ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನಗಣಿತಿ

ವಿಕಿಸೋರ್ಸ್ದಿಂದ

ಜನಗಣಿತಿ

	ನಿರ್ದಿಷ್ಟ ಕಾಲದಲ್ಲಿ ರಾಷ್ಟ್ರವೊಂದರ ಜನಸಂಖ್ಯೆಯನ್ನೂ ಪ್ರಾಸಂಗಿಕವಾಗಿ ಆ ಜನಕ್ಕೆ ಸಂಬಂಧಿಸಿದ ಇತರ ಉಪಯುಕ್ತ ಮಾಹಿತಿಗಳನ್ನೂ ಸಂಗ್ರಹಿಸಿ ಪ್ರಕ್ರಮಿಸಿ ಪ್ರಕಟಿಸುವ ಕ್ರಿಯೆ, ಖಾನೇಶುಮಾರಿ (ಸೆನ್ಸಸ್). ಇಲ್ಲಿ ಉಪಯುಕ್ತ ಮಾಹಿತಿಗಳೆಂದರೆ ಲಿಂಗ ಮತ್ತು ವಯಸ್ಸಿಗೆ ಅನುಗುಣವಾಗಿ ಜನರ ಹಂಚಿಕೆ, ಮನೆ, ಜಮೀನು, ಜಾನುವಾರು, ವೃತ್ತಿ, ವರಮಾನ, ಖರ್ಚು ಇತ್ಯಾದಿ. 

ಇತಿಹಾಸ : 5,000 ವರ್ಷಗಳಷ್ಟು ಹಿಂದೆಯೇ ಬ್ಯಾಬಿಲಾನ್‍ನಲ್ಲಿ ಜನಸಂಖ್ಯೆ ಮತ್ತು ಕೆಲಸಗಾರರ ಅಂಕ-ಅಂಶಗಳನ್ನು ಶೇಖರಿಸಲು ಒಂದು ಬಗೆಯ ಖಾನೇ ಶುಮಾರಿಯನ್ನು ನಡೆಸುತ್ತಿದ್ದರು. ಪ್ರಾಚೀನ ಗ್ರೀಸ್ ಮತ್ತು ರೋಮ್, ಇಸ್ರೇಲ್, ಪರ್ಷಿಯ, ಭಾರತ, ಚೀನ ಮುಂತಾದ ದೇಶಗಳಲ್ಲೂ ಜನಗಣಿತಿ ನಡೆಯುತ್ತಿತ್ತು ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಒಬ್ಬ ರಾಜನ ಆಧಿಪತ್ಯಕ್ಕೆ ಒಳಪಟ್ಟ ದೇಶದಲ್ಲಿ ವಾಸಿಸುವ ಜನರ ಸಂಖ್ಯೆ ಎಷ್ಟು, ಅವರ ಪೈಕಿ ಎಷ್ಟು ಜನಗಳ ಮೇಲೆ ತೆರಿಗೆ ವಿಧಿಸಬಹುದು. ಸೈನ್ಯಕ್ಕೆ ಸೇರಿಸಿಕೊಳ್ಳಬಹುದಾದ ಕಟ್ಟಾಳುಗಳು ಎಷ್ಟು ಮಂದಿ ಸಿಕ್ಕುವರು ಇವೇ ಮುಂತಾದ ವಿವರಗಳನ್ನು ನಿಖರವಾಗಿ ತಿಳದುಕೊಳ್ಳುವುದೇ ಹಿಂದಿನ ಕಾಲದ ಖಾನೇಶುಮಾರಿಯ ಮುಖ್ಯ ಉದ್ದೇಶಗಳಾಗಿದ್ದುವು. ಪುರಾತನ ಗ್ರೀಕ್ ಮತ್ತು ರೋಮ್ ರಾಜ್ಯಗಳ ನಾಗರಿಕರಿಗೆ ಹಲವು ಹಕ್ಕುಗಳು ಇದ್ದುವು. ಆದರೆ ಗುಲಾಮರಿಗೆ ಅವು ಇರಲಿಲ್ಲ. ಆದ್ದರಿಂದ ಹಕ್ಕುದಾರ ನಾಗರಿಕರ ಪಟ್ಟಿಯನ್ನು ತಯಾರು ಮಾಡಬೇಕಾಗಿತ್ತು. ಇದಕ್ಕಾಗಿ ಜನಗಣಿತಿಯ ಪದ್ಧತಿ ಹುಟ್ಟಿತು. ಅದರ ಜೊತೆಗೆ ಪ್ರತಿ ಕುಟುಂಬಕ್ಕೂ ಸೇರಿದ ಭೂಮಿಕಾಣಿ, ವರಮಾನ ಮುಂತಾದವನ್ನು ಕೂಡ ಎಣಿಸಿ ಬರೆದಿಡುತ್ತಿದ್ದರು.

