ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚೌಧುರಿ, ಅಸುತೋಷ

ವಿಕಿಸೋರ್ಸ್ದಿಂದ

ಚೌಧುರಿ, ಅಸುತೋಷ

1860-1924. ಭಾರತದ ಒಬ್ಬ ಶಿಕ್ಷಣತಜ್ಞ. ಉತ್ತರ ಬಂಗಾಳದ ಪಾಬ್ನಾ ಜಿಲ್ಲೆಯ ಜಮೀನ್ದಾರ ದುರ್ಗಾದಾಸರ ಪ್ರಥಮ ಪತ್ರ.

ಪಾಶ್ಚಾತ್ಯ ಶಿಕ್ಷಣವನ್ನು ಪಡೆದು ವಕೀಲವೃತ್ತಿಯನ್ನು ಅವಲಂಬಿಸಿದ್ದ ಈತ ಆಂಗ್ಲ ವಿದ್ಯಾಭ್ಯಾಸಕ್ರಮದ ಉತ್ತಮ ಅಂಶಗಳನ್ನು ತನ್ನ ವಿಚಾರಧಾರೆಯಲ್ಲಿ ಅಳವಡಿಸಿಕೊಂಡಿದ್ದ. ಆಂಗ್ಲ ಶಿಕ್ಷಣಪದ್ಧತಿಯ ಅಂಧಾನುಕರಣವನ್ನು ಖಂಡಿಸುತ್ತಿದ್ದರೂ ಪಾಶ್ಚಾತ್ಯ ಮತ್ತು ಭಾರತೀಯ ಸಂಸ್ಕøತಿಗಳ ಅತ್ಯುತ್ತಮ ಸಮನ್ವಯದಲ್ಲಿ ನಂಬಿಕೆಯಿಟ್ಟಿದ್ದ. ಈತ ವೈಜ್ಞಾನಿಕ ಮತ್ತು ಕೈಗಾರಿಕಾ ಶಿಕ್ಷಣದ ಅಭಿವೃದ್ಧಿಯ ಬೆಂಬಲಿಗನಾಗಿದ್ದ. ತನ್ನ ಈ ಧ್ಯೇಯ ಸಾಧನೆಗಾಗಿ ಈತ ಪ್ರತಿಜಿಲ್ಲೆಯಲ್ಲಿಯೂ ಒಂದು ಸಂಘವನ್ನು ಸ್ಥಾಪಿಸಲು ಪ್ರಯತ್ನಿಸಿದ. ಪಾಶ್ಚಾತ್ಯ ದೇಶಗಳಲ್ಲಿ ವಿಜ್ಞಾನ ಮತ್ತು ಕೈಗಾರಿಕೆ ಜ್ಞಾನಗಳನ್ನು ಪಡೆದ ವಿದ್ಯಾರ್ಥಿಗಳು ದೇಶದ ಮೂಲ ಆವಶ್ಯಕತೆಯಾದ ಕೈಗಾರಿಕಾ ಅಭಿವೃದ್ಧಿಯನ್ನು ದೇಶೀಯ ಸಂಪತ್ತಿನ ಉಪಯೋಗದಿಂದ ಮಾಡಬೇಕೆಂದು ಒತ್ತಿ ಹೇಳುತ್ತಿದ್ದ. ಭಾರತೀಯ ಶಿಕ್ಷಣ ಕೈಗಾರಿಕೆ ಕ್ಷೇತ್ರದಲ್ಲಿ ಮುಂದುವರಿಯಬೇಕೆಂದೂ ಆ ಮೂಲಕ ರಾಷ್ಟ್ರ ಆಧುನಿಕವಾಗಿ ಪ್ರಗತಿ ಸಾಧಿಸಬಲ್ಲದೆಂದೂ ದೃಢವಾಗಿ ನಂಬಿದ್ದು ಅದಕ್ಕಾಗಿ ಈತ ಅಜೀವ ಶ್ರಮಿಸಿದ. (ಎ.ಎಸ್.ಎಸ್.)