ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಡಿಗೇನಹಳ್ಳಿ

ವಿಕಿಸೋರ್ಸ್ದಿಂದ

ಜಡಿಗೇನಹಳ್ಳಿ - ಬೆಂಗಳೂರಿಗೆ 25 ಮೈ. ದೂರದಲ್ಲಿ ಹೊಸಕೋಟೆ ಮಾಲೂರು ರಸ್ತೆಯಲ್ಲಿರುವ ಒಂದು ಹಳ್ಳಿ. ಹೊಸಕೋಟೆಯಿಂದ ಈ ಹಳ್ಳಿಗೆ ಹೋಗುವಾಗ ಅರ್ಧ ಮೈಲಿ ಹಿಂದೆಯೇ ಉರುಟುಕಲ್ಲುಗಳಿಂದ ಕೂಡಿರುವ ಒಂದು ದಿಣ್ಣೆ ಅಡ್ಡಲಾಗುತ್ತದೆ. ಅದನ್ನು ದಾಟುತ್ತಿದ್ದಂತೆಯೇ ರಸ್ತೆಯ ಎರಡು ಬದಿಯಲ್ಲೂ ಹಲವು ಬೃಹತ್ಶಿಲಾಸಮಾಧಿಗಳು ಕಣ್ಣಿಗೆ ಬೀಳುತ್ತವೆ. ರಸ್ತೆಯ ಪಕ್ಕದಲ್ಲೇ ಇರುವ ಒಂದು ಹಳ್ಳ ಇಂಥ ಕೆಲವು ಸಮಾಧಿಗಳನ್ನು ಕೊರೆದಿರುವುದನ್ನೂ ನೋಡಬಹುದು. ಗುಂಡಾದ ಕಲ್ಲುಗಳನ್ನಿಟ್ಟು ರಚಿಸಿರುವ 6ಯಿಂದ 20 ವರೆಗಿನ ವ್ಯಾಸವುಳ್ಳ, ಬೇರೆ ಬೇರೆಯಾಗಿ ಅಥವಾ ಒಂದರೊಳಗೊಂದರಂತೆ ಇರುವ ವೃತ್ತಗಳಲ್ಲಿ ನಾಲ್ಕರ ಉತ್ಖನನ 1957ರಲ್ಲಿ ನಡೆಯಿತು. ಬೇರೆ ಕೆಲವು ಬೃಹತ್ಶಿಲಾಸಮಾಧಿಗಳಲ್ಲಿರುವಂತೆ ಇವುಗಳಲ್ಲಿ ಚಪ್ಪಡಿ ಕಲ್ಲಿನ ಪೆಟ್ಟಿಗೆಯಾಗಲಿ, ದೊಡ್ಡ ಗಾತ್ರದ ಮುಚ್ಚುಗಲ್ಲಾಗಲಿ, ಕಲ್ಲುತುಂಡುಗಳ ರಾಶಿಯಾಗಲಿ ಇಲ್ಲದೆ, ಇವು ಕುಣಿಸಮಾಧಿಯ ಗುಂಪಿಗೆ ಸೇರಿವೆ, ಆಳವಾದ ಕುಣಿಯಲ್ಲಿ ಮಣ್ಣಿನಿಂದ ತಯಾರಿಸಿದ ಶವಸಂಪುಟವನ್ನಿಟ್ಟಿರುವುದು ಇಲ್ಲಿಯ ಬೃಹತ್ಶಿಲಾಸಮಾಧಿಗಳ ಒಂದು ವೈಶಿಷ್ಟ್ಯ. ಕುನ್ನತ್ತೂರಿನಲ್ಲೂ (ನೋಡಿ- ಕುನ್ನತ್ತೂರು) ಇಂಥ ಮಣ್ಣಿನ ಶವಸಂಪುಟಗಳು ದೊರೆತಿವೆ. ಆದರೆ ರಚನೆಯಲ್ಲಿ ಇವೆರಡಕ್ಕೂ ವ್ಯತ್ಯಾಸವುಂಟು.