ಜನಗಣಿತಿಯ ಪದ್ಧತಿ ಭಾರತದಲ್ಲಿ ರೂಢಿಯಲ್ಲಿದ್ದುದಕ್ಕೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖ ಉಂಟು. ವ್ಯವಸಾಯ ಮತ್ತು ಜನರ ಆರ್ಥಿಕ ಸ್ಥಿತಿಗೆ ಸಂಬಂಧಪಟ್ಟ ಗಣಿತಿಯನ್ನೂ ಜನ ಮತ್ತು ಜಾನುವಾರುಗಳ ಲೆಕ್ಕವನ್ನೂ ಹಳ್ಳಿಪಟ್ಟಣಗಳಲ್ಲಿ ತೆಗೆದುಕೊಳ್ಳುತ್ತಿದ್ದರೆಂದು ಆ ಗ್ರಂಥದಲ್ಲಿ ವಿವರಿಸಲಾಗಿದೆ. ಅದರಂತೆ ಹಳ್ಳಿಯ ಗೋಪ ಅಥವಾ ಶಾನುಭೋಗನ ಕರ್ತವ್ಯಗಳು ಇವು : ಹಳ್ಳಿಗಳಿಗೆ ಎಲ್ಲೆಗಳನ್ನು ಕಟ್ಟಿ ಒಟ್ಟು ಭೂಮಿಯನ್ನು ಅಳೆದು ಅದರಲ್ಲಿ ಸಾಗುವಳಿಯ ಜಮೀನು, ಪಡಬಿದ್ದ ಜಮೀನು, ಬಂಜರು, ಬಯಲು, ತರಿ, ಖುಷ್ಕಿ, ಬಾಗಾಯಿತು, ತರಕಾರಿ ತೋಟಗಳು, ಬದುಗಳು, ಅಡುಗಳು, ಕಾಡುಗಳು, ಬಲಿವೇದಿಕೆಗಳು, ದೇಗುಲಗಳು, ನೀರಾವರಿ ಜಲಾಶಯಗಳು, ಶ್ಮಶಾನಗಳು, ಛತ್ರಗಳು, ಅರವಟ್ಟಿಗೆಗಳು, ಯಾತ್ರಾಸ್ಥಳಗಳು, ಹುಲ್ಲುಮಾಳಗಳು, ರಸ್ತೆಗಳು ಎಂದು ವಿಂಗಡಿಸತಕ್ಕದ್ದು. ಕಾಡು ರಸ್ತೆ ಮೊದಲಾದವುಗಳ ಎಲ್ಲೆಯನ್ನು ನಿಗದಿ ಮಾಡಿ ಜಮೀನುಗಳ ವಿಷಯದಲ್ಲಿ ದಾನಧರ್ಮ, ಕ್ರಯವಿಕ್ರಯ, ತೆರಿಗೆಯ ಸೋಡಿ ಮುಂತಾದವನ್ನು ಬರೆದಿಡತಕ್ಕದ್ದು. ಮನೆಗಳನ್ನು ತೆರಿಗೆ ಕೊಡತಕ್ಕವು ಮತ್ತು ತೆರಿಗೆ ಇಲ್ಲದವು ಎಂದು ವರ್ಗೀಕರಿಸಿ, ಗ್ರಾಮದಲ್ಲಿ ವಾಸವಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳ ಒಟ್ಟು ಜನಸಂಖ್ಯೆಯನ್ನು ಗಣನೆಮಾಡಿ ಬರೆದಿಡತಕ್ಕದ್ದು. ವ್ಯವಸಾಯಗಾರರು, ಗೋವಳರು, ವರ್ತಕರು ಕಸಬುದಾರರು, ಕೂಲಿಗಾರರು, ಗುಲಾಮರು ಮತ್ತು ಪಶೂಗಳು-ಇವುಗಳ ಕರಾರುವಾಕ್ಕಾದ ಸಂಖ್ಯೆ ಎಷ್ಟು ಎಂಬುದರ ಲೆಕ್ಕವನ್ನಿಟ್ಟಿರತಕ್ಕದ್ದು. ಪ್ರತಿ ಮನೆಯಿಂದಲೂ ಎಷ್ಟು ಚಿನ್ನ, ಬೇಗಾರಿ ಕೆಲಸ, ಸುಂಕ ಮತ್ತು ದಂಡ ವಸೂಲಾಗಬಹುದೆಂಬುದನ್ನು ಸಹ ನಿಗದಿ ಮಾಡತಕ್ಕದ್ದು. ಇಷ್ಟು ತಪಶೀಲಾಗಿ ಅಂಕ-ಅಂಶಗಳನ್ನು ಸಂಗ್ರಹ ಮಾಡುತ್ತಿದ್ದುದನ್ನು ನೋಡಿದರೆ ಆಗಿನ ಕಾಲದಲ್ಲಿ ಕೂಡ ಒಂದು ಬಗೆಯ ಗಣಿತಿ ನಡೆಯುತ್ತಿತ್ತು ಎಂದು ವೇದ್ಯವಾಗುತ್ತದೆ. ಆದರೆ ಅಂದಿನ ಗಣಿತಿಗೂ ಇಂದಿನ ಗಣಿತಿಗೂ ಬಹಳ ವ್ಯತ್ಯಾಸಗಳುಂಟು. ಆಧುನಿಕ ರೀತಿಯ ಮೊಟ್ಟಮೊದಲಿನ ಜನಗಣಿತಿ ಕೆನಡದ ಕ್ವಿಬೆಕ್ ಪ್ರಾಂತ್ಯದಲ್ಲಿ 1666ರಲ್ಲಿ ನಡೆಯಿತು. 1749ರಲ್ಲಿ ಸ್ವೀಡನ್‍ನಲ್ಲಿ ಜನಗಣಿತಿ ನಡೆಸಿದ ದಾಖಲೆ ಇದೆ. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ 1790ರಲ್ಲಿ ಜನಗಣಿತಿ ನಡೆಸಲಾಯಿತು. ಅಲ್ಲಿಯ ಕಾಂಗ್ರೆಸ್ಸಿಗೆ ಜನಸಂಖ್ಯೆಯ ಆಧಾರದ ಮೇಲೆ ಪ್ರಾತಿನಿಧ್ಯವನ್ನು ನಿಷ್ಕರ್ಷಿಸುವುದೂ ಜನಗಣಿತಿ ಏರ್ಪಡಿಸುವುದರ ಒಂದು ಉದ್ದೇಶವಾಗಿದ್ದುದರಿಂದ ಅದಕ್ಕೆ ತುಂಬ ಪ್ರಾಮುಖ್ಯ ಬಂತು. ಆ ವರ್ಷದಿಂದ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣಿತಿ ಏರ್ಪಡಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಇಂಗ್ಲೆಂಡ್, ಫ್ರಾನ್ಸ್‍ಗಳಲ್ಲಿ 1801ರಲ್ಲಿ ಈ ಪದ್ಧತಿ ಜಾರಿಗೆ ಬಂತು. 16-17ನೆಯ ಶತಮಾನಗಳಷ್ಟು ಹಿಂದೆ ಭಾರತದಲ್ಲಿ ಜನಗಣಿತಿ ಕ್ರಮಬದ್ಧವಾಗಿ ನಡೆಯುತ್ತಿತ್ತೆಂದು ಅಕ್ಬರನ ಮಂತ್ರಿಯೂ ಇತಿಹಾಸಕಾರನೂ ಆದ ಅಬುಲ್ ಫಸಲ್ ಬರೆದಿರುವ ಐನ್-ಎ-ಅಕ್ಬರಿ ಎಂಬ ಗ್ರಂಥದಿಂದ ತಿಳಿದುಬರುತ್ತದೆ. ಭಾರತದಲ್ಲಿ ಆಧುನಿಕ ರೀತಿಯ ಮೊಟ್ಟಮೊದಲನೆಯ ಕ್ರಮಬದ್ಧ ಜನಗಣಿತಿ ನಡೆದದ್ದು 1872ರಲ್ಲಿ. ಆದರೆ ಇದರಲ್ಲಿ ಎಷ್ಟೋ ಕುಂದುಕೊರತೆಗಳಿದ್ದುವು. ದೇಶದ ಎಲ್ಲ ಭಾಗಗಳಲ್ಲೂ ಇದನ್ನು ನಡೆಸಲಿಲ್ಲ. ಮುಂದೆ 1881ರಲ್ಲಿ ನಡೆದ ಜನಗಣಿತಿ ಶಾಸ್ತ್ರೀಯವಾದ್ದು. ಅಲ್ಲದೆ ಅದು ಅಖಿತ ಭಾರತೀಯ ವ್ಯಾಪ್ತಿಯನ್ನೂ ಪಡೆದಿತ್ತು. ಭಾರತದಲ್ಲಿ ಅಲ್ಲಿಂದೀಚೆಗೆ ಹತ್ತು ವರ್ಷಗಳಿಗೊಮ್ಮೆ ಜನಗಣಿತಿ ನಡೆಯುತ್ತಿದೆ. ಈ ದಶವಾರ್ಷಿಕ ಜನಗಣಿತಿಯ ಪರಂಪರೆಯಲ್ಲಿ ಈಗ 1971ನೆಯ ಇಸವಿಯಲ್ಲಿ ನಡೆದದ್ದು ಹನ್ನೊಂದನೆಯದು. 1971ಕ್ಕೆ ಹಿಂದೆ ನಡೆಯುತ್ತಿದ್ದ ಪ್ರತಿಯೊಂದು ಜನಗಣಿತಿಯೂ ಏಕಕಾಲಿಕವಾಗಿತ್ತು. ಅಂದರೆ ಒಂದು ವೇಳೆಯಲ್ಲಿ ದೇಶಾದ್ಯಂತ ಜನರ ಎಣಿಕೆ ಮಾಡಲಾಗುತ್ತಿತ್ತು. 1941ರಲ್ಲಿ ಭಿನ್ನಕಾಲಿಕ ಜನಗಣಿತಿಯನ್ನು ಜಾರಿಗೆ ತಂದರು. ಜನರು ಸಾಧಾರಣವಾಗಿ ಎಲ್ಲಿ ವಾಸವಿರುವರೋ ಅಲ್ಲಿ ಅವರ ಎಣಿಕೆಯನ್ನು ಮಾಡಲಾಯಿತು. ಈ ವಿಧವಾಗಿ ಎಣಿಕೆ ಮಾಡಿ ಪಡೆದ ಜನಸಂಖ್ಯೆಗೆ ವಸ್ತುತಃ ಜನಸಂಖ್ಯೆ ಎಂದು ಹೆಸರು. ವ್ಯಾಪಕವಾಗಿ ಹಾಗೂ ವ್ಯವಸ್ಥಿತವಾಗಿ ಜನಗಣಿತಿ ನಡೆಸುವ ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರ ಭಾರತ. ಜನಗಣಿತಿಯನ್ನು ವ್ಯವಸ್ಥಿತವಾಗಿ ನಡೆಸುವ ಬಗ್ಗೆ ಈಚಿನ ವರ್ಷಗಳಲ್ಲಿ ವಿಶ್ವಸಂಸ್ಥೆ ಸದಸ್ಯರಾಷ್ಟ್ರಗಳಿಗೆ ವೈಜ್ಞಾನಿಕ ಮತ್ತು ಇತರ ನೆರವುಗಳನ್ನು ನೀಡುತ್ತಿದೆ. 1950ರಲ್ಲಿ ವಿಶ್ವಸಂಸ್ಥೆ ಜಾಗತಿಕ ಜನಗಣಿತಿಯ ಕಾರ್ಯವನ್ನು ಉಪಕ್ರಮಿಸಿ, ಪ್ರಪಂಚದ ಜನಸಂಖ್ಯೆ ಹಾಗೂ ಜನಜೀವನದ ಬಗ್ಗೆ ಹೆಚ್ಚು ಅಂಶ-ಅಂಶ ಒದಗಿಸಲು ಕ್ರಮ ಕೈಗೊಂಡಿತು.

