ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಿಲ್ಲರೆ ವ್ಯಾಪಾರಿ
ಚಿಲ್ಲರೆ ವ್ಯಾಪಾರಿ - ಅಂತಿಮ ಅನುಭೋಗಿಗಳಿಗೆ, ಎಂದರೆ ಸ್ವಂತ ಉಪಯೋಗಕ್ಕಾಗಿ ಅಥವಾ ಮನೆಯಲ್ಲಿ ಬಳಸುವುದಕ್ಕಾಗಿ ಕೊಳ್ಳುವವರಿಗೆ, ಸರಕನ್ನು ನೇರವಾಗಿ ವಿಕ್ರಯಿಸುವ ವರ್ತಕ (ರೀಟೇಲಿಂರ್). ಈ ವ್ಯವಹಾರಕ್ಕೆ ಚಿಲ್ಲರೆ ವ್ಯಾಪಾರ (ರೀಟೆಲಿಂಗ್) ಎಂದು ಹೆಸರು. ಸರಕಿನ ವಿಕ್ರಯವೇ ಅಲ್ಲದೆ ಅದನ್ನು ಬಳಸುವಂತಾಗಲು ಅವಶ್ಯವಾದ ಬಗೆಯ ಸೇವೆಗಳ ವಿಕ್ರಯವೂ ಇದರಲ್ಲಿ ಸೇರಿದೆ. ಆದರೆ ಸೇವೆಗಳನ್ನೆ ವಿಕ್ರಯಿಸುವ ವ್ಯವಹಾರವನ್ನು ಚಿಲ್ಲರೆ ವ್ಯಾಪಾರ ಎನ್ನುವುದಿಲ್ಲ. ಚಿಲ್ಲರೆ ವ್ಯಾಪಾರಿ ವಾಣಿಜ್ಯ ವ್ಯವಸ್ಥೆಯಲ್ಲಿ ಅತ್ಯಂತ ಕೆಳಗಿನ ಹಂತದಲ್ಲಿರುವ ವ್ಯಾಪಾರಿ. ಅನುಭೋಗಿಗಳೊಂದಿಗೆ ಈತ ನೇರ ಸಂಪರ್ಕ ಹೊಂದಿರುತ್ತಾನೆ. ಈತ ತನ್ನ ಸ್ವಂತ ಬಂಡವಾಳದಿಂದ ಸಗಟು ವ್ಯಾಪಾರಿಯಿಂದ ಸರಕನ್ನು ಕೊಂಡು ಅನುಭೋಗಿಗಳಿಗೆ ಬಿಕರಿ ಮಾಡುತ್ತಾನೆ. ಚಿಲ್ಲರೆ ವ್ಯಾಪಾರಿ ಒಂದು ಸ್ಥಳದಲ್ಲಿ ಅಂಗಡಿಯಲ್ಲಿ ಸರಕನ್ನು ದಾಸ್ತಾನಿಟ್ಟು ಬಿಕರಿ ಮಾಡುವುದು ಸಾಮಾನ್ಯ. ಆದರೆ ಸರಕನ್ನು ತಲೆಯ ಮೇಲೆ ಹೊತ್ತೋ, ಗಾಡಿಯಲ್ಲಿಟ್ಟೋ ಬೀದಿಯಲ್ಲಿ ಸಾಗಿ, ಮನೆಯಿಂದ ಮನೆಗೆ ಹೋಗಿ ವ್ಯಾಪಾರ ಮಾಡುವವರೂ ಉಂಟು. ಕೈಗಾರಿಕೆಯಲ್ಲಿ ಮುಂದುವರಿದ ದೇಶಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಅನುಭೋಗಿಗಳಿಗೆ ಬೇಕಾದ ಸರಕನ್ನು ವಿಕ್ರಯಿಸುವ ಸ್ವಯಂಚಾಲಿತ ಯಂತ್ರಗಳನ್ನು ಸ್ಥಾಪಿಸಿರುವುದುಂಟು. ನಿಗದಿಯಾದ ನಾಣ್ಯವನ್ನು ಯಂತ್ರದ ಸೀಳುಗಳಡಿಯಲ್ಲಿ ಹಾಕಿ ಗುಂಡಿ ಒತ್ತಿದರೆ ಸರಕು ಹೊರಬರುತ್ತದೆ.
ಪ್ರಾಮುಖ್ಯ : ಒಂದು ದೆಶದ ಚಿಲ್ಲರೆ ವ್ಯಾಪಾರದ ವ್ಯಾಪಕತೆ ದೇಶದ ರಾಷ್ಟ್ರೀಯ ವರಮಾನವನ್ನು ಅವಲಂಬಿಸಿರುತ್ತದೆ. ಹೆಚ್ಚು ಪ್ರಾಮುಖ್ಯವುಂಟು. ಅದು ಹೆಚ್ಚು ಜನರಿಗೆ ಉದ್ಯೋಗ ನೀಡುತ್ತದೆಯಲ್ಲದೆ ಕೈಗಾರಿಕೆಯ ಬೆಳವಣಿಗೆಗೆ ಉತ್ತೇಜಕವಾಗಿರುತ್ತದೆ. ಕೈಗಾರಿಕೆಯಲ್ಲಿ ಮುಂದುವರಿದ ದೇಶಗಳಲ್ಲಿ ಚಿಲ್ಲರೆ ವ್ಯಾಪಾರ ವಹಿಸುವ ಪಾತ್ರ ಪ್ರಧಾನವಾದ್ದು. ಜನರ ಅನೇಕ ಬೇಡಿಕೆಗಳನ್ನು ಪೂರೈಸುವ ನೇರ ಮಾಧ್ಯಮ ಅದು. ಚಿಲ್ಲರೆ ವ್ಯಾಪಾರ ವ್ಯವಸ್ಥೆ ಎಷ್ಟು ಸಮರ್ಪಕವಾಗಿರುತ್ತದೆಯೋ ಅಷ್ಟರ ಮಟ್ಟಿಗೆ ಅನುಭೋಗಿಗಳಿಗೆ ಒಳ್ಳೆಯ ಗುಣಮಟ್ಟಗಳ, ವೈವಿಧ್ಯಪೂರ್ಣವಾದ ಸರಕುಗಳು ನ್ಯಾಯವಾದ ಬೆಲೆಗಳಲ್ಲಿ ದೊರಕುತ್ತವೆ. ಮಧ್ಯಮವರ್ಗದ ಬೆಳವಣಿಗೆಗೆ ಅದು ಸಾಧಕವಾಗುತ್ತದೆ.
ಇತಿಹಾಸ : ಚಿಲ್ಲರೆ ವ್ಯಾಪಾರ ಅತ್ಯಂತ ವ್ಯಾಪಕವಾದ ಮತ್ತು ಬಹುಷಃ ಅತ್ಯಂತ ಪ್ರಾಚೀನವಾದ ವ್ಯಾಪಾರ. ಇತಿಹಾಸದ ದಾಖಲೆ ಇರುವ ಎಲ್ಲ ನಾಗರಿಕತೆಗಳಲ್ಲೂ ಇದು ಒಂದಿಲ್ಲೊಂದು ರೂಪದಲ್ಲಿ ಜಾರಿಯಲ್ಲಿತ್ತು. ಇತಿಹಾಸಪೂರ್ವ ಕಾಲದಲ್ಲೂ ಇದು ಪ್ರಮುಖವಾಗಿದ್ದಿರಬೆಕು. ಆ ಕಾಲದ ಉಪಕರಣಗಳು, ವಸ್ತ್ರಗಳು, ಆಭರಣಗಳು ಮುಂತಾದವುಗಳಿಗೆ ಬಳಸಲಾಗಿರುವ ಕಚ್ಚಾ ಸಾಮಾಗ್ರಿಗಳು ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ದೊರಕುತ್ತಿದ್ದುವು. ಆದರೆ ಆ ಸಾಮಾಗ್ರಿಗಳಿಂದ ಮಾಡಿದ ಉಪಕರಣಗಳೂ ಅಸ್ತ್ರಗಳೂ, ಆಭರಣಗಳೂ ಇಡೀ ಖಂಡಗಳಲ್ಲೆಲ್ಲ ಕಾಣಸಿಕ್ಕಿವೆ. ಎಂದರೆ ಒಂದು ಜನಾಂಗ ಇನ್ನೊಂದನ್ನು ಲೂಟಿಮಾಡಿಯೋ, ಯುದ್ಧದಲ್ಲಿ ಸೋಲಿಸಿಯೋ ಶಾಂತಿಯುತ ವಿನಿಮಯ ಅಥವಾ ವ್ಯಾಪಾರದಿಂದಲೋ ಅವನ್ನು ಪಡೆದಿರಬೇಕು. ವ್ಯಾಪಾರ ಅಥವಾ ವಿನಿಮಯವೇ ಇವುಗಳ ಹರಡುವಿಕೆಗೆ ಮುಖ್ಯ ಕಾರಣಗಳಿದ್ದಿರಬೇಕು.
