ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಮ್ಮು

ವಿಕಿಸೋರ್ಸ್ದಿಂದ

ಜಮ್ಮು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಚಳಿಗಾಲದ ರಾಜಧಾನಿ; ಜಮ್ಮು ಜಿಲ್ಲೆಯ, ಜಮ್ಮು ವಿಭಾಗದ ಮುಖ್ಯ ಪಟ್ಟಣ. ಚೀನಾಬ್ ನದಿಯ ಉಪನದಿಯಾದ ಟಾವಿಯ ದಡದ ಮೇಲೆ, ಶ್ರೀನಗರದಿಂದ 95ಮೈ. ದಕ್ಷಿಣಕ್ಕೆ, ಉ.ಅ.32ಔ 47' ಮತ್ತು ಪೂ.ರೇ. 74ಔ 50' ಮೇಲೆ ಇದೆ. ಜನಸಂಖ್ಯೆ 1.57.908 (1971).

ಜಮ್ಮು ವಿಭಾಗದಲ್ಲಿ ಜಮ್ಮು (ಜನಸಂಖ್ಯೆ 7.31.743), ಕಾಟುವಾ (2.74.671) ಉಧಮ್ ಪುರ (3.38.846) ದೋದಾ (3.42.220) ಮತ್ತು ಪುಂಚ್ (1.70.787) ಈ ಐದು ಜಿಲ್ಲೆಗಳಿವೆ. ಈ ವಿಭಾಗ ಹೆಚ್ಚಾಗಿ ಗುಡ್ಡಗಾಡು. ವಾರ್ಷಿಕ ಮಳೆ 41. ಕೆಲವೆಡೆ ಗೋದಿ ಮತ್ತು ಮೆಕ್ಕೆಜೋಳ ಬೆಳೆಯುತ್ತಾರೆ.

ಜಮ್ಮು ನಗರದಲ್ಲಿ ಅನೇಕ ಪುರಾಣಪ್ರಸಿದ್ಧ ಅವಶೇಷಗಳನ್ನು ನೋಡಬಹುದು. ಇಲ್ಲಿಯ ರಘುನಾಥ ದೇವಾಲಯ ಪ್ರಸಿದ್ಧವಾದ್ದು. ಟಾವಿ ನದಿಯ ಎಡದಡದಲ್ಲಿ ರಾಜಮಹಲ್ ಇದೆ. ಭಾರತೀಯ ರೈಲ್ವೆ ಮಾರ್ಗದ ಅಂತಿಮ ನಿಲ್ದಾಣವಾದ ಪಠಾಣ್ ಕೋಟೆಯೊಡನೆ ಜಮ್ಮು ನಗರ ಸಂಪರ್ಕ ಹೊಂದಿದೆ. ಇಲ್ಲಿ ಅರಣ್ಯ ಇಲಾಖೆಯ ಕೇಂದ್ರವುಂಟು. ಜಮ್ಮು ನಗರದ ಹತ್ತಿರ ಇರುವ ಜಂಗಲಗಲಿ ಮತ್ತು ಕಾಲಕೋಟ್ ಪ್ರದೇಶಗಳಲ್ಲಿ ಕಲ್ಲಿದ್ದಲನ್ನು ತೆಗೆಯುತ್ತಾರೆ. ಜಿಪ್ಸಮ್ ಗಣಿಯೂ ಉಂಟು. ಜಮ್ಮು ನಗರದಲ್ಲಿ ಶಾಲಾಕಾಲೇಜುಗಳೂ ಔದ್ಯೋಗಿಕ ಶಿಕ್ಷಣ ಸಂಸ್ಥೆಯೂ ಇವೆ. ಜಮ್ಮು ನಗರದ ಬಹುಸಂಖ್ಯಾತರು ಡೋಗ್ರಾ ಮತ್ತು ಸಿಕ್ಖರು. ವ್ಯಾಪಾರ ಮತ್ತು ವ್ಯವಸಾಯ ಜನರ ಮುಖ್ಯ ಉದ್ಯೋಗ.

ಜಮ್ಮು ಪ್ರದೇಶ ಮೊದಲು ರಜಪೂತರ ಆಳ್ವಿಕೆಯಲ್ಲಿತ್ತು. ಅವರನ್ನು ಸಿಕ್ಖರು ಜಯಿಸಿದ ಅನಂತರ ಜಮ್ಮು ನಗರ ಸಿಖ್ ಸಾಮ್ರಾಜ್ಯದ ಒಂದು ಭಾಗವಾಯಿತು. ಜಮ್ಮು ನಗರವನ್ನು ಸ್ವಲ್ಪ ಸಮಯ ರಣಜಿತ್ ಸಿಂಗನೂ ಅವನ ಮರಣಾನಂತರ ಗುಲಾಬ್ ಸಿಂಗನೂ ಆಳಿದರು. 1846ರಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರಿ ಒಂದು ಸಂಸ್ಥಾನವಾಯಿತು. (ನೋಡಿ- ಜಮ್ಮು-ಮತ್ತು-ಕಾಶ್ಮೀರ) (ಎಚ್.ಜಿ.ಎ.)