಗದ ಮಡಿಲಲ್ಲಿರುವ ಸುಂದರ ಕ್ಷೇತ್ರ. ಬಾಳೆಹೊನ್ನೂರಿನಲ್ಲಿ ಶ್ರೀರಂಭಾಪುರಿ ಜಗದ್ಗುರುಗಳ ಮಠವಿದೆ. ಕಳಸ ಯಾತ್ರಾಸ್ಥಳ. ಇದು ಭೈರವರಸರ ರಾಜಧಾನಿಯೂ ಆಗಿತ್ತು. ಇದರ ಸಮೀಪದಲ್ಲಿ ಇರುವ ಹೊರನಾಡು ದೇಗುಲ ಪ್ರಸಿದ್ಧವಾದ್ದು. ಬಾಳೆಹೊನ್ನೂರಿಗೆ ಸಮೀಪದಲ್ಲಿ ಭದ್ರಾನದಿಯ ದಡದಲ್ಲಿರುವ ಖಾಂಡ್ಯ ಮಾರ್ಕಂಡೇಯನ ಜನ್ಮಸ್ಥಳವೆಂದು ಹೇಳಲಾಗಿದೆ. ಕಡೂರು - ಚಿಕ್ಕಮಗಳೂರು ರಸ್ತೆಯಲ್ಲಿರುವ ಸಕ್ಕರೆಪಟ್ಟಣ ಒಂದು ಪ್ರಮುಖ ಸ್ಥಳ. ಕಡೂರು ಪಟ್ಟಣದ ಬಳಿ ಇರುವ ಹೇಮಗಿರಿ ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ದನದ ಜಾತ್ರೆ ನಡೆಯುತ್ತದೆ. ಆ ತಾಲ್ಲೂಕಿನಲ್ಲಿರುವ ಆಸಂದಿ ಗ್ರಾಮ ಇತಿಹಾಸ ಪ್ರಸಿದ್ಧವಾದ್ದು. ಕೊಪ್ಪ ತಾಲ್ಲೂಕಿನ ಜಂಬಿಟ್ಟಿಗೆ ಗ್ರಾಮದಲ್ಲಿ 1733ರಲ್ಲಿ ಕಟ್ಟಿಸಿದ ಒಂದು ದೇವಾಲಯ ಶಿಲ್ಪಕಲೆಗೆ ಪ್ರಸಿದ್ಧವಾದ್ದು. ತರೀಕೆರೆಯ ಬಳಿ ಅಮೃತಾಪುರದ ಅಮೃತೇಶ್ವರ ದೇವಾಲಯ ಹೊಯ್ಸಳರ ಕಾಲದಲ್ಲಿ ರಚಿತವಾದ್ದು. ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆಯಲ್ಲಿ ಪದ್ಮಾವತಿಯ ದೇವಾಲಯವಿದೆ. ಅಲ್ಲಿರುವ ಸಪ್ತ ಮಾತೃಕೆಯರ ಮತ್ತು ರಾಜಮಂತ್ರಿ ಸಮಾಲೋಚನೆಯ ಕೆತ್ತನೆಗಳು ಆಕರ್ಷಕವಾದವು. ಮೂಡಿಗೆರೆ ತಾಲ್ಲೂಕಿನ ಘಟ್ಟಶ್ರೇಣಿಯಲ್ಲಿರುವ ಮರಗುಂದದ ಬೆಟ್ಟದ ಭೈರವೇಶ್ವರ, ಭೈರಾಪುರದ ನಾಣ್ಯದ ಭೈರವೇಶ್ವರ, ದೇವರಮನೆಯ ಕಾಲಭೈರವೇಶ್ವರ ದೇವಾಲಯಗಳು ಅತಂ್ಯತ ಪ್ರಾಚೀನ ದ್ರಾವಿಡ ವಾಸ್ತು ರಚನೆಗೆ ಮಾದರಿಗಳಾಗಿವೆ.
ಈ ಜಿಲ್ಲೆಯ ಕೆಲವು ಪ್ರದೇಶ 4-6ನೆಯ ಶತಮಾನಗಳಲ್ಲಿ ಆದ್ಯ ಕದಂಬರ ಆಳಿಕೆಗೆ ಒಳಪಟ್ಟಿತ್ತು. 7-8-9ನೆಯ ಶತಮಾನಗಳಲ್ಲಿ ಜಿಲ್ಲೆಯ ಪಶ್ಚಿಮದ ಕೆಲವು ಭಾಗಗಳು ದಕ್ಷಿಣ ಕನ್ನಡ ಜಿಲ್ಲೆಯಿಂದ ಆಳಿದ ಆಳುಪರಿಗೆ ಸೇರಿದ್ದುವು. ಶಿವಮೊಗ್ಗ ಜಿಲ್ಲೆಗೆ ಸೇರಿದ ಹುಂಚದ ಸಾಂತರರ ರಾಜ್ಯ ಇಲ್ಲಿಯವರೆಗೂ ಹಬ್ಬಿತ್ತು. ಜಿಲ್ಲೆಯ ಹೆಚ್ಚಿನ ಭಾಗ ಗಂಗರ ಅದಿsೀನದಲ್ಲಿತ್ತು.