ಸಣ್ಣ ವೃತ್ತಗಳಿರುವ ಸಮಾಧಿಗಳಲ್ಲಿ 5-6 ಆಳದ ಗುಂಡಿಗಳಲ್ಲಿ ಚಿಕ್ಕದಾದ, 3-4 ಮೀರದ ಶವಸಂಪುಟಗಳಿವೆ. ಅವುಗಳ ಸುತ್ತಲೂ ಬಗೆಬಗೆಯ ಮಣ್ಣಿನ ಪಾತ್ರೆಗಳು, ಕಬ್ಬಿಣದ ಸಾಮಾನುಗಳು ಇವೆ. ದೊಡ್ಡ ಸಮಾಧಿಗಳಲ್ಲಿ 12 ಗಿಂತ ಹೆಚ್ಚು ಆಳವಾದ ಒಮದು ದೊಡ್ಡ ಗುಂಡಿ, ಅದರ ತಳದಲ್ಲಿ ಪುನಃ ಒಂದರ ಪಕ್ಕದಲ್ಲೊಂದರಂತೆ ಎರಡು ಕಿರುಗುಮಡಿಗಳು, ಅವುಗಳಲ್ಲೊಂದರಲ್ಲಿ ಶವಸಂಪುಟ, ಕೆಲವು ಮಣ್ಣಿನ ಪಾತ್ರೆಗಳು ಮತ್ತು ಕಬ್ಬಿಣದ ಪದಾರ್ಥಗಳು, ಇನ್ನೊಂದರಲ್ಲಿ ವಿವಿಧ ಆಕೃತಿಗಳ ಮತ್ತು ಗಾತ್ರಗಳ ಹಲವಾರು ಮಣ್ಣಿನ ಪಾತ್ರೆಗಳು ತುಂಬಿವೆ. ತೊಟ್ಟಿಲಿನ ಮಾದರಿಯಲ್ಲಿರುವ 7 ಉದ್ದವಾದ ಶವಸಂಪುಟಕ್ಕೆ ಎಂಟು ಕಾಲುಗಳು, ಉಬ್ಬಿರುವ ಮುಚ್ಚಳ, ಕೆಂಪು ಬಣ್ಣ. ಗುಂಡಿಯಲ್ಲಿ ಮೊದಲು ಬತ್ತವನ್ನು ಹರಡಿ ಅದರ ಮೇಲೆ ಶವಸಂಪುಟವನ್ನಿಟ್ಟಿದ್ದಕ್ಕೆ ಕುರುಹುಗಳಿವೆ. ಇಲ್ಲಿ ದೊರೆತಿರುವ ಯಾವ ಶವಸಂಪುಟದಲ್ಲೂ ಅಸ್ಥಿಪಂಜರವಾಗಲಿ ಶವದ ಇತರ ಕುರುಹುಗಳಾಗಲಿ ಕಂಡುಬಂದಿಲ್ಲದಿರುವುದು ಒಂದು ವಿಚಿತ್ರ. ಕಬ್ಬಿಣದ ಪದಾರ್ಥಗಳಲ್ಲಿ ಕತ್ತಿ, ಚೂರಿ ಕುಡುಗೋಲು, ಗುದ್ದಲಿ, ಮುಕ್ಕಾಲುಪೀಠ, ಬಾಣಲೆ, ತ್ರಿಶೂಲ ಮುಂತಾದವೂ ಮಣ್ಣಿನ ಪಾತ್ರೆಗಳಲ್ಲಿ ಮಡಕೆಗಳು, ತಟ್ಟೆಗಳು, ಬಟ್ಟಲುಗಳು, ಮುಚ್ಚಳವಿರುವ ಉದ್ದಕತ್ತಿನ ಹೂಜಿಗಳು, ಪಾನಪಾತ್ರೆಗಳು ಮತ್ತು ಆಟಿಕೆಯಂತಿರುವ ಕಿರುಪಾತ್ರೆಗಳೂ ಸೇರಿವೆ. ಇವುಗಳಲ್ಲಿ ಕೆಂಪು ಬಣ್ಣದ ಪಾತ್ರೆಗಳೇ ಹೆಚ್ಚು. ಕಪ್ಪು ಹೊಳಪಿನ ಪಾತ್ರೆಗಳೂ ಉಂಟು. ಬೃಹತ್ಶಿಲಾಸಮಾಧಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೆಂಪು ಕಪ್ಪು ಮಿಶ್ರಿತ ಮಡಕೆಗಳೂ ಇವೆ.

ಶವಸಂಪುಟವನ್ನೂ ಇತರ ಪದಾರ್ಥಗಳನ್ನೂ ಕಿರುಗುಂಡಿಗಳಲ್ಲಿ ಜೋಡಿಸಿಟ್ಟ ಮೇಲೆ ಜಿಗುಟಾದ ಜೇಡಿಯ ಮಣ್ಣನ್ನು ಗಿಡಿದು ದೊಡ್ಡ ಗುಣಿಯನ್ನು ತುಂಬಿರುವುದರಿಂದ ಅದನ್ನು ಅಗೆದು ತೆಗೆಯುವುದು ಶ್ರಮಸಾಧ್ಯ. ಅಲ್ಲಿಯ ಸಮಾಧಿಗಳನ್ನು ಬೃಹತ್ಶಿಲಾಸಮಾಧಿಗಳ ಕಾಲದ ಕಡೆಯ ಭಾಗಕ್ಕೆ-ಎಂದರೆ ಕ್ರಿ.ಶ. 1-3ನೆಯ ಶತಮಾನಗಳ ಕಾಲಕ್ಕೆ-ಸೇರಿಸಬಹುದೆಂದು ಸ್ಥೂಲವಾಗಿ ಅಭಿಪ್ರಾಯ ಪಡಲಾಗಿದೆ. (ಎಂ.ಎಚ್.)