ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚೆಕ್ ಭಾಷೆ

ವಿಕಿಸೋರ್ಸ್ ಇಂದ
Jump to navigation Jump to search

ಚೆಕ್ ಭಾಷೆ

ಇಂಡೋ-ಯೂರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿದ ಈ ಭಾಷೆ ಬೊಹೀಮಿಯ, ಮೋರೇವೀಯ ಮತ್ತು ಸಿಲೇಷ ಪ್ರದೇಶಗಳ ಜನರ ಮಾತೃಭಾಷೆ. ಈ ಎಲ್ಲ ಪ್ರದೇಶಗಳೂ ಚೆಕೊಸ್ಲೊವಾಕ್ ಗಣರಾಜ್ಯದಲ್ಲಿವೆ. ಸ್ಲೋವ್ಯಾಕ್ ಭಾಷೆ ಸ್ಲೊವಾಕಿಯದ ಆಡಳಿತ ಭಾಷೆ. ಚೆಕ್ ಹಾಗೂ ಸ್ಲೋವ್ಯಾಕ್ ಭಾಷೆಗಳನ್ನು ಒಂದುಮಾಡುವ ನಿಷ್ಪ್ರಯೋಜಕ ಪ್ರಯತ್ನಗಳು ಇತ್ತೀಚೆಗೆ ನಡೆದಿವೆ. ಆದರೂ ಈ ಎರಡು ಭಾಷೆಗಳು ಸ್ಲೋವ್ಯಾನಿಕ್ ಉಪಗುಂಪಿನ ಹೆಚ್ಚು ಸಮೀಪದ ಭಾಷೆಗಳು. ಅಲ್ಲದೆ ಅವುಗಳ ಗಡಿಯೂ ಪರಸ್ಪರ ಹೊಂದಿಕೊಂಡಿದೆ. ಈ ಭಾಷೆಗಳು ಸಾಂಸ್ಕøತಿಕ ಹಾಗೂ ರಾಜಕೀಯವಾಗಿ 1918ರಿಂದ ಒಂದುಗೂಡಿವೆ. ಚೆಕ್ ಭಾಷೆಯನ್ನು ಸುಮಾರು 9.00.000 ಜನ ಬಳಸುತ್ತಿದ್ದಾರೆ.

ಚೆಕ್ ಭಾಷೆಯ ಹಳೆಯ ಹೆಸರು ಬೊಹೀಮೀಯನ್ ಎಂದು. ಈ ಪದ ಕ್ರಿಸ್ತ ಪೂರ್ವದಲ್ಲಿ ಸೆ (ಕೆ) ಲ್ಟಿಕ್ ಬುಡಕಟ್ಟಿನ ಬೋಯಿ ಜನಾಂಗದ ತೌರೂರಾದ ಬೊಹೀಮೀಯ ಎಂಬ ಪದದಿಂದ ಬಂದಿದೆ; ಆಧುನಿಕ ಜರ್ಮನ್ ಭಾಷೆಯಲ್ಲಿ ಇದು ಬೊಹ್‍ಮೆನ್ ಆಗಿದೆ.

ಸಂಪ್ರದಾಯರೀತ್ಯ ಚೆಕ್ ಎಂಬುದು ಒಬ್ಬ ಸ್ಲೋವ್ಯಾನಿಕ್ ಮುಖಂಡನ ಹೆಸರು. ಚೆಕೊಸ್ಲೊವಾಕಿಯದ ಪಶ್ಚಿಮ ಭಾಗವನ್ನು ಚೆಕಿ ಎಂದು ಕರೆಯುತ್ತಾರೆ. ಚೆಕ್ ಜನರನ್ನು ಚೆಕ್ (ಏಕವಚನ) ಚೆಸಿ (ಬಹುವಚನ) ಎನ್ನುತ್ತಾರೆ. ಚೆಸ್ಕಿ ಎಂಬುದು ಗುಣವಾಚಕ. ಅಂತೂ ಈ ಪದದ ಮೂಲದ ಬಗ್ಗೆ ಸದ್ಯಕ್ಕೆ ಖಚಿತವಾಗಿ ಏನನ್ನೂ ಹೇಳುವಂತಿಲ್ಲ.