ಹೊಯ್ಸಳರ ಮೂಲಪುರುಷನಿಗೆ ಜನ್ಮ ನೀಡಿದ ಹೆಗ್ಗಳಿಕೆ ಈ ಜಿಲ್ಲೆಗೆ ಸೇರುತ್ತದೆ. ಆ ಸ್ಥಳ ಇದ್ದುದು ಮೂಡಿಗೆರೆಗೆ 13ಕಿಮೀ ದೂರದಲ್ಲಿರುವ ಸೊಸವೂರು ಅಥವಾ ಈಗಿನ ಅಂಗಡಿ ಗ್ರಾಮದಲ್ಲಿ. 11-14ನೆಯ ಶತಮಾನಗಳಲ್ಲಿ ಜಿಲ್ಲೆ ಹೊಯ್ಸಳರ ಆಳಿಕೆಯಲ್ಲಿತ್ತು. ಶೃಂಗೇರಿಯ ವಿದ್ಯಾರಣ್ಯರು ವಿಜಯನಗರದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರೆಂದು ಹೇಳಲಾಗಿದೆ. ವಿಜಯನಗರದ ಅರಸರ ಆಳ್ವಿಕೆಯ ಕಾಲದಲ್ಲಿ ಜಿಲ್ಲೆಯ ಪಶ್ಚಿಮ ಭಾಗ ಕಾರ್ಕಳದ ರಾಜರಿಗೂ ದಕ್ಷಿಣ ಭಾಗ ಮಂಜರಾಬಾದ್ ಪ್ರದೇಶದ ಪಾಳೆಯಗಾರರಿಗೂ ಸೇರಿದ್ದುವು. ಇವರೆಲ್ಲ ವಿಜಯನಗರದ ಸಾಮಂತರಾಗಿದ್ದರು. ಹದಿನೇಳನೆಯ ಶತಮಾನದ ಮಧ್ಯಭಾಗದಲ್ಲಿ ಈ ಜಿಲ್ಲೆಯ ಬಹುಭಾಗವನ್ನು ಶಿವಪ್ಪನಾಯಕ ವಶಪಡಿಸಿಕೊಂಡ. ವಿಜಯನಗರದ ಪ್ರತಿನಿದಿsಯಾಗಿದ್ದ ಶ್ರೀರಂಗರಾಯ ಸ್ವಲ್ಪಕಾಲ ಅವನ ಆಶ್ರಯದಲ್ಲಿದ್ದು ಸಕ್ಕರೆಪಟ್ಟಣ, ಬೇಲೂರು ಮತ್ತು ನೆರೆಯ ಪ್ರದೇಶಗಳನ್ನಾಳುತ್ತಿದ್ದ. 1690-94ರಲ್ಲಿ ಮೈಸೂರಿನ ರಾಜರು ಈ ಜಿಲ್ಲೆಯ ದಕ್ಷಿಣ ಭಾಗವನ್ನು ಆಕ್ರಮಿಸಿಕೊಂಡರು. ಅದೇ ವರ್ಷ ಮೈಸೂರು ಮತ್ತು ಇಕ್ಕೇರಿಗಳ ನಡುವೆ ಒಪ್ಪಂದವಾಗಿ, ಮೈಸೂರಿನ ಅರಸರು ಗೆದ್ದಿದ್ದ ಪ್ರದೇಶಗಳಲ್ಲಿ ಐಗೂರು ಮತ್ತು ವಸ್ತಾರೆ ಪಾಳೆಯಪಟ್ಟುಗಳನ್ನು ಬಿಟ್ಟುಕೊಟ್ಟರು. ಈ ಮಧ್ಯದಲ್ಲಿ ಕೆಲವು ಕಾಲ ತರೀಕೆರೆ ಪಾಳೆಯಗಾರರು ಆ ಪಟ್ಟಣದ ಸುತ್ತಲ ಪ್ರದೇಶಗಳನ್ನು ಆಳುತ್ತಿದ್ದರು. 1763ರಲ್ಲಿ ಹೈದರ್ ಇಕ್ಕೇರಿಯನ್ನು ಆಕ್ರಮಿಸಿಕೊಂಡು ಅದರ ಅದಿsೀನದಲ್ಲಿದ್ದ ವಿವಿಧ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡ. ಇಡೀ ಜಿಲ್ಲೆ ಮೈಸೂರಿನ ಆಳಿಕೆಗೆ ಒಳಪಟ್ಟಿತು. ಟಿಪುŒವಿನ ಪತನಾನಂತರ ಮತ್ತೆ ಈ ಪ್ರದೇಶ ಮೈಸೂರಿನ ಅರಸರಿಗೆ ಒಳಪಟ್ಟಿತ್ತು. 1830ರಲ್ಲಿ ತರೀಕೆರೆಯ ರಂಗಪ್ಪನಾಯಕ ಬಂಡೆದ್ದು ಕಾಳದುರ್ಗ ಮತ್ತು ಕಾಮನದುರ್ಗಗಳನ್ನು ಹಿಡಿದುಕೊಂಡ. ಮೈಸೂರಿನ ಸೇನೆ ಮರುವರ್ಷ ಮತ್ತೆ ಇವನ್ನು ವಶಪಡಿಸಿಕೊಂಡಿತು. ಮೈಸೂರಿನ ಆಡಳಿತವು ಕಮಿಷನರಿಗೆ ವರ್ಗವಾದಾಗ (1831) ಈ ಭಾಗವನ್ನು ನಗರ ವಿಭಾಗಕ್ಕೆ ಸೇರಿಸಲಾಯಿತು. 1863ರಲ್ಲಿ ಇದನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ಕಡೂರು ಜಿಲ್ಲೆಯೆಂದು ಕರೆಯಲ್ಪಡುತ್ತಿದ್ದ ಇದಕ್ಕೆ ಆಗ ಕಡೂರೇ ಆಡಳಿತ ಕೇಂದ್ರ. 1865ರಲ್ಲಿ ಚಿಕ್ಕಮಗಳೂರು ಈ ಜಿಲ್ಲೆಯ ಆಡಳಿತ ಕೇಂದ್ರವಾಯಿತು. 1882ರಲ್ಲಿ ಅರಸೀಕೆರೆ, ಬೇಲೂರು, ಹಾಸನ ಮತ್ತು ಮಂಜರಾಬಾದ್ ತಾಲ್ಲೂಕುಗಳನ್ನೊಳಗೊಂಡ ಹಾಸನ ವಿಭಾಗ ಈ ಜಿಲ್ಲೆಗೆ ಸೇರಿತ್ತು. 1886ರಲ್ಲಿ ಪ್ರತ್ಯೇಕವಾದ ಹಾಸನ ಜಿಲ್ಲೆಯನ್ನು ರಚಿಸಲಾಯಿತು. ತರುವಾಯ ಇಲ್ಲಿಯ ಸ್ವಲ್ಪ ಭಾಗವನ್ನು ಚಿತ್ರದುರ್ಗ ಜಿಲ್ಲೆಗೆ ಸೇರಿಸಿ ಇಂದಿನ ರೂಪದಲ್ಲಿ ಜಿಲ್ಲೆಯನ್ನು ಉಳಿಸಿಕೊಳ್ಳಲಾಯಿತು. (ಡಿ.ಎಸ್.ಜೆ.;ಎಚ್.ಪಿ.ಕೆ.)
