ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚೇನ್, ಅನ್ಸ್‌ರ್ಟ್‌ ಬೋರಿಸ್

ವಿಕಿಸೋರ್ಸ್ದಿಂದ

ಚೇನ್, ಅನ್ಸ್ರ್ಟ್ ಬೋರಿಸ್ 1906-, ಜರ್ಮನ್-ಇಂಗ್ಲಿಷ್ ರಸಾಯನ ವಿಜ್ಞಾನಿ. ಮನುಷ್ಯರಿಗೆ ತಗಲುವ ಬ್ಯಾಕ್ಟೀರಿಯ ಸೋಂಕುಗಳ ನಿವಾರಣೆಗೆ ಪೆನಿಸಿಲಿನ್ನನ್ನು ಉಪಯೋಗಿಸುವ ಸಾಧ್ಯತೆಯನ್ನು ತೊರಿಸಿ ಕೊಟ್ಟುದಕ್ಕಾಗಿ ಮತ್ತು ಆ ಮೂಲಕ ಪ್ರತಿಜೀವಕ (ಆಂಟಿಬಯೋಟಿಕ್) ಯುಗಕ್ಕೆ ನಾಂದಿ ಹಾಕಿದುದಕ್ಕಾಗಿ ಅಲೆಕ್ಸಾಂಡರ್ ಫ್ಲೆಮಿಂಗ್ ಹಾಗೂ ಹೊವಾರ್ಡ್ ಪ್ಲೋರಿ (ನೋಡಿ- ಫ್ಲೆಮಿಂಗ್,-ಅಲೆಕ್ಸಾಂಡರ್) ಅವರೊಡನೆ ಈತನಿಗೂ ನೊಬೆಲ್ ಬಹುಮಾನ ದೊರೆಯಿತು (1945). ಚೇನನ ಪೂರ್ವಜರು ಜರ್ಮನಿಯಲ್ಲಿ ಬಂದು ನೆಲೆಸಿದ್ದ ರಷ್ಯನ್ ಯೆಹೂದ್ಯರು. ಇವನು ಜನಿಸಿದ್ದು 1906ರ ಜೂನ್ 19 ರಂದು, ಬರ್ಲಿನ್ ನಗರದಲ್ಲಿ. ತಂದೆ ವೃತ್ತಿಯಲ್ಲಿ ರಸಾಯನಿ. ಆತನ ಕಾರ್ಖಾನೆ ಮತ್ತು ಪ್ರಯೋಗಾಲಯಕ್ಕೆ ಭೇಟಿ ಕೊಡುತ್ತಿದ್ದ ಚೇನನಿಗೆ ಚಿಕ್ಕಂದಿನಲ್ಲಿಯೆ ರಸಾಯನ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿತು. ಬರ್ಲಿನ್ನಿನ ಫ್ರೇಡರಿಕ್ ವಿಲ್ಹೆಲ್ಮ್ ವಿಶ್ವ ವಿದ್ಯಾಲಯದಲ್ಲಿ ರಸಾಯನವಿಜ್ಞಾನ ಮತ್ತು ಶರೀರ ವಿಜ್ಞಾನಗಳಲ್ಲಿ ಶಿಕ್ಷಣ ಪಡೆದು ಪದವೀಧರನಾಗಿ (1930) ಮುಂದೆ ಬರ್ಲಿನ್ನಿನ ಚಾರಿಟಿ ಆಸ್ಪತ್ರೆಯ ಇನ್ಸ್ ಟಿಟ್ಯೂಟ್ ಆಫ್ ಪೆಥಾಲಜಿಯ ರಸಾಯನ ವಿಜ್ಞಾನ ಇಲಾಖೆಯಲ್ಲಿ ಸಂಶೋಧನೆ ನಡೆಸಿದ. 1933ರಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದಕೂಡಲೆ ಜರ್ಮನಿಯನ್ನು ಬಿಟ್ಟುಹೋಗುವುದು ಅನಿವಾರ್ಯವೆಂಬುದನ್ನು ಅರಿತುಕೊಂಡು ಇಂಗ್ಲೆಂಡಿಗೆ ನಿಷ್ಕ್ರಮಿಸಿದ. ಕೇಂಬ್ರಿಜಿನಲ್ಲಿ ಫ್ರೆಡರಿಕ್ ಗೌಲ್ಯಾಂಡ್ ಹಾಪ್ ಕಿನ್ಸನ ನೇತೃತ್ವದಲ್ಲಿ ಸಂಶೋಧನೆ ನಡೆಸಿದ. 1935ರಲ್ಲಿ ಹೊವಾರ್ಡ್ ಪ್ಲೋರಿ ಎಂಬಾತನ ಆಹ್ವಾನದ ಮೇರೆಗೆ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ ಅಲ್ಲಿ ರಾಸಾಯನಿಕ ರೋಗಶಾಸ್ತ್ರದ ಅಧ್ಯಾಪಕನಾಗಿ ಹದಿಮೂರು ವರ್ಷಕಾಲ ದುಡಿದ. ಈ ಅವಧಿಯಲ್ಲಿಯೇ ಅವನು ಪೆನಿಸಿಲಿನನ್ನು ಕುರಿತ ಸಂಶೋಧನೆಯನ್ನು ನಡೆಸಿದ್ದು. ಎರಡನೆಯ ಮಹಾಯುದ್ಧ ಮುಗಿದ ಬಳಿಕ 1948ರಲ್ಲಿ ಅವನು ರೋಮಿನ ಇನ್‍ಸ್ಟಿಟ್ಯೂಟೊ ಸುಪೀರಿಯೊರ್ ಡಿ ಸ್ಯಾನಿಟ ಸಂಸ್ಥೆಯಲ್ಲಿರುವ ರಾಸಾಯನಿಕ ಸೂಕ್ಷ್ಮಜೀವವಿಜ್ಞಾನದ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರದ ವೈಜ್ಞಾನಿಕ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡ. 1961ರಲ್ಲಿ ಇಂಗ್ಲೆಂಡಿಗೆ ಹಿಂತಿರುಗಿ ಲಂಡನ್ ವಿಶ್ವವಿದ್ಯಾಲಯದ ಇಂಪೀರಿಯಲ್ ಕಾಲೇಜಿನಲ್ಲಿ ಜೀವ ರಸಾಯನ ವಿಜ್ಞಾನದ ಪ್ರಾಧ್ಯಾಪಕನಾದ. ಅಲ್ಲಿ ಅವನಿಗಾಗಿ ಒಂದು ಹೊಸ ಸಂಶೋಧನಾಲಯವನ್ನೇ ನಿರ್ಮಿಸಿಕೊಟ್ಟರು.

ಅಲೆಕ್ಸಾಂಡರ್ ಫ್ಲೆಮಿಂಗ್ ಪೆನಿಸಿಲಿನ್ನನ್ನು ಅವಿಷ್ಕರಿಸಿದ್ದು ಒಂದು ಆಕಸ್ಮಿಕದ ಫಲವಾಗಿ. ವಿವಿಧ ರೋಗಕಾರಕ ಸೂಕ್ಷ್ಮಜೀವಿಗಳನ್ನು ಕೃಷಿ ಮಾಡುವುದರಲ್ಲಿ ತೊಡಗಿದ್ದ ಫ್ಲೆಮಿಂಗ್ ಒಂದು ಬಾರಿ (1928) ಸ್ಟಾಫಿಲೊಕಾಕಸ್ ಬ್ಯಾಕ್ಟೀರಿಯಗಳನ್ನು ಬೆಳೆಸಿದ್ದ ಒಂದು ತಟ್ಟೆಯನ್ನು ಪ್ರಯೋಗಶಾಲೆಯ ಕಿಟಕಿಯೊಂದರಲ್ಲಿಟ್ಟು ಒಂದೆರಡು ದಿನ ಅದನ್ನು ಮರೆತುಬಿಟ್ಟ. ಆಮೇಲೆ ಒಂದು ದಿನ ಅದರ ಕಡೆ ಗಮನಹರಿಸಿದಾಗ ತಟ್ಟೆಯಲ್ಲಿದ್ದ ಕೃಷಿಕೆಗೆ ಬೂಷ್ಟು