ಕ್ರಿ.ಪೂ. 2000ದ ವೇಳೆಗೆ ಚಿಲ್ಲರೆ ವ್ಯಾಪಾರ ಖಚಿತವಾಗಿ ಬೆಳೆದಿತ್ತು. ನಗರಗಳಲ್ಲಿ ಅಂಗಡಿಗಳಿದ್ದುವು. ಸಂಚಾರಿ ವ್ಯಾಪಾರಿಗಳು ಸ್ಥಳದಿಂದ ಸ್ಥಳಕ್ಕೆ ಹೋಗಿ ವ್ಯಾಪಾರ ಮಾಡುತ್ತಿದ್ದರು. ಚಿಲ್ಲರೆ ವ್ಯಾಪಾರ ವ್ಯವಸ್ಥೆಯ ಹಿಂದೆ ಸಗಟು ವ್ಯಾಪಾರವೂ ಆಯಾತ-ನಿರ್ಯಾತ ವ್ಯಾಪಾರವೂ ಇದ್ದಿರಬೇಕು. ಆದರೂ ಕೃಷಿ, ರಾಜಕಾರಣ, ಯುದ್ಧವೃತ್ತಿಗಳಿಗಿಂತ ವ್ಯಾಪಾರವೃತ್ತಿ ಕೀಳೆಂಬ ಭಾವನೆಯಿತ್ತು. ಗ್ರೀಕರ ಯುದ್ಧದೇವತೆ ಹರ್ಮಿಸ್ ಕಳ್ಳರ, ದರೋಡೆಕಾರರ ದೇವತೆ ಕೂಡ. ಗ್ರೀಕ್ ನಗರ ರಾಜ್ಯಗಳ ಮತ್ತು ರೋಮನ್ ಚಕ್ರಾಧಿಪತ್ತದ ಉಚ್ಛ್ರಾಯ ಕಾಲದಲ್ಲಿ ಚಿಲ್ಲರೆ ವ್ಯಾಪಾರ ಬೆಳೆಯಿತು. ಅಂಗಡಿಯಲ್ಲಿ ಸರಕುಗಳ ಪ್ರದರ್ಶನ, ಕಲೆ, ಅಂಗಡಿ ಅಲಂಕರಣ, ಅನುಭೋಗಿಯ ಆಸಕ್ತಿಗೆ ಪ್ರಾಧಾನ್ಯ- ಇವು ಗಮನಾರ್ಹ ಬೆಳವಣಿಗೆಗಳು. ರೋಮಿನ ಅಂಗಡಿಗಳು ಆ ಕಾಲದ ನಾಗರಿಕ ಜಗತ್ತಿನ ಫ್ಯಾಷನ್ನಿನ ಕೇಂದ್ರಗಳಾಗಿದ್ದುವು. ಅಂಚೆ ಆದೇಶ, ಸರಪಣಿ ಅಂಗಡಿ, ಇಲಾಖಾ ಮಳಿಗೆ, ವಿಶಿಷ್ಟ ಸರಕಿನ ಅಂಗಡಿ ಮುಂತಾದ ಆಧುನಿಕ ಚಿಲ್ಲರೆ ವ್ಯಾಪಾರದ ಬಗೆಗಳು ಆಗಿನ ರೋಮಿನಲ್ಲಿ ಉಗಮ ಹೊಂದಿದುವು. ಪ್ರಾಚೀನಭಾರತದಲ್ಲೂ ಚಿಲ್ಲರೆ ವ್ಯಾಪಾರ ಪ್ರವರ್ಧಮಾನವಾಗಿತ್ತು.
ರೋಮ್ ಚಕ್ರಾಧಿಪತ್ಯದ ಅವನತಿಯ ಅನಂತರ ಸ್ವಲ್ಪ ಕಾಲ ಯೂರೋಪಿನಲ್ಲಿ ಚಿಲ್ಲರೆ ವ್ಯಾಪಾರ ಕ್ಷೀಣಿಸಿತ್ತು. 500-900ರ ಅವಧಿಯಲ್ಲಿ ಜಾತ್ರೆಗಳಲ್ಲೂ ಪರಿಷೆಗಳಲ್ಲೂ ವ್ಯಾಪಾರ ಹೆಚ್ಚಾಗಿ ನಡೆಯುತ್ತಿತ್ತು. ವ್ಯಾಪಾರಗಳಿಗೆ ರಕ್ಷಣೆ ಇರಲಿಲ್ಲ. ವ್ಯಾಪಾರಿಗಳನೇಕರು ಊರಿಂದೂರಿಗೆ ಅಲೆಯುತ್ತ ವ್ಯಾಪಾರ ನಡೆಸುತ್ತಿದ್ದರು. ಭಾರತದಲ್ಲೂ ವಿದೆಶೀ ಆಕ್ರಮಣವಾದಾಗಲೆಲ್ಲ, ಪ್ರಕ್ಷುಬ್ದ ಪರಿಸ್ಥಿತಿ ತಲೆದೋರಿದಾಗಲೆಲ್ಲ ಅಂಗಡಿಗಳ ವ್ಯಾಪಾರ ಕ್ಷೀಣಿಸುತ್ತಿತ್ತು. ಹದಿನೆಂಟನೆಯ ಶತಮಾನದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಸಣ್ಣ ಚಿಲ್ಲರೆ ಅಂಗಡಿಯ ಬೆಳವಣಿಗೆ ಪರಮಾವಧಿ ಮುಟ್ಟಿತು. ವಿಶಿಷ್ಟ ಸರಕುಗಳನ್ನು ವಿಕ್ರಯಿಸುವ ಅಂಗಡಿಗಳು ಹೆಚ್ಚಿದುವು. ಹಣ್ಣು, ತರಕಾರಿ, ಮಾಂಸ, ಮೀನು, ದರ್ಜಿ, ಒಡವೆ, ಊದುಬತ್ತಿ ಅಂಗಡಿಗಳು ಸಾಮಾನ್ಯವಾದವು. ಈ ವ್ಯಾಪಾರಿಗಳು ಸಾಮಾನ್ಯವಾಗಿ ಸಗಟು ವ್ಯಾಪಾರಿಗಳಿಂದ ತಾವು ವಿಕ್ರಯಿಸುವ ಸರಕು ಕೊಳ್ಳುತ್ತಿದ್ದರು. ಸ್ಯಾಂಪಲುಗಳನ್ನು ತೋರಿಸಿ ಅಂಗಡಿಗಾರರಿಂದ ಸರಕಿಗೆ ಆದೇಶ ಪಡೆಯುವ ಸಂಚಾರಿ ವಿಕ್ರಯಾಧಿಕಾರಿಗಳು ಹುಟ್ಟಿಕೊಂಡರು. ಉದ್ದರಿ ವ್ಯವಸ್ಥೆಯನ್ನು ಸೃಷ್ಟೀಕರಿಸಲಾಯಿತು.
ಹತ್ತೊಂಬತ್ತು ಇಪ್ಪತ್ತನೆಯ ಶತಮಾನಗಳ ಮುಖ್ಯ ಬೆಳವಣಿಗೆಯೆಂದರೆ ಚಿಲ್ಲರೆ ವ್ಯಾಪಾರ ಸಂಸ್ಥೆಗಳ ಬೃಹದ್ಗಾತ್ರ. ಒಂದೇ ಬಗೆಯ ಸರಕುಗಳನ್ನು ಹಲವು ಸ್ಥಳಗಳಲ್ಲಿ ವಿಕ್ರಯಿಸುವ ಸರಪಣಿ ಅಂಗಡಿಗಳು, ಒಂದೇ ಮಾಳಿಗೆಯ ಅಡಿಯಲ್ಲಿ ಹಲವು ಬಗೆಯ ಸರಕುಗಳ ವಿವಿಧ ಇಲಾಖೆಗಳನ್ನುಳ್ಳ ಇಲಾಖಾ ಮಳಿಗೆಗಳು ಮುಂತಾದವು ಬೆಳೆದವು. ಇವುಗಳೊಂದಿಗೆ ಹಿಂದಿನ ಪ್ರಕಾರಗಳೂ ಉಳಿದುಕೊಂಡಿವೆ. ಚಿಲ್ಲರೆ ವ್ಯಾಪಾರ ಸದಾ ಪರಿವರ್ತನಶೀಲವಾದ್ದು. ಹೊಸ ಹೊಸ ಬಗೆಯ ಅಂಗಡಿಗಳು ಹುಟ್ಟಿಕೊಳ್ಳುತ್ತಲೇ ಇವೆ.