ಚಿಕ್ಕಮಗಳೂರು ಜಿಲ್ಲೆ ಪ್ಲಾಂಟೇಷನ್ ಸಾಗುವಳಿಯಿಂದಾಗಿ ಹೊಸ ಆರ್ಥಿಕ ಸ್ವರೂಪವನ್ನು ಪಡೆದುಕೊಳ್ಳತೊಡಗಿತು. ಅನೇಕ ಐರೋಪ್ಯ ಕಾಪಿs ಬೆಳೆಗಾರರು ಜಿಲ್ಲೆಯಲ್ಲಿ ಬಂದು ನೆಲಸಿ ಕಾಪಿs ತೋಟಗಳನ್ನು ರೂಡಿsಸಿದರು. ದೇಶೀಯರು ಸಹ ಕಾಪಿs ತೋಟಗಳನ್ನು ರೂಡಿsಸತೊಡಗಿದರು. 1881ರಲ್ಲಿ ರಚಿತವಾದ ಪ್ರಜಾಪ್ರತಿನಿದಿs ಸಭೆಯಲ್ಲಿ ಪ್ಲಾಂಟೇಷನ್ ಮಾಲೀಕ ವರ್ಗಕ್ಕೆ ಪ್ರತ್ಯೇಕ ಪ್ರಾತಿನಿಧ್ಯ ನೀಡಲಾಯಿತು. ಕೃಷಿ ಕಾರ್ಮಿಕ ವರ್ಗ ಬೆಳೆಯಿತು. ಹೊರರಾಜ್ಯಗಳಿಂದಲೂ ಕೃಷಿ ಕಾರ್ಮಿಕರು ಬಂದು ಇಲ್ಲಿ ನೆಲಸಿದರು. ಕಾಪಿs ಬೆಳೆಯ ಏಳುಬೀಳಿನೊಂದಿಗೆ ಅವರು ಇಲ್ಲಿಯೇ ಸ್ಥಿರವಾಗಿ ನೆಲಸಿದರು. 1914 ರಿಂದ ಜಾರಿಗೆ ಬಂದ ಮಲೆನಾಡು ಅಬಿsವೃದ್ಧಿ ಯೋಜನೆಗೆ ಆಗಿನ ದಿವಾನರಾಗಿದ್ದ ಎಂ.ವಿಶ್ವೇಶ್ವರಯ್ಯನವರ ಆಸಕ್ತಿಯೇ ಬಹುಮುಖ್ಯ ಕಾರಣವಾಯಿತು. ಅದರಿಂದ ಮಲೇರಿಯಾ ರೋಗ ಹರಡುವುದನ್ನು ತಡೆಗಟ್ಟಲು, ಬಾಣಂತಿಯರ ಶುಶ್ರೂಷೆಗೆ ಆದ್ಯತೆ ನೀಡಲು, ರಸ್ತೆ, ಬಾವಿಗಳನ್ನು ಮಾಡಿಸಲು ಅನುಕೂಲವಾಯಿತು.
ಈ ಜಿಲ್ಲೆಯ ಸಾಹಿತ್ಯ ಪರಂಪರೆ ದೊಡ್ಡದು. ಜನ್ನ, ರುದ್ರಭಟ್ಟ, ಲಕ್ಷ್ಮೀಶ ಇವರನ್ನು ಈ ಜಿಲ್ಲೆಯ ಮೂಲದವರೆಂದು ಗುರುತಿಸಲಾಗಿದೆ. ಶೃಂಗೇರಿ, ಕಳಸ, ಬಾಳೆಹೊನ್ನೂರು, ದೇವನೂರು ಇವು ಹಿಂದಿನಿಂದಲೂ ಸಾಹಿತ್ಯ ಸಂಬಂಧವಾದ ಚಟುವಟಿಕೆಗಳನ್ನು ಹೊಂದಿದ್ದವು. ಅನೇಕ ಶರಣ ಸಾಹಿತಿಗಳ ಕೃತಿಗಳಲ್ಲಿ ಈ ಜಿಲ್ಲೆಯ ವಿವರಗಳು ದಾಖಲಾಗಿವೆ. ಯಳ್ಳಂಬಳಸೆ ವೈ. ಸುಬ್ಬರಾವ್‍ರವರು ಶ್ರೇಷ್ಠ ಅದ್ವೈತ ವಿದ್ವಾಂಸರಾಗಿ `ಬ್ರಹ್ಮಸೂತ್ರ ಸಹಿತ ಹಲವಾರು ವಿದ್ವತ್ ಕೃತಿಗಳನ್ನು ರಚಿಸಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದವರು. ಇವರು ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳೆಂದು (1880-1975) ಉತ್ತರಾಶ್ರಮದಲ್ಲಿ ಪ್ರಸಿದ್ಧರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಆಧುನಿಕ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಎ.ಆರ್.ಕೃಷ್ಣಶಾಸ್ತ್ರಿ (ನೋಡಿ- ಕೃಷ್ಣಶಾಸ್ತ್ರೀ,-ಎ-ಆರ್) ಯವರ ಹಿರಿಯರು ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆಯವರು. ಮಹಾಕವಿ ಕುವೆಂಪು ಅವರು ಹುಟ್ಟಿದ್ದು ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆಯಲ್ಲಿ. ಈಗ ಅಲ್ಲಿ ಕುವೆಂಪು ಗೌರವಾರ್ಥ ಸಂದೇಶ ಮಂಟಪವನ್ನು ನಿರ್ಮಿಸಲಾಗಿದೆ. ಕುವೆಂಪು ಅವರ ಹಿರಿಯ ಪುತ್ರರೂ ಪಂಪ ಪ್ರಶಸ್ತಿ ವಿಜೇತರೂ ಆದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಮೂಡಿಗೆರೆ ಬಳಿ ನೆಲೆಸಿದ್ದಾರೆ. `ಬುದ್ಧ ಚರಿತ ಮಹಾಮಧು ಎಂಬ ಮಹಾಕಾವ್ಯ ರಚಿಸಿದ ಕಾಶಿ ವಿಶ್ವನಾಥಶೆಟ್ಟರು ಪ್ರಾಧ್ಯಾಪಕರಾಗಿ ನಿವೃತ್ತರಾಗಿ ಚಿಕ್ಕಮಗಳೂರಿನಲ್ಲಿ ನೆಲೆಸಿದ್ದರು. ಬಾಗಮನೆ ಕುಟುಂಬದಲ್ಲಿ ಹುಟ್ಟಿದ ಲಕ್ಷ್ಮೀದೇವಿ ಕಡಿದಾಳ್ ಮಂಜಪ್ಪನವರು ತಮ್ಮ ಕಾದಂಬರಿಗಳು ಹಾಗೂ ಇತರ ಕೃತಿಗಳ ಜೊತೆಗೆ `ಶ್ರೀ ವಿವೇಕಾನಂದ ವಿಜಯ ಮಹಾಕಾವ್ಯ ಎಂಬ ಬೃಹತ್ ಕೃತಿಯನ್ನು (ಒಂದು ಸಾವಿರ ಪುಟಗಳು) ರಚಿಸಿದ್ದಾರೆ. ಮಣೂರ, ಗೌ.