ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚೈತ್ರಮಾಸ

ವಿಕಿಸೋರ್ಸ್ದಿಂದ

ಚೈತ್ರಮಾಸ ಭಾರತೀಯ ಚಂದ್ರಮಾನ ಪದ್ಧತಿಯಂತೆ ಒಂದು ವರ್ಷದಲ್ಲಿ ಬರುವ 12 ಮಾಸಗಳಲ್ಲಿ ಮೊದಲನೆಯದು. ಚೈತ್ರ ಮತ್ತು ವೈಶಾಖ ಮಾಸಗಳು ಸೇರಿ ವಸಂತಋತು ಎನಿಸಿಕೊಳ್ಳುತ್ತದೆ. ಈ ಮಾಸದ ಪೂರ್ಣಿಮೆಯಂದು ಚಿತ್ರ ನಕ್ಷತ್ರವಿರುತ್ತದಾಗಿ ಇದಕ್ಕೆ ಚೈತ್ರವೆಂಬ ಹೆಸರು ಇದನ್ನು ಮಧುಮಾಸ, ಚೈತ್ರಿಕ ಎಂಬ ಹೆಸರುಗಳಿಂದಲೂ ಕರೆವುದಿದೆ.

ಸೃಷ್ಟಿಕರ್ತನಾದ ಬ್ರಹ್ಮ ಚೈತ್ರಮಾಸದ ಶುಕ್ಲಪಕ್ಷದ ಮೊದಲ ದಿನದಂದು ಸೂರ್ಯೋದಯದಿಂದ ಹಿಡಿದು ಕಾಲಗಣನೆಯನ್ನು ಪ್ರಾರಂಭಿಸಿದನೆಂದು ಪುರಾಣ ವಚನವಿದೆ. ಈ ಚೈತ್ರಮಾಸದೊಡನೆ ಮೀನ (ಸೌರವ ಕೊನೆಯ ಮಾಸ) ಸೇರಿದಾಗ ಮೀನ ಚೈತ್ರದಲ್ಲಿ ಯಾವ ಶುಭಕರ್ಮಾರ್ಹತೆಯೂ ಇಲ್ಲವೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಈ ಮಾಸದಲ್ಲಿ ಹುಟ್ಟಿದವನನ್ನು ಸತ್ಯರ್ಮಶಾಲೀ ವಿನಯೀ ಸುವೇಷಃ ಭೋಗೀ ಸುಖೀ ಸ್ಯಾನ್ಮದುರಾನ್ನಭೋಜೀ| ಸತ್ಸಂಗಯುಕ್ತೋ ದ್ವಿಜದೇವಭಕ್ತಃ ಭವೇನ್ಮನುಷ್ಯೋ ಮಧುಮಾಸಜನ್ಮಾ || ಎಂದು ಹೊಗಳಿದ್ದಾರೆ. ಈ ಮಾಸದ ಮೊದಲ ದಿನವಾದ ಪಾಡ್ಯವೇ ಚಾಂದ್ರಮಾನ ಯುಗಾದಿ ಹಬ್ಬ. ಅಂದಿನಿಂದ ವಸಂತ ನವರಾತ್ರ ವ್ರತಾರಂಭ. ಈ ಮಾಸದಲ್ಲಿಯೇ, ಅಶೋಕಾಷ್ಟಮಿ, ಶ್ರೀರಾಮನವಮೀ, ಅನಂಗತ್ರಯೋದಶೀ, ಮದನಚತುರ್ದಶೀ, ಚಿತ್ರಾಪೂರ್ಣಿಮಾ, ಮೊದಲಾದ ಮಹಾದಿನಗಳೂ ಶೈವ-ವೈಷ್ಣವಾದಿ ಕಲ್ಪೋಕ್ತ ಪೂಜಾವಿಶೇಷಗಳೂ ಪ್ರಾಪ್ತವಾಗುವುವು. (ಎಸ್.ಎಸ್.ಆರ್.ಬಿ.)