ಹಿಡಿದಿದ್ದುದು ಕಂಡುಬಂದಿತು. ತಟ್ಟೆಯ ತುಂಬ ಹರಡಿಕೊಂಡಿದ್ದ ಬ್ಯಾಕ್ಟೀರಿಯಕೃಷಿಕೆಯ ಮೇಲೆ ಎಲ್ಲೆಲ್ಲಿ ಬೂಷ್ಟು ತಗಲಿ, ಬೂಷ್ಟು ಬೆಳೆಯಲು ಪ್ರಾರಂಭಿಸಿತ್ತೋ ಅದರ ಸುತ್ತಲೂ ಸ್ವಲ್ಪ ಪ್ರದೇಶದಲ್ಲಿ ಬ್ಯಾಕ್ಟೀರಿಯ ನಾಶವಾಗಿಹೋಗಿತ್ತು. ಕೃಷಿಕೆ ಕೆಟ್ಟು ಹೋಯಿತೆಂದು ಕೊಂಡು ತಟ್ಟೆಯನ್ನು ತೊಳೆದುಬಿಡುವುದರಲ್ಲಿದ್ದ ಫ್ಲೆಮಿಂಗನಿಗೆ ಥಟ್ಟನೆ ಒಂದು ವಿಷಯ ಹೊಳೆಯಿತು. ಬೂಷ್ಟಿನ ಸುತ್ತಲೂ ಸ್ಟಾಫಿಲೋಕಾಸಸ್ ನಾಶವಾಗಿದ್ದುದನ್ನು ನೋಡಿದರೆ ಆ ಬೂಷ್ಟ್ ಉತ್ಪತ್ತಿಮಾಡುತ್ತಿದ್ದ ಯಾವುದೋ ಒಂದು ಪದಾರ್ಥ ಸ್ಟಾಫಿಲೊಕಾಕಸ್ ಬ್ಯಾಕ್ಟೀರಿಯಕ್ಕೆ ಮಾರಕವಾಗಿರಬೇಕು ಎನ್ನಿಸಿತು. ಆ ಬೂಷ್ಟನ್ನು ಅದರಿಂದ ಪ್ರತ್ಯೇಕಿಸಿ ಶುದ್ಧವಾಗಿ ಕೃಷಿ ಮಾಡಿ ಅದನ್ನು ಪೆನಿಸಿಲಿಯಮ್ ನೋಟ್ಯಾಟಮ್ ಎಂದು ಗುರುತಿಸಿದ. ಆನಂತರ ಇತರ ಬ್ಯಾಕ್ಟೀರಿಯಗಳು ಆ ಬೂಷ್ಟಿಗೆ ಯಾವ ಪ್ರತಿಕ್ರಿಯೆಯನ್ನು ತೋರಿಸುವುವೆಂದು ಪರೀಕ್ಷಿಸಿ ನೋಡಲಾಗಿ, ಕೆಲವು ಬ್ಯಾಕ್ಟೀರಿಯಗಳು ಅದರ ಸನಿಹದಲ್ಲಿ ವೃದ್ಧಿಯಾಗುತ್ತಿದ್ದುದೂ ಇನ್ನು ಕೆಲವು ಬಗೆಯ ಬ್ಯಾಕ್ಟೀರಿಯಗಳು ಆ ಬೂಷ್ಟಿನ ಸುತ್ತ ಹಲವಾರು ಸೆಂಟಿಮೀಟರಿನಷ್ಟು ದೂರದಲ್ಲಿ ನಾಶವಾಗಿಬಿಡುತ್ತಿದ್ದುದೂ ಕಂಡುಬಂದಿತು. ಪೆನಿಸಿಲಿಯನ್ ನೊಟ್ಕಾಟಮನ್ನು ದ್ರವಮಾಧ್ಯಮದಲ್ಲಿ ಬೆಳೆಸಿ ಅನಂತರ ಆ ದ್ರವವನ್ನು ಪರೀಕ್ಷಿಸಲಾಗಿ ಅದಕ್ಕೂ ಬ್ಯಾಕ್ಟೀರಿಯ ನಿರೋಧಕ ಗುಣವಿದ್ದುದು ಕಂಡುಬಂದಿತು. ಬೂಷ್ಟು ಉತ್ಪತ್ತಿಮಾಡುವುದೆಂದು ನಂಬಲಾದ ಆ ಪದಾರ್ಥಕ್ಕೆ ಪೆನಿಸಿಲಿನ್ ಎಂದು ಅವನು ನಾಮಕರಿಸಿದ ಮತ್ತು ಪ್ರಾಣಿಗಳಿಗೆ ಅದು ವಿಷಕರವಲ್ಲವೆಂದು ಖಚಿತಮಾಡಿಕೊಂಡ. ಮನುಷ್ಯರಿಗೆ ತಗಲುವ ಸೋಂಕುರೋಗಗಳ ಚಿಕಿತ್ಸೆಗೆ ಪೆನಿಸಿಲಿನ್ನನ್ನು ಬಳಸಬಹುದೆಂಬ ಆಶೆಗೆ ಅದು ದಾರಿ ಮಾಡಿಕೊಟ್ಟಿತಾದರೂ ಫ್ಲೆಮಿಂಗ್ ಆ ಕೆಲಸವನ್ನು ಮುಂದುವರಿಸಲಿಲ್ಲ. ಏಕೆಂದರೆ ಅವನಿಗೆ ರಸಾಯನ ವಿಜ್ಞಾನದಲ್ಲಿ ಹೆಚ್ಚಿನ ಪರಿಶ್ರಮವಿರಲಿಲ್ಲವಾದುದರಿಂದ ಪೆನಿಸಿಲಿನ್ನನ್ನು ದ್ರವಮಾಧ್ಯಮದಲ್ಲಿ ಸಾರೀಕರಿಸುವುದಾಗಲೀ ಅದನ್ನು ಶುದ್ಧರೂಪದಲ್ಲಿ ಪ್ರತ್ಯೇಕಿಸುವುದಾಗಲೀ ಅವನಿಗೆ ಸಾಧ್ಯವಾಗಲಿಲ್ಲ.

ಈ ಕೆಲಸವನ್ನು ಕೈಗೊಂಡವರು ಹೊವಾರ್ಡ್ ಪ್ಲೋರಿ ಮತ್ತು ಚೇನ್‍ರವರು. ಸೂಕ್ಷ್ಮಜೀವಿಗಳು ಉತ್ಪತ್ತಿಮಾಡುವ ಬ್ಯಾಕ್ಟೀರಿಯ ನಿರೋಧಕ ಪದಾರ್ಥಗಳ ಕ್ರಮಬದ್ಧ ಅನ್ವೇಷಣೆ ನಡೆಸಬೇಕೆಂದು 1938ರಲ್ಲಿ ನಿರ್ಧರಿಸಿದ ಪ್ಲೋರಿ ಮತ್ತು ಚೇನ್ ಹತ್ತು ವರ್ಷ ಮುಂಚೆ ಫ್ಲೇಮಿಂಗ್ ಅವಿಷ್ಕರಿಸಿದ ಪೆನಿಸಿಲಿನ್ ಕಡೆ ತಮ್ಮ ಗಮನ ಹರಿಸಿದರು. ಮೊತ್ತಮೊದಲನೆಯದಾಗಿ ಬ್ಯಾಕ್ಟೀರಿಯ ಕೃಷಿಕೆಗಳ ಮೇಲೆ ಪೆನಿಸಿಲಿನ್‍ಯುತ ದ್ರಾವಣಗಳ ವರ್ತನೆಯನ್ನು ಆಧಾರವಾಗಿಟ್ಟುಕೊಂಡು ಆ ದ್ರಾವಣಗಳ ಸಾರತೆಯನ್ನು ನಿರ್ಣಯಿಸಲು ಒಂದು ವಿಧಾನವನ್ನು ರೂಪಿಸಿಕೊಂಡರು. ಅನಂತರ ಪೆನಿಸಲಿನ್ನನ್ನು ಶುದ್ಧೀಕರಿಸುವ ಕಾರ್ಯಕ್ಕೆ ಕೈಹಾಕಿದರು. ಮೂರು ವರ್ಷಗಳ ಕಾಲ ನಡೆಸಿದ ಕ್ರಮಬದ್ಧ ಸಂಶೋಧನೆಗಳ ಪರಿಣಾಮವಾಗಿ ಪೆನಿಸಿಲಿನ್ ಮನುಷ್ಯದೇಹಕ್ಕೆ ಗಣನೀಯವಾದ ಯಾವ ಕೆಡಕನ್ನೂ ಮಾಡದೆ, ದೇಹದಲ್ಲಿನ ರೋಗಕಾರಕ ಬ್ಯಾಕ್ಟೀರಿಯಗಳನ್ನು ನಾಶಮಾಡಿ ರೋಗವನ್ನು ನಿರ್ಮೂಲ ಮಾಡಬಲ್ಲದೆಂಬುದು ಸ್ಥಿರಪಟ್ಟಿತು. ಈ ಸಾಧನೆಗಾಗಿ 1945 ರಲ್ಲಿ ಫ್ಲೆಮಿಂಗ್, ಪ್ಲೋರಿ ಮತ್ತು ಚೇನ್‍ರವರಿಗೆ ವೈದ್ಯವಿಜ್ಞಾನ ಮತ್ತು ಶರೀರ ವಿಜ್ಞಾನದ ನೊಬೆಲ್ ಪಾರಿತೋಷಿಕ ಲಭಿಸಿತು.