ಕಾರ್ಯಭಾರಗಳು : ಚಿಲ್ಲರೆವ್ಯಾಪಾರಿ ಗ್ರಾಹಕರ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ನೂರಾರು ಬಗೆಯ ಸರಕುಗಳನ್ನು ತನ್ನ ಅಂಗಡಿಯಲ್ಲಿ ವಿಕ್ರಯಕ್ಕಾಗಿ ಇಡಬೇಕಾಗುತ್ತದೆ. ಸಾಮಾನ್ಯವಾಗಿ ಸರಕನ್ನು ಸಗಟುವ್ಯಾಪಾರಿಯಿಂದಲೋ ಉತ್ಪಾದಕರಿಂದಲೋ ಕೊಳ್ಳಬೇಕಾಗುತ್ತದೆ. ಹೀಗೆ ಕೊಂಡ ಸರಕುಗಳು ಕಡಿಮೆ ಬೆಲೆಯವಾಗಿರಬೇಕು ಮತ್ತು ಗಿರಾಕಿಗಳಿಗೆ ತೃಪ್ತಿನೀಡುವುವಾಗಿರಬೇಕು. ಅನೇಕ ಸಲ ಉತ್ಪಾದಕರಿಂದ ಅಥವಾ ಸಗಟು ವ್ಯಾಪಾರಿಗಳಿಂದ ಕೊಂಡ ಸರಕನ್ನು ಸಣ್ಣ ಗಾತ್ರದಲ್ಲಿ ಮತ್ತೆ ಪ್ಯಾಕ್ ಮಾಡಬೇಕಾಗಬಹುದು. ಅಥವಾ ಅನೇಕ ಉತ್ಪಾದಕರ ಸರಕನ್ನು ಸೇರಿಸಿ ಒಂದು ಹೊಸ ಸರಕನ್ನಾಗಿ ಮಾಡಲು ಜೋಡಣೆ ಕೆಲಸವನ್ನು ಸಹ ಮಾಡಬೇಕಾಗುತ್ತದೆ. (ಉದಾಹರಣೆ : ಬೈಸಿಕಲ್‍ಗಳನ್ನು ಮಾರುವ ವ್ಯಾಪಾರಿ). ಸಾಮಾನ್ಯವಾಗಿ ಚಿಲ್ಲರೆ ವ್ಯಾಪಾರಿಯ ಅಂಗಡಿಯಲ್ಲಿ ಸ್ಥಳದ ಅಭಾವ ಇದ್ದೇ ಇರುತ್ತದೆ. ಆದ್ದರಿಂದ ಕೊಂಡ ಸರಕೆಲ್ಲವನ್ನೂ ಅವನು ಅಂಗಡಿಯಲ್ಲೇ ಇಡುವುದು ಸಾಧ್ಯವಾಗದು. ಆತ ಹೆಚ್ಚಿನ ಸರಕನ್ನು ದಾಸ್ತಾನು ಮಳಿಗೆಯಲ್ಲಿ ದಾಸ್ತಾನು ಮಾಡಬೇಕಾಗುತ್ತದೆ. ಕೊಂಚ ಸಾಮಾನನ್ನು ಅಂಗಡಿಯಲ್ಲಿ ಇಟ್ಟು ಪ್ರದರ್ಶಿಸುತ್ತಾನೆ. ಚಿಲ್ಲರೆ ವ್ಯಾಪಾರಿಯ ಮುಖ್ಯಧ್ಯೇಯವೆಂದರೆ ಸರಕನ್ನು ವಿಕ್ರಯಿಸಿ ಲಾಭ ಪಡೆಯುವುದು. ಸಾಮಾನ್ಯವಾಗಿ ಗ್ರಾಹಕರಿಂದ ಹೆಚ್ಚು ಬೇಡಿಕೆ ಇರುವ ಸರಕುಗಳನ್ನು ಮಾತ್ರ ಇವನು ಕೊಂಡು ತನ್ನ ಅಂಗಡಿಯಲ್ಲಿ ಪ್ರದರ್ಶಿಸಿ ವಿಕ್ರಯಿಸಲು ಪ್ರಯತ್ನಿಸುತ್ತಾನೆ. ವ್ಯಾಪಾರವನ್ನು ಹೆಚ್ಚಿಸಿಕೊಳ್ಳುವ ಶಕ್ತಿ ಈತನಲ್ಲಿ ಇರುವುದು ಅವಶ್ಯ. ಈತ ನಮ್ರನಾಗಿ, ಕೌಶಲದಿಂದ ವ್ಯಾಪಾರಮಾಡಿದರೆ ವ್ಯವಹಾರವನ್ನು ಚೆನ್ನಾಗಿ ಬೆಳೆಯಿಸಬಹುದು. ಇದರಿಂದ ಉತ್ಪಾದಕನಿಗೂ ಸಗಟು ವ್ಯಾಪಾರಿಗೂ ಗ್ರಾಹಕನಿಗೂ ಒಳ್ಳೆಯದು. ತನ್ನ ವ್ಯಾಪಾರವನ್ನು ಹೆಚ್ಚಿಸುವುದಕ್ಕಾಗಿ ಚಿಲ್ಲರೆ ವ್ಯಾಪಾರಿ ಗ್ರಾಹಕರಿಗೆ ಉದ್ದರಿಯ ಮೇಲೆ ಸರಕನ್ನು ಮಾರಿ, ಪ್ರತಿ ತಿಂಗಳ ಮೊದಲನೆಯ ತಾರೀಖಿನಂದು ಹಣವನ್ನು ವಸೂಲಿ ಮಾಡಬೇಕಾಗಬಹುದು. ಹೀಗೆ ಉದ್ದರಿ ವ್ಯಾಪಾರ ಮಾಡಬೇಕಾದರೆ ತಾನೂ ಸರಕನ್ನು ಉದ್ದರಿಯ ಮೇಲೆ ತಂದಿರಬೇಕಾಗುತ್ತದೆ. ಇದರಿಂದ ಖರ್ಚು ಹೆಚ್ಚುತ್ತದೆ. ಅಲ್ಲದೆ ಸಾಲದ ಮೆಲೆ ಬಡ್ಡಿ, ವಿಮೆ ಮಾರಾಟ ತೆರಿಗೆ ಮುಂತಾದುವನ್ನು ಸಹ ಕೊಡಬೇಕಾಗುತ್ತದೆ. ಈ ಎಲ್ಲ ಖರ್ಚುಗಳನ್ನೂ ವಿವೇಕಯುತವಾಗಿ ನಿರ್ವಹಿಸಬೇಕಾಗುತ್ತದೆ. ಇದು ಆತನ ಜವಾಬ್ದಾರಿಯುತವಾದ ಕೆಲಸ. ಚಿಲ್ಲರೆ ವ್ಯಾಪಾರಿ ಅನೇಕ ಸಲ ನಷ್ಟ ಅನುಭವಿಸಬೇಕಾಗುತ್ತದೆ. ಇದಕ್ಕೆ ಕಾರಣ ಮಾರುಕಟ್ಟೆಯ ಸ್ಥಿತಿ. ಗ್ರಾಹಕರ ಬೇಡಿಕೆಯನ್ನು ಪೂರೈಸಲು ವಿವಿಧ ರೀತಿಯ ಸರಕುಗಳನ್ನು ಸಂಗ್ರಹಿಬೇಕಾಗುತ್ತದೆ. ಸರಕುಗಳನ್ನು ಇಲಿ, ಹೆಗ್ಗಣಗಳು ತಿಂದು ನಷ್ಟವಾಗಬಹುದು. ಕೆಲವು ಸಲ ಫ್ಯಾಷನ್ನಿನ ಬದಲಾವಣೆಯಿಂದ ಹಲವು ಸರಕುಗಳು ಮಾರಾಟವಾಗದೆ ಉಳಿದುಹೋಗುತ್ತವೆ. ಹೀಗೆ ನಾನಾ ಬಗೆಯ ನಷ್ಟಗಳನ್ನು ಅನುಭವಿಸಲು ಆತ ಸಿದ್ಧನಾಗಿರಬೇಕು. ಇದೂ ಅವನ ಜವಾಬ್ದಾರಿ.