ವಿಂಗಡಣೆ : ಪಶ್ಚಿಮ ಸ್ಲಾವೋನಿಕ್ ಭಾಷೆಗಳಾದ ಚೆಕ್, ಸ್ಲೋವ್ಯಾಕ್, ಲುಸೇಷಿಯನ್ ಮತ್ತು ಪೋಲಿಷ್ ಭಾಷೆಗಳು ಇತರ ಸ್ಲಾವೋನಿಕ್ ಭಾಷೆಗಳಿಂದ ಉಚ್ಚಾರಣೆಯ ಕೆಲವು ಅಂಶಗಳಲ್ಲಿ ಭಿನ್ನವಾಗಿವೆ. 6 ರಿಂದ 10ನೆಯ ಶತಮಾನದವರೆಗಿನ ಸ್ಲಾವೋನಿಕ್ ಭಾಷೆಯ ಚೆಕ್ ಆವೃತ್ತಿ ಹಳೆಯ ಚರ್ಚ್ ಸ್ವಲಾವೋನಿಕ್ ಭಾಷೆಗಿಂತ ಹೆಚ್ಚು ಭಿನ್ನವಾಗಿಲ್ಲ. ಹಳೆಯ ಚರ್ಚ್ ಸ್ಲಾವೋನಿಕ್ ಭಾಷೆಯಲ್ಲಿ ಬೆರೆತು ಹೋಗಿರುವ ಚೆಕ್ ಪದಗಳು ಆ ಭಾಷೆ 11ನೆಯ ಶತಮಾನದಷ್ಟು ಹಿಂದಿನದು ಎಂಬುದನ್ನು ಪುಷ್ಟೀಕರಿಸುತ್ತವೆ. ಚೆಕ್ ಪಾರಿಭಾಷಿಕ ಶಬ್ದಗಳು 12ನೆಯ ಶತಮಾನದ ಲ್ಯಾಟಿನ್ ಮತ್ತು ಜರ್ಮನ್ ಗ್ರಂಥಗಳಲ್ಲಿ ಕಂಡುಬರುತ್ತವೆ. ಭಾಷಾಸ್ವರೂಪ ಒಂದೇ ಆಗಿರದಿದ್ದರೂ 13ನೆಯ ಶತಮಾನದಲ್ಲೇ ಚೆಕ್ ಸಾಹಿತ್ಯ ರೂಪಗೊಂಡಿತ್ತು ಎಂದು ಹೇಳಲು ಆಧಾರಗಳಿವೆ. ಅಲ್ಲದೆ ಉಪಭಾಷೆಗಳು ಖಚಿತವಾಗಿ ಬೇರೆ ಬೇರೆ ಗುಣಗಳನ್ನು ತೋರುತ್ತಿದ್ದುವಲ್ಲದೆ ಪ್ರಾಂತೀಯತೆ ಸ್ಪಷ್ಟವಾಗಿತ್ತು. ಈ ಭಾಷೆಯ ಧ್ವನಿ ಪ್ರಭೇದಗಳಿಂದುಂಟಾದ ಅಕ್ಷರ ಸಂಯೋಜನೆಯ ಬದಲಾವಣೆಗಳು ಮೂರು ಮುಖ್ಯವಾದ ಕಾಲಗಳಲ್ಲಿ ಆಗಿವೆ.