ಜನಗಣಿತಿಯ ಸಂಘಟನೆ : ಭಾರತ ಸ್ವತಂತ್ರವಾದ ಮೇಲೆ ಸಮಸ್ತ ರಾಜ್ಯಗಳಲ್ಲೂ ಏಕರೂಪದ ಜನಗಣಿತಿಯ ಕ್ರಮವನ್ನು ಬಳಕೆಗೆ ತರಲಾಗಿದೆ. ಇದನ್ನು ನಡೆಸುವ ಆರ್ಥಿಕ ಮತ್ತು ಇತರ ಹೊಣೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು. ಶಾಶ್ವತವಾದ ಜನಗಣಿತಿಯ ಅಧಿನಿಯಮವೊಂದು ಸಂಸತ್ತಿನಲ್ಲಿ ಅಂಗೀಕೃತವಾಗಿದೆ. ರಾಷ್ಟ್ರಾದ್ಯಂತ ಜನನ-ಮರಣ ಮತ್ತು ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳ ನಿರ್ವಹಣೆಗಾಗಿ ಭಾರತ ಸರ್ಕಾರ ಒಂದು ಇಲಾಖೆಯನ್ನು ಸ್ಥಾಪಿಸಿದೆ. ಇದರ ಪ್ರಧಾನಾಧಿಕಾರಿಗೆ ರಿಜಿಸ್ಟ್ರಾರ್-ಜನರಲ್ ಎಂದು ಹೆಸರು. ಈತ ಭಾರತದ ಜನಗಣಿತಿಯ ಕಮಿಷನರಾಗಿ ಕೆಲಸ ಮಾಡುವನು. ಪ್ರತಿಯೊಂದು ರಾಜ್ಯಕ್ಕೂ ಒಬ್ಬ ಸೂಪರಿಂಟೆಂಡೆಂಟನನ್ನು ಕೇಂದ್ರ ಸರ್ಕಾರ ನೇಮಿಸುತ್ತದೆ. ಈತನ ಅಧಿಕಾರ ಕಕ್ಷೆಯಲ್ಲಿ ಇತರ ಅಧೀನ ಅಧಿಕಾರಿಗಳು ಕೆಲಸಮಾಡಿ ಜನಗಣಿತಿಯ ಕಾರ್ಯ ನಿರ್ವಹಿಸುತ್ತಾರೆ. ಜನಗಣಿತಿಯ ದಿನಕ್ಕೆ ಸುಮಾರು ಎರಡು ವರ್ಷಗಳ ಮುಂಚೆಯೇ ಜನಗಣಿತಿಗೆ ಅಗತ್ಯವಾದ ಏರ್ಪಾಡುಗಳನ್ನು ಪ್ರಾರಂಭಿಸಲಾಗುವುದು. ಪ್ರತಿಯೊಂದು ಹಳ್ಳಿ ಅಥವಾ ಪಟ್ಟಣದಲ್ಲಿ ಇರುವ ಮನೆಗಳನ್ನೂ ಇತರ ಕಟ್ಟಡಗಳನ್ನೂ ಎಣಿಕೆಮಾಡಿ ಅವಕ್ಕೆ ಕ್ರಮಸಂಖ್ಯೆಗಳನ್ನು (ಜಂಜರು ನಂಬರು) ಕೊಟ್ಟು ಈ ಸಂಖ್ಯೆಗಳನ್ನು ಮನೆಗಳ ಬಾಗಿಲ ಕದಗಳ ಮೇಲೆ ಅಥವಾ ಗೋಡೆಯ ಮೇಲೆ ಗಣಿತಿ ಅಧಿಕಾರಿಗಳಿಂದ ಬರೆಯಿಸಲಾಗುವುದು. ಮನೆ ಕಟ್ಟಲು ಯೋಗ್ಯವಾದ ಖಾಲಿ ನಿವೇಶಗಳಿಗೂ ಕ್ರಮಸಂಖ್ಯೆಗಳನ್ನು ಕೊಡಲಾಗುವುದು. 1971ರ ಜನಗಣಿತಿಯಲ್ಲಿ 120-150 ಮನೆಗಳಲ್ಲಿ ವಾಸವಿರುವ ಜನರ, ಎಂದರೆ 600-750 ಜನರ, ಎಣಿಕೆಗೆ ಒಬ್ಬರಂತೆ ಸುಮಾರು 10 ಲಕ್ಷ ಎಣಿಕೆದಾರರು ಈ ಕಾರ್ಯದಲ್ಲಿ ನೇಮಕಗೊಂಡಿದ್ದರು. ಇವರು ಸುಮಾರು ಇಪ್ಪತ್ತು ದಿನಗಳಲ್ಲಿ ಮನೆಮನೆಗೆ ಹೋಗಿ ಜನಗಣಿತಿಯ ನಮೂನೆಗಳಲ್ಲಿ ಕೇಳಲಾಗಿದ್ದ ಎಲ್ಲ ವಿವರಗಳನ್ನೂ ಪಡೆದುಕೊಂಡರು. ಮನೆಗಳಿಲ್ಲದವರ ಎಣಿಕೆಯ ಕಾರ್ಯ ಜನಗಣಿತಿಯ ಅಧಿಕೃತ ದಿನಾಂಕಕ್ಕೆ ಮುಂಚೆ ಒಂದು ರಾತ್ರಿ ನಡೆಯಿತು. ಅಂಥವರು ಮಲಗುವ ಛತ್ರ, ಚಾವಡಿ, ಫುಟ್ ಪಾತ್ ಮುಂತಾದ ಕಡೆಗಳಲ್ಲಿ ಹೀಗಿ ಎಣಿಕೆ ಮಾಡಲಾಯಿತು.