ಸೇವೆಗಳು : ಈತ ಗ್ರಾಹಕರಿಗೆ ನೇರವಾಗಿ ಸರಕನ್ನು ಸಣ್ಣ ಪರಿಮಾಣಗಳಲ್ಲಿ ವಿಕ್ರಯಿಸುವುದರಿಂದ ಸಣ್ಣ ಉತ್ಪಾದಕರ ಮತ್ತು ಸಗಟು ವ್ಯಾಪಾರಿಗಳ ಕಷ್ಟವನ್ನು ತಪ್ಪಿಸುತ್ತಾನೆ. ಗ್ರಾಹಕರೊಂದಿಗೆ ನೇರ ಸಂಪರ್ಕ ಇರುವುದರಿಂದ ಅವರ ಅಭಿರುಚಿಗಳಲ್ಲಿ ಆಗುತ್ತಿರುವ ಮಾರ್ಪಾಡನ್ನು ಗಮನಿಸಿ ಉತ್ಪಾದಕರಿಗೂ ಸಗಟು ವ್ಯಾಪಾರಿಗಳಿಗೂ ತಿಳಿಸುತ್ತಾನೆ. ಇದರಿಂದಾಗಿ ಉತ್ಪಾದಕರು ಗ್ರಾಹಕರ ಬೇಡಿಕೆ ಹಾಗೂ ಅಭಿರುಚಿಗಳಿಗೆ ತಕ್ಕಂತೆ ಸರಕಿನ ಉತ್ಪಾದನೆಯನ್ನು ನಿಯಂತ್ರಿಸಿಕೊಳ್ಳಬಹುದು. ಸಗಟು ವ್ಯಾಪಾರಗಾರರು ದಾಸ್ತಾನನ್ನು ನಿಯಂತ್ರಿಸಿಕೊಳ್ಳಬಹುದು. ಹೊಸ ಸರಕುಗಳ ಬಗ್ಗೆ ಗ್ರಾಹಕರ ಅಭಿಪ್ರಾಯವೇನು ಎಂಬುದನ್ನು ಚಿಲ್ಲರೆ ವ್ಯಾಪಾರಿಯಿಂದ ಸುಲಭವಾಗಿ ಉತ್ಪಾದಕರು ಮತ್ತು ಸಗಟು ವ್ಯಾಪಾರಿಗಳು ತಿಳಿದುಕೊಳ್ಳಬಹುದು. ಅನೇಕ ಸಾರಿ ಚಿಲ್ಲರೆ ವ್ಯಾಪಾರಿ ಗ್ರಾಹಕರ ಮನ ಒಲಿಸಿ ಹೊಸ ಸರಕುಗಳನ್ನು ವಿಕ್ರಯಿಸಬಹುದು. ಗ್ರಾಹಕರ ಬೇಕು ಬೇಡಗಳನ್ನು ಉತ್ಪಾದಕರು ಮತ್ತು ಸಗಟು ವ್ಯಾಪಾರದಾರರು ಅರಿತುಕೊಳ್ಳಬೇಕಾದರೆ, ಅದು ಚಿಲ್ಲರೆ ವ್ಯಾಪಾರಿಗಳ ಮುಖಾಂತರವೇ ಸಾಧ್ಯ.
ಗ್ರಾಹಕರಿಗೆ ಬೇಕಾದ ಸರಕನ್ನು ಚಿಲ್ಲರೆ ವ್ಯಾಪಾರಿ ದಾಸ್ತಾನು ಮಾಡಿ, ಅವರು ಕೇಳಿದಾಗ ವಿಕ್ರಯಿಸುತ್ತಾನೆ. ಗ್ರಾಹಕರಿಗೆ ಅನುಕೂಲವಾದ ಸ್ಥಳದಲ್ಲಿ ಅಂಗಡಿಯನ್ನು ಸ್ಥಾಪಿಸಿ ಅವರಿಗೆ ತೊಂದರೆಯಾಗದಂತೆ ವ್ಯಾಪಾರಮಾಡುತ್ತಾನೆ. ಅನೇಕ ಸಾರಿ ಪುಕ್ಕಟೆಯಾಗಿ ಸರಕನ್ನು ಗ್ರಾಹಕರ ಮನೆಗೆ ಸಾಗಿಸಿಕೊಡಲು ಸಹ ಮುಂದಾಗುತ್ತಾನೆ. ಚಿಲ್ಲರೆ ವ್ಯಾಪಾರಿಯ ಜನಪ್ರಿಯತೆಗೆ ಇವೆಲ್ಲ ಕಾರಣಗಳು. ಅವನು ಉದ್ದರಿ ಸೌಲಭ್ಯ ನೀಡುತ್ತಾನೆ. ವಿಕ್ರಯಿಸಿದ ಸರಕು ಗ್ರಾಹಕನಿಗೆ ಬೇಡವಾಗಿದ್ದಲ್ಲಿ ಅದನ್ನು ಹಿಂದಕ್ಕೆ ಪಡೆದುಕೊಂಡು, ಬೇರೆ ಸರಕನ್ನು ನೀಡಲು ಅವನು ಸಿದ್ಧ. ಸರಕು ಚಿಲ್ಲರೆ ವ್ಯಾಪಾರದಲ್ಲಿ ಸದಾ ದೊರೆಯುತ್ತದೆಯಾದ್ದರಿಂದ ಗ್ರಾಹಕರು ಹೆಚ್ಚು ಸರಕನ್ನು ದಾಸ್ತಾನು ಮಾಡಬೇಕಾಗುವುದಿಲ್ಲ.
ಬಗೆಗೆಳು : ಚಿಲ್ಲರೆ ವ್ಯಾಪಾರಿಗಳು ಮುಖ್ಯವಾಗಿ ಎರಡು ಬಗೆ: 1 ಸಂಚಾರಿ ವ್ಯಾಪಾರಿಗಳು ಮತ್ತು 2 ಸ್ಥಿರ ವ್ಯಾಪಾರಿಗಳು. ಬೀದಿಯಲ್ಲಿ ವ್ಯಾಪಾರ ಮಾಡುವವರು, ಸರಕನ್ನು ತಲೆಯ ಮೆಲೆ ಹೊತ್ತುಕೊಂಡೋ ಕೈಗಾಡಿಗಳ ಮೇಲೆ ಇಟ್ಟುಕೊಂಡೋ ಬೀದಿಯಿಂದ ಬೀದಿಗೆ ಹೋಗಿಯೋ ಸಂತೆಗೆ ಹೋಗಿಯೋ ವ್ಯಾಪಾರ ಮಾಡುವವರು ಸಂಚಾರಿ ವ್ಯಾಪಾರಿಗಳು. ಇವರ ವ್ಯಾಪಾರಕ್ಕೆ ನಿಶ್ಚಿತ ಸ್ಥಳವಿಲ್ಲ. ಇವರ ಬಂಡವಾಳ ಸಾಮಾನ್ಯವಾಗಿ ಕಡಿಮೆ. ಹಾಲು, ಹಣ್ಣು, ತರಕಾರಿ, ಹೂವು, ಆಟದ ಸಾಮಾನುಗಳು-ಮುಂತಾದವುಗಳ ವ್ಯಾಪಾರ ಮಾಡುವವರು ಇಂಥವರು. ಅಗ್ಗದ ಅಂಗಡಿಕಾರ (ಚೀಪ್ ಜಾಕ್) ಬೀದಿಯಿಂದ ಬೀದಿಗೆ ತಿರುಗುವುದಿಲ್ಲ. ಅವನು ಯಾವುದಾದರೊಂದು ಸ್ಥಳದಲ್ಲಿ ಅಂಗಡಿ ಹೂಡುತ್ತಾನೆ. ಆದರೆ ಅಲ್ಲೇ ಸ್ಥಿರವಾಗಿರುವುದಿಲ್ಲ. ಅಲ್ಲಿ ವ್ಯಾಪಾರ ಲಾಭಕರವಲ್ಲವೆನಿಸಿದಾಗ ತಳ ಕಿತ್ತು ಬೇರೆಡೆಗೆ ಹೋಗುತ್ತಾನೆ. ದೊಡ್ಡ ನಗರಗಳ ಜನಸಂದಣಿಯ ಪ್ರದೇಶಗಳಲ್ಲಿ ಕಾಲುದಾರಿಯ ಮೆಲೆ ಸರಕಿಟ್ಟು ವ್ಯಾಪಾರ ಮಾಡುವವರು ಬೀದಿ ಬಿಕರಿದಾರರು. ಇವರು ಕೂಡ ಸಂಚಾರಿ ವ್ಯಾಪಾರಿಗಳ ಗುಂಪಿಗೆ ಸೇರುತ್ತಾರೆ.
ಸ್ಥಿರ ಅಂಗಡಿಗಳನ್ನು ಸಣ್ಣವು, ದೊಡ್ಡವು ಎಂದು ವಿಂಗಡಿಸಬಹುದು. ಪೆಟ್ಟಿಗೆ ಅಂಗಡಿ, ಹಳೆಸರಕುಗಳ ಅಂಗಡಿ, ವಿಶಿಷ್ಟ ಸರಕುಗಳ (ಸ್ಪೆಷಾಲ್ಟಿ) ಅಂಗಡಿ, ಹಲವು ಸರಕುಗಳ ಅಂಗಡಿ-ಇವು ಸಣ್ಣವು. ಇಲಾಖಾ ಮಳಿಗೆ, ಬಹು ಶಾಖಾ ಅಂಗಡಿ, ಅಂಚೆ ಆದೇಶ ಗೃಹ, ಸಹಕಾರಿ ಭಂಡಾರ-ಇವು ದೊಡ್ಡವು.
ಇಲಾಖಾ ಮಳಿಗೆ : ಒಂದೇ ಸೂರಿನ ಅಡಿಯಲ್ಲಿ ಅನೇಕ ಇಲಾಖೆಗಳ ಮೂಲಕ ವಿವಿಧ ಬಗೆಯ ಸರಕುಗಳನ್ನು ವಿಕ್ರಯ ಮಾಡುವ ಅಂಗಡಿ ಇದು (ಡಿಪಾರ್ಟ್‍ಮೆಂಟಲ್ ಸ್ಟೋರ್ಸ್). ಒಂದೊಂದು ಇಲಾಖೆ ಅಥವಾ ವಿಭಾಗ ಒಂದೊಂದು ಬಗೆಯ ಸರಕುಗಳಿಗೆ ಮೀಸಲು. ಉದಾಹರಣೆ : ಬಟ್ಟೆ ವಿಭಾಗ, ದಿನಸಿ ವಿಭಾಗ, ಪಾತ್ರೆಗಳ ವಿಭಾಗ, ಪೀಠೋಪಕರಣಗಳ ವಿಭಾಗ ಇತ್ಯಾದಿ. ಸಾಮಾನ್ಯವಾಗಿ ಇಲಾಖಾ ಮಳಿಗೆಗಳಂಥ ಭಾರಿ ಉದ್ಯಮಗಳನ್ನು ಪಾಲುದಾರಿಕೆ ಸಂಸ್ಥೆಗಳೇ ಸ್ಥಾಪಿಸಿ ನಡೆಸುತ್ತವೆ. ಕಂಪನಿಯ ಒಡೆತನದಲ್ಲಿರುವ ಮಳಿಗೆಯ ಆಡಳಿತದ ಸಂಪೂರ್ಣ ಜವಾಬ್ದಾರಿಯನ್ನು ವ್ಯವಸ್ಥಾಪಕ ನಿರ್ದೇಶಕ ಅಥವಾ ಮಹಾ ವ್ಯವಸ್ಥಾಪಕ ಎಂಬ ಅಧಿಕಾರಿಗೆ ವಹಿಸಲಾಗುತ್ತದೆ.
ಸಾಮಾನ್ಯವಾಗಿ ಬಳಕೆದಾರರು ಕೇಳುವ ಸಕಲ ಸರಕುಗಳನ್ನೂ ಒಂದೇ ಸೂರಿನ ಅಡಿಯಲ್ಲಿ ನೀಡುವುದು ಇಲಾಖಾ ಮಳಿಗೆಯ ಉದ್ದೇಶ. ಇದರಿಂದ ಗ್ರಾಹಕರಿಗೆ ಕಾಲ ಮತ್ತು ಶ್ರಮದ ಉಳಿತಾಯವಾಗುತ್ತದೆ. ಅಲ್ಲದೆ ಇದು ಗ್ರಾಹಕರಿಗೆ ಉದ್ದರಿ ಸೌಲಭ್ಯ, ಸರಕನ್ನು ಸಂಸ್ಥೆಯ ಗಾಡಿಯಲ್ಲಿ ಗ್ರಾಹಕರ ಮನೆಗಳಿಗೆ ಕಳುಹಿಸುವುದು, ಗ್ರಾಹಕರು ಒಪ್ಪಿದ ಮೇಲೆ ಸರಕನ್ನು ಮಾರುವುದು ಮುಂತಾದ ಅನೇಕ ಸೌಲಭ್ಯಗಳನ್ನು ನೀಡಬಹುದು. ಅಮೆರಿಕ ಮುಂತಾದ ದೇಶಗಳಲ್ಲಿ ಗ್ರಾಹಕರು ವ್ಯಾಪಾರ ಮಾಡುತ್ತಿರುವಾಗ ಅವರ ಮಕ್ಕಳಿಗೆ ಆಟದ ವ್ಯವಸ್ಥೆಯನ್ನು ಸಹ ಮಾಡಿರುತ್ತದೆ. ಇಂಥ ಸಂಸ್ಥೆ ವ್ಯಾಪಾರವನ್ನು ದೊಡ್ಡ ಗಾತ್ರದಲ್ಲಿ ಮಾಡುತ್ತದೆ. ಅಂಗಡಿ ಊರಿನ ಪ್ರಮುಖ ಸ್ಥಳದಲ್ಲಿ ಅಥವಾ ಮಧ್ಯಭಾಗದಲ್ಲಿ ಸ್ಥಾಪಿತವಾಗಿರುತ್ತದೆ; ಸಾರಿಗೆ ವ್ಯವಸ್ಥೆಗೆ ನಿಲುಕುವಂಥ ಸ್ಥಳದಲ್ಲಿರುತ್ತದೆ. ಸರಕನ್ನು ಉತ್ತಮ ರೀತಿಯಲ್ಲಿ ಪ್ರದರ್ಶಿಸುವುದರಿಂದ ಗ್ರಾಹಕರಲ್ಲಿ ಉತ್ತಮ ಅಭಿರುಚಿಯುಂಟಾಗಿ ಅವರು ಸರಕನ್ನು ಕೊಳ್ಳುವಂತೆ ಆಗುತ್ತದೆ.
