ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಯಪುರ

ವಿಕಿಸೋರ್ಸ್ ಇಂದ
Jump to navigation Jump to search

ಜಯಪುರ ಭಾರತ ಗಣರಾಜ್ಯದ ರಾಜಸ್ಥಾನ ರಾಜ್ಯದ ರಾಜಧಾನಿ; ಜಯಪುರ ಜಿಲ್ಲೆಯ ಆಡಳಿತ ಕೇಂದ್ರ. ರೈಲುಮಾರ್ಗದಲ್ಲಿ ಮುಂಬಯಿಯಿಂದ 696 ಮೈ. ಈಶಾನ್ಯಕ್ಕೆ, ದೆಹಲಿಯಿಂದ 191 ಮೈ. ನೈಋತ್ಯಕ್ಕೆ ಇದೆ. ಜನಸಂಖ್ಯೆ 6,15,258 (1971).

ಸಮುದ್ರಮಟ್ಟದಿಂದ 1.414 ಎತ್ತರದಲ್ಲಿರುವ ಜಯಪುರ ಭಾರತದ ಸುಂದರ ನಗರಗಳಲ್ಲಿ ಒಂದು. ಇಲ್ಲಿಯ ಹಲವು ಕಟ್ಟಡಗಳ ಬಣ್ಣ ಪಾಟಲ. ಆದ್ದರಿಂದ ಇದು ಪಾಟಲ ನಗರವೆಂದು ಪ್ರಸಿದ್ಧವಾಗಿದೆ. 1727ರಲ್ಲಿ ಮಹಾರಾಜ ಸವಾಯಿ ಜಯಸಿಂಹನಿಂದ ಸ್ಥಾಪಿತವಾದ ಈ ನಗರದ ರಚನಾಕೌಶಲ ವಿಶಿಷ್ಟವಾದ್ದು. ನಗರವನ್ನು ಚತುರಸ್ರಾಕಾರದ ಆರು ವಿಭಾಗಗಳಾಗಿ ರಚಿಸಲಾಗಿದೆ. ಈ ವಿಭಾಗಗಳ ನಡುವೆ 111 ಅಗಲದ ರಸ್ತೆಗಳುಂಟು. ನಗರದ ಸುತ್ತ ಎಂಟು ದ್ವಾರಗಳಿಂದ 20 x 9ಗಳ ಕೋಟೆ ಇದೆ.