ಮ.ಉಮಾಪತಿಶಾಸ್ತ್ರಿ, ದಾಶರಥಿ ದೀಕ್ಷಿತ್, ತ.ಪು.ವೆಂಕಟರಾಂ, ಯಳ್ಳಂಬಳಸೆ ಸುಬ್ಬಹ್ಮಣ್ಯ ಶರ್ಮ, ತಿಮ್ಮರಸಯ್ಯ, ಮಾಕೋನಹಳ್ಳಿ ದೊಡ್ಡಪ್ಪಗೌಡ, ಕಾರೇಹಳ್ಳಿ ಮರುಳಸಿದ್ಧಪ್ಪ, ಸವ್ಯಸಾಚಿ, ವೇಣುಗೋಪಾಲರಾವ್, ಕೆ.ಎಸ್.ಮಲ್ಲೇಗೌಡ ಇವರೆಲ್ಲ ಸಾರಸ್ವತ ಲೋಕಕ್ಕೆ ಕಾಣಿಕೆ ಸಲ್ಲಿಸಿದ ಹಿರಿಯರು. ಜಿಲ್ಲೆಗೆ ಒಂದಲ್ಲ ಒಂದು ರೀತಿ ಸಂಬಂದಿsಸಿದ ಹಿರಿಕಿರಿಯ ಸಾಹಿತಿಗಳು, ಸಂಶೋಧಕರು ಸಾರಸ್ವತ ಲೋಕದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಂತಹವರಲ್ಲಿ ಸುಮತೀಂದ್ರನಾಡಿಗ, ಅಜ್ಜಂಪುರ ಜಿ.ಸೂರಿ, ಎಂ.ಪಿ.ಮಂಜಪ್ಪಶೆಟ್ಟಿ, ಡಿ.ಎಸ್.ಜಯಪ್ಪಗೌಡ, ಎ.ಎನ್.ಸ್ವಾಮಿ, ಚಂದ್ರಯ್ಯನಾಯ್ಡು, ಕೆ.ಓಂಕಾರಪ್ಪ, ಕನ್ನಡದಲ್ಲಿ ಅರ್ಚನೆಗೆ ಹೆಸರಾದ ಹಿರೇಮಗಳೂರು ಕಣ್ಣನ್, ಎಂ.ಆರ್. ನಾಗಭೂಷಣ, ಶೃಂಗೇರಿ ಸುಬ್ಬರಾಯಾಚಾರ್, ಸು.ಅಮೃತಾಪುರ, ಹಳೇಕೋಟೆ ರಮೇಶ್, ಬಿ.ಪುಟ್ಟಯ್ಯ ಶ್ರೀನಿವಾಸಮೂರ್ತಿ, ಸೌಕೂರು ಸುಬ್ಬಹ್ಮಣ್ಯ ಅಡಿಗ, ಘನಿ ಅಕ್ಮಲ್, ಅಕ್ಮಲ್ ಆಲ್ದೂರಿ, ಗೌ.ರು.ಓಂಕಾರಯ್ಯ, ತರೀಕೆರೆ ರಹಮತ್, ಬೆಳವಾಡಿ ಮಂಜುನಾಥ, ಕೆ.ಎಂ.ರೇವಣ್ಣ, ಯಲಗೊಡಿಗೆ ಮಂಜಯ್ಯ, ಬಾಣೂರು ಚನ್ನಪ್ಪ, ಹು.ಲಕ್ಷ್ಮೀನರಸಿಂಹಶಾಸ್ತ್ರಿ, ಕರಗುಂದ ರಾಮಣ್ಣ, ಟಿ.ಎಂ.ಬಾಲಗಣಪತಿ ಮೊದಲಾದವರು ಇದ್ದಾರೆ. ಮಹಿಳೆಯರಲ್ಲಿ ವಿಶೇಷವಾಗಿ ಬಿ.ಟಿ.ಲಲಿತಾನಾಯಕ್, ಲಲಿತಾಂಬ ವೃಷಭೇಂದ್ರ ಸ್ವಾಮಿ, ಕೆದಂಬಾಡಿ ಎಂ.ದೇವಕಿ, ಸೀತಮ್ಮ ನಂಜೇಗೌಡ, ಮಾಲತಿ ರಾಮದಾಸ್, ಟಿ.ಕೆ.ಶಕುಂತಳ, ಸುಕನ್ಯ ಕಳಸ ಇವರು ಗಮನಾರ್ಹರು. ಈ ಜಿಲ್ಲೆಯ ಜನಪದ ಕಲೆ, ಸಾಹಿತ್ಯ ಕ್ಷೇತ್ರದಲ್ಲಿನ ಪ್ರಮುಖ ಹೆಸರು ಗೊ.ರು.ಚನ್ನಬಸಪ್ಪನವರದು. ಇವರು 1967ರಲ್ಲಿ ಅಖಿಲ ಕರ್ನಾಟಕ ಜನಪದ ಸಾಹಿತ್ಯ ಸಮ್ಮೇಳನವನ್ನು ತರೀಕೆರೆಯಲ್ಲಿ ಸಂಘಟಿಸುವಲ್ಲಿ ಶ್ರಮಿಸಿದರು. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಜನಪದ ಸಂಗೀತ ಕೋಗಿಲೆ ಕೆ.ಆರ್.ಲಿಂಗಪ್ಪನವರು ತರೀಕೆರೆಯವರು. 1921ರಲ್ಲಿ ಕೆ.ಸಿ.ಪುಟ್ಟಣ್ಣಚೆಟ್ಟಿಯವರ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರಿನಲ್ಲಿ 7ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. 1981ರಲ್ಲಿ 53ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪು.ತಿ.ನರಸಿಂಹಾಚಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಜಿಲ್ಲಾಮಟ್ಟದ ಹತ್ತಾರು ಸಾಹಿತ್ಯ ಸಮ್ಮೇಳನಗಳು ಜರುಗಿವಿÉ.