1. ಪೂರ್ವಕಾಲ (11ರಿಂದ 14ನೆಯ ಶತಮಾನ); ಈ ಕಾಲದಲ್ಲಿ ಬಹುಮುಖ್ಯವಾದ ಬದಲಾವಣೆಗಳಾದವು. ಇದೇ ತರ ಸ್ಲಾವೋನಿಕ್ ಭಾಷೆಗಳಿಂದ ಬೇರ್ಪಡುವ ಚೆಕ್ ಭಾಷೆಯ ವಿಶೇಷ ಗುಣವೆಂದರೆ ಅ-ಎ, ಉ-ಇ ಮುಂತಾದ ಸ್ವರಗಳ ಮಾರ್ಪಾಟು (ಮ್ಯೂಟೇಷನ್), ಏ-ಈ ಮುಂತಾದ ಸ್ವರಗಳ ಸಂಕೋಚನ ಮತ್ತು ಸಂಯುಕ್ತ ಸ್ವರ, ಸಾಧಾರಣವಾದ ಅದರಲ್ಲೂ ಧಾತುವಿನ ಆಖ್ಯಾತ ರೂಪದ ಮಾದರಿಯ ಮಿತಗೊಳಿಕೆ, ದ್ವಿವಚನವನ್ನು ಬಹುವಚನದ ಪರವಾಗಿ ಕೈಬಿಡಲಾಯಿತು. ಇದ್ದ ಮೂರು ಭೂತಕಾಲಗಳಿಗೆ ಪ್ರತಿಯಾಗಿ ಒಂದು ಉಳಿಯಿತು. ಅನಿಶ್ಚಿತ ಭೂತಕಾಲದ ವೆದ್ ಎಕ್ ಮತ್ತು ದೋಷಯುಕ್ತವಾದ ಅಥವಾ ಅಪೂರ್ಣವಾದ ವೆದಿಎಕ್ ಪದಗಳೂ ವೆದ್ಲ್ ಯೆಸೆಮ್ ಎಂದು ಮಾರ್ಪಟ್ಟಿತು.

2 ಮಧ್ಯಕಾಲ (15-16ನೆಯ ಶತಮಾನ) : ಮತೋದ್ಧಾರಕನೂ ಚೆಕ್ ಭಾಷೆಯಲ್ಲಿ ಹೊಸ ರೀತಿಯನ್ನು ಪ್ರತಿಪಾದಿಸಿದವನೂ ಆದ ಜಾನ್ ಹಸ್ (ಸು. 1370-1415) ಎಂಬಾತ ಪದಸಂಗ್ರಹ ಮತ್ತು ಅಕ್ಷರ ಸಂಯೋಜನೆಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದ. ಈತ ಬಳಸಿದ ಮತ್ತು ( ಎಂಬ ವಿಶೇಷ ಸೂಚಕವಾದ ಉಚ್ಚಾರಣಾ ಚಿಹ್ನೆಗಳೂ ಇಂದಿಗೂ ರೂಢಿಯಲ್ಲಿವೆ.

3 ಆಧುನಿಕ ಕಾಲ : (ಸು. 1620ರಿಂದ 1918) ಈ ಕಾಲದಲ್ಲಿ ಜರ್ಮನ್ ರಾಜಕೀಯ ಹಾಗೂ ಸಾಂಸ್ಕøತಿಕ ಬದಲಾವಣೆಗಳಿಂದಾಗಿ ಚೆಕ್ ಭಾಷೆಯ ಅಭಿವೃದ್ಧಿ ಕುಂಠಿತವಾಯಿತು. ಇತ್ತೀಚೆಗೆ ಚೆಕೊಸ್ಲೊವಾಕಿಯದಲ್ಲಿ ಭಾಷಾ ವೈಜ್ಞಾನಿಕ ಪ್ರಕಟಣಾ ಸಾಮಾಗ್ರಿಗಳಲ್ಲಿ ಬಹುಮಟ್ಟಿನವು ಚೆಕ್ ಭಾಷೆಗೆ ಸಂಬಂಧಪಟ್ಟವುಗಳಾಗಿವೆ. (ಕೆ.ಎಸ್.ಜಿ.)