ಭಾರತೀಯ ಜನಗಣಿತಿಯ ಅಧಿನಿಯಮದ ಮೇರೆಗೆ ಪ್ರತಿಯೊಬ್ಬ ವ್ಯಕ್ತಿಯೂ ಜನಗಣಿತಿಯ ಪ್ರಶ್ನಾವಳಿಗಳಿಗೆ ಸರಿಯಾದ ಮತ್ತು ವಾಸ್ತವಿಕವಾದ ಉತ್ತರಗಳನ್ನು ನೀಡಲು ಬದ್ಧನಾಗಿದ್ದಾನೆ. ಆತ ನೀಡುವ ಉತ್ತರಗಳೆಲ್ಲ ರಹಸ್ಯವಾದವು. ಯಾವ ನ್ಯಾಯಾಲಯದಲ್ಲೂ ಇವನ್ನು ಸಾಕ್ಷ್ಯವಾಗಿ ಅಂಗೀಕರಿಸುವುದಿಲ್ಲ. ಎಣಿಕೆದಾರನೇ ಆಗಲಿ ಗಣಿತಿಯ ಯಾವ ಅಧಿಕಾರಿಯೇ ಆಗಲಿ ತಾನು ಸಂಗ್ರಹಿಸಿದ ಯಾವುದೇ ಸಂಗತಿಯನ್ನೂ ಬಹಿರಂಗಪಡಿಸಕೂಡದು. ಈ ನಿಯಮವನ್ನು ಉಲ್ಲಂಘಿಸಿದರೆ ಆತನಿಗೆ ಆರು ತಿಂಗಳುಗಳ ಕಾರಾಗೃಹ ಶಿಕ್ಷೆ ವಿಧಿಸಲಾಗುವುದು. ಗಣತಿಯ ಕಾಲದಲ್ಲಿ ಎಣಿಕೆದಾರ ಅಧಿಕೃತ ಪ್ರಶ್ನೆಗಳನ್ನು ಮಾತ್ರ ವಿಹಿತ ರೀತಿಯಲ್ಲಿ ಕೇಳತಕ್ಕದ್ದು. ಉದ್ದೇಶಪೂರ್ವಕವಾಗಿ ಅನುಚಿತ ಪ್ರಶ್ನೆಗಳನ್ನು ಅಥವಾ ಮನ ನೋಯಿಸುವ ಪ್ರಶ್ನೆಗಳನ್ನು ಕೇಳಿದರೆ ಎಣಿಕೆದಾರ ಶಿಕ್ಷೆಗೆ ಗುರಿಯಾಗುವನು. (ಎಂ.ವಿ.ಜೆ.; ಬಿ.ಆರ್.ವಿ.)

ಜನಗಣಿತಿಯ ಲಕ್ಷಣಗಳು : ಆಧುನಿಕ ಜನಗಣಿತಿಯಲ್ಲಿ ಈ ಕೆಳಗಿನ ಆರು ಮುಖ್ಯವಾದ ಲಕ್ಷಣಗಳಿರಬೇಕೆಂದು ವಿಶ್ವಸಂಸ್ಥೆ ನಿಗದಿಮಾಡಿದೆ : 1 ಜನಗಣಿತಿಯನ್ನು ರಾಷ್ಟ್ರದ ಮಟ್ಟದಲ್ಲಿ ರೂಪಿಸಿ ನಡೆಸಬೇಕು. ಜನಗಣಿತಿಗೆ ಬೇಕಾದ ಕಾನೂನು ಕಟ್ಟಲೆಗಳನ್ನು ಮಂಜೂರು ಮಾಡಿ ರೂಢಿಗೆ ತರುವ ಸಾಮಥ್ರ್ಯ ರಾಷ್ಟ್ರೀಯ ಸರ್ಕಾರಕ್ಕೆ ಮಾತ್ರ ಇರುವುದು. 2 ಜನಗಣಿತಿ ಒಳಗೊಳ್ಳುವ ಪ್ರದೇಶದ ಸರಹದ್ದು ನಿಖರವಾಗಿ ವ್ಯಾಖ್ಯಿಸಲ್ಪಟ್ಟಿರಬೇಕು. ಉತ್ತರೋತ್ತರ ಜನಗಣಿತಿಯನ್ನು ತುಲನೆ ಮಾಡುವ ಸಂದರ್ಭದಲ್ಲಿ ಇಂಥ ತುಲನೆಗಳ ಮೇಲೆ ಪ್ರಭಾವ ಬೀರಬಹುದಾದ ಗಡಿ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ವಿವರಿಸಿರಬೇಕು. 3 ಜನಗಣಿತಿಯ ಪರಿಧಿಯ ಒಳಗೆ ಬರುವ ಎಲ್ಲ ವ್ಯಕ್ತಿಗಳನ್ನೂ, ಯಾರನ್ನೂ ಬಿಡದಂತೆ ಮತ್ತು ಯಾರನ್ನೂ ಎರಡು ಸಲ ಎಣಿಸದಂತೆ, ಸೇರಿಸಲೇಬೇಕು. 4 ಒಂದು ನಿರ್ದಿಷ್ಟ ವೇಳೆಯಲ್ಲಿ ಬದುಕಿರುವ ಜನರ ಎಣಿಕೆಯನ್ನು ಮಾಡಬೇಕು. ಆದ್ದರಿಂದ ಆ ವೇಳೆಯ ಅನಂತರ ಹುಟ್ಟುವವರು ಈ ಎಣಿಕೆಗೆ ಬರತಕ್ಕದ್ದಲ್ಲ. ಆದರೆ ಅನಂತರ ಸಾಯುವವರು ಈ ಎಣಿಕೆಗೆ ಬರತಕ್ಕದ್ದು. 5 ಪ್ರತಿ ವ್ಯಕ್ತಿಯನ್ನೂ ಕುರಿತಂತೆ ಜನಗಣಿತಿಯ ದತ್ತಾಂಶಗಳನ್ನು ಪ್ರತ್ಯೇಕವಾಗಿಯೇ ಪಡೆಯತಕ್ಕದ್ದು. 6 ಜನಗಣಿತಿಯಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಪ್ರಕ್ರಮಿಸಿ ಪ್ರಕಟಿಸಲೇಬೇಕು. ಈ ಕ್ರಿಯೆ ಮುಗಿಯುವವರೆಗೂ ಜನಗಣಿತಿ ಕೊನೆಗೊಳ್ಳುವುದಿಲ್ಲ. ಜನಗಣಿತಿಯಲ್ಲಿ ಯಾವ ಬಗೆಯ ಮಾಹಿತಿಗಳಿರಬೇಕು ಎನ್ನುವ ಪ್ರಶ್ನೆಗೆ ಒಂದು ಉತ್ತರ ದೊರೆಯಲಾರದು-ಕಾಲ ಹಾಗೂ ದೇಶಗಳನ್ನು ಅನುಸರಿಸಿ ಇವುಗಳಲ್ಲಿ ಬದಲಾವಣೆಗಳು ತಲೆದೋರುವುದು ಅನಿವಾರ್ಯ. ಆದರೂ, ಕೆಲವು ಪ್ರಶ್ನೆಗಳು ಇರಲೇಬೇಕು. ಅವನ್ನು ವಿಶ್ವಸಂಸ್ಥೆ ಈ ಕೆಳಗಿನಂತೆ ಪಟ್ಟಿಮಾಡಿದೆ. 1 ಜನಗಣಿತಿಯ ವೇಳೆಯಲ್ಲಿ ವ್ಯಕ್ತಿ ಇದ್ದ ಸ್ಥಳ ಮತ್ತು ಅಥವಾ ವ್ಯಕ್ತಿಯ ಸಾಮಾನ್ಯ ವಾಸಸ್ಥಳ, 2 ಮನೆಯ ಅಥವಾ ಕುಟುಂಬದ ಯಜಮಾನನೊಂದಿಗೆ ವ್ಯಕ್ತಿಯ ಸಂಬಂಧ, 2 ಲಿಂಗ, 4 ವಯಸ್ಸು, 5 ವೈವಾಹಿಕ ಸ್ಥಿತಿ, 6 ಜನ್ಮಸ್ಥಳ, 7 ಪೌರತ್ವ, 8 ಆರ್ಥಿಕವಾಗಿ ಕಾರ್ಯಪ್ರವರ್ತನೇ/ಳೇ ಅಲ್ಲವೇ, 9 ಉದ್ಯೋಗ, 10 ಕಾರ್ಖಾನೆ, 11 ಸ್ಥಾನ (ನೇಮಕದಾರ, ನೌಕರ, ಇತ್ಯಾದಿ), 12 ಭಾಷೆ, 13 ಜನಾಂಗಸಂಬಂಧಿ ಇಲ್ಲವೇ ರಾಷ್ಟ್ರಕತ್ವ ಲಕ್ಷಣಗಳು, 14 ಸಾಕ್ಷರತೆ, 15 ವಿದ್ಯಾಮಟ್ಟ, 16 ಶಾಲೆಯಲ್ಲಿ ಹಾಜರಿ, 17 ವ್ಯಕ್ತಿ ಹೆಂಗಸಾದರೆ ಆಕೆಗೆ ಹುಟ್ಟಿದ ಮಕ್ಕಳ ಸಂಖ್ಯೆ.

ಜನಗಣಿತಿಯ ಫಲಿತಾಂಶಗಳ ಅಂತರಾಷ್ಟ್ರೀಯ ಹೋಲಿಕೆ ಸಾಧ್ಯವಾಗುವಂತೆ ಮಾಡಲು ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಸಮ್ಮತ ಮೊತ್ತದ ಪರಿಕಲ್ಪನೆಯನ್ನು ಸೂಚಿಸಿ, ರಾಷ್ಟ್ರಗಳು ಅದನ್ನು ಸ್ವೀಕರಿಸಬೇಕೆಂದು ಸಲಹೆ ನೀಡೆದೆ. ಜನಗಣಿತಿಯ ದಿನಾಂಕದಂದು ದೇಶದಲ್ಲಿರುವ ವಿದೇಶಿ ಸೇನಾ, ನೌಕಾ ಮತ್ತು ರಾಯಭಾರ ವರ್ಗವನ್ನುಳಿದು ಎಲ್ಲ ಜನರೂ ಆ ಮೊತ್ತದಲ್ಲಿ ಸೇರಿರಬೇಕು. ಆ ದೇಶದವರಾಗಿದ್ದೂ ಹೊರದೇಶಗಳಲ್ಲಿರುವ ಸೇನಾ, ನೌಕಾ ಮತ್ತು ರಾಯಭಾರ ಸಿಬ್ಬಂದಿ ಜನರನ್ನೂ ಅವರ ಕುಟುಂಬದವರನ್ನೂ, ಸಾಮಾನ್ಯವಾಗಿ ಆ ದೇಶದಲ್ಲಿ ವಾಸಿಸುವ, ಆದರೆ ಜನಗಣಿತಿಯ ದಿನದಂದು ಸಮುದ್ರಯಾನದಲ್ಲಿರುವ ವ್ಯಾಪಾರೀ ನಾವಿಕರನ್ನೂ ಆ ಮೊತ್ತ ಒಳಗೊಂಡಿರಬೇಕು. ಮೂಲನಿವಾಸಿಗಳು, ಅಲೆಮಾರಿ ಬುಡಕಟ್ಟುಗಳು, ಜನಗಣಿತಿಯ ದಿನದಂದು ತಾತ್ಕಾಲಿಕವಾಗಿ ಹೊರದೇಶಗಳಲ್ಲಿರುವ ಪೌರ ರಾಷ್ಟ್ರೀಯ ನಿವಾಸಿಗಳು-ಇವರನ್ನೂ ಈ ಮೊತ್ತದಲ್ಲಿ ಸೇರಿಸಬೇಕೆಂದು ವಿಶ್ವಸಂಸ್ಥೆ ಸಲಹೆ ಮಾಡಿದೆ. ಈ ವಿಧಾನ ಅನುಸರಿಸುವುದರಿಂದ, ಜನಸಂಖ್ಯೆಯ ನಿಷ್ಕರ್ಷೆಯಲ್ಲಿ ಎಲ್ಲ ದೇಶಗಳಲ್ಲೂ ಏಕರೂಪತೆ ಉಂಟಾಗಿ, ಅಂತರಾಷ್ಟ್ರೀಯ ಹೋಲಿಕೆ ಸುಲಭವಾಗುತ್ತದೆ.