ಸಾಮಾನ್ಯವಾಗಿ ಈ ರೀತಿಯ ಮಳಿಗೆ ಸಗಟು ವ್ಯಾಪಾರಿಯಂತೆ ಉತ್ಪಾದಕರಿಂದ ಸರಕನ್ನು ಕೊಂಡು, ಚಿಲ್ಲರೆಯಾಗಿ ಬಳಕೆದಾರರಿಗೆ ಮಾರುತ್ತದೆ. ದೊಡ್ಡಗಾತ್ರದಲ್ಲಿ ಸರಕನ್ನು ಕೊಂಡಾಗ ದೊರಕುವ ಲಾಭ ಇಲಾಖಾ ಮಳಿಗೆಗೂ ತನ್ಮೂಲಕ ಬಳಕೆದಾರನಿಗೂ ದೊರೆಯುತ್ತದೆ. ಸೇವೆಯೂ ಇದರ ಧ್ಯೇಯ. ಆದ್ದರಿಂದ ಮಳಿಗೆಗೆ ಬರುವ ಬಳಕೆದಾರರಿಗೆ ಒಳ್ಳೆಯ ರೀತಿಯಲ್ಲಿ ಸೇವೆ ಸಲ್ಲಿಸಬೇಕೆಂಬ ಉತ್ಸಾಹ ಮಳಿಗೆಯ ಕೆಲಸಗಾರರಿಗೆ ಇರುತ್ತದೆ. ಇದರಿಂದ ಬಳಕೆದಾರರಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಅಲ್ಲದೆ ಬಳಕೆದಾರರ ಉಪಯೋಗಕ್ಕಾಗಿ ಅದೇ ಕಟ್ಟಡದಲ್ಲಿ ಉಪಾಹಾರಾ ಗೃಹ, ಕ್ರೀಡಾಗೃಹಗಳು, ವಾಚನಾಲಯಗಳು ಮುಂತಾದ ವ್ಯವಸ್ಥೆಗಳನ್ನು ಕೂಡ ಮಾಡಿರುತ್ತದೆ. ಸಂಸ್ಥೆಗೆ ಹೆಚ್ಚು ಬಂಡವಾಳ ಇರುವುದರಿಂದ ಬಳಕೆದಾರರನ್ನು ಹೆಚ್ಚು ಸಂತೃಪ್ತಿಗೊಳಿಸಲು ನುರಿತ ಕೆಲಸಗಾರರುಗಳನ್ನು ನೇಮಿಸಿಕೊಂಡು ವ್ಯಾಪಾರ ಮಾಡುವುದು ಸಾಧ್ಯ. ಸಂಸ್ಥೆ ಒಂದೇ ವಿಭಾಗವನ್ನು ಹೊಂದಿದ್ದರೆ ಆಗುತ್ತಿದ್ದ ನಷ್ಟದ ಹೊಣೆಯನ್ನು ಇಲ್ಲಿ ಆದಷ್ಟು ಕಡಿಮೆ ಮಾಡಬಹುದು. ಇಲ್ಲಿ ಅನೇಕ ವಿಭಾಗಗಳಿರುವುದರಿಂದ, ಒಂದರ ನಷ್ಟವನ್ನು ಮತ್ತೊಂದು ವಿಭಾಗ ತುಂಬಿಕೊಡುವ ಸಾಧ್ಯತೆಯುಂಟು. ಇದರಿಂದ ಒಟ್ಟಿನಲ್ಲಿ ಸುಸೂತ್ರವಾಗಿ ವ್ಯಾಪಾರ ನಡೆಯಿಸಿಕೊಂಡು ಹೋಗುವುದು ಸಾಧ್ಯ. ಸಂಸ್ಥೆ ದೊಡ್ಡದಾದ್ದರಿಂದ ಇದಕ್ಕೆ ಸಿಬ್ಬಂದಿ ಹೆಚ್ಚು. ಇದರಿಂದ ಖರ್ಚು ಹೆಚ್ಚಾಗುತ್ತದೆ. ಈ ಖರ್ಚನ್ನು ಬಳಕೆದಾರರೇ ಭರಿಸಬೇಕಾಗುತ್ತದೆ. ಅಂದರೆ ಸರಕಿನ ಬೆಲೆ ಏರುವ ಸಂದರ್ಭವುಂಟು. ಸಂಸ್ಥೆಯ ಮಾಲೀಕನಿಗೂ ಬಳಕೆದಾರನಿಗೂ ನೇರ ಸಂಬಂಧ ಇರುವುದಿಲ್ಲ. ಇಂಥ ಅಂಗಡಿಗಳು ಸಾಮಾನ್ಯವಾಗಿ ಜನಭರಿತವಾದ ಸ್ಥಳಗಳಲ್ಲಿ ಅಥವಾ ಊರಿನ ಮಧ್ಯಭಾಗದಲ್ಲಿ ಮಾತ್ರ ಸ್ಥಾಪಿತವಾಗಿರುವುದರಿಂದ ದೂರದ ಅನೇಕ ಬಳಕೆದಾರರು ಇವುಗಳ ಉಪಯೋಗ ಪಡೆಯಲು ಸಾಧ್ಯವಾಗಿದೆ.
ಬಹುಶಾಖ ಅಂಗಡಿಗಳು : ಒಬ್ಬನೇ ಮಾಲೀಕ ಅಥವಾ ಸಂಸ್ಥೆಯ ಒಡೆತನದಲ್ಲಿ ಅನೇಕ ಸ್ಥಳಗಳಲ್ಲಿ ಸ್ಥಾಪಿತವಾದ ಒಂದೇ ಬಗೆಯ ಅಂಗಡಿಗಳು ಇವು (ಮಲ್ಟಿಪಲ್ ಷಾಪ್ಸ್). ಇಂಥ ಅಂಗಡಿಗಳನ್ನು ಒಂದೇ ಊರಿನ ಅನೇಕ ಭಾಗಗಳಲ್ಲಿ ತೆರೆದಿರಬಹುದು. ಅಥವಾ ಅನೇಕ ಊರುಗಳಲ್ಲಿ ತೆರೆದಿರಬಹುದು. ಇವನ್ನು ಸರಪಣಿ ಅಂಗಡಿಗಳು (ಚೇನ್ ಸ್ಟೋರ್ಸ್) ಎಂದು ಅಮೇರಿಕದಲ್ಲಿ ಕರೆಯುತ್ತಾರೆ. ಈ ರೀತಿಯ ಅಂಗಡಿಗಳ ಮೂಲ ಉದ್ದೇಶವೆಂದರೆ ಸರಕು ಒಂದು ಸ್ಥಳದಲ್ಲಿ ಉತ್ಪಾದಿಸಿ ಅಥವಾ ಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಬಳಕೆದಾರರಿಗೆ ಚಿಲ್ಲರೆಯಾಗಿ ಮಾರುವುದು. ಇವು ಮಾರುವ ಸರಕು ಸಾಮಾನ್ಯವಾಗಿ ನಿತ್ಯ ಬಳಕೆಯದ್ದಾಗಿರುತ್ತದೆ. ಪ್ರತಿಯೊಂದು ಬಹುಶಾಖಾ ಅಂಗಡಿಯೂ ಒಂದೇ ರೀತಿಯ ಸರಕನ್ನು ವಿಕ್ರಯಿಸುತ್ತದೆ. ಎಲ್ಲ ಶಾಖೆಗಳೂ ಒಂದೇ ತರ. ಈ ಅಂಗಡಿಗಳಲ್ಲಿ ಉದ್ದರಿ ವ್ಯವಹಾರ ಇರುವುದಿಲ್ಲ.
ಇವು ದೊಡ್ಡ ಗಾತ್ರದಲ್ಲಿ ವ್ಯವಹಾರ ನಡೆಸುವ ಸಂಸ್ಥೆಗಳಾದ್ದರಿಂದ ಸರಕನ್ನು ಕೊಳ್ಳುವಾಗ ಅಥವಾ ಉತ್ಪಾದಿಸುವಾಗ, ಸಿಬ್ಬಂದಿ ವ್ಯವಸ್ಥೆಯಲ್ಲಿ ಪ್ರಚಾರದಲ್ಲಿ ಉಳಿತಾಯ ಮಾಡಬಹುದು. ವಿವಿಧ ಸ್ಥಳಗಳಲ್ಲಿ ಶಾಖೆಗಳಿರುವುದರಿಂದ ಸರಕು ಬೇಗ ವಿಕ್ರಯವಾಗುತ್ತದೆ. ಅಲ್ಲದೆ ಉದ್ದರಿ ವ್ಯವಹಾರ ಇಲ್ಲದಿರುವುದರಿಂದ ಋಣದ ಬಾಕಿ ಇರುವುದಿಲ್ಲ. ಇದರಿಂದ ಸಂಸ್ಥೆಗೆ ನಷ್ಟಸಂಭವ ಕಡಿಮೆ. ಶಾಖೆಯಿಂದ ಶಾಖೆಗೆ ಸರಕಿನ ವರ್ಗಾವಣೆ ಸಾಧ್ಯವಾದ್ದರಿಂದ ಸರಕು ಪೋಲಾಗುವುದು ತಪ್ಪುತ್ತದೆ. ಒಂದು ಶಾಖೆಯ ಪ್ರಚಾರದಿಂದ ಉಳಿದ ಶಾಖೆಗಳ ವ್ಯಾಪಾರಕ್ಕೆ ಸಹಾಯಕ.
ಇವುಗಳಲ್ಲಿ ಪ್ರತಿಕೂಲಗಳೂ ಉಂಟು. ಸಂಸ್ಥೆಯ ಮಾಲೀಕನ ಮುಖವನ್ನೇ ಬಳಕೆದಾರ ಕಾಣುವುದಿಲ್ಲ. ಇದರಿಂದ ಗ್ರಾಹಕರಿಗೆ ಸಂಸ್ಥೆಯ ಬಗ್ಗೆ ಸದ್ಬಾವನೆ ಬರದೆ ಇರಬಹುದು. ಅಂಗಡಿಗಳಲ್ಲಿ ಒಬ್ಬ ತಯಾರಕನ ಸರಕು ಮಾತ್ರವೇ ಇರುವುದರಿಂದ ಬಳಕೆದಾರ ತನಗೆ ಬೇಕಾದ ಸರಕನ್ನು ಕೊಳ್ಳಲು ಸಾಧ್ಯವಿಲ್ಲ. ಬೇರೆ ಉತ್ಪಾದಕರ ಸರಕನ್ನು ಕೊಳ್ಳಲು ಅವನು ಬೇರೆ ಅಂಗಡಿಗೆ ಹೋಗಬೇಕಾಗುತ್ತದೆ. ಪ್ರತಿಯೊಂದು ಶಾಖೆಯೂ ಕೇಂದ್ರ ಕಚೇರಿಯ ಆದೇಶಗಳನ್ನು ಅಕ್ಷರಶಃ ಪಾಲಿಸಬೇಕಾಗುತ್ತದೆ ; ಮತ್ತು ಅದಕ್ಕೆ ಅನುಗುಣವಾಗಿ ವ್ಯಾಪಾರ ಮಾಡಬೇಕಾಗುತ್ತದೆ. ಆದ್ದರಿಂದ ಸಿಬ್ಬಂದಿಗೆ ಹೆಚ್ಚಿನ ಸ್ವಾತಂತ್ರ್ಯ ಇರುವುದಿಲ್ಲ. ಬಳಕೆದಾರನ ಹಿತಗಳಿಗೆ ಲಕ್ಷ್ಯ ದೊರಕದೆ ಹೋಗಬಹುದು.
