ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚೌಳಿನ ಪುಡಿ

ವಿಕಿಸೋರ್ಸ್ದಿಂದ

ಚೌಳಿನ ಪುಡಿ - ಬಟ್ಟೆ ಕಾಗದ ಮುಂತಾದವನ್ನು ಚಲುವೆ ಮಾಡಲು, ರೋಗಾಣುಗಳನ್ನು ನಾಶಮಾಡಿ ಸ್ಥಳಗಳನ್ನು ಶುಚಿ ಮಾಡಲು, ನೀರನ್ನು ಶುದ್ಧೀಕರಿಸಲು, ಇತ್ಯಾದಿ ಬಳಸುವ ರಾಸಾಯನಿಕ (ಬ್ಲೀಚಿಂಗ್ ಪೌಡರ್). ಇದರ ರಾಸಾಯನಿಕ ಪ್ರತೀಕ ಅಚಿಔಅಟ2. ಇದರಲ್ಲಿರುವ ಕ್ಲೋರಿನ್ ಅನಿಲವೆ ಚಲುವೆಕಾರಿ. ಚೌಳಿನ ಪುಡಿಯಲ್ಲಿ ಸುಣ್ಣ ಮತ್ತು ಕ್ಲೋರಿನ್ ಅನಿಲ ಮಿಳಿತವಾಗಿರುತ್ತವೆ. ಇದನ್ನು ತಯಾರಿಸಲು ಸುಣ್ಣದ ಪುಡಿಯನ್ನು ಗೂಡುಗಳಲ್ಲಿ ತೆಳ್ಳಗೆ ನೆಲದಮೇಲೆ ಹರಡಿ ಕ್ಲೋರಿನ್ ಅನಿಲವನ್ನು ಬಿಡುತ್ತಾರೆ. ಅಥವಾ ಸುತ್ತುತ್ತಿರುವ ಲೋಹದ ಕೊಳವೆಗಳಲ್ಲಿ ಒಂದು ಕಡೆಯಿಂದ ಸುಣ್ಣದ ಪುಡಿಯನ್ನೂ ಎದುರುದಿಕ್ಕಿನಿಂದ ಕ್ಲೋರಿನ್ ಅನಿಲವನ್ನೂ ಹಾಯಿಸುತ್ತಾರೆ. ಸುಣ್ಣ ಕ್ಲೋರಿನನ್ನು ಹೀರಿಕೊಳ್ಳುತ್ತದೆ ಚೌಳಿನ ಪುಡಿ ಸಿದ್ಧವಾಗುತ್ತದೆ.

ಸುಣ್ಣ ಕ್ಲೋರಿನ್ ಚೌಳು

ಚೌಳಿನ ಪುಡಿ ನಿಧಾನವಾಗಿ ಕ್ಲೋರಿನನ್ನು ಬಿಟ್ಟುಕೊಡುತ್ತದೆ. ಆಮ್ಲಗಳಿಂದ ಈ ಕ್ರಿಯೆ ತ್ವರಿತಗೊಳ್ಳುತ್ತದೆ. ಪುಡಿಯ ಚಲುವೆ (ಬ್ಲೀಚಿಂಗ್) ಗುಣವೂ ರೋಗಾಣುನಾಶಕ ಗುಣವೂ ಇದರಲ್ಲಿರುವ ಕ್ಲೋರಿನ್ ಸತ್ತ್ವದ ಪ್ರಮಾಣವನ್ನು ಅವಲಂಬಿಸಿವೆ. ಆದ್ದರಿಂದ ಪುಡಿಯಲ್ಲಿರುವ ಅನಿಲದ ಪ್ರಮಾಣದ ಮುಖ್ಯ. ಪುಡಿಯಲ್ಲಿ ಇರುವ ಶೇಕಡ ಭಾಗ ಕ್ಲೋರಿನಿಗೆ ಲಭಿಸಬಲ್ಲ ಕ್ಲೋರಿನ್ ಎಂದು ಹೆಸರು. ಉತ್ತಮ ಪುಡಿಯಲ್ಲಿ ಇದು 40% ಇರುವುದು.

ಚಲುವೆ ಮಾಡಬೇಕಾದ ಬಟ್ಟೆಯನ್ನು ಮೊದಲು ಚೌಳಿನ ಪುಡಿಯಿರುವ ನೀರಿನಲ್ಲಿ ಅದ್ದಿ ಬಳಿಕ ಅದನ್ನು ಸಾರರಿಕ್ತ ಹೈಡ್ರೋಕ್ಲೋರಿಕ್ ದ್ರಾವಣದಲ್ಲಿ ಇಡುತ್ತಾರೆ. ಆಗ ಉತ್ಪತ್ತಿಯಾಗುವ ಹೈಪೊಕ್ಲೋರಸ್ ಆಮ್ಲದಿಂದ (ಊಅಟಔ) ಬರುವ ಆಕ್ಸಿಜನಿನಿಂದ ಬಟ್ಟೆ ಬಿಳಿಚಿಕೊಳ್ಳುತ್ತದೆಂದು ನಂಬಿಕೆ. ಬಟ್ಟೆಯನ್ನು ಆಮೇಲೆ ಸೋಡಿಯಮ್ ಥಯೋಸಲ್ಫೇಟ್ ರಾಸಾಯನಿಕವಿರುವ ನೀರಿನಲ್ಲಿ ಅದ್ದುವುದರಿಂದ ಹೆಚ್ಚಿಗೆ ಇರುವ ಕ್ಲೋರಿನ್ ತೆಗೆಯಲ್ಪಡುತ್ತದೆ. ಪುನಃ ತೊಳೆದು ಬಟ್ಟೆಯನ್ನು ಒಣಗಿಸುತ್ತಾರೆ. ಕುಡಿಯುವ ನೀರನ್ನು ಸಂಸ್ಕರಿಸಲು ಕೂಡ ಚೌಳಿನ ಪುಡಿಯ ಉಪಯೋಗ ಉಂಟು. ನೀರಿನಲ್ಲಿರುವ ರೋಗಾಣುಗಳನ್ನು ನಾಶಪಡಿಸಲು ಪುಡಿಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸುತ್ತಾರೆ. ತಿಳಿಯಾಗಿ ನಿಲ್ಲುವ ನೀರಿನಲ್ಲಿ ಕ್ಲೋರಿನ್ ಅನಿಲ ವಿಲೀನವಾಗುತ್ತದೆ. ಇದು ಜೀವಾಣುಗಳನ್ನು ಕೊಲ್ಲುತ್ತದೆ. ಸಾರ್ವಜನಿಕ ಸ್ಥಳಗಳು, ಮೂತ್ರಿಗಳು, ಚರಂಡಿಗಳು ಮುಂತಾದವನ್ನು ಶುಚಿ ಮಾಡಲೂ ಚೌಳಿನಪುಡಿ ಉಪಯೋಗವಾಗುತ್ತದೆ. (ವೈ.ಎಸ್.ಎಲ್.)