ಜನಗಣಿತಿಯ ದತ್ತಾಂಶಗಳನ್ನು ಸಂಗ್ರಹಿಸಲು ಸಾಮಾನ್ಯವಾಗಿ ಎರಡು ವಿಧಾನಗಳನ್ನು ಅನುಸರಿಸಲಾಗುತ್ತದೆ; 1 ನೇರ ಎಣಿಕೆ ಮತ್ತು 2 ಸ್ವಯಂ ಎಣಿಕೆ. ನೇರ ಎಣಿಕೆ ವಿಧಾನದಲ್ಲಿ ಎಣಿಕೆದಾರ ಸಂಬಂಧಿಸಿದ ವ್ಯಕ್ತಿಯಿಂದ, ಕುಟುಂಬದ ಯಜಮಾನನಿಂದ ಅಥವಾ ಎಣಿಕೆದಾರನಿಗೆ ವರದಿ ಮಾಡಲು ಅಧಿಕಾರ ಪಡೆದ ಬೇರಾವನಾದರೂ ಕುಟುಂಬ ಸದಸ್ಯನಿಂದ ನೇರವಾಗಿ ವಿಷಯ ಸಂಗ್ರಹಿಸುತ್ತಾನೆ. ಸ್ವಯಂ ಎಣಿಕೆ ವಿಧಾನದಲ್ಲಿ ಪ್ರಶ್ನಾವಳಿಯನ್ನು ವ್ಯಕ್ತಿಗೆ ಅಥವಾ ಕುಟುಂಬದ ಯಜಮಾನನಿಗೆ ಕೊಡಲಾಗುವುದು. ಅವನು ಅದರಲ್ಲಿ ಅಗತ್ಯವಾದ ವಿವರಗಳನ್ನೆಲ್ಲ ತುಂಬಿ ಅದನ್ನು ಜನಗಣಿತಿ ಕಚೇರಿಗೆ ತಲುಪಿಸಬೇಕು. ಈ ವಿಧಾನದಲ್ಲಿ ಸಾಮಾನ್ಯವಾಗಿ ಎಣಿಕೆದಾರನೇ ಪ್ರಶ್ನಾವಳಿಯನ್ನು ಒದಗಿಸಿ, ಅದನ್ನು ಭರ್ತಿಮಾಡಿದ ಮೇಲೆ ಪಡೆದುಕೊಳ್ಳುತ್ತಾನೆ. ಪ್ರಶ್ನಾವಳಿಯನ್ನು ಉತ್ತರಿಸಲು ಅವನು ಸಹಾಯಮಾಡಬಹುದು. ಪ್ರಶ್ನಾವಳಿಯ ಉತ್ತರಗಳು ನಿಷ್ಕøಷ್ಟವಾಗಿಯೂ ಸಮಗ್ರವಾಗಿಯೂ ಇವೆಯೆಂಬುದನ್ನು ಅವನು ಖಾತರಿ ಮಾಡಿಕೊಳ್ಳಬೇಕು.

ಕೆಲವು ದೇಶಗಳು ಹತ್ತು ವರ್ಷಗಳಿಗೆ ಒಮ್ಮೆ ಜನಗಣಿತಿ ಮಾಡುವ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿವೆ. ಇನ್ನು ಕೆಲವು ದೇಶಗಳಲ್ಲಿ ಐದು ವರ್ಷಗಳಿಗೊಮ್ಮೆ ಜನಗಣಿತಿ ನಡೆಯಬೇಕು. ಮತ್ತೆ ಕೆಲವು ದೇಶಗಳು ಈ ವಿಚಾರದಲ್ಲಿ ನಿಯತಕಾಲಿಕತೆಯನ್ನನುಸರಿಸುತ್ತಿಲ್ಲ; ಅವಶ್ಯವೆನಿಸಿದಾಗ ಜನಗಣಿತಿ ನಡೆಸುತ್ತವೆ. ಹತ್ತು ವರ್ಷಗಳಿಗೊಮ್ಮೆ ಜನಗಣಿತಿ ನಡೆಸುವುದು ಸಾಮಾನ್ಯ. ಹಲವು ದೇಶಗಳಲ್ಲಿ ಸಮಗ್ರ ಜನಗಣಿತಿ ಮಾಡಲು ಮೊದಲು ಪ್ರಥಮದರ್ಶಿ ಗಣಿತಿ (ಪೈಲಟ್ ಸೆನ್ಸಸ್) ನಡೆಸುವುದುಂಟು. ವಿಚಾರಣೆ, ವಿಧಾನ, ಕ್ಷೇತ್ರ ಸಂಘಟನೆ, ಸಾರೀಕರಣ ಕಾರ್ಯಕ್ರಮ-ಇವನ್ನು ಪರೀಕ್ಷಿಸುವುದು ಇದರ ಉದ್ದೇಶವಾಗಿರುತ್ತದೆ.

