ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಿಯಾ - ಸಿಯಾಂಗ್ ಸೀನ್

ವಿಕಿಸೋರ್ಸ್ದಿಂದ

ಚಿಯಾ - ಸಿಯಾಂಗ್ ಸೀನ್

ಚೀನದ ಷಾಂಟಂಗ್ ಪ್ರಾಂತ್ಯದಲ್ಲಿವು ವಂಶೀಯರ ಸಮಾಧಿಗಳು (ಕ್ರಿ.ಶ.ಸು. 147-168) ಇರುವ ಸ್ಥಳ. ಹ್ಯಾನ್ ರಾಜವಂಶದ ಕಾಲಕ್ಕೆ ಸೇರಿದ ಇಂಥ ಕುಲ ಸಮಾಧಿಗಳು ಹೋಪೇ, ಷಾಂಟಂಗ್ ಮುಂತಾದೆಡೆಗಳಲ್ಲೂ ಇವೆ. ಈ ಸಮಾಧಿಗಳೆಲ್ಲ ನೆಲದ ಅಡಿಯಲ್ಲಿ ಕಟ್ಟಿದಂಥವು. ಆದರೂ ಇಟ್ಟಿಗೆಯ ಕಟ್ಟಡ, ಕಮಾನು, ಅರೆಪೀಪಾಯಿ ಚಾವಣಿ ಮುಂತಾದ ವಾಸ್ತುವೈಶಿಷ್ಟ್ಯಗಳು ಇವುಗಳಲ್ಲಿ ಕಂಡುಬರುತ್ತವೆ. ಈ ಸಮಾಧಿಗಳಲ್ಲಿ ಉತ್ತರ-ದಕ್ಷಿಣವಾಗಿ, ಒಂದಕ್ಕೊಂದು ಹೊಂದಿಕೊಂಡಂತೆ, ಹಬ್ಬಿರುವ ಅನೇಕ ದೊಡ್ಡ ಕೋಣೆಗಳೂ ಇವುಗಳಿಂದ ಪಕ್ಕಗಳಿಗೆ ತೆರೆಯುವ ಸಣ್ಣ ಕೋಣೆಗಳೂ ಇವೆ. ಇವುಗಳ ಒಳಗೊಡೆಗಳ ಮೇಲೆ ಪ್ರಾಣಿಗಳು, ಹಕ್ಕಿಗಳು, ಮುಂತಾದವೇ ಅಲ್ಲದೆ ಮೃತನಿಗೆ ಅಧೀನರಾಗಿದ್ದ ಕಿರಿ ಅಧಿಕಾರಿಗಳು, ಸೇವಕರು, ಆ ಕಾಲದ ಕಟ್ಟಡಗಳು, ದೋಣಿಗಳು ಮುಂತಾದವುಗಳ ವರ್ಣಚಿತ್ರಗಳು ಅಥವಾ ಅಲ್ಪ ಉಬ್ಬುಶಿಲ್ಪಗಳು ಇರುತ್ತವೆ. ಕಾನ್ಫ್ಯೂಷನ್, ಟಾವೊ ಮುಂತಾದ ಸಿದ್ಧಾಂತಗಳಿಗೆ ಸಂಬಂಧಿಸಿದ ಚಿತ್ರಗಳೂ ಉಂಟು. ಈ ಚಿತ್ರಗಳೂ ಶಿಲ್ಪಗಳೂ ಹ್ಯಾನ್ ರಾಜವಂಶಕಾಲದ ಚೀನೀ ಸಂಸ್ಕøತಿಯನ್ನು ಅರಿಯಲು ಬಹಳಮಟ್ಟಿಗೆ ಸಹಾಯಕವಾಗಿವೆ. (ಎಸ್.ಎನ್.)