ಜಿಲ್ಲೆಯಲ್ಲಿ ಪತ್ರಿಕೋದ್ಯಮ 1932ರಿಂದ ಪ್ರಾರಂಭವಾಯಿತು. ಪಿ.ಚಿದಂಬರ್, ಪಂಡಿತ್, ಕೆ.ಎನ್.ಪ್ರಭುದೇವ್, ಎಂ.ಕೆ.ಗೋಪಾಲಸಿಂಗ್, ಎಂ.ವಿ.ಗುರುಬಸಪ್ಪ ಆದ್ಯರಲ್ಲಿ ಸೇರಿದ್ದಾರೆ. ಕೃ.ನ.ಮೂರ್ತಿ, ಜನಮಿತ್ರ ಪತ್ರಿಕೆಯನ್ನು 1962ರಲ್ಲಿ ಪ್ರಾರಂಬಿsಸಿ ಪತ್ರಿಕೋದ್ಯಮಕ್ಕೆ ಹೊಸ ಚಾಲನೆ ನೀಡಿದರು. ಇದರೊಂದಿಗೆ ಹೊಸ ದಿಗಂತ, ಮಲೆನಾಡು ಸಂಗತಿ, ಗಿರಿವಾರ್ತಾ, ಶಿರೋರತ್ನ, ಯುವಲೋಕ, ಜಿಲ್ಲಾ ಲೇಖನ ಇವು ಪ್ರಮುಖ ಪತ್ರಿಕೆಗಳು. ಎಂ.ಎನ್.ಕೃಷ್ಣಮೂರ್ತಿ, ಜಿ.ವಿ.ಚೂಡನಾಥ ಐಯ್ಯರ್, ಎಸ್.ಗಿರಿಜಾಶಂಕರ್, ಎಚ್.ಎಸ್.ಸೂರ್ಯನಾರಾಯಣ ಕಡೂರು, ಸಮುದ್ರವಳ್ಳಿ ಸುಬ್ಬರಾವ್, ಎಸ್.ಎನ್.ಶ್ರೀಕಂಠ, ಹೆಚ್.ಎನ್.ಪುಟ್ಟಸ್ವಾಮಿ, ಜಿ.ವಿ.ರಮೇಶ್, ಕಮಲಾಶ್ರೀಕಂಠ, ದಿನೇಶ್ ಪಟವರ್ಧನ, ಕಂ.ಕ.ಮೂರ್ತಿ, ಗಿರೀಶ್ ಮಾವಿನಕಾಡು, ಎ.ಎಚ್.ರಾಮಸ್ವಾಮಿ, ಎಂ.ಸಿ.ಶಿವಾನಂದಸ್ವಾಮಿ, ಸಿ.ಬಿ.ಸತೀಶ್, ಹೆಚ್.ಎಸ್.ಸುಂದರೇಶ್, ಜಿ.ಹಿರೇನಲ್ಲೂರು ಶಿವು ಮೊದಲಾದವರು ಜಿಲ್ಲಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯವಾಗಿ ದುಡಿದವರಾಗಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಮುಖಂಡರು, ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು. ಅವರಲ್ಲಿ ಹೊಸಕೊಪ್ಪ ಕೃಷ್ಣರಾವ್, ಎಂ.ಹುಚ್ಚೇಗೌಡ, ತರೀಕೆರೆ ಟಿ.ಸಿ.ಶಾಂತಪ್ಪ, ಎಸ್.ಅಣ್ಣಪ್ಪಶೆಟ್ಟಿ, ಯಳ್ಳಂಬಳಸೆ ಚಂದ್ರಶೇಖರ್, ಮಾಕೋನಹಳ್ಳಿ ದೊಡ್ಡಪ್ಪಗೌಡ, ಡಿ.ಎಸ್.ಕೃಷ್ಣಪ್ಪಗೌಡ, ಕೆ.ಆರ್.ನಾರಾಯಣಶೆಟ್ಟಿ, ಜಿ.ಟಿ.ಸತ್ಯನಾರಾಯಣ ಶೆಟ್ಟಿ, ಮಾರ್ಗದ ಮಲ್ಲಪ್ಪ, ಬಿ.ಕೆ.ಲೋಕಪ್ಪಗೌಡ, ಸಿ.ವಿ.ಧ್ರುವರಾವ್, ವಾಸುದೇವರಾವ್, ಜಿ.ಪುಟ್ಟಸ್ವಾಮಿ, ಹಂಜಿ ಶಿವಣ್ಣ, ಬಿ.ಎಲ್.ಸುಬ್ಬಮ್ಮ, ಪಾರ್ವತಮ್ಮ ಹುಚ್ಚೇಗೌಡ, ಮುದಿಯಪ್ಪ, ಕೆ.ಎನ್.ವೀರಪ್ಪಗೌಡ, ಡಿ.ಎಚ್. ರುದ್ರಪ್ಪ, ಕೆ.ಎಂ.ತಮ್ಮಯ್ಯ, ಬಾಗಮನೆ ದೇವೆಗೌಡ, ಹಾಲೂರು ಗಿಡ್ಡಪ್ಪ ಮೊದಲಾದವರನ್ನು ಹೆಸರಿಸಬಹುದು.
ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕಡಿದಾಳು ಮಂಜಪ್ಪನವರು ಈ ಜಿಲ್ಲೆಯ ಶೃಂಗೇರಿ ಕ್ಷೇತ್ರವನ್ನು ಪ್ರತಿನಿದಿsಸಿದ್ದರು. ಇನ್ನೂ ಹಲವಾರು ಜನ ಶಾಸಕರು ಮಂತ್ರಿಗಳಾಗಿ ಮತ್ತಿತರ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂದಿsಯವರು 1978ರಲ್ಲಿ ಲೋಕಸಭೆಗೆ ಈ ಜಿಲ್ಲೆಯಿಂದ ಸ್ಪದಿರ್sಸಿ ವಿಜೇತರಾಗಿದ್ದರು. ಇಂದಿರಾಗಾಂದಿs ಅವರಿಗೆ ಲೋಕಸಭಾ ಸ್ಥಾನ ತೆರವು ಮಾಡಿದ್ದ ಡಿ.ಬಿ.ಚಂದ್ರೇಗೌಡರು 1983-85ರಲ್ಲಿ ವಿಧಾನಸಭಾ ಅಧ್ಯಕ್ಷರಾಗಿದ್ದರು. ಬಿ.ಎಲ್.ಶಂಕರ್ ಅವರು (2002-04) ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದರು. ಡಿ.ಕೆ.ತಾರಾದೇವಿಯವರು ಕೇಂದ್ರದಲ್ಲಿ ಸಚಿವೆಯಾಗಿದರು.