ಅಂಚೆ ಆದೇಶ ಗೃಹ : ಗ್ರಾಹಕರಿಂದ ಅಂಚೆಯ ಮೂಲಕ ಆದೇಶ ಪಡೆದು, ಅಂಚೆಯ ಮೂಲಕವೇ ಸರಕು ವಿಕ್ರಯಿಸುವುದು ಇದರ ವಿಧಾನ. ಗ್ರಾಹಕರಿಗೂ ಬಿಕರಿದಾರರಿಗೂ ನೇರ ಸಂಪರ್ಕ ಇರುವುದಿಲ್ಲ.
ಅಂಚೆಯ ಮೂಲಕ ವ್ಯವಹಾರ ನಡೆಸಬೇಕಾದರೆ ಸರಕುಗಳಿಗೆ ಕೆಲವು ಲಕ್ಷಣಗಳಿರಬೇಕು.
1. ಅವು ನಾಶೀ ಸರಕುಗಳಾಗಿರಬಾರದು. 2. ಸರಕುಗಳನ್ನು ಸುಲಭವಾಗಿ ಶ್ರೇಣಿಕರಿಸಲು ಮತ್ತು ಶಿಷ್ಟೀಕರಿಸಲು ಸಾಧ್ಯವಿರಬೇಕು. 3. ಸರಕುಗಳು ಹೆಚ್ಚು ಭಾರವಾಗಿಯಾಗಲಿ ಗಾತ್ರವಾಗಿಯಾಗಲಿ ಇರಬಾರದು ; ಅಂಚೆಯ ಮೂಲಕ ಸುಲಭವಾಗಿ ಸಾಧ್ಯವಾಗುವಂತೆ ಇರಬೇಕು. 4. ಅಂಚೆ ವೆಚ್ಚ ಕಡಿಮೆಯಿರಬೇಕು.
ಸರಕನ್ನು ಸಾಮಾನ್ಯವಾಗಿ ದೇಯಮೌಲ್ಯ ಅಂಚೆಯ (ವಿ.ಪಿ.ಪಿ.) ಮೂಲಕ ಕಳುಹಿಸಲಾಗುವುದು. ಸರಕನ್ನು ಪಡೆದುಕೊಳ್ಳುವಾಗ ಪೂರ್ತಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ.
ಬಳಕೆದಾರ ತನ್ನ ಮನೆಯಲ್ಲೇ ಇದ್ದು ತನಗೆ ಬೇಕಾದ ಸರಕನ್ನು ಕಾಲವಿಳಂಬ ಮತ್ತು ಹೆಚ್ಚು ಹಣವ್ಯಯವಿಲ್ಲದೆ ಪಡೆಯುವುದು ಇದರಿಂದ ಸಾಧ್ಯ. ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗದ ಸರಕನ್ನು ಸುಲಭವಾಗಿ ದೂರದ ಮಾರುಕಟ್ಟೆಗಳಿಂದ ಪಡೆಯಬಹುದು. ಅಂಚೆ ಸೌಕರ್ಯವಿರುವ ಎಲ್ಲ ಊರುಗಳಲ್ಲಿರುವ ಬಳಕೆದಾರರಿಗೂ ಇದು ಅನುಕೂಲಕರ. ಅವರು ಇದ್ದಲ್ಲೇ ವ್ಯಾಪಾರ ಮಾಡುವುದು ಇದರಿಂದ ಸಾಧ್ಯ. ಸಣ್ಣ ಬಂಡವಾಳ ಸಾಕು. ಸರಕನ್ನು ಒಂದು ಜಾಗದಲ್ಲಿ ಕಲೆ ಹಾಕಬೇಕಾಗಿಲ್ಲ. ಆದೇಶ ಬಂದ ಆನಂತರ ಸರಕನ್ನು ಸಂಗ್ರಹಿಸಿ ಅದನ್ನು ಬಳಕೆದಾರರಿಗೆ ಕಳುಹಿಸಬಹುದು. ಆದರೆ ಇದರಲ್ಲಿ ಕೆಲವು ಪ್ರತಿಕೂಲಗಳೂ ಉಂಟು, ಬಳಕೆದಾರ ಸರಕನ್ನು ಪರೀಕ್ಷಿಸಿ ಅನಂತರ ಕೊಳ್ಳುವ ವ್ಯವಸ್ಥೆ ಇಲ್ಲವಾದ್ದರಿಂದ ಅವನು ಮೋಸ ಹೋಗಬಹುದಾದ ಸಂಭವಿರುತ್ತದೆ. ಉದ್ದರಿಯೇ ಮುಂತಾದ ಸೌಲಭ್ಯಗಳು ಈ ವ್ಯವಸ್ಥೆಯಲ್ಲಿ ಇರುವುದಿಲ್ಲ. ಈ ಬಗೆಯ ವ್ಯವಹಾರ ಮಾಡಲು ಗ್ರಾಹಕನಿಗೆ ಓದು ಬರಹ ಗೊತ್ತಿರಬೇಕು. ಇಲ್ಲವಾದರೆ ಓದುಬರಹ ಬಲ್ಲವರನ್ನು ಆಶ್ರಯಿಸಬೇಕು.
ಬಳಕೆದಾರರ ಸಹಕಾರಿ ಮಳಿಗೆ : ಬಳಕೆದಾರರು ತಾವೇ ಮಾಲೀಕರಾಗಿ ತಮ್ಮ ಹಿತ ರಕ್ಷಣೆಗಾಗಿ ಸ್ಥಾಪಿಸಿಕೊಂಡ ಸಂಸ್ಥೆಯಿದು. ಇದರಿಂದ ಮಧ್ಯವರ್ತಿ ವ್ಯಾಪಾರಿಯನ್ನು ಸರಕು ವಿಕ್ರಯದ ಸರಪಣಿಯಿಂದ ಹೊರದೂಡಿದಂತಾಗುತ್ತದೆ. ಸಂಸ್ಥೆಯ ಬಂಡವಾಳವನ್ನು ಅನೇಕ ಜನಗಳಿಂದ ಸಣ್ಣ ಪರಿಮಾಣಗಳಲ್ಲಿ ಷೇರು ರೂಪದಲ್ಲಿ ಕೂಡಿಸಲಾಗುತ್ತದೆ. ಪ್ರತಿಯೊಂದು ಸಹಕಾರ ಸಂಘವೂ ತನ್ನದೇ ಆದ ಆಡಳಿತ ಹೊಂದಿರುವುದಲ್ಲದೆ, ಷೇರುದಾರರಿಗೆ ಒಳ್ಳೆಯದಾಗುವಂತೆ, ಅನಾವಶ್ಯಕವಾದ ಯಾವ ನಿರ್ಬಂಧವೂ ಇಲ್ಲದೆ, ವ್ಯವಹಾರವನ್ನು ನಡೆಸಬಹುದು. ಸಹಕಾರ ಸಂಘವೂ ಸರಕನ್ನು ಸಗಟು ವ್ಯಾಪಾರದ ದರದಲ್ಲಿ ಕೊಂಡು ಚಿಲ್ಲರೆಯಾಗಿ ಮಾರುತ್ತದೆ. ಲಾಭ ಮುಖ್ಯವಲ್ಲ, ನ್ಯಾಯವಾದ ಬೆಲೆಯಲ್ಲಿ ಒಳ್ಳೆಯ ಸರಕನ್ನು ಸದಸ್ಯರಿಗೆ ಒದಗಿಸುವುದು ಧ್ಯೇಯ. ಬರುವ ಲಾಭ ಸದಸ್ಯರಲ್ಲೇ ವಿನಿಯೋಗವಾಗುತ್ತದೆ. ಲಾಭದ ಒಂದು ಭಾಗವನ್ನು ವಿದ್ಯಾಭ್ಯಾಸಕ್ಕೆ ಮತ್ತು ಇತರ ಬಗೆಯ ಸಾಮಾಜಿಕ ಒಳಿತಿಗಾಗಿ ವಿನಿಯೋಗಿಸಬಹುದು.
