ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚೈತ್ ಸಿಂಗ್
ಚೈತ್ ಸಿಂಗ್
ಬನಾರಸಿನ ರಾಜನಾಗಿದ್ದ ಅಯೋಧ್ಯೆಯ ನವಾಬನ ಸಾಮಂತನಾಗಿದ್ದನಾದರೂ 1775ರ ಜುಲೈ ತಿಂಗಳಲ್ಲಿ ಇಂಗ್ಲಿಷರೊಂದಿಗೆ ಒಂದು ಕೌಲು ಮಾಡಿಕೊಂಡು ಈಸ್ಟ್ ಇಂಡಿಯ ಕಂಪನಿಯ ಪ್ರಭುತ್ವವನ್ನು ಒಪ್ಪಿಕೊಂಡು ಕಂಪನಿಗೆ ವರ್ಷಕ್ಕೆ 22ಳಿ ಲಕ್ಷ ರೂ. ಕಪ್ಪ ಕೊಡಲು ಸಮ್ಮತಿಸಿದ. ಈ ಹಣವನ್ನು ಹೆಚ್ಚಿಸುವುದಿಲ್ಲವೆಂದೂ ಬನಾರಸ್ ಸಂಸ್ಥಾನದ ಮೆಲೆ ಚೈತ್ ಸಿಂಗನ ಅಧಿಕಾರವನ್ನು ಪ್ರಶ್ನಿಸುವುದಿಲ್ಲವೆಂದೂ ಅಲ್ಲಿ ಶಾಂತಿಗೆ ಭಂಗ ತರುವುದಿಲ್ಲವೆಂದೂ ಕಂಪನಿ ವಾಗ್ದಾನ ಮಾಡಿತು. ಆದರೆ 1778ರಲ್ಲಿ ಇಂಗ್ಲಿಷರಿಗೂ ಫ್ರೆಂಚರಿಗೂ ಭಾರತದಲ್ಲಿ ಯುದ್ಧ ಆರಂಭವಾದ್ದರಿಂದ ಮತ್ತು ಇಂಗ್ಲಿಷರು ಮೈಸೂರು ಮತ್ತು ಮರಾಠ ಯುದ್ಧಗಳಲ್ಲೂ ತೊಡಗಿದ್ದರಿಂದ ಅವರಿಗೆ ಹಣದ ಆವಶ್ಯಕತೆ ಹೆಚ್ಚಾಯಿತು. ಯುದ್ಧಕ್ಕೆ ದೇಣಿಗೆಯಾಗಿ 5 ಲಕ್ಷ ರೂ. ಕೊಡಬೇಕೆಂದು ಚೈತ್ ಸಿಂಗನನ್ನು ಗವರ್ನರ್-ಜನರಲ್ ವಾರನ್ ಹೇಸ್ಟಿಂಗ್ಸ್ ಕೇಳಿದನಲ್ಲದೆ, ಹಣ ಕೊಡದಿದ್ದರೆ ಸೈನಿಕ ಕಾರ್ಯಾಚರಣೆ ನಡೆಸುವುದಾಗಿ ಬೆದರಿಕೆ ಹಾಕಿದ. ಚೈತ್ ಸಿಂಗ್ ಅದನ್ನೂ ಪಾವತಿ ಮಾಡಿದ. (ಬಿ.ಎಸ್.ಕೆ.)
1780ರಲ್ಲಿ ಮತ್ತೆ ಹೇಸ್ಟಿಂಗ್ಸ್ ಹಣ ಕೇಳಿದ. ಚೈತ್ ಸಿಂಗ್ ಹೇಸ್ಟಿಂಗ್ಸ್‍ನಿಗೆ ಸ್ವಂತ ಕಾಣಿಕೆಯಾಗಿ 2 ಲಕ್ಷ ರೂ. ಕಳಿಸಿದ. ಹೇಸ್ಟಿಂಗ್ಸ್ ಈ ಹಣವನ್ನು ಸ್ವೀಕರಿಸಿ ತೃಪ್ತನಾಗಬಹುದೆಂದು ಅವನ ಭಾವನೆ. ಹೇಸ್ಟಿಂಗ್ಸ್ ಈ ಹಣವನ್ನು ಸ್ವೀಕರಿಸಿ ಕಂಪನಿಯ ಸೈನ್ಯಕ್ಕೆ ಬಳಸಿದನಾದರೂ ಅಷ್ಟರಿಂದ ತೃಪ್ತನಾಗದೆ 2,000 ಕುದುರೆ ಸವಾರರನ್ನು ಕಳುಹಿಸಬೇಕೆಂದು ಕೇಳಿದ. ಇಷ್ಟು ಕೊಡಲು ತನಗೆ ಸಾಧ್ಯವಾಗದೆಂದು ದೊರೆ ಹೇಳಿಕೊಂಡಾಗ ಈ ಸಂಖ್ಯೆಯನ್ನು 1,000ಕ್ಕೆ ಇಳಿಸಲಾಯಿತು. ಚೈತ್ ಸಿಂಗ್ ಕೊನೆಗೆ 500 ಕುದುರೆ ಸವಾರರನ್ನೂ 500 ಕಾಲಾಳುಗಳನ್ನೂ ಸಂಗ್ರಹಿಸಿ ಅವರನ್ನು