ಹಿಂದಿನ ಜಯಪುರ ಸಂಸ್ಥಾನದ ದೊರೆಗಳು ಕಟ್ಟಿಸಿದ ಹಲವಾರು ಕಟ್ಟಡಗಳು ಈ ನಗರದ ಸೌಂದರ್ಯದವನ್ನು ಹೆಚ್ಚಿಸಿವೆ. ಅವುಗಳಲ್ಲಿ ಜಯಪುರದ ಜಂತರ್ ಮಂತರ್ ಬಲು ಪ್ರಖ್ಯಾತವಾದ್ದು. ಇದು ಜಯಸಿಂಹ ಕಟ್ಟಿಸಿದ ಖಗೋಳ ವೀಕ್ಷಣಾಲಯಗಳಲ್ಲೊಂದು (ನೋಡಿ- ಜಂತರ್-ಮಂತರ್) 1718-1734ರಲ್ಲಿ ಇದನ್ನು ಕಟ್ಟಲಾಯಿತು. ಜಯಪುರದ ಅರಮನೆ ಏಳು ಮಹಡಿಗಳ ಮಹಾಸೌಧ. ಪ್ರಮಾಣಬದ್ಧವಾಗಿ ಕಟ್ಟಿರುವ ದಿವಾನ್-ಇ-ಖಾಸ್, ಪೀತಮ್ ನಿವಾಸ್, ರಂಗಮಂದಿರ, ಶೋಭಾನಿವಾಸ-ಇವು ಈ ಅರಮನೆಯ ಮುಖ್ಯ ವಿಭಾಗಗಳು. 1616ರಲ್ಲಿ ಮೊಗಲ್ ದೊರೆ ಜಹಾಂಗೀರನೊಡನೆ ಪ್ರತಿನಿಧಿ ಸರ್ ಥಾಮಸ್ ರೋ ನಡೆಸಿದ ಮಾತುಕತೆಯ ಚಿತ್ರವೂ ಅಬುಲ್ ಫಜûಲನಿಂದ ಅನುವಾದಗೊಂಡ ಮಹಾಭಾರತದ ನಾಲ್ಕು ಹಸ್ತಪ್ರತಿಗಳೂ ಉಳ್ಳ ಈ ಗ್ರಂಥಾಲಯ ಇಲ್ಲಿದೆ. ಇದು ಹಿಂದಿನ ರಜಪೂತ ದೊರೆಗಳ ಸಾಹಿತ್ಯ ಮತ್ತು ಕಲಾವಿಭಾಗದ ಪ್ರತೀಕ. ಹಸಿರುಹುಲ್ಲಿನ ಹಾಸಿಗೆಗಳು. ಅಲ್ಲಲ್ಲಿ ತಿಳಿಗೊಳಗಳು, ನೀರುಬೀಳುಗಳು ಇರುವಂಥ ಉದ್ಯಾನದಿಂದ ಅರಮನೆಯ ಸೌಂದರ್ಯ ವರ್ಧಿಸಿದೆ. 1803ರಲ್ಲಿ ಪಟ್ಟಕ್ಕೆ ಬಂದ ರಾಜಾ ಜುಗ್ಗಲ್‍ಸಿಂಗ ಅರಮನೆಯ ಕಿಲಕಿಲಾಟದಿಂದ ದೂರವಿರ ಬೇಕೆಂದು ಬಯಸಿ ಈ ಉದ್ಯಾನವನದ ಜಲಾಶಯಗಳ ಪ್ರಶಾಂತ ವಾತಾವರಣದಲ್ಲಿಯೇ ಹೆಚ್ಚಾಗಿ ಕಾಲ ಕಳೆಯುತ್ತಿದ್ದನೆಂದೂ, ಅಲ್ಲಿಂದಲೇ ಅಂತಃಪುರದ ಏಕಾಂತದಲ್ಲಿದ್ದ ತನ್ನ ರಾಣಿಯರೊಡನೆ ತನ್ನ ನೆಚ್ಚಿನ ನಾಯಿಯೊಂದರ ಮುಖಾಂತರ ಪತ್ರ ವ್ಯವಹಾರ ಮಾಡುತ್ತಿದ್ದನೆಂದೂ ಪ್ರತೀತಿಯುಂಟು. ಅದರ ಪ್ರತೀಕವಾಗಿ ಉದ್ಯಾನವನದಲ್ಲಿ ಶಿಲಾಶ್ವಾನವೊಂದನ್ನು ನಿಲ್ಲಿಸಲಾಗಿದೆ. ಜಯಪುರದ ಅರಮನೆಯಲ್ಲಿ ಪಾರಿವಾಳಗಳ ಪಾಲನೆ-ಪೋಷಣೆಗಾಗಿ ಮಾಡಿದ್ದ ವ್ಯವಸ್ಥೆ ಪಾಶ್ಚಾತ್ಯ ಪ್ರವಾಸಿಗಳಿಗೆ ವೆನಿಸ್ ನಗರದ ಸೇಂಟ್ ಮಾಕ್ರ್ಸ್ ಚೌಕದ ನೆನಪು ಕೊಡುತ್ತದೆಂದು ಹೇಳಲಾಗಿದೆ.

ಮೊಸಳೆಗಳನ್ನು ಸಾಕಲು ಕಟ್ಟಿಸಿದ ಮೊಸಳೆ ಕೊಳ ಇನ್ನೊಂದು ವೈಶಿಷ್ಟ್ಯ. 1876ರಲ್ಲಿ ಸ್ವಿಂಟನ್ ಜೇಕಬ್ ರಚಿಸಿದ ಆಲ್ಬರ್ಟ್ ಹಾಲ್ ವಸ್ತು ಸಂಗ್ರಹಾಲಯದ ಕಟ್ಟಡದಲ್ಲಿ ಹಿಂದೂ-ಮುಸ್ಲಿಂ ಶಿಲ್ಪಶೈಲಿಗಳು ಸಂಗಮಿಸಿವೆ. ರಜಪೂತ ದೊರೆಗಳು ಬಳಸುತ್ತಿದ್ದ ಆಯುಧಗಳು ಮತ್ತು ವೇಷಭೂಷಣಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ. ವೈರಿಗಳ ಆಗಮನವನ್ನು ದೂರದಿಂದಲೇ ಗೊತ್ತು ಮಾಡಿಕೊಳ್ಳುವ ಹಂಚಿಕೆಗಾಗಿ ಮಹಾರಾಜ ಇತಾರೀ ಸಿಂಗ್ ಕಟ್ಟಿಸಿದ ಸ್ವರ್ಗಶೂಲಿ ಜಯಪುರದ ಮತ್ತೊಂದು ಮುಖ್ಯ ಅಕರ್ಷಣೆ. ಅಮರ ಮಹಲ್, ನಹರ್‍ಗಡ್, ಸಂಗಾನೇರ ಜೈನಮಂದಿರ-ಇವು ಇತರ ಕೆಲವು ಕಟ್ಟಡಗಳು. ನಗರದೊಳಗಿನ ಪ್ರಮುಖ ಸ್ಥಳಗಳಲ್ಲಿ ರಜಪೂತ ದೊರೆಗಳ ಶಿಲಾಪ್ರತಿಮೆಗಳು ಎದ್ದು ಕಾಣುತ್ತವೆ. ಜಯಪುರದ ಹತ್ತಿರದಲ್ಲಿರುವ ಅಂಬರ್ ಬೆಟ್ಟದಲ್ಲಿ ಪ್ರಾಚೀನ ರಾಜಧಾನಿಯ ಅವಶೇಷಗಳಿವೆ. ಜಯಪುರದಿಂದ ಪಶ್ಚಿಮಕ್ಕೆ 65 ಕಿಮೀ. ದೂರದಲ್ಲಿರುವ ಸಾಂಭಾರ್ ಸರೋವರ ರಮ್ಯವಾದ್ದು. ಜಯಪುರದಲ್ಲಿ 1947ರಲ್ಲಿ ರಾಜಸ್ಥಾನ ವಿಶ್ವವಿದ್ಯಾಲಯ ಸ್ಥಾಪಿತವಾಯಿತು.

ಜಯಪುರದ ಗುಡಿಗಾರಿಕೆ ಮತ್ತು ಇತರ ಕೈಕಸಬುಗಳು ಪ್ರಸಿದ್ಧವಾಗಿವೆ. ಬಾಂಧನೀ ಸೀರೆಗಳ ತಯಾರಿಕೆ, ಬಟ್ಟೆಗಳ ಮೇಲೆ ಚಿನ್ನದ ಅಚ್ಚು ಹಾಕುವುದು. ಎನಾಮೆಲ್ ಕೆಲಸ, ಕುಂದಣಗೆಲಸ, ಹರಳುಗಳ ತಯಾರಿಕೆ, ಕಬ್ಬಿಣ ಉಕ್ಕು ಹಿತ್ತಾಳೆ ಮತ್ತು ತಾಮ್ರ ವಸ್ತುಗಳ ಮೇಲೆ ಚಿಕನ್, ಮರೋರಿ ಮತ್ತು ಬೀಚಿ ಚಿತ್ರ ಕೊರೆತ, ಕತ್ತಿ-ಕಠಾರಿಗಳ ತಯಾರಿಕೆ-ಇವು ಮುಖ್ಯ ಕೈಕಸಬುಗಳು. ರಜಪೂತ ಶೈಲಿಯ ಬಳೆಗಳು, ಪಾದರಕ್ಷೆಗಳು, ಮಡಕೆಗಳು, ದಂತದ ಮತ್ತು ಶ್ವೇತ ಶಿಲೆಯ ಆಟಿಗೆ ಮತ್ತು ಮೂರ್ತಿಗಳು ಜಯಪುರದ ಮನೆಮನೆಯಲ್ಲೂ ಕಾಣಸಿಗುತ್ತಿವೆ. ಇವಕ್ಕೆ ದೇಶದ ವಿವಿಧ ಭಾಗಗಳಲ್ಲಿ ಬೇಡಿಕೆಯುಂಟು. ರಾಜಸ್ಥಾನದ ಇತರ ಭಾಗಗಳಿಂದಲೂ ದಿಲ್ಲಿ-ವಾರಾಣಸಿಗಳಿಂದಲೂ ಕಸುಬುದಾರರು ಬಂದು ಜಯಪುರದಲ್ಲಿ ನೆಲೆಸಿದ್ದಾರೆ.

ಜಯಪುರ ಜಿಲ್ಲೆ ಉ.ಆ. 26023-27051 ಮತ್ತು ಪೂ.ರೇ. 74055-76050 ನಡುವೆ ಇದೆ. ಈ ಜಿಲ್ಲೆಯ ಉತ್ತರಕ್ಕೆ ರಾಜಸ್ಥಾನದ ಶಿಕಾರ್ ಜಿಲ್ಲೆ ಮತ್ತು ಹರಿಯಾಣ, ದಕ್ಷಿಣಕ್ಕೆ ರಾಜಸ್ಥಾನದ ಟೋಂಕ್ ಜಿಲ್ಲೆ, ಪೂರ್ವಕ್ಕೆ ಆಳ್ವಾರ್ ಮತ್ತು ಸವಾಯಿ ಮಾಧೋಪುರ ಜಿಲ್ಲೆಗಳು, ಪಶ್ಚಿಮಕ್ಕೆ ನಾಗೌರ್ ಮತ್ತು ಅಜ್ಮೀರ್ ಜಿಲ್ಲೆಗಳು ಇದರ ಮೇರೆಗಳು. ಇಡೀ ರಾಜ್ಯದ 4.1% ರಷ್ಟು ಕ್ಷೇತ್ರ ಆವರಿಸಿರುವ ಈ ಜಿಲ್ಲೆಯ ವಿಸ್ತೀರ್ಣ 5,393 ಚ.ಮೈ.; ಜನಸಂಖ್ಯೆ 24,82,385 (1971). ಜಿಲ್ಲೆಯ ನೆಲ ಕಂದು ಮತ್ತು ಬೂದಿಬಣ್ಣದ ಉಸುಕು ಮಣ್ಣಿನಿಂದ ಕೂಡಿ ಫಲವತ್ತಾಗಿದೆ. ಬಂಗಾಂಗಾ, ಧೂಂಡ್, ಮೊರೆಲ್, ಮಾಸಿ ಮುಂತಾದ ನದಿಗಳ ನೀರಿನ ಆಸರೆ ಉಂಟು. ವರ್ಷಕ್ಕೆ ಸರಾಸರಿ 25-50 ಸೆಂಮೀ. ಮಳೆ ಆಗುತ್ತದೆ. ಇಲ್ಲಿಯ ಕನಿಷ್ಠ ಸರಾಸರಿ ಉಷ್ಣತೆ 15.00-17.50 ಸೆಂ., ಗರಿಷ್ಠ ಸರಾಸರಿ ಉಷ್ಣತೆ 30.00-32.50 ಸೆಂ. ಅರಾವಲೀ ಬೆಟ್ಟದ ಕೆಲವು ಭಾಗಗಳು ಈ ಜಿಲ್ಲೆಯಲ್ಲಿ ಜಾಚಿವೆ. ಬೆಲೆಬಾಳುವ ಹರಳುಗಳು, ಸುಣ್ಣಕಲ್ಲು, ಕಬ್ಬಿಣ ಅದುರು, ಗಾಜು ತಯಾರಿಕೆಗೆ ಉಪಯುಕ್ತವಾದ ಮರಳು ಈ ಜಿಲ್ಲೆಯಲ್ಲಿ ವಿಪುಲವಾಗಿ ದೊರೆಯುತ್ತವೆ; ಬೆಟ್ಟಗಳನ್ನು ಆವರಿಸಿರುವ ಕಾಡಿನ ಮರಗಳು ಸೌದೆಗೆ ಮಾತ್ರ ಉಪಯುಕ್ತ. ಸಾಂಭಾರ್ ಸರೋವರದಲ್ಲಿ ಉಪ್ಪು ತಯಾರಾಗುತ್ತದೆ. ನಕ್ಕಿ ಬಟ್ಟೆ, ಬಾಂಧನೀ ಸೀರೆಗಳು, ದಂತದ ಆಟಿಗೆಗಳು, ಶ್ವೇತ ಶಿಲಾಮೂರ್ತಿಗಳು ಹಿತ್ತಾಳೆಯ ಪಾತ್ರೆಗಳು ಈ ಜಿಲ್ಲೆಯಲ್ಲಿ ಉತ್ಪಾದನೆಯಾಗುವ, ಇಲ್ಲಿಂದ ರಫ್ತಾಗುವ ಸರಕುಗಳು.

ಜಯಪುರವನ್ನು ಮೊದಲು ಕಛವಾ ವಂಶದ ರಜಪೂತ ದೊರೆಗಳು ಆಳುತ್ತಿದ್ದರು. 1857ರ ಬಂಡಾಯದ ಸಮಯದಲ್ಲಿ ಜಯಪುರ ಸಂಸ್ಥಾನದ ದೊರೆ ಬ್ರಿಟಿಷರಿಗೆ ಬೆಂಬಲ ನೀಡಿದ್ದಕ್ಕೆ ಪ್ರತಿಯಾಗಿ ಅವನ ಸಂಸ್ಥಾನಕ್ಕೆ ಹೆಚ್ಚಿನ ಪ್ರದೇಶಗಳು ಸೇರಿದುವು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಜಯಪುರವನ್ನಾಳುತ್ತಿದ್ದವರು ಮಹಾರಾಜ ಸವಾಯ್ ಮಾನ್‍ಸಿಂಗ್. 1949ರ ಮಾರ್ಚ್ 30ರಂದು ಜಯಪುರ ಸಂಸ್ಥಾನ ರಾಜಸ್ಥಾನದಲ್ಲಿ ವಿಲೀನಗೊಂಡಿತು. (ಬಿ.ಎ.ಎಸ್.)