ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಲತಲ ಪ್ರಾಣಿವರ್ಗ

ವಿಕಿಸೋರ್ಸ್ದಿಂದ

ಜಲತಲ ಪ್ರಾಣಿವರ್ಗ - ಸಾಗರವನ್ನು ಆಳದ ಆಧಾರದ ಮೇಲೆ ಮೂರು ಮುಖ್ಯ ಭಾಗಗಳನ್ನಾಗಿ ವಿಂಗಡಿಸಲಾಗಿದೆ: ಬ್ಯಾತೀಯಲ್ (2000 ಮೀ. ಗಿಂತ ಕಡಿಮೆ ಆಳದ ಪ್ರದೇಶ). ಜಲತಲ (ಅಬಿಸಲ್, 2000-6000 ಮೀ. ಆಳದ ಪ್ರದೇಶ) ಮತ್ತು ಹೇಡಲ್ (6000 ಮೀ. ಗಿಂತ ಹೆಚ್ಚು ಆಳದ ಪ್ರದೇಶ). ಬ್ಯಾತೀಯಲ್ ಭಾಗ ಸಾಗರಗಳ ಒಟ್ಟು ವಿಸ್ತೀರ್ಣದ 14.8%ರಷ್ಟೂ, ಜಲತಲ ಭಾಗ 84%ರಷ್ಟೂ, ಹೇಡಲ್ ಭಾಗ 1.2%ರಷ್ಟೂ ಇವೆ. ಜಲತಲ ಪ್ರದೇಶದ ವಿಸ್ತೀರ್ಣ ಭೂಮಿಯ ಸುಮಾರು ಎರಡರಷ್ಟು ಇದೆ. ಈ ಪ್ರದೇಶದಲ್ಲಿ ವಾಸಿಸುವ ಪ್ರಾಣಿ ಸಮೂಹವೇ ಜಲತಲ ಜೀವಿಗಳು. (ಅಬಿಸಲ್ ಫಾನ) ಜಲತಲ ಪ್ರದೇಶ ತನ್ನ ಭೌತಲಕ್ಷಣಗಳ ವೈಪರೀತ್ಯಗಳಿಗೆ ಹೆಸರಾಗಿದೆ. ಇದು ಸಾಗರದ ಉಳಿದ ಭಾಗಗಳಿಂತ ವಿಭಿನ್ನವಾಗಿದೆ. ಇಲ್ಲಿಯ ಪರಿಸ್ಥಿತಿಗಳಲ್ಲಿ ಹೆಚ್ಚು ಬದಲಾವಣೆ ಸಾಧ್ಯವಿಲ್ಲ. ಸೂರ್ಯನ ಬೆಳಕು ಜಲತಲ ಪ್ರದೇಶದ ಆಳಕ್ಕೆ ಇಳಿಯುವುದಿಲ್ಲವಾದ್ದರಿಂದ ಇಲ್ಲಿ ಸದಾ ಕಾರ್ಗತ್ತಲು ತುಂಬಿರುತ್ತದೆ; ಅಂತೆಯೇ ಉಷ್ಣತೆ ಕೂಡ 0 ಸೆ. ಆಸುಪಾಸಿನಲ್ಲಿ ಇದೆ. ನೀರಿನ ಒತ್ತಡವೂ ಇಲ್ಲಿ ಅತ್ಯಧಿಕ (ಪ್ರತಿ 10 ಮೀ. ಆಳಕ್ಕೆ ಒಂದು ವಾಯುಮಾನ ಚದರ ಅಂಗುಲಕ್ಕೆ 14.7 ಟb ದರದಲ್ಲಿ ಒತ್ತಡ ಹೆಚ್ಚುತ್ತಾ ಹೋಗುತ್ತದೆ.) ನೀರು ಸಹ ಹೆಚ್ಚು ಕಡಿಮೆ ಚಲಿಸದೆ ಸ್ತಬ್ಧವಾಗಿರುತ್ತದೆಯಾದರೂ ಅಲ್ಲಲ್ಲಿ ಅತ್ಯಂತ ಮಂದಗತಿಯಲ್ಲಿ ಚಲಿಸುವ ಪ್ರವಾಹಗಳಿರುವುದರಿಂದ ಈ ಪ್ರದೇಶದಲ್ಲಿ ಜೀವಿಸುವ ಪ್ರಾಣಿಗಳಿಗೆ ಅಗತ್ಯವಾದ ಆಕ್ಸಿಜನ್ ಪೂರೈಕೆಯಾಗುತ್ತದೆ. ಈ ಪ್ರದೇಶದ ನೆಲ ಬಹುವಾಗಿ ಮೈದಾನ ರೀತಿಯಿದ್ದು; ಅಲ್ಲಲ್ಲಿ ಸಣ್ಣಪುಟ್ಟ ದಿಣ್ಣೆಗಳಿವೆ ಅಷ್ಟೆ. ಕೆಲವೆಡೆ ಆಳ ಕಣಿವೆಗಳೂ ಬೆಟ್ಟದಂಥ ದಿಬ್ಬಗಳೂ ಇರುವುದುಂಟು. ತಳದ ಮೇಲೆಲ್ಲ ಮೆತುವಾದ ಮಣ್ಣು (ಉಸುಬು) ಹರಡಿದೆ. ಇದರಲ್ಲಿ ಅಗ್ನಿಪರ್ವತಗಳಿಂದ ಉಂಟಾಗುವ ಕೆಂಪು ಜೇಡಿಮಣ್ಣು, ಸಾಗರ ತಳದಲ್ಲಿನ ಶಿಲೆಗಳ ಶಿಥಿಲೀಕರಣದಿಂದ ಉತ್ಪತ್ತಿಯಾಗುವ ಖನಿಜಯುಕ್ತ ಮಣ್ಣು ಹಾಗೂ ಸತ್ತುಹೋದ ಪ್ಲಾವಕ, ಪ್ರೋಟೋeóÉೂೀವ, ಮತ್ತು ಮೃದ್ವಂಗಿಗಳ ದೇಹಾವಶೇಷಗಳು ಅರ್ಧಂಬರ್ಧ ಕೊಳೆತಿರುವ ಚಿಪ್ಪು ಮತ್ತು ಹಂದರಗಳು ಶೇಖರವಾಗಿರಬಹುದು. ರೇಡಿಯಮ್, ಯುರೇನಿಯಮ್ ಮುಂತಾದ ವಿಕಿರಣಪಟು ವಸ್ತುಗಳೂ ಇರಬಹುದು. ಈ ಉಸುಬಿನಲ್ಲಿ ಇರುವ ವಿಶೇಷ ದೇಹಾವಶೇಷಗಳ ಆಧಾರದ ಮೇಲೆ ಇದನ್ನು ಪೊರ್ಯಾಮಿನಿಫೆರನ್, ರೇಡಿಯೊಲೇರಿಯನ್, ಟೀರೋಪಾಡ್ ಹಾಗೂ ಡಯಾಟಮ್ ಉಸುಬುಗಳೆಂದು ವಿಭಾಗಿಸಲಾಗಿದೆ. ಜಲತಲ ಪ್ರದೇಶದ ಸ್ಥಿತಿ-ಗತಿಗಳು ಅನೇಕ ಅನ್ವೇಷಣೆಗಳಿಂದ ತಿಳಿದುಬಂದಿದೆ. ಪ್ರಪ್ರಥಮವಾಗಿ ಬ್ರಿಟಿಷ್ ಚಾಲೆಂಜರ್ ಹಡಗು 1873-76ರ ಅವಧಿಯಲ್ಲಿ ಯಾನ ಕೈಗೊಂಡು ಸಮುದ್ರ ಜೀವಿಗಳ ಮತ್ತು ಅವುಗಳ ಪರಿಸರದ ವಿಚಾರವನ್ನು ವೈಜ್ಞಾನಿಕವಾಗಿ ತಿಳಿಸಿ ಕಡಲ ಪರಿಸರದ ಅಧ್ಯಯನಕ್ಕೆ ತಳಹದಿಯನ್ನು ಹಾಕಿತು. ಆಮೇಲೆ ಮಾಡಿದ ಸಮುದ್ರಯಾನಗಳು ಮುಖ್ಯವಾಗಿ ನೀರಿನ ಪರಿಸರದ ಸಂಶೋಧನೆಯನ್ನು ಕೈಗೊಂಡವು. ಇವುಗಳಲ್ಲಿ ಸ್ವೀಡನ್ನಿನ ಆಲ್ಬಟ್ರಾಸ್ (1947-48), ರಷ್ಯದ ವಿಟಿಯಾಜ್ (1949), ಡೆನ್ಮಾರ್ಕಿನ ಗಲಾತಿಯ (1951), ಅಮೆರಿಕದ ವೆಮ (1958) ಮತ್ತು ಎಲ್ಟಾ ಸಮುದ್ರಯಾನಗಳು ಕೆಲವು. ಇವು ಅನೇಕ ನವೀನ ಯಂತ್ರೋಪಕರಣಗಳ ಸಹಾಯದಿಂದ ಕಡಲಿನ ಬಗ್ಗೆ ಮಾಹಿತಿಗಳನ್ನೂ ಸಂಪಾದಿಸಿವೆ. ಉದಾಹರಣೆಗೆ ಗಲಾತಿಯ ಸಮುದ್ರಯಾನದಲ್ಲಿ ಫಿಲಿಪೀನ್ಸ್ ಬಳಿ ಸಮುದ್ರದಲ್ಲಿನ 1019 ಮೀ. ಆಳದ (33600') ಕಣಿವೆಯಿಂದ ಅನೇಕ ಪ್ರಾಣಿಗಳನ್ನೂ ಕಲ್ಲು ಮಣ್ಣನ್ನೂ ಮೇಲಕ್ಕೆ ತರಲಾಯಿತು.