ಕಂಪನಿಯ ಸೇವೆಗೆ ಒಪ್ಪಿಸುವುದಾಗಿ ಹೇಸ್ಟಿಂಗ್ಸ್‍ನಿಗೆ ತಿಳಿಸಿದ. ಆದರೆ ಹೇಸ್ಟಿಂಗ್ಸ್‍ನಿಂದ ಏನೂ ಉತ್ತರ ಬರಲಿಲ್ಲ. ಚೈತ್ ಸಿಂಗನಿಗೆ 50 ಲಕ್ಷ ರೂ. ದಂಡ ವಿಧಿಸಬೇಕೆಂದು ಹೇಸ್ಟಿಂಗ್ಸ್ ನಿರ್ಧರಿಸಿ, ತನ್ನ ಯೋಜನೆಯನ್ನು ಕಾರ್ಯಗತ ಮಾಡಲು ಸ್ವತಃ ಬನಾರಸಿಗೆ ಹೋಗಿ ರಾಜನನ್ನು ಅರಮನೆಯಲ್ಲೇ ಬಂಧನದಲ್ಲಿಟ್ಟ. ರಾಜ ತೆಪ್ಪಗೆ ಶರಣಾಗತನಾದರೂ ಅವನ ಸೈನಿಕರು ತಮ್ಮ ದೊರೆಗೆ ಅದ ಅವಮಾನವನ್ನು ಸಹಿಸದೆ ಹೇಸ್ಟಿಂಗ್ಸನೊಡನೆ ಬಂದಿದ್ದ ಸೈನಿಕರು ಕೊಂದರು. ಹೇಸ್ಟಿಂಗ್ಸ್ ಆತ್ಮರಕ್ಷಣೆಗಾಗಿ ಚೂನಾರಿಗೆ ಹಿಂದಿರುಗಿ ಬಳಿಕ ಅಧಿಕ ಸೈನ್ಯದೊಡನೆ ಬನಾರಸ್‍ನ್ನು ಹಿಡಿದುಕೊಂಡು ಅರಮನೆಯನ್ನು ಲೂಟಿ ಹೊಡೆಸಿದ. ಚೈತ್ ಸಿಂಗ್ ದೇಶಭ್ರಷ್ಟನಾಗಿ ಗ್ವಾಲಿಯರ್‍ನಲ್ಲಿ ಆಶ್ರಯ ಪಡೆದ. ಇಂಗ್ಲಿಷರು ಅವನ ಸೋದರಳಿಯನನ್ನು ರಾಜನೆಂದು ಘೋಷಿಸಿದರು. ಅವನು ಕಂಪನಿಗೆ 22ಳಿ ಲಕ್ಷ ರೂ.ಗೆ ಬದಲಾಗಿ 40 ಲಕ್ಷ ರೂ. ಕಪ್ಪ ಸಲ್ಲಿಸಬೇಕೆಂದು ವಿಧಿಸಲಾಯಿತು. ಇದು ಆ ಪುಟ್ಟ ಸಂಸ್ಥಾನಕ್ಕೆ ಹೊರಲಾರದ ಭಾರವಾಯಿತು.
ಚೈತ್ ಸಿಂಗನ ವಿಷಯದಲ್ಲಿ ವಾರನ್‍ಹೇಸ್ಟಿಂಗ್ಸನ ನಡವಳಿಕೆ ಅವನ ಕ್ರೌರ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ಸಾಕ್ಷಿಯಾಗಿದೆಯೆಂದು ಆಗಿನ ಬ್ರಿಟಿಷ್ ಪ್ರಧಾನಿ ಪಿಟ್ಟನ ಅಭಿಪ್ರಾಯವಾಗಿತ್ತು. ಚೈತ್‍ಸಿಂಗ್ ರಾಜನಾಗಿರಲಿಲ್ಲವೆಂದೂ ಅವನೊಬ್ಬ ಸಾಮಾನ್ಯ ಜಮೀನ್ದಾರನಾಗಿದ್ದನೆಂದೂ ವಾದಿಸಿ, ಹೇಸ್ಟಿಂಗ್ಸನ ವರ್ತನೆಯನ್ನು ಕೆಲವರು ಸಮರ್ಥಿಸಿದರಾದರೂ, ಉಳಿದ ಜಮೀನ್ದಾರರನ್ನು ಪೀಡಿಸದೆ ಚೈತ್ ಸಿಂಗನನ್ನು ಮಾತ್ರ ಹೇಸ್ಟಿಂಗ್ಸ್ ಹೀಗೆ ಪೀಡಿಸಿದ್ದು ತರವಲ್ಲವೆಂಬುದಂತೂ ನಿಜ.
ವಾರನ್ ಹೇಸ್ಟಿಂಗ್ಸನನ್ನು ಬ್ರಿಟನ್ನಿನಲ್ಲಿ ವಿಚಾರಣೆಗೆ ಗುರಿಪಡಿಸಿದಾಗ ಅವನ ಮೇಲೆ ಹೊರಿಸಲಾದ ಇಪ್ಪತ್ತೆರಡು ಆರೋಪಗಳ ಪೈಕಿ ಅವನು ಚೈತ್ ಸಿಂಗನ ಮೇಲೆ ಕೈಗೊಂಡ ಅನ್ಯಾಯದ ಕ್ರಮವೂ ಒಂದು. *