ಜನಗಣಿತಿಯ ಮೊದಲ ಹಂತದಲ್ಲಿ-ಅಂದರೆ ಎಣಿಕೆ ಹಾಗೂ ಪ್ರಶ್ನಾವಳಿಗಳಿಗೆ ಉತ್ತರ ಪಡೆದ ಮೇಲೆ-ಪಡೆದ ಸಮಸ್ತ ವೈಯಕ್ತಿಕ ಮಾಹಿತಿಗಳನ್ನೂ ಸಮರ್ಪಕವಾಗಿ ಪಟ್ಟಿಮಾಡಿ ಸಂಖ್ಯಾಕಲನೀಯ ಸಾರಾಂಶಗಳಾಗಿ ಪರಿವರ್ತಿಸಬೇಕು. ಆಗ ಮಾತ್ರವೇ ಸಮಗ್ರವಾದ ಒಂದು ಚಿತ್ರವನ್ನು ರಚಿಸುವುದು ಸಾಧ್ಯ. ಇದನ್ನು ಆಧರಿಸಿ ರಾಷ್ಟ್ರದ ಹಲವಾರು ಯೋಜನೆಗಳನ್ನು ರೂಪಿಸುವುದರಿಂದ ಜನಗಣಿತಿಯ ಒಂದೊಂದು ಬಿಡಿ ಹಂತದಲ್ಲೂ ಸಂಪೂರ್ಣತೆಯೂ ನಿಖರತ್ವವೂ ತೀರ ಅಗತ್ಯ. ಉದಾಹರಣೆಗೆ, ವ್ಯಕ್ತಿಗಳಿಗೆ ಅಳುಕು ಮೂಡಿಸುವಂಥ ಪ್ರಶ್ನೆಗಳೆಂದರೆ ವಯಸ್ಸು, ವೈವಾಹಿಕ ಸ್ಥಿತಿ, ನೌಕರಿ ಇವೇ ಮುಂತಾದುವು. ಇಲ್ಲೆಲ್ಲ ಸರಿಯಾದ ಇಲ್ಲವೇ ಪೂರ್ಣವಾದ ಉತ್ತರಗಳು ದೊರೆಯದೆ ಜನಗಣಿತಿಯ ದಾಖಲೆಗಳು ಮಸಕಾಗುವುದುಂಟು. ಇಂಥವುಗಳ ಮೇಲೆ ಆಧರಿತವಾದ ಸಂಖ್ಯಾಕಲನೀಯ ಸಾರಾಂಶ ನೀಡುವುದು ರಾಷ್ಟ್ರದ ಒಂದು ವಿಕೃತರೂಪವನ್ನು, ಅದನ್ನು ಅವಲಂಬಿಸಿದ ಯೋಜನೆ ಅವೈಜ್ಞಾನಿಕವಾಗುವುದು ಸಹಜ. ಆದರೆ ಮಾಹಿತಿಗಳನ್ನು ಪ್ರಕ್ರಮಿಸುವ ಒಂದೊಂದು ಹಂತದಲ್ಲೂ ಅಡ್ಡ ತಾಳೆ ನೋಡಿ ಅವುಗಳ ಶುದ್ಧತೆಯನ್ನು ರುಜು ಮಾಡಿಕೊಳ್ಳಲು ಸಾಕಷ್ಟು ವೈಜ್ಞಾನಿಕ ವಿಧಾನಗಳಿವೆ.

ಜನಗಣಿತಿಯ ಉಪಯೋಗಗಳು : ಜನಗಣಿತಿಯನ್ನು ನಡೆಸಲು ಕಾರಣಗಳೇನೆಂಬುದು ಆಯಾ ದೇಶಗಳ ಅಗತ್ಯಗಳಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಬಗ್ಗೆ ಇರುವ ಆಸಕ್ತಿ ಒಂದು ಮುಖ್ಯ ಕಾರಣ. ಆರೋಗ್ಯ, ಸಾಕ್ಷರತೆ, ಶಿಕ್ಷಣ, ವರಮಾನ, ಜೀವನಮಟ್ಟಗಳು, ಆಹಾರ ಮತ್ತು ಇತರ ಅನುಭೋಗ ಸರಕುಗಳ ಸರಬರಾಜು, ಕೃಷಿ ಉತ್ಪಾದನೆ, ಕೈಗಾರಿಕಾ ಉತ್ಪತ್ತಿ ಮುಂತಾದವನ್ನು ಅಭಿವೃದ್ಧಿಪಡಿಸಲು ಬೇಕಾದಷ್ಟು ಮಾಹಿತಿ ಅವಶ್ಯವಾಗುತ್ತದೆ. ವಿಧಾನಸಭೆಗಳ ಪ್ರಾತಿನಿಧ್ಯವನ್ನು ನೀಡಲು ಅರ್ಹರಾದವರ ಸಂಖ್ಯೆಯನ್ನೂ ರಾಷ್ಟ್ರದಿಂದ ಅನುಕೂಲಗಳನ್ನು ಪಡೆಯಲು ಹಕ್ಕುಳ್ಳ ಪ್ರದೇಶಗಳು ಅಥವಾ ಗುಂಪುಗಳನ್ನೂ ನಿರ್ಧರಿಸಲು ಜನಗಣಿತಿಯ ದತ್ತಾಂಶಗಳು ಅಗತ್ಯವಾಗುತ್ತವೆ. ಜನಸಂಖ್ಯಾತ್ಮಕ, ಆರ್ಥಿಕ ಹಾಗೂ ಸಾಮಾಜಿಕ ಸಂಶೋಧನೆಗಳನ್ನು ನಡೆಸಲು ಜನಗಣಿತಿಯೇ ಆಧಾರ. ಕಾರ್ಮಿಕ ಬಲ, ಆರ್ಥಿಕವಾಗಿ ಅವಲಂಬಿ ಜನ, ನಗರಕ್ಕೆ ವಲಸೆ ಬಂದವರು, ಗ್ರಾಮೀಣ ಹಾಗೂ ನಗರೀಯ ಜನ, ಜನಾಂಗಿಕ ಅಥವಾ ಮತೀಯ ಅಲ್ಪಸಂಖ್ಯಾತರು, ನಿರಾಶ್ರಿತರು, ವೈಜ್ಞಾನಿಕ ಹಾಗೂ ತಾಂತ್ರಿಕ ಕೆಲಸಗಾರರು ಮುಂತಾದವರನ್ನು ಗುರುತಿಸಿ ವಿವರಿಸಲು ಜನಗಣಿತಿ ಸಹಾಯಕವಾಗುತ್ತದೆ. ಅನುಕ್ರಮಿಕ ಜನಗಣಿತಿಗಳ ತೌಲನಿಕ ಅಧ್ಯಯನದಿಂದ ಜನಸಂಖ್ಯೆ, ಗುಣಲಕ್ಷಣಗಳು, ಸ್ಥಾನೀಕರಣ ಮುಂತಾದವುಗಳಲ್ಲಿ ಆಗಿರುವ ಬದಲಾವಣೆಗಳನ್ನು ಅರಿಯಬಹುದು. ನಾನಾ ಬಗೆಯ ಪರಿಶೀಲನೆ ವಿಚಾರಣೆಗಳಿಗೆ ವಿಪುಲ ಆಧಾರ ಸಾಮಗ್ರಿಯನ್ನು ಜನಗಣಿತಿಯ ವರದಿಗಳು ಒದಗಿಸುತ್ತವೆ. (ನೋಡಿ- ಜನಸಂಖ್ಯೆ) *