ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಯಪಾಲ
ಜಯಪಾಲ ಹತ್ತನೆಯ ಶತಮಾನದ ಕೊನೆಯಲ್ಲಿ ಕಾಂಗ್ರಾದಿಂದ ಆಫ್ಘಾನಿಸ್ತಾನದ ಲಂಘಾನ್ ವರೆಗಿನ ಪ್ರದೇಶವನ್ನು ಆಳುತ್ತಿದ್ದ ಉದಬಾಂಢಪುರದ ಹಿಂದುಷಾಹಿ ವಂಶದ ಒಬ್ಬ ದೊರೆ. 977-997ರಲ್ಲಿ ಘಜಿû್ನಯನ್ನಾಳುತ್ತಿದ್ದ ಸಬಕ್ತ್‍ಗಿನ್ ಇವನ ಸಮಕಾಲೀನ. ಮಧ್ಯ ಏಷ್ಯದ ಸಮನಿಡ್ ರಾಜರಿಗೆ ಸೇರಿದ ತುಖಾರಿಸ್ತಾನ್ ಮತ್ತು ಖುರಾಸಾನ್ ಪ್ರಾಂತ್ಯಗಳ ಅಧಿಕಾರಿಯಾಗಿದ್ದ ಅಲ್ಪ್ತ್‍ಗಿನ್‍ಗೆ ಮೊದಲು ಗುಲಾಮನಾಗಿದ್ದು, ತನ್ನ ಯಜಮಾನ ಜಾಬೂಲಿಸ್ತಾನವನ್ನು ಅಬೂಬಕರ್‍ನಿಂದ ಕಸಿದು ಅದರ ರಾಜಧಾನಿಯಾದ ಘಜಿû್ನಯಲ್ಲಿ ಒಂದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದಾಗ ಆತನ ಸೇನಾನಿಯಾಗಿ ನೇಮಕಗೊಂಡಿದ್ದ ಸಬಕ್ತ್‍ಗಿನ್ ಜಯಪಾಲನೊಡನೆ ಹಲವಾರು ಬಾರಿ ಕಾದಿದ. ಅಲ್ಪ್ತ್‍ಗಿನನ ಅನಂತರ ಇಷಾಖ್ ಮತ್ತು ಬಲ್ಕಾತ್ಗಿನ್ ಅನುಕ್ರಮವಾಗಿ ಘಜಿû್ನಯನ್ನಾಳಿದ ಮೇಲೆ ಅಧಿಕಾರಕ್ಕೆ ಬಂದ ಪೀರಾಯನ ಆಳ್ವಿಕೆಯ ಕಾಲದಲ್ಲಿ ಪ್ರಜೆಗಳು ದಂಗೆ ಎದ್ದಾಗ ಜಯಪಾಲ ತನ್ನ ಸೇನೆಯೊಂದನ್ನು ಘಜಿû್ನಗೆ ಕಳುಹಿಸಿದ. ಆದರೆ ಚರ್ಖ್ ಬಳಿ ಸಬಕ್ತ್‍ಗಿನ್ ಅದನ್ನು ಸೋಲಿಸಿದ. 977ರಲ್ಲಿ ಪೀರಾಯ್‍ನ ಸ್ಥಾನದಲ್ಲಿ ಸುಲ್ತಾನನಾದ ಸಬಕ್ತ್‍ಗಿನ್ ತನ್ನ ರಾಜ್ಯವನ್ನು ವಿಸ್ತರಿಸುವ ನೆಪದಲ್ಲಿ ಜಯಪಾಲನ ರಾಜ್ಯದ ಮೇಲೆ ಹಲವಾರು ಬಾರಿ ದಾಳಿ ಮಾಡಿದ. ಜಯಪಾಲ ಕೊನೆಗೆ ಅನೇಕ ಆನೆಗಳನ್ನೊಳಗೊಂಡ ದೊಡ್ಡ ಸೈನ್ಯವೊಂದನ್ನು ಸಿದ್ಧಗೊಳಿಸಿ ಸಬಕ್ತ್‍ಗಿನನನ್ನು ಎದುರಿಸಿದ. ಲಂಘಾನ್ ಮತ್ತು ಘಜಿû್ನಗಳ ನಡುವೆ ಇದ್ದ ಉಕ್ಬಫುeóÁಕ್ ಎಂಬಲ್ಲಿ ಭೀಕರ ಕಾಳಗ ನಡೆಯಿತು (986-87). ಜಯಪಾಲನ ಸೈನ್ಯವನ್ನು ಎದುರಿಸಲಾರದ ಸಬಕ್ತ್‍ಗಿನ್ ಮೋಸಕೃತ್ಯಗಳಿಂದ ಜಯಪಾಲನ ಸೈನಿಕರಲ್ಲಿ ಭೀತಿಯನ್ನು ಮೂಡಿಸಿದ. ಮಳೆಯಂತೆ ಸುರಿಯುತ್ತಿದ್ದ ಹಿಮದ ಚಳಿಯನ್ನು ಜಯಪಾಲನ ಸೈನಿಕರು ತಡೆಯಲಾರದೆ ಹೋದಾಗ ಯುದ್ಧ ನಿಲ್ಲಿಸಿ, ಶತ್ರುವಿನೊಡನೆ ಕರಾರು ಮಾಡಿಕೊಂಡ. ಆದರೆ ಸ್ವಸ್ಥಾನಕ್ಕೆ ಹಿಂದಿರುಗಿದ ಕೂಡಲೇ ಒಪ್ಪಂದವನ್ನು ಅಲ್ಲಗಳೆದಾಗ ಕೋಪಗೊಂಡ ಸಬಕ್ತ್‍ಗಿನ್ ಜಯಪಾಲನನ್ನು ಸೋಲಿಸಿ ಲಂಘಾನ್‍ವರೆಗಿನ ಪ್ರದೇಶವನ್ನು ವಶಪಡಿಸಿಕೊಂಡ. ಮತ್ತೊಮ್ಮೆ ಜಯಪಾಲ ತೋಮರ, ಚಾಹಮಾನ, ಚಂದೇಲ ಅರಸರು ಕಳುಹಿಸಿದ ಸ್ಯೆನ್ಯದ ನೆರವಿನೊಡನೆ ಸಬಕ್ತ್‍ಗಿನನನ್ನು ಎದುರಿಸಿದ. ಆ ಯುದ್ಧದಲ್ಲೂ ಅವನಿಗೆ ಸೋಲಾಯಿತು. ಆ ಬಾರಿ ಪೆಷಾವರ್ ವರೆಗೂ ಸಬಕ್ತ್‍ಗಿನನ ರಾಜ್ಯ ವಿಸ್ತರಿಸಿತು. ಸಬಕ್ತ್‍ಗಿನ್ 997ರಲ್ಲಿ ಸತ್ತು ಮರುವರ್ಷ ಆತನ ಮಗ ಮಹಮೂದ ಅಧಿಕಾರಕ್ಕೆ ಬಂದ. 1000 ಮತ್ತು 1001ರಲ್ಲಿ, ಎರಡು ಬಾರಿ, ಅವನೂ ಜಯಪಾಲನನ್ನು ಸೋಲಿಸಿದ. ಎರಡನೆಯ ಬಾರಿ ಸೋತಾಗ ಜಯಪಾಲ 25,000 ದೀನಾರಗಳನ್ನೂ 25 ಆನೆಗಳನ್ನೂ ಅವನಿಗೆ ಕಾಣಿಕೆಯಾಗಿ ಸಲ್ಲಿಸಲು ಒಪ್ಪಿ ತನ್ನ ಇಬ್ಬರು ಮಕ್ಕಳನ್ನೂ ಒತ್ತೆಯಾಗಿಡಬೇಕಾಯಿತು. ಇನ್ನೊಬ್ಬ ಮಗ ಆನಂದಪಾಲ ಆ ಕರಾರನ್ನು ಪಾಲಿಸಿ ರಾಜಕುಮಾರರನ್ನು ಬಿಡಿಸಿ ಕೊಂಡನಾದರೂ ಸೋಲಿನ ಹೊಡೆತಗಳಿಂದ ತನಗಾದ ಅವಮಾನವನ್ನು ತಾಳಲಾಗದ ಜಯಪಾಲ ಅಗ್ನಿಪ್ರವೇಶ ಮಾಡಿ ಮರಣಹೊಂದಿದ (1001). (ಎಚ್.ಕೆ.; ಎಸ್.ಎಚ್.ಐ.)