ತಾಲ್ಲೂಕು: ಉತ್ತರದಲ್ಲಿ ಕಡೂರು, ತರೀಕೆರೆ ತಾಲ್ಲೂಕುಗಳು, ಪಶ್ಚಿಮದಲ್ಲಿ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ದಕ್ಷಿಣದಲ್ಲಿ ಮೂಡಿಗೆರೆ ತಾಲ್ಲೂಕು, ಪೂರ್ವಕ್ಕೆ ಹಾಸನ ಜಿಲ್ಲೆ - ಈ ತಾಲ್ಲೂಕಿನ ಮೇರೆಗಳು. ತಾಲ್ಲೂಕಿನಲ್ಲಿ ಅಂಬಳೆ, ಚಿಕ್ಕಮಗಳೂರು, ಲಕ್ಯ, ವಸ್ತಾರೆ, ಆವತಿ, ಜಾಗರ, ಆಲ್ದೂರು ಮತ್ತು ಖಾಂಡ್ಯ ಹೋಬಳಿಗಳೂ 231 ಗ್ರಾಮಗಳೂ ಇವೆ. ತಾಲ್ಲೂಕಿನ ಜನಸಂಖ್ಯೆ 2,94,445. ಪಶ್ಚಿಮ ಘಟ್ಟಶ್ರೇಣಿಯಿಂದ ಒಳಚಾಚಿರುವ ಬೆಟ್ಟದ ಸಾಲು ಈ ತಾಲ್ಲೂಕಿನವರೆಗೂ ಹಬ್ಬಿದೆ. ಈ ಬೆಟ್ಟದ ಸಾಲಿನಲ್ಲಿಯೇ ಬರುವ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‍ಗಿರಿ ಇವು ಕರ್ನಾಟಕದ ಅತ್ಯಂತ ಎತ್ತರದ ಶಿಖರಗಳಲ್ಲಿ ಎರಡು. ತಾಲ್ಲೂಕಿನಲ್ಲಿ 93,973 ಎಕರೆ ಅರಣ್ಯ ಪ್ರದೇಶವಿದೆ. ಈ ಕಾಡುಗಳಲ್ಲಿ ಹೊನ್ನೆ, ಬೀಟೆ, ಮತ್ತಿ, ನಂದಿ, ಹಲಸು, ದಬ್ಬೆ, ಸಾಗುವಾನಿ ಮೊದಲಾದ ಮರಗಳಿವೆ. ತಾಲ್ಲೂಕಿನಲ್ಲಿರುವ ಮುತ್ತೋಡಿ ಮೀಸಲು ಕಾಡು ಸಾವಿರಾರು ಎಕರೆ ಪ್ರದೇಶವನ್ನು ಆವರಿಸಿದೆ. ಇದಲ್ಲದೆ ಬಸವನ ಕೋಟೆ, ಸಾರುಗೋಡ್, ಮತ್ತಾವರ, ಗಂಧದ ಕಾಡು, ಗಂಗಗಿರಿ, ಹೆಬ್ಬಗಿರಿ ಮೊದಲಾದ ಕಾಡುಗಳಿವೆ. ಚುರ್ಚೆಗುಡ್ಡ, ಕಾಮನಹಳ್ಳಿಗಳಲ್ಲಿ ಮೀಸಲು ಜಮೀನು ಇದೆ. ತಾಲ್ಲೂಕಿನಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ 803.08 ಮಿಮೀ ಇದ್ದು ಇಲ್ಲಿಯ ಮಲೆನಾಡು ಪ್ರದೇಶಗಳ ಬೆಟ್ಟಗಳ ಇಳಿಜಾರು ಕಾಪಿs ಬೆಳೆಗೆ ಪ್ರಶಸ್ತವಾಗಿದೆ. ಚಿಕ್ಕಮಗಳೂರು ಪಟ್ಟಣದ ಸುತ್ತಮುತ್ತಲ ಮತ್ತು ಪೂರ್ವ ಭಾಗಕ್ಕಿರುವ ಬಯಲು ಪ್ರದೇಶಗಳು ಬತ್ತ ಮತ್ತು ಕಬ್ಬುಗಳನ್ನು ಬೆಳೆಯಲು ಫಲವತ್ತಾಗಿವೆ. ಈ ತಾಲ್ಲೂಕಿನಲ್ಲಿ ಕಬ್ಬಿಣದ ಅದುರಿನ ನಿಕ್ಷೇಪವೂ ಹೇರಳವಾಗಿದೆ. ಮುಳ್ಳಯ್ಯನಗಿರಿ ಬುಡದಲ್ಲಿ ಸೀತಾಳಪ್ಪನ ಕಣಿವೆಯಲ್ಲಿ ಯಗಚಿ ಹೊಳೆ ಹುಟ್ಟುತ್ತದೆ. ಇದು ಚಿಕ್ಕಮಗಳೂರಿನ ಮೂಲಕ ಬೇಲೂರು ಕಡೆ ಹರಿದು ಹಾಸನ ಜಿಲ್ಲೆ ಸೇರುತ್ತದೆ. ಇದೇ ತಾಲ್ಲೂಕಿನ ಆಣೂರು ಬಳಿ ಹುಟ್ಟುವ ಬೆರಂಜಿ ಹಳ್ಳ ಇದನ್ನು ಕೂಡಿಕೊಳ್ಳುತ್ತದೆ. ಗೌರಿಹಳ್ಳ ಮತ್ತು ಆವತಿ ಎಂಬ ಹೊಳೆಗಳು ಮುಳ್ಳಯ್ಯನಗಿರಿ ಶ್ರೇಣಿಯಲ್ಲಿ ಹುಟ್ಟುತ್ತವೆ. ಇವು ಕಡೂರಿನ ಬಳಿ ಒಂದುಗೂಡಿ ವೇದಾವತಿ ಎಂಬ ಹೆಸರಿನಿಂದ ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಜಾಗರ ಕಣಿವೆಯಲ್ಲಿ ಹುಟ್ಟುವ ಸೋಮವಾಹಿನಿ ಎಂಬ ಹೊಳೆ ಪಶ್ಚಿಮಕ್ಕೆ ಹರಿದು ಭದ್ರಾನದಿಯನ್ನು ಸೇರುತ್ತದೆ.
