ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಛಾಯಾ
ಛಾಯಾ - ಸೂರ್ಯನ ಪತ್ನಿ; ಸಂಜ್ಞೆಯ ಪ್ರತಿಬಿಂಬ. ರೈವತನ ಮಗಳು ರಾಜ್ಞಿಯನ್ನೂ ತ್ವಷ್ಟøವಿನ ಮಗಳು ಸಂಜ್ಞೆಯನ್ನೂ ಪ್ರಭೆಯೆಂಬ ಮತ್ತೊಬ್ಬ ತರುಣಿಯನ್ನೂ ಸೂರ್ಯ ಮದುವೆಯಾಗಿದ್ದ. ರಾಜ್ಞಿ ರೇವತನನ್ನೂ ಪ್ರಭೆ ಪ್ರಭಾತನನ್ನೂ ಸಂಜ್ಞೆ ಮನು ಮತ್ತು ಯಮ, ಯಮುನೆಯೆಂಬ ತ್ರಿವಳಿ ಮಕ್ಕಳನ್ನೂ ಹೆತ್ತರು. ಸೂರ್ಯನ ದೇಹತಾಪವನ್ನು ತಾಳಲಾರದೆ ಸಂಜ್ಞೆ ತನ್ನ ಶರೀರದಿಂದ ತನ್ನಂತೆ ಇರುವ ಒಬ್ಬ ತರುಣಿಯನ್ನು ಸೃಜಿಸಿ, ಆಕೆಗೆ ಛಾಯೆಯೆಂದು ಹೆಸರಿಟ್ಟು ತನ್ನ ಪತಿಯೊಂದಿಗೆ ಸಂಸಾರ ಮಾಡಿಕೊಂಡಿರುವಂತೆಯೂ ತನ್ನ ಮಕ್ಕಳನ್ನು ಮಾತೃವಾತ್ಸಲ್ಯದಿಂದ ಕಾಣುವಂತೆಯೂ ಗುಟ್ಟನ್ನು ರಟ್ಟು ಮಾಡದಂತೆಯೂ ಹೇಳಿ ತಪಸ್ಸಿಗೆ ಹೋದಳು. ಇತ್ತ ಸೂರ್ಯ ಛಾಯೆಯನ್ನು ಸಂಜ್ಞೆಯಂದೇ ತಿಳಿದ. ಛಾಯೆ ಸೂರ್ಯನಿಂದ ಮನುವಿನಂತೆಯೇ ಇರುವ ಸಾವರ್ಣಿ ಮನುವನ್ನೂ ಶನಿ ಮತ್ತು ತಪತಿಯರನ್ನೂ ಹೆತ್ತಳು. ಕ್ರಮೇಣ ಛಾಯೆ ಸಂಜ್ಞೆಯ ಮಕ್ಕಳನ್ನು ಅಸಡ್ಡೆ ಮಾಡತೊಡಗಿದಳು. ಇದನ್ನು ಸಹಿಸದ ಯಮ ತನ್ನ ಬಲಗಾಲನ್ನು ಎತ್ತಿ ತೋರಿಸಿ ಛಾಯೆಯನ್ನು ಹೆದರಿಸಿದ. ಆಗ ಛಾಯೆ ನಿನ್ನ ಕಾಲಲ್ಲಿ ಹುಳುಬಿದ್ದು ವಾಸನೆ ಹಿಡಿಯಲಿ ಎಂದು ಶಾಪವಿತ್ತಳು. ಅನಂತರ ಯಮ ಸೂರ್ಯನಿಗೆ ಈ ವಿಚಾರ ತಿಳಿಸಿ ಛಾಯೆ ತನ್ನ ತಾಯಿಯಾಗಿರಲಾರಳೆಂದು ಹೇಳಿದ. ಸೂರ್ಯ ಹುಳುಬಿದ್ದ ಯಮನ ಕಾಲಿಗೆ ಪರಿಹಾರ ಹೇಳಿ, ಸಂಜ್ಞೆಯ ತಂದೆ ತ್ವಷ್ಟøವನ್ನು ಕಂಡು ನಡೆದ ವೃತ್ತಾಂತವನ್ನು ತಿಳುಹಿದ. ತ್ವಷ್ಟø ವಾಸ್ತವಾಂಶವನ್ನು ಸೂರ್ಯನಿಗೆ ಹೇಳಿ ಸಂಜ್ಞೆ ಬೇಕಿದ್ದರೆ ತನ್ನ ಪ್ರಖರತೆಯನ್ನು ಕಡಿಮೆ ಮಾಡಿಕೊಳ್ಳಲು ಸೂಚಿಸಿದ. ಆಗ ಸೂರ್ಯ ತನ್ನ ಪ್ರಖರತೆಯನ್ನು ಕಡಿಮೆ ಮಾಡಿಕೊಳ್ಳಲು ಒಪ್ಪಿದ. ಸೂರ್ಯನ ದೇಹವನ್ನು ತ್ವಷ್ಟ್ಯ ಕೊರೆದು ವಿಷ್ಣುವಿನ ಚಕ್ರ, ಶಿವನ ಶೂಲ ಹಾಗೂ ಇಂದ್ರನ ವಜ್ರಾಯುಧಗಳನ್ನು ನಿರ್ಮಿಸಿದ. ತನ್ನ ತೇಜಸ್ಸು ಕಡಿಮೆಯಾಗಲು ಸೂರ್ಯ ಉತ್ತರ ಕುರುಭೂಮಿಯಲ್ಲಿ ಅಶ್ವರೂಪದಲ್ಲಿ ಮೇಯುತ್ತಿದ್ದ ಸಂಜ್ಞೆಯನ್ನು ಕಂಡು ತಾನೂ ಅಶ್ವರೂಪ ತಾಳಿ ಆಕೆಯನ್ನು ಸೇರಿದ. ಆಗ ಸಂಜ್ಞೆ ಸೂರ್ಯನನ್ನು ಗುರುತಿಸಲಾಗದೆ ಪರಪುರಷನೆಂದು ಭಾವಿಸಿ ಸೂರ್ಯನ ತೇಜಸ್ಸನ್ನು ಮೂಗಿನಿಂದ ಹೊರಬಿಟ್ಟಳು. ಆ ತೇಜಸ್ಸಿನಿಂದ ಹುಟ್ಟಿದವರೇ ಅಶ್ವಿನೀ ದೇವತೆಗಳು. ಅನಂತರ ಸಂಜ್ಞೆ ಸೂರ್ಯನನ್ನು ಗುರುತಿಸಿ ಪತಿಯ ಸಂಗಡ ತೆರಳಿದಳು. ಈ ವೃತ್ತಾಂತ ಮತ್ಸ್ಯಪುರಾಣದಲ್ಲಿ ಬಂದಿದೆ.
ಛಾಯಾಭಗವತಿ ಎಂಬುದು ಸೂರ್ಯನ ಪತ್ನಿ ಛಾಯಾದೇವಿಯ ದೇವಸ್ಥಾನವಿರುವ ಒಂದು ಕ್ಷೇತ್ರ. ಇದು ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ನಾರಾಯಣಪುರದ ಹತ್ತಿರ ಕೃಷ್ಣಾನದಿಯ ದಂಡೆಯ ಮೇಲಿದೆ. ಕೃಷ್ಣಾನದಿ ಇಲ್ಲಿ ಅನೇಕ ಕವಲುಗಳಾಗಿ ಹರಿದಿದೆ. ಈ ನದಿಯ ಒಂದು ಸರಳು ದಡದಲ್ಲಿರುವ ಗುಡ್ಡವನ್ನು ಕೊರೆದು ಅಲ್ಲಿನ ಗುಹೆಯಲ್ಲಿ ಹೊಕ್ಕು ಹೊರಬರುತ್ತದೆ. ನದಿಯ ಪಾತ್ರ ಮೇಲೆ ಚಿಕ್ಕದಾಗಿ ಸೌಮ್ಯವಾಗಿ ಕಂಡರೂ ಒಳಗೆ ಪ್ರವಾಹದ ಸೆಳೆತವಿದೆ. ಛಾಯಾಭಗವತಿಯ ಕೆಳಮಗ್ಗುಲಲ್ಲಿ ಎದುರಿನ ದಂಡೆಯ ಮೇಲೆ ಜಲದುರ್ಗವೆಂಬ ಪ್ರಾಚೀನ ಕೋಟೆಯಿದೆ. ಇದರ ಹತ್ತಿರ ಒಂದು ಜಲಪಾತವೂ ಇದೆ. ಒಟ್ಟಿನಲ್ಲಿ ಛಾಯಭಾಗವತಿ ನಿಸರ್ಗರಮಣೀಯ.
ಛಾಯಾಭಗವತಿಯ ದೇವಸ್ಥಾನ ಕಡಿದಾದ ನದೀತಟದಲ್ಲಿ ಗುಡ್ಡದ ಆಸರೆಯಲ್ಲಿದೆ. ಪ್ರಾತಃಸೂರ್ಯನ ಮೊದಲ ಕಿರಣಗಳು ಮೂರ್ತಿಯನ್ನು ಸ್ಪರ್ಶಿಸುವಂತೆ ಇದನ್ನು ಕಟ್ಟಲಾಗಿದೆ. ಛಾಯಾದೇವಿಗೆ ತನ್ನಿಂದಾದ ಅಪಚಾರವನ್ನು ಸರಿಪಡಿಸಲು ಸೂರ್ಯದೇವ ಆಕೆಯನ್ನು ಪ್ರತಿ ಪ್ರಾತಃಕಾಲ ಎಲ್ಲರಿಗಿಂತ ಮೊದಲು ಭೇಟಿಮಾಡುವುದಾಗಿ ಹೇಳಿದನಂತೆ. ಅದು ಈ ದೇಗುಲದಲ್ಲಿ ಸಿದ್ಧಿಸಿರುವುದನ್ನು ಕಾಣಬಹುದು.
ವೈಶಾಖ ಶುದ್ಧ ತದಿಗೆಯ ದಿನ ಇಲ್ಲಿ ಜಾತ್ರೆ ಸೇರುತ್ತದೆ. ಇದು ದುರ್ಗಮವಾದ ಕ್ಷೇತ್ರವಾದರೂ ಸಾವಿರಾರು ಜನ ಭಕ್ತರನ್ನು ತನ್ನಡೆಗೆ ಆಕರ್ಷಿಸುತ್ತದೆ. (ಜೆ.ಆರ್.ಪಿ.)