ಇದು ಸಾಮಾನ್ಯವಾಗಿ ಒಳ್ಳೆಯ ಮತ್ತು ಪರಿಶುದ್ಧವಾದ ಸರಕನ್ನು ವಿಕ್ರಯಿಸುವುದರಿಂದ ಬಳಕೆದಾರರಿಗೆ ಸರಕಿನ ನಷ್ಟವಾಗುವುದಿಲ್ಲ. ಅತಿಯಾದ ಲಾಭವನ್ನು ಸಂಪಾದಿಸುವ ಮತ್ತು ಏಕಸ್ವಾಮ್ಯವನ್ನು ಹೊಂದಿರುವ ಸಂಸ್ಥೆಗಳಿಗೆ ಇದೊಂದು ಸವಾಲು. ಸಂಘದ ಸದಸ್ಯರಲ್ಲಿ ಉಳಿತಾಯದ ಮನೋಭಾವ ಬೆಳೆಯುತ್ತದೆ. ಇದು ಪ್ರಜಾಪ್ರಭುತ್ವ ವಿಧಾನದಲ್ಲಿ ನಡೆಯುವ ಸಂಸ್ಥೆ.
ಆದರೆ ಅನುಭವ ಇಲ್ಲದಿರುವವರು ಅನೇಕ ವೇಳೆ ಇದರ ಆಡಳಿತ ನಡೆಸುವುದರಿಂದ ಇದು ಸರಿಯಾಗಿ ನಡೆಯದೆ ಹೋಗಬಹುದು. ಸದಸ್ಯರು ಸಂಘದ ಏಳಿಗೆಗಾಗಿ ಕಾಲವನ್ನು ವಿನಿಯೋಗಿಸಲು ಸಾಧ್ಯವಿಲ್ಲದೆ ಇರಬಹುದು. ಸದಸ್ಯರ ಗುಂಪುಗುಳಿತನದಿಂದಾಗಿ ಅದಕ್ಕೆ ತೊಂದರೆಯಾಗಬಹುದು.
ಸೂಪರ್ ಮಾರುಕಟ್ಟೆ : ಇದರ ಜನನ 1930ರಲ್ಲಿ ಅಮೆರಿಕಾದಲ್ಲಾಯಿತು. 1930ರಲ್ಲಿ ಅಲ್ಲಿ ಸಂಭವಿಸಿದ ಆರ್ಥಿಕ ಮುಗ್ಗಟ್ಟಿನ ಫಲವಾಗಿ ಹಣದ ಉಳಿತಾಯಕ್ಕಾಗಿ ಪ್ರಾರಂಭವಾದ ದೊಡ್ಡ ಪರಿಮಾಣದ ಚಿಲ್ಲರೆ ವ್ಯಾಪಾರ ಸಂಸ್ಥೆಯಿದು.
ಇದರಲ್ಲಿ ಬಿಕರಿದಾರರಿರುವುದಿಲ್ಲ. ಗ್ರಾಹಕರೇ ಒಳಗಡೆ ಸುತ್ತಾಡಿ ತಮಗೆ ಬೇಕಾದ ಸರಕನ್ನು ಆರಿಸಿಕೊಂಡು ಹೊರಕ್ಕೆ ಹೋಗುವಾಗ ಅಲ್ಲಿರುವ ಗುಮಾಸ್ತನಿಗೆ ಸರಕಿನ ಬೆಲೆಯನ್ನು ಕೊಟ್ಟು ಹೋಗುತ್ತಾರೆ. ಎಲ್ಲ ಸರಕುಗಳೂ ಪ್ಯಾಕ್ ಆಗಿರುತ್ತದೆ. ಈ ವ್ಯವಸ್ಥೆಯಿಂದ ಖರ್ಚು ಕಡಿಮೆಯಾಗಿ ಸರಕನ್ನು ಕಡಿಮೆ ಬೆಲೆಗೆ ವಿಕ್ರಯಿಸಬಹುದು. ಸ್ವಯಂಸೇವೆಯೇ ಸೂಪರ್ ಮಾರುಕಟ್ಟೆಯ ಧ್ಯೇಯ. ಇಲ್ಲಿ ಉದ್ದರಿ ವ್ಯಾಪಾರವಿರುವುದಿಲ್ಲ. ನಿತ್ಯೋಪಯೋಗಿ ವಸ್ತುಗಳಾದ ತರಕಾರಿಗಳು, ದಿನಸಿಗಳು ಮುಂತಾದ ಸಾಮಾನುಗಳನ್ನು ಸಹ ಮಾರಲಾಗುತ್ತದೆ. ಸಾಮಾನ್ಯವಾಗಿ ವಿಶಾಲವಾದ ಭವನದಲ್ಲಿ ಅಂಗಡಿ ಇರುವುದರಿಂದ ಜನ ಸರಕನ್ನು ಕೊಳ್ಳಲು ಕಾಯಬೇಕಾಗಿಲ್ಲ. ಆದರೆ ಸರಕಿನ ಉಪಯೋಗದ ಬಗ್ಗೆ ಗ್ರಾಹಕರಿಗೆ ವಿಷಯಗಳನ್ನು ತಿಳಿಸುವ ವಿಕ್ರಯಾಧಿಕಾರಿಗಳಿಲ್ಲದಿರುವುದರಿಂದ ಅವರಿಗೆ ತೊಂದರೆಯಾಗುತ್ತದೆ. ಕೆಲವು ಸಾರಿ ಈ ಬಗೆಯ ಅಂಗಡಿಗಳು ಹರಟೆಯ ಕೇಂದ್ರಗಳಾಗಬಹುದು. ಇದರಿಂದ ಅನೇಕ ಗ್ರಾಹಕರಿಗೆ ತೊಂದರೆಯಾಗಬಹುದು.
ಸಂಬಳ, ಕೂಲಿ, ಬಾಡಿಗೆ, ಜಾಹೀರಾತು, ನೀರು, ದೀಪ, ತೆರಿಗೆ, ವಿಮೆ, ಪ್ರಯಾಣಭತ್ಯ-ಇವು ಚಿಲ್ಲರೆ ವ್ಯಾಪಾರಿಗಳ ಕೆಲವು ಮುಖ್ಯ ಖರ್ಚುಗಳು. ಸಂಬಳ, ಕೂಲಿ, ಬಾಡಿಗೆ ಇವು ಅತ್ಯಂತ ಮುಖ್ಯವಾದವು. ದೊಡ್ಡ ಅಂಗಡಿಗಳನ್ನು ನಡೆಸುವ ವೆಚ್ಚಗಳು ಈಚಿನ ವರ್ಷಗಳಲ್ಲಿ ವಿಪರೀತವಾಗಿ ಏರುತ್ತಿವೆ. ಸಗಟಿನಲ್ಲಿ ಸರಕು ಕೊಳ್ಳುವುದರಿಂದ ಆಗುವ ಉಳಿತಾಯವನ್ನೂ ಮೀರಿ ಈ ವೆಚ್ಚಗಳು ಏರುತ್ತಿವೆ. ವಿಕ್ರಯ ಸಿಬ್ಬಂದಿಯ ಆವಶ್ಯಕತೆ ಇಲ್ಲದ-ಯಂತ್ರಗಳ ಮೂಲಕವೇ ವಿಕ್ರಯಮಾಡುವ-ಅನೇಕ ವ್ಯವಸ್ಥೆಗಳು ಮುಂದುವರಿದ ದೇಶಗಳಲ್ಲಿ ಬೆಳೆಯುತ್ತಿವೆ. ಇವು ಸಾಧ್ಯವಿಲ್ಲದ ಕ್ಷೇತ್ರಗಳಲ್ಲಿ ಸಣ್ಣ ವ್ಯಾಪಾರಿಗಳು ಎಂದಿನಂತೆ ಮುಂದುವರಿಯುತ್ತಾರೆ. ಭಾರತದಂಥ ದೇಶದಲ್ಲಿ ಸಣ್ಣ ವ್ಯಾಪಾರಿಯ ಸ್ಥಾನಕ್ಕೆ ಸದ್ಯಕ್ಕೆ ಚ್ಯುತಿಯಿಲ್ಲ. ಜನತಾಬಜಾರ್, ಇಲಾಖಾ ಮಳಿಗೆ ಮುಂತಾದ ಬೃಹತ್ ಸಂಸ್ಥೆಗಳು ಜನನಿಬಿಡ ನಗರಗಳಿಗಷ್ಟೇ ಸೀಮಿತವಾಗಿವೆ. (ಕೆ.ಜಿ.ಆರ್.; ಜಿ.ಕೆ.ಐ.)