ಮಲೆನಾಡು ಭಾಗದಲ್ಲಿ ಕಾಪಿs ಮತ್ತು ಕಿತ್ತಲೆ, ಮೆಣಸು ಮುಖ್ಯ ಬೆಳೆಗಳು. ಆಲ್ದೂರು ಮತ್ತು ಮಲ್ಲಂದೂರಿನ ಸುತ್ತಮುತ್ತಲ ಪ್ರದೇಶಗಳು ಕಿತ್ತಲೆಹಣ್ಣಿನ ಬೆಳೆಗೆ ಹೆಸರುವಾಸಿಯಾಗಿದ್ದವು. ಮಲೆನಾಡು ಭಾಗದಲ್ಲಿ ಬತ್ತ, ಅಡಕೆಗಳನ್ನೂ ಬೆಳೆಯುತ್ತಾರೆ. ಆದರೆ ಈ ಬೆಳೆಗಳು ಅಷ್ಟು ಅದಿsಕ ಇಳುವರಿ ನೀಡುವುದಿಲ್ಲ. ಬಯಲು ಪ್ರದೇಶದಲ್ಲಿ ಬತ್ತ, ಕಬ್ಬು, ರಾಗಿ, ಆಲೂಗೆಡ್ಡೆ, ಹುರುಳಿ, ಗೆಣಸು, ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಸಾಸಿವೆ ಮೊದಲಾದ ಬೆಳೆಗಳನ್ನು ಬೆಳೆಯಲಾಗುತ್ತದೆ.
ತಾಲ್ಲೂಕಿನ ಕಾಪಿs ತೋಟಗಳ ಉದ್ಯಮ ಬೆಳೆದು ಹೊರಗಿನಿಂದ ಬಂದ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಲಬಿsಸಿದೆ. ಇಲ್ಲಿ ಅನೇಕ ಕಾರ್ಮಿಕ ಸಂಘಗಳು ಇವೆ. ಮಲ್ಲಂದೂರು, ಹಿರೇಮಗಳೂರು, ಕೈಮರ, ಕಳಸಾಪುರ, ಕೃಷ್ಣರಾಜಪೇಟೆ, ವಸ್ತಾರೆ, ಆಲ್ದೂರು, ಇಂದಾವರ, ಜೋಳದಾಳು, ಶಿರವಾಸೆ ಮೊದಲಾದ ಸ್ಥಳಗಳು ಬೆಳೆವಣಿಗೆ ಹೊಂದಿವೆ. ಇವುಗಳಲ್ಲಿ ಬಹುತೇಕ ಸ್ಥಳಗಳಲ್ಲಿ ಮಾಧ್ಯಮಿಕ ಶಾಲೆಗಳೂ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಇವೆ. ಹಲವು ಸ್ಥಳಗಳಲ್ಲಿ ಪಶುವೈದ್ಯಶಾಲೆಗಳು ಮತ್ತು ಪ್ರೌಢಶಾಲೆಗಳುಂಟು. ತಾಲ್ಲೂಕಿನ ಕೆಲವು ಸ್ಥಳಗಳಲ್ಲಿ ವಾರದ ಸಂತೆಗಳು ನಡೆಯುತ್ತವೆ.
ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ ಗಿರಿ ಪ್ರೇಕ್ಷಣಿಯ ಸ್ಥಳಗಳು. ಮೂಡಿಗೆರೆ ರಸ್ತೆಯಲ್ಲಿರುವ ವಸ್ತಾರೆ 1875ರವರೆಗೂ ಇದೇ ಹೆಸರಿನ ತಾಲ್ಲೂಕಿಗೆ ಕೆಂದ್ರವಾಗಿತ್ತು. ಈ ಹೆಸರು ವಸು ಧಾರಾ ಅಂದರೆ ದಾನವಾಗಿ ಕೊಟ್ಟ ಭೂಮಿ ಎಂಬ ಅರ್ಥದಲ್ಲಿ ಬಂದು ರೂಪಾಂತರ ಹೊಂದಿ ವಸ್ತಾರೆ ಆಗಿದೆ ಎಂದು ತಿಳಿದುಬರುತ್ತದೆ. ಹುಂಚದ ರಾಜರಲ್ಲೊಬ್ಬ ಇದನ್ನು ಸ್ಥಾಪಿಸಿದ. ಇದು ಹಿಂದೆ ಸಿಸುಕಲಿ ಮತ್ತು ಕಾರ್ಕಳ ದೊರೆಗಳ ಅದಿsೀನದಲ್ಲಿತ್ತು. ಮಲೆನಾಡಿನಲ್ಲಿ ಮೊಟ್ಟಮೊದಲು ಕಾಪಿs ಬೆಳೆಯಲು ಪ್ರಯತ್ನಿಸಿದ ಸ್ಥಳಗಳಲ್ಲಿ ಇದೂ ಒಂದು ಎಂದು ಹೇಳಲಾಗಿದೆ.
ಮತ್ತಾವರದಲ್ಲಿರುವ ಪಾಶ್ರ್ವನಾಥ ಬಸದಿ ಬಹು ಪುರಾತನವಾದ್ದು. ಮರಳೆಯಲ್ಲಿ ಹೊಯ್ಸಳ ಶೈಲಿಯ ಎರಡು ದೇವಾಲಯಗಳುಂಟು. ಚಿಕ್ಕಮಗಳೂರು ಪಟ್ಟಣಕ್ಕೆ 2ಕಿಮೀ ದೂರವಿರುವ ಹಿರೇಮಗಳೂರು ಐತಿಹಾಸಿಕ ಸ್ಥಳ. ಕಳಸಾಪುರದಲ್ಲಿರುವ ಚೆಲುವನಾರಾಯಣ ದೇವಾಲಯ ಆಕರ್ಷಕ. ಬೆಳವಾಡಿಯ ವೀರನಾರಾಯಣ ದೇವಾಲಯ ಪ್ರಸಿದ್ಧ ಹೊಯ್ಸಳ ದೇವಾಲಯಗಳಲ್ಲೊಂದು. ಪಾದಪೀಠವೂ ಸೇರಿದಂತೆ ಅಲ್ಲಿಯ ವಿಗ್ರಹದ ಎತ್ತರ 7'. ಅಲ್ಲಿರುವ ಇನ್ನೊಂದು ದೇವಾಲಯ ಮಲ್ಲಿಕಾರ್ಜುನನದು. ಇದರ ತುದಿಯಲ್ಲಿ ಹೊಯ್ಸಳರ ಲಾಂbsÀನವಿದೆ. ಈ ಎರಡೂ ದೇವಾಲಯಗಳ ನವರಂಗಗಳಲ್ಲೂ ಅನೇಕ ದೇವದೇವತೆಗಳ ವಿಗ್ರಹಗಳನ್ನು ಕೆತ್ತಲಾಗಿದೆ. ಕೋಟೆ ಊರು ವಸ್ತಾರೆ ಹೋಬಳಿಯಲ್ಲಿದೆ. ಇಲ್ಲಿ ಹಲವು ಪ್ರಾಚೀನ ಶಾಸನಗಳುಂಟು.