	ಇದು ಮಾತ್ರವಲ್ಲದೆ ಇನ್ನೂ ಆನೇಕ ಮೌಲಿಕ ಸಂಶೋಧನೆಗಳನ್ನು ಚೇನ್ ನಡೆಸಿದ್ದಾನೆ. ಇ.ಪಿ. ಅಬ್ರಹಾಮ್ ಎಂಬವನೊಂದಿಗೆ ಕೆಲಸಮಾಡಿ ಸ್ಫಟಕೀಯ ಪೆನಿಸಿಲಿನ್ನಿನ ರಾಸಾಯನಿಕ ರಚನೆಯನ್ನು ನಿರ್ಣಯಿಸಿ ರಚನೆಯಲ್ಲಿ ಸೂಕ್ಷ್ಮ ವ್ಯತ್ಯಾಸವಿರುವ ನಾಲ್ಕು ಬೇರೆ ಬೇರೆ ಪೆನಿಸಲಿನ್ನುಗಳಿವೆ ಎಂಬುದನ್ನು ತೋರಿಸಿಕೊಟ್ಟ. ಪೆನಿಸಿಲಿನ್ನನ್ನು ನಾಶಮಾಡಬಲ್ಲ ಪೆನಿಸಿಲಿನೇಸ್ ಎಂಬ ಎಂಜೈಮನ್ನು ಶೋಧಿಸಿದ. ಕೆಲವು ಬ್ಯಾಕ್ಟೀರಿಯಗಳು ಪೆನಿಸಿಲಿನ್ನಿಗೆ ಮಣಿಯದಿರುವುದಕ್ಕೆ ಅವು ಉತ್ಪತ್ತಿ ಮಾಡುವ ಈ ರಕ್ಷಣಾಸಾಧನವೇ ಕಾರಣ ಎಂದು ತೋರಿಸಿದ. ಹಾವಿನ ವಿಷಗಳ ಕ್ರಿಯಾವಿನ್ಯಾಸವನ್ನು ಕುರಿತು ಉಪಯುಕ್ತ ಮಾಹಿತಿಯನ್ನು ಪಡೆದಿದ್ದಾನೆ. ಕೆಲವು ಬಗೆಯ ಬೂಷ್ಟುಗಳ ಕಿಣ್ವನಗಳನ್ನೂ (ಫರ್ಮೆಂಟೇಷನ್ಸ್) ಪ್ರತಿ ಜೀವಕಗಳನ್ನೂ ಕುರಿತು ಉಪಯುಕ್ತ ಸಂಶೋಧನೆ ನಡೆಸಿದ್ದಾನೆ.

ತನ್ನ ವೈಜ್ಞಾನಿಕ ಸಾಧನೆಗಳಿಂದಾಗಿ ಚೇನ್ ಅನೇಕ ಗೌರವಗಳನ್ನೂ ಪ್ರಶಸ್ತಿಗಳನ್ನೂ ಪಡೆದಿದ್ದಾನೆ. ಕಮ್ಯಾಂಡರ್ ಆಫ್ ದಿ ಲೀಜನ್ ಆಫ್ ಆನರ್ ಆಗಿ ಚುನಾಯಿತನಾದದ್ದು, 1949ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ಫೆಲೊ ಆಗಿ ಚುನಾಯಿತವಾದದ್ದು, 1954ರಲ್ಲಿ ಪಾಲ್ ಎರ್ಲಿಕ್ ಶತಮಾನೋತ್ಸವ ಬಹುಮಾನವನ್ನು ಪಡೆದಿದ್ದು ಇವು ಮುಖ್ಯವಾದವು. (ಜೆ.ಆರ್.ಎಲ್.)