ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಿಲ್ಕರಿವೆ ಸೊಪ್ಪು
ಚಿಲ್ಕರಿವೆ ಸೊಪ್ಪು - ಅಮರ್ಯಾಂತೇಸೀ ಕುಟುಂಬಕ್ಕೆ ಸೇರಿದ ಒಂದು ಜನಪ್ರಿಯ ಸೊಪ್ಪು ತರಕಾರಿ. ದಂಟು ಪರ್ಯಾಯನಾಮ. ಅಮರ್ಯಾಂತಸ್ ಗ್ಯಾಂಜಟಿಕಸ್ ಶಾಸ್ತ್ರೀಯನಾಮ. ಉಷ್ಣಪ್ರದೇಶಗಳ ಮೂಲವಾಸಿ. ಇದರ ಕೃಷಿ ಭಾರತಾದ್ಯಂತ ಉಂಟು. ಇದರಲ್ಲಿ ಲ್ಯಾನ್ಸಿಯೋಲೇಟಸ್, ಲಿವಿಡಸ್, ಪಾಲಿಗ್ಯಾಮಸ್ ಮತ್ತು ಟ್ರಿಸ್ಟಸ್ ಎಂಬ ನಾಲ್ಕು ಬಗೆಗಳಿವೆ. ಇದು ಏಕವಾರ್ಷಿಕ ಪೊದೆಸಸ್ಯ. ಇದರ ಕಾಂಡದ ಬಣ್ಣ ಹಸಿರು ಅಥವಾ ಕಡುಗೆಂಪು ಎಲೆಗಳು ದಟ್ಟ ಹಸಿರು ಬಣ್ಣದವು. ಕೆಲವು ಸಲ ಊದಾಬಣ್ಣದ ಛಾಯೆಯಿರುವುದುಂಟು. ಹೂಗಳು ರೆಂಬೆಗಳ ತುದಿಯಲ್ಲಿ ರೇಸೀಮ್ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಬೀಜಗಳು ರಾಗಿಕಾಳಿಗಿಂತ ಚಿಕ್ಕಗಾತ್ರದವು. ಅವುಗಳ ಬಣ್ಣ ಹೊಳೆಯುವ ಕಪ್ಪು.
ಚಿಲ್ಕರಿವೆ ಸೊಪ್ಪನ್ನು ನೀರು ನಿಲ್ಲದಂಥ ಎಲ್ಲ ತರದ ಮಣ್ಣಿನಲ್ಲಿ ಬೆಳೆಸಬಹುದು. ಭೂಮಿಯನ್ನು 3-4 ಸಾರಿ ಚೆನ್ನಾಗಿ ಉತ್ತು ಹೆಂಟೆ ಒಡೆದು ಪುಡಿ ಮಾಡಿ ಕಸಕಡ್ಡಿ ಆರಿಸಿ ಮಟ್ಟಮಾಡಬೇಕು. ಅಗತೆ ಮಾಡುವುದಾದರೆ 6" ಆಳಕ್ಕೆ ಅಗೆದು ಹದ ಮಾಡಬೇಕು. ಒಂದು ಎಕರೆಗೆ 20-25 ಗಾಡಿ ಕೊಳೆತು ಪುಡಿಯಾಗಿರುವ ಕೊಟ್ಟೆಗೆ ಗೊಬ್ಬರ ಹಾಕಿ ಅನುಕೂಲಕ್ಕೆ ತಕ್ಕಂತೆ ಪಾತಿಗಳನ್ನು ಮತ್ತು ನೀರು ಕಾಲುವೆಗಳನ್ನು ಮಾಡಬೇಕು.
ಒಂದು ಹೆಕ್ಟೇರಿಗೆ 1.5-2.4 ಕೆ.ಜಿ. ಬೀಜ ಬೇಕಾಗುವುದು. ಬೀಜ ಚಿಕ್ಕದಾದ್ದರಿಂದ ಆದಷ್ಟು ಭೂಮಿಯ ಮೇಲ್ಭಾಗದಲ್ಲಿರುವಂತೆ ಬಿತ್ತಬೇಕು. ಬೀಜದಷ್ಟೇ ಚಿಕ್ಕಗಾತ್ರದ ಮರಳನ್ನು ಸೇರಿಸಿ ಬಿತ್ತುವುದು ಒಳ್ಳೆಯದು. ಬಿತ್ತನೆ ಸಮಯದಲ್ಲಿ ಸಾಕಷ್ಟು ತೇವಾಂಶವಿರಬೇಕು. ಬಿತ್ತನೆ ಅನಂತರ ಲಘುವಾಗಿ ನೀರು ಹಾಕಬೇಕು. ಬೇಸಿಗೆಯಲ್ಲಿ 4 ದಿವಸಗಳಿಗೊಮ್ಮೆ ನೀರು ಹಾಕುತ್ತಿದ್ದು ಮಧ್ಯವರ್ತಿಯಾಗಿ 3-4 ಬಾರಿ ಕಳೆ ಕೀಳಬೇಕು. ಬಿತ್ತನೆಮಾಡಿದ 4-5 ವಾರಗಳಲ್ಲಿ ಸೊಪ್ಪು ಕೊಯ್ಲಿಗೆ ಬರುತ್ತದೆ. ಸೊಪ್ಪನ್ನು ಯಾವಾಗಲೂ ಸಾಯಂಕಾಲ ಕೊಯ್ಯಬೇಕು. ಒಂದು ಹೆಕ್ಟೇರಿನಿಂದ 90-100 ಕ್ವಿಂಟಾಲ್ ಸೊಪ್ಪನ್ನೂ 1.8-2.8 ಕ್ವಿಂಟಾಲ್ ಬೀಜವನ್ನೂ ಪಡೆಯಬಹುದು.
ಚಿಲ್ಕರಿವೆ ಸೊಪ್ಪನ್ನು ಕೊಯ್ಲಿಗೆ ಅನುಗುಣವಾಗಿ ಬಿತ್ತನೆಮಾಡಿ, ಎಲ್ಲ ಕಾಲದಲ್ಲಿಯೂ ಬೆಳೆಸಿ ನಿತ್ಯ ವ್ಯಾಪಾರಕ್ಕೆ ಕೊಯ್ಲು ಮಾಡಬಹುದು. ಮನೆ ತೋಟಗಳಲ್ಲಿ ನಿತ್ಯ ಪಲ್ಯಕ್ಕೆ, ಸೊಪ್ಪು ಸಾರಿಗೆ ಸಿಗುವಂತೆ ಬೆಳೆಸಿಕೊಳ್ಳಬಹುದು. ಇದು ರಕ್ತಶುದ್ಧಿಗೆ ಮತ್ತು ವೃದ್ಧಿಗೆ ಒಳ್ಳೆಯದು. ಇದರಲ್ಲಿ ಎ, ಬಿ ಮತ್ತು ಸಿ ವಿಟಮಿನ್ನುಗಳೂ ಕಬ್ಬಿಣ, ರಂಜಕ, ಸುಣ್ಣ ಮತ್ತು ಪ್ರೋಟೀನುಗಳೂ ಹೆಚ್ಚು ಪ್ರಮಾಣದಲ್ಲಿವೆ. (ಎಂ.ಎಚ್.ಎಂ.)