ಪಟ್ಟಣ: ಚಿಕ್ಕಮಗಳೂರು ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಆಡಳಿತ ಕೇಂದ್ರ. ಇದು ಮುಳ್ಳಯ್ಯನಗಿರಿಯ ದಕ್ಷಿಣಕ್ಕಿದೆ. ಜನಸಂಖ್ಯೆ 1,01,022. 40ಕಿಮೀ ದೂರದ ಕಡೂರೇ ಇಲ್ಲಿಗೆ ಅತ್ಯಂತ ಸಮೀಪದ ರೈಲ್ವೆ ನಿಲ್ದಾಣ.
ಇಲ್ಲಿ ಜಿಲ್ಲಾಮಟ್ಟದ ಕಚೇರಿಗಳೂ ಸೆಷನ್ಸ್ ಕೋರ್ಟೂ ಇವೆ. ಕಾಪಿs ಹದ ಮಾಡುವ ಕಾರ್ಖಾನೆಗಳಿವೆ. ಕೆಲವು ಎಂಜಿನಿಯರಿಂಗ್ ಕಾರ್ಯಾಗಾರಗಳು ಇದ್ದು ಇವು ಕಾಪಿs ತೋಟಗಳಿಗೆ ಬೇಕಾದ ಉಪಕರಣಗಳನ್ನು, ವಸ್ತುಗಳನ್ನು ತಯಾರಿಸುತ್ತವೆ. ಮರ ಕೊಯ್ಯುವುದು, ಬೆತ್ತ ಹೆಣೆಯುವುದು, ಕಬ್ಬಿಣದ ಉಪಕರಣಗಳ ರಿಪೇರಿ, ಗಾಡಿ ಕೂಡಿಸುವುದು, ಚರ್ಮದ ಕೆಲಸ -ಇವು ಕೆಲವು ಉಪಕಸಬುಗಳು. ಇಲ್ಲಿಯ ಪುರಸಭೆಯನ್ನು 1870ರಲ್ಲೇ ಸ್ಥಾಪಿಸಲಾಯಿತು.
ಪಟ್ಟಣಕ್ಕೆ ಸೇರಿಕೊಂಡಂತಿರುವ ರತ್ನಗಿರಿ ಒಂದು ಎತ್ತರದ ದಿಬ್ಬ; ಸಂಜೆಯ ವಿಹಾರ ಸ್ಥಳ. ಇಲ್ಲಿಯ ಗಂಧದ ಕೋಟೆ ಎಂಬ ಸ್ಥಳದಲ್ಲಿ ರಾಮೇಶ್ವರ ದೇವಾಲಯವೂ ಅನೇಕ ನಾಗರ ವಿಗ್ರಹಗಳೂ ಇವೆ. ಕನ್ನಿಕಾಪರಮೇಶ್ವರಿ ದೇವಾಲಯವನ್ನು ಆಧುನಿಕವಾಗಿ ಭವ್ಯವಾಗಿ ಕಟ್ಟಲಾಗಿದೆ. ಇಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜು, ಒಂದು ಪಾಲಿಟಿಕ್ನಿಕ್, ಎರಡು ಪ್ರಥಮ ದರ್ಜೆ ಕಾಲೇಜುಗಳು ಇವೆ. ಆಧುನಿಕವಾಗಿ ನಿರ್ಮಿತವಾಗಿರುವ ಶ್ಮಶಾನ (ಮುಕ್ತಿಧಾಮ)ವಿದೆ.
ಚಿಕ್ಕಮಗಳೂರಿಗೆ ಈ ಹೆಸರು ಬರಲು ಕಾರಣವಾದ ಒಂದು ಐತಿಹ್ಯವಿದೆ. ಮಹಾಭಾರತ ಕಥೆಯಲ್ಲಿ ಬರುವ ಹಾಗೂ ಸಕ್ಕರೆ ಪಟ್ಟಣದಲ್ಲಿದ್ದನೆನ್ನಲಾದ ರುಕ್ಮಾಂಗದ ಚಿಕ್ಕಮಗಳೂರನ್ನೂ ಇದgಸಮೀಪದಲ್ಲಿ ಇರುವ ಹಿರೇಮಗಳೂರನ್ನೂ ತನ್ನ ಕಿರಿಯ ಮತ್ತು ಹಿರಿಯ ಹೆಣ್ಣುಮಕ್ಕಳಿಗೆ ಬಳುವಳಿಯಾಗಿ ನೀಡಿದ. ಆ ಊರುಗಳಿಗೆ ಅನುಕ್ರಮವಾಗಿ ಚಿಕ್ಕ ಮಗಳ ಊರು ಮತ್ತು ಹಿರಿಯ ಮಗಳ ಊರು ಎಂದು ಹೆಸರುಗಳು ಬಂದುವು ಎಂದು ಪ್ರತೀತಿ. ಆದರೆ 9ನೆಯ ಶತಮಾನದಲ್ಲಿ ಗಂಗರು ನಿರ್ಮಿಸಿದರೆನ್ನಲಾದ ಕೋಟೆ ಇದ್ದ ಸ್ಥಳದಲ್ಲಿ ದೊರೆತಿರುವ ಶಾಸನದಲ್ಲಿ ಇದನ್ನು ಕಿರಿಯ ಮುಗುಳಿ ಎಂದು ಕರೆಯಲಾಗಿದೆ. ಮುಗುಳಿ ಎಂದರೆ ಒಂದು ಬಗೆಯ ಹೂ ಬಿಡುವ ಗಿಡ ಎಂಬ ಅರ್ಥವಿದೆ. ಒಂದು ಕಾಲಕ್ಕೆ ಇದು ಜೈನ ಕೇಂದ್ರವಾಗಿತ್ತೆಂದು ತಿಳಿದುಬರುತ್ತದೆ. ಚಿಕ್ಕಮಗಳೂರಿನ 1ನೆಯ ಶಾಸನದಲ್ಲಿ (1257) ಇದು ದೇವಳಿಗೆ ನಾಡಲ್ಲಿದ್ದಿತೆಂದೂ ಹೇಳಲಾಗಿದೆ. ಈ ಸ್ಥಳ ಹಿಂದೆಯೂ ಚಿಕ್ಕ ಪ್ರಾಂತ್ಯ ವಿಭಾಗದ ಮುಖ್ಯ ಕೇಂದ್ರವಾಗಿದ್ದಿರಬಹುದು. (ಡಿ.ಎಸ್.ಜೆ.)