ಪ್ರಾಣಿವರ್ಗ : ಇವು ಜಲತಲ ಪ್ರದೇಶದ ವೈಪರೀತ್ಯ ಲಕ್ಷಣಗಳಿಗೆ ಹೊಂದಿಕೊಂಡಿವೆ. ಆಹಾರದ ಅಭಾವ ಮತ್ತು ಪರಿಸರದ ಪ್ರತಿಕೂಲ ಪರಿಸ್ಥಿಗಳಿಂದ ಸಂಖ್ಯಾಕ್ಷೀಣತೆ ಇದ್ದರೂ ಕೆಲವು ಅಪೂರ್ವ ಬಗೆಯ ಪ್ರಾಣಿಗಳನ್ನು ಗುರುತಿಸಬಹುದು. ನೀರಿನಲ್ಲಿ ಉಸಿರಾಡುವ ಎಲ್ಲ ಗುಂಪಿನ ಪ್ರಾಣಿಗಳ ಪ್ರತಿನಿಧಿಗಳೂ, ಅಂದರೆ ಪ್ರೋಟೋeóÉೂೀವ ಗುಂಪಿನಿಂದ ಕಶೇರುಕಗಳ ವರೆಗೆ, ಇಲ್ಲಿವೆ. ಆದರೆ ಮೀನಿಗಿಂತ ಹೆಚ್ಚು ವಿಕಾಸಗೊಂಡ, ಶ್ವಾಸಕೋಶಿ ಕಶೇರುಕಗಳಾವುವೂ ಇಲ್ಲಿಲ್ಲ.

ಜಲತಲ ಪ್ರದೇಶ ಜೀವಿಗಳನ್ನು ಮುಂದೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

I ಅಕಶೇರುಕಗಳು: 1 ಪ್ರೋಟೋeóÉೂೀವ: ಬಹು ಹೆಚ್ಚಾಗಿ ಕಾಣಬರುವ ಗುಂಪು. ಇದರಲ್ಲಿ ಪೆಲಾಜಿಕ್ ರೇಡಿಯೊಲೇರಿಯನ್‍ಗಳು ಹೆಚ್ಚಾಗಿವೆ.

2 ಸ್ಪಂಜುಗಳು : ಮುಖ್ಯವಾಗಿ ಹೆಕ್ಸಾಕ್ಟಿನೆಲ್ಲಿಡ ಗುಂಪಿನ ಪ್ರಭೇದಗಳಿಂದ ಕೂಡಿವೆ.

3 ಕುಟುಕು ಕಣವಂತಗಳು : ಇವುಗಳಲ್ಲಿ ಸಾಮಾನ್ಯ ಬಗೆಯ ಬಟ್ಟಲು ಹವಳಗಳೂ (ಉದಾಹರಣೆಗೆ ಫ್ಲ್ಯಾಬೆಲಮ್) ಕಡಲ ಲೇಖಣಿಗಳೂ (ಉದಾಹರಣೆಗೆ ಅಂಬೆಲುಲ) ಕಡಲ ಹೂಗಳು ಇವೆ. 12000 ಮೀ. ಆಳದಲ್ಲಿ ಕಡಲ ಬೀಸಣಿಗೆಗಳೂ, ಅಪರೂಪದ ಕಡಲ ಹೂಗಳೂ ಸಿಕ್ಕಿವೆ.

4 ನೆಮರ್ಟೀನಿಯ : ಈ ಪ್ರಾಣಿಗಳು ಬಲು ಕಡಿಮೆ.

5 ವಲಯವಂತಗಳು : ವಿವಿಧ ರೀತಿಯ ಪಾಲಿಕೀಟ್ ಹುಳುಗಳು ಹೆಚ್ಚು ಸಂಖ್ಯೆಯಲ್ಲಿವೆ. ಇವುಗಳಲ್ಲಿ ಕೊಳವೆಗಳ ಹುಳುಗಳೇ ಹೆಚ್ಚು. 12000 ಮೀ. ಆಳದಲ್ಲಿ ಸಾಮಾನ್ಯರೀತಿಯ ಪಾಲಿಕೀಟ್ ಹುಳುಗಳು ಸಿಕ್ಕಿವೆ.

6 ಸಂಧಿಪದಿಗಳು : ಕಠಿಣಚರ್ಮಿ ವರ್ಗದ ಅನೇಕ ಪ್ರಭೇದಗಳು 4000-12000 ಮೀ. ಆಳದಲ್ಲಿರುವುದು ಕಂಡುಬಂದಿದೆ. ಆಸ್ಟ್ರಕೋಡ (4000 ಮೀ.) ದಶಪಾದಿ ಮತ್ತು ಸೀಗಡಿಗಳು (5000 ಮೀ.), ಬಾರ್ನಕಲ್ (6000 ಮೀ.), ಐಸೊಪಾಡ್ ಮತ್ತು ಆಂಫಿಪಾಡ್ ಪ್ರಾಣಿಗಳು ವಿವಿಧ ಆಳಗಳಲ್ಲಿ ವಾಸಿಸುವುದು ಗೋಚರವಾಗಿದೆ. ದಶಪಾದಿಗಳಲ್ಲಿ ಎರಿಯೊನಿಡೀ ಜಾತಿಯ ಪ್ರಭೇದಗಳಿವೆ. ನಿಜವಾದ ಏಡಿಗಳು ಇಲ್ಲ. ಆಂಫಿಪಾಡ್ ಪ್ರಾಣಿಗಳು 12000 ಮೀ. ಆಳದಲ್ಲಿಯೂ ಜೀವಿಸುವುವು. ಐಸೊಪಾಡ್ ಜೀವಿಗಳು 4500-12000 ಮೀ. ಆಳದಲ್ಲಿಯೂ ಇವೆ. ಈ ಗುಂಪಿನ ಬೇತಿನೋಮಸ್ ಜೈಗ್ಯಾಂಟಿಯಸ್ ಎಂಬ ಪ್ರಭೇದ 27.5 ಸೆಂ.ಮೀ. x 12 ಸೆಂ.ಮೀ. ನಷ್ಟು ದೊಡ್ಡದಾಗಿದೆ. ಆಳನೀರಿನ ಐಸೊಪಾಡುಗಳಲ್ಲಿ ಸುಮಾರು 58 ಪ್ರಭೇದಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 8 ಪ್ರಭೇದಗಳು ಸಾಮಾನ್ಯವಾಗಿ ಎಲ್ಲ ಜಲತಲ ಪ್ರದೇಶಗಳಲ್ಲಿ ಕಂಡು ಬಂದಿವೆ. ಹ್ಯಾಪ್ಲೊಸಿಸ್ಕಸ್ ಜಾತಿಯ ಪ್ರಾಣಿಗಳು ಅನೇಕ ಕಡೆ ಸಿಕ್ಕಿವೆ. ಮಿಕ್ಕವು ಕೆಲವು ಪ್ರದೇಶಗಳಲ್ಲಿ ಮಾತ್ರ ಸೀಮಿತವಾಗಿವೆ. (ಉದಾಹರಣೆಗೆ ಮೆಸಿಡೊತಿ ಜಾತಿ ಆರ್ಕ್‍ಟಿಕ್ ಸಮುದ್ರದಲ್ಲೂ, ಸೆರೊಲಿಸ್ ಜಾತಿ ಅಂಟಾರ್ಕ್‍ಟಿಕ್ ಸಮುದ್ರದಲ್ಲೂ ವಾಸಿಸುವುವು) ಆಳನೀರಿನ ಕಡಲ ಜೇಡಗಳು ಬಹು ದೊಡ್ಡ ಗಾತ್ರದವು.

7 ಮೃದ್ವಂಗಿಗಳು : ಮನೊಪ್ಲಕಾಫೊರ ಗುಂಪಿನ ನಿಯೊಪಿಲಿನ ಗಲಾತಿಯ ಮುಖ್ಯವಾದವು. 350 ಮಿಲಿಯನ್ ವರ್ಷಗಳ ಹಿಂದೆ ಜೀವಿಸಿದ್ದ ಪಿಲಿನ ಜಾತಿಯ ಪ್ರಾಣಿಗಳ ಗುಣಗಳಿರುವ ಇದನ್ನು ಜೀವಂತ ಫಾಸಿಲ್ ಎಂದು ಕರೆಯುವರು. ಸ್ಕಾಫೊಪೊಡ ಮೃದ್ವಂಗಿಗಳು ಅಪರೂಪವಾಗಿ ಹೆಚ್ಚಾಗಿ ಪ್ರತಿನಿಧಿಸಿವೆ. ಜೋಡಿಚಿಪ್ಪಿನ ಮೃದ್ವಂಗಿಗಳು 6000-12000 ಮೀ. ಆಳದಲ್ಲಿ ಸಿಕ್ಕಿವೆ. ಆಳ ಸಮುದ್ರದಲ್ಲಿ ಇವುಗಳ ಪ್ರಭೇದಗಳು ಮತ್ತು ಸಂಖ್ಯೆ ಬಲುಕಡಿಮೆ. 6000 ಮೀ. ಆಳದಲ್ಲಿ ಮೈಟಲಿಸ್ ಪ್ಯಾಸ್ಕೊಲೈನಸ್ ಪ್ರಭೇದ ಸಿಕ್ಕಿದೆ. ಗ್ಯಾಸ್ಟ್ರಾಪೊಡ ಪ್ರಾಣಿಗಳೂ ಕಡಿಮೆ ಸಂಖ್ಯೆಯಲ್ಲಿವೆ. ಇವು 2000-4000 ಮೀ. ಆಳದಲ್ಲಿ ಸಿಕ್ಕಿವೆ. ಸ್ಕ್ವಿಡ್ಡುಗಳು ಮತ್ತು ಅಷ್ಟಪಾದಿಗಳು (ಶಿರೋಪಾದಿಗಳೂ) ಹೆಚ್ಚಾಗಿ ಆಳ ಸಮುದ್ರದಲ್ಲಿ ವಾಸಿಸುತ್ತವೆ.

8 ಕಂಟಕ ಚರ್ಮಿಗಳು : ಈ ಗುಂಪಿನ ಎಲ್ಲ ವಗರ್ಗಳ ಪ್ರಾಣಿಗಳೂ ಬಹು ಹೆಚ್ಚಾಗಿ ಸಿಕ್ಕಿವೆ ನಕ್ಷತ್ರ ಮೀನಿನ ವರ್ಗದಲ್ಲಿ ಪೊರ್ಸೆಲ್ಲನ್ ಆಸ್ಟರಿಡೀ ಗುಂಪಿನವು 6035 ಮೀ. ಆಳದವರೆಗೂ ವ್ಯಾಪಿಸಿವೆ. ಈ ಆಳದಲ್ಲಿ ಆಲ್ಬಟ್ರೊಸ್ಸಾಸ್ಟರ್ ರಿಚಾರ್ಡಿ ಪ್ರಭೇದ ಸಿಕ್ಕಿತು. ಬೆಂತೊಪೆಕ್ಟಿನಿಡೀ, ಆಸ್ಟ್ರೊಪೆಕ್ಟಿನಡೀ ಮತ್ತು ಗೊನಿಯಾಸ್ಟರಿಡೀ ಗುಂಪಿನ ಪ್ರಾಣಿಗಳೂ ಅಬಿಸಲ್ ಪ್ರದೇಶದಲ್ಲಿವೆ. ಬ್ರಿಟಲ್ ಸ್ಟಾರ್ ವರ್ಗದ ಓಫಿಯೊಮೂಸಿಯಮ್, ಓಫಿಯೂರ ಜಾತಿಯವು 5000 ಮೀ. ಆಳದವರೆಗೂ ಪ್ರಸರಿಸಿವೆ. ಕಡಲಕುಡಿಶೆ ಗುಂಪಿನ ಅನೇಕ ಜಾತಿಯ ಪ್ರಾಣಿಗಳು 1000-4950 ಮೀ. ಆಳದಲ್ಲಿ ವಾಸಿಸುವುವು. ಎಕೈನೊತ್ಯೂರಿಡೀ, ಸಲೆನಡೀ, ಆಸ್ಟಿಡೊಡಯಾಡೆಮಾಟಿಡೀ, ಯೂರೆನಿಡೀ ಕುಟುಂಬದ ಪ್ರಾಣಿಗಳು ಮುಖ್ಯವಾಗಿ ಸೇರಿವೆ. ಕ್ರೈನಾಯ್ಡಿಯ ವರ್ಗದಲ್ಲಿ ತೊಟ್