ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಯತೀರ್ಥ

ವಿಕಿಸೋರ್ಸ್ದಿಂದ
Jump to navigation Jump to search

ಶ್ರೀಜಯತೀರ್ಥರು- ದ್ವೈತವೇದಾಂತದಲ್ಲಿ ಶ್ರೀಮಧ್ವಾಚಾರ್ಯರ ಅನಂತರ ಅತ್ಯಂತ ಪ್ರಭಾವಶಾಲೀ ವ್ಯಕ್ತಿತ್ವವನ್ನು ಪ್ರದರ್ಶಿಸಿದ ವಿದ್ವಾಂಸರಿವರು, ವೇದಾಂತಿಗಳು. ಬ್ರಹ್ಮಸೂತ್ರಗಳಿಗೆ ಶ್ರೀಮಧ್ವಾಚಾರ್ಯರು ಬರೆದ ಮಹಾಭಾಷ್ಯವನ್ನು ಸಮಂಜಸವಾಗಿ ಅರ್ಥಮಾಡಿಕೊಳ್ಳಲು ಪೂಜ್ಯರು ಬರೆದ ತತ್ತ್ವಪ್ರಕಾಶಿಕಾದಿ ವ್ಯಾಖ್ಯಾನಗಳಿಗೇ ಮೊರೆ ಹೋಗಬೇಕು. ಹೀಗಾಗಿ ಇವರು ಟೀಕಾಚಾರ್ಯ ಎಂಬ ಹೆಸರಿನಿಂದಲೇ ಜನಪ್ರಿಯರಾಗಿದ್ದಾರೆ. ಮಧ್ವವೇದಾಂತದಲ್ಲಿ ಪ್ರವೇಶ ಪಡೆಯುವುದಕ್ಕೆ ಮಹಾದ್ವಾರವಿದ್ದಂತೆ ಪೂಜ್ಯರ ವಾದಾವಳಿ ಎಂಬ ಗ್ರಂಥ ಸಹಾಯಕವಾಗಿದೆ. ಶ್ರೀಮನ್ ನ್ಯಾಯಸುಧಾ ಇವರ ಬೃಹದ್ ಗ್ರಂಥ. ಶ್ರೀ ಮದಾನಂದತೀರ್ಥ ಭಗವತ್ಪಾದಾಚಾರ್ಯರ ಅನುವ್ಯಾಖ್ಯಾನ ಎಂಬ ಪರವಾದಿ ಖಂಡನಾ ಗ್ರಂಥಕ್ಕೆ ಶ್ರೀ ಜಯತೀರ್ಥರು ಬರೆದ ಟೀಕಾವಿದು.ಮಧ್ವಯತ ಸಿದ್ಧಾಂತದ ಪರಮ ಸಮರ್ಥನಾತ್ಮಕವಾದ ವ್ಯಾಖ್ಯಾನ ಗ್ರಂಥವಿದು. ತಾವು ಶಬ್ದಾಬ್ಧಿಯ ಗಾಡತೆಯನ್ನೂ ನಿಗಮಚರ್ಚಾ ಚಾತುರ್ಯವನ್ನೂ ನ್ಯಾಯ ಪ್ರೌಢಿಮೆಯನ್ನೂ ಹೆಚ್ಚಾಗಿ ಸಂಪಾದಿಸಿದವರಲ್ಲವೆಂದು ಜಯತೀರ್ಥರು ಹೇಳಿಕೊಂಡಿರುವವರಾದರೂ ಶ್ರೀ ಯುತರ ಗ್ರಂಥ ಇವೆಲ್ಲದರಲ್ಲಿಯೂ ಇವರಿಗಿದ್ದ ಪ್ರಕಾಂಡ ಪಾಂಡಿತ್ಯ, ಸಾಮಥ್ರ್ಯಗಳನ್ನು ಪ್ರಸ್ತಾಪಿಸುತ್ತದೆ. ಅದಕ್ಕೆಂದೇ ಸುಧಾ ವಾ ಪಠಾನೀಯಾ, ವಸುಧಾ ವಾ ಪಾಲನೀಯಾ- ಸುಧಾ ಓದಬೇಕು. ಪ್ರಪಂಚವನ್ನಾಳಬೇಕು ಎಂಬುದು ಆಗಿನ ಆದರ್ಶವಾಗಿತ್ತು. ವೇದಾಂತ ಪ್ರಪಂಚದಲ್ಲಿ ಈ ಗ್ರಂಥಕ್ಕೆ ಅಂಥ ಮನ್ನಣೆಯಿದೆ. ಇದರಂತೆಯೇ ಅನೇಕ ಉಪನಿಷತ್ತುಗಳಿಗೂ ಇವರ ಟೀಕೆಗಳೇ ಆಧಿಕೃತ ವ್ಯಾಖ್ಯಾನ ಒದಗಿಸುತ್ತವೆ. ಹೈದಾರಾಬಾದು ಹಾಗೂ ಮಹಾರಾಷ್ಟ್ರ ವಿಭಾಗಗಳಲ್ಲಿ ದ್ವೈತಮತ ಹಾಗೂ ಭಕ್ತಿಮಾರ್ಗ ಪ್ರಚಾರಕ್ಕೆ ಹೆಚ್ಚಾಗಿ ಕಾರಣನರಾದವರಿವರು. ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿ ಕಾಗಿಣೀನದಿಯ ತೀರದಲ್ಲಿ ಇದ್ದ ಮಳಖೇಡ (ರಾಷ್ಟ್ರಕೂಟರ ಕಾಲದ ಮಾನ್ಯಖೇಟ)ಇವರ ಕಾರ್ಯಕೇಂದ್ರವಾಗಿತ್ತು.

     ಜಯತೀರ್ಥರ ಕಾಲ 14ನೆಯ ಶತಮಾನ. ಮಹಾರಾಷ್ಟ್ರದ ಅಂಚಿನಲ್ಲಿ ಇರುವ ಮಂಗಳವೇಡೆ ಗ್ರಾಮದ ದೇಶಪಾಂಡೆ ಮನೆತನದಲ್ಲಿ ಅವತರಿಸಿದ ಇವರು ಇಂದ್ರಾಂಶರು. ಇವರ ಬಾಲ್ಯನಾಮ ಧೋಂಡೂ ಪಂತ ಎಂದು. ತಂದೆ ರಘುನಾಥರಾಯ. ಶ್ರೀಮಂತಿಕೆ ಮತ್ತು ರಾಜಕೀಯ ಅಧಿಕಾರಗಳು ಹೇರಳವಾಗಿದ್ದ ಮನೆಯಲ್ಲಿ ಬೆಳೆದವನಾಗಿ ಧೋಂಡೂ ಪಂತ  ಸ್ವೇಚ್ಛೆಯಾಗಿ ಉಂಡು ತಿಂದು, ಕುದುರೆ ಸವಾರಿ, ಓಡಾಟಗಳಲ್ಲಿ ಕಾಲಕಳೆಯುತ್ತ ದೊಡ್ಡವನಾದ. ಒಮ್ಮೆ, ಮದುವೆಯಾದ ಹೊಸದರಲ್ಲಿಯೇ, ಕುದುರೆ ಸವಾರಿ ಹೊರಟ ಕುಮಾರ ದೇಶಪಾಂಡೆ ಭೀಮಾ ನದಿಯನ್ನು ತಲಪುವ ಹೊತ್ತಿಗೆ ಮಧ್ಯಾಹ್ನವಾಗಿ ಬಾಯಾರಿಕೆಯಾಯಿತಂತೆ. ಭೀಮಾನದಿಯಲ್ಲಿ ಕುದುರೆಯನ್ನು ಈಜುಬಿಟ್ಟು ಕುದುರೆ ಮುಳುಗುವಷ್ಟು ಬಂದ ನದೀ ಪ್ರವಾಹಕ್ಕೆ ಬಾಯಿ ಹಚ್ಚಿ ನೀರು ಕುಡಿಯಲಾರಂಭಿಸಿದನಂತೆ. ಎದುರಿನ ದಡದಲ್ಲಿ ಕುಳಿತು ಇದನ್ನೆಲ್ಲ ನೋಡುತ್ತಿದ್ದ ವೃದ್ಧ ತಾಪಸ ಯತಿ ಅಕ್ಷೋಭ್ಯತೀರ್ಥರು ಈ ತರುಣನನ್ನು ಕೂಗಿ ಕರೆದು ಕಿಂ ಪಶುಃ ಪೂರ್ವದೇಹೇ-ಹಿಂದಿನ ಜನ್ಮದಲ್ಲಿ ನೀನು ಪಶುವೇನಾದರೂ ಆಗಿದ್ದೆಯಾ-ಎಂದು ಕೇಳಿದರಂತೆ. ಈ ಪ್ರಶ್ನೆ ದೇಶಪಾಂಡೆಯ ಜಾಗ್ರತಿಗೆ ಕಾರಣವಾಯಿತು ; ಹಿಂದಿನ ಜನ್ಮದಲ್ಲಿ ತಾನು ಶ್ರೀ ಮಧ್ವಾಚಾರ್ಯರ ಗ್ರಂಥಭಾರವನ್ನು ಹೊತ್ತ ಎತ್ತೆಂಬ ಭಾವ ಸ್ಫುರಿಸಿ ತನ್ನ ಮೇಲೆ ದ್ವೈತ ವೇದಾಂತ ಜ್ಞಾನಸಂಪಾದನೆ ಹಾಗೂ ಸಮರ್ಥನೆಗಳ ಭಾರವಿದೆಯೆಂಬ ಪ್ರಜ್ಞೆ ಈತನಲ್ಲಿ ಉದಯವಾಯಿತು. ಯುವಕ ದೇಶಪಾಂಡೆ ಆಚೆಯ ದಡತಲಪಿ ಅಕ್ಷೋಬ್ಯತೀರ್ಥರ ಅಡಿಗೆರಗಿದ. ಈ ತೇಜಸ್ವೀ ಯುವಕನ ಭವಿಷ್ಯ ಅಕ್ಷೋಭ್ಯತೀರ್ಥರ ಕಣ್ಣೆದುರಿಗೆ ಸ್ವಷ್ಟವಾಗಿ ಕಂಡಿತು. ಯತಿಯ ಸಾನ್ನಿಧ್ಯ ತರುಣ ದೇಶ ಪಾಂಡೆಯನ್ನು ಪೂರ್ಣ ಪರಿವರ್ತಿಸಿತು. ಗೃಹಸ್ಥ ಜೀವನವನ್ನು ತ್ಯಜಿಸಿ ಅಕ್ಷೋಭ್ಯ ತೀರ್ಥರಿಂದ ಸಂನ್ಯಾಸ ದೀಕ್ಷೆ ಸ್ವೀಕರಿಸಿ ದೇಶಪಾಂಡೆಯಾಗಿದ್ದ ತರುಣ ಜಯತೀರ್ಥಯತಿಯಾದರು; ಅಕ್ಷೋಭ್ಯತೀರ್ಥರಲ್ಲಿಯೇ ಅಧ್ಯಯನ ಮಾಡಲು ತೊಡಗಿದರು.
     ಅಕ್ಷೋಭ್ಯ ತೀರ್ಥರು ಮಧ್ವಾಚಾರ್ಯರ ನಾಲ್ಕು ಜನ ಪ್ರಮುಖ ಶಿಷ್ಯರಲ್ಲಿ ಒಬ್ಬ, ಮಹಾತಪಸ್ವಿಗಳು, ವಿದ್ವಾಂಸರು. ಅವರ ಗರಡಿಯಲ್ಲಿ ತಯಾರದವರು ಜಯತೀರ್ಥರು. ಇವರಿಬ್ಬರೂ ಪ್ರಖ್ಯಾತ ಅದ್ವೈತ ಯತಿಗಳಾದ ವಿದ್ಯಾರಣ್ಯರ ಸಮಕಾಲೀನರು. ಇಬ್ಬರೂ ವಿದ್ಯಾರಣ್ಯರೊಂದಿಗೆ ಶಾಸ್ತ್ರರ್ಥ ವಿಚಾರಗಳನ್ನು ಚರ್ಚಿಸಿದಂತೆ ಉಲ್ಲೇಖಗಳೂ ಅಖ್ಯಾಯಿಕೆಗಳೂ ಇವೆ.
    ರಾಷ್ಟ್ರಕೂಟರ ಕಾಲದಲ್ಲಿ ಪ್ರಸಿದ್ಧಿ ಪಡೆದ ಮಾನ್ಯಖೇಟ, ಮಳಖೇಡವಾಗಿ ಮತ್ತೊಮ್ಮೆ ಪ್ರಸಿದ್ಧಿ ಪಡೆದುದು ಜಯತೀರ್ಥರಿಂದ. ಅಲ್ಲಿನ ಕಾಗಿಣಿನದಿಯ ದಂಡೆಯ ಮೆಲೆ ಜಯತೀರ್ಥರ ವೃಂದಾವನ ಇದೆ. ಜಯತೀರ್ಥರು  ಕುಳಿತು ಗ್ರಂಥರಚನೆ ಮಾಡುತ್ತಿದ್ದ ಗುಹೆಯೊಂದು ಗುಲ್ಬರ್ಗ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಯರಗೊಳವೆಂಬ ಗ್ರಾಮದ ಹತ್ತಿರದ ಮರಡಿಯ ಮೇಲೆ ಇದೆ. ಮಳಖೇಡದಲ್ಲಿ ಈಗಲೂ ಜಯತೀರ್ಥರ ಪುಣ್ಯತಿಥಿಯನ್ನು ಟೀಕಾರಾಯರ ಪಂಚಮಿಯೆಂದು ಪ್ರತಿ ವರ್ಷ ದೊಡ್ಡ ಪ್ರಮಾಣದಲ್ಲಿ ಆಚರಿಸುತ್ತಾರೆ. 

(ಜೆ.ಆರ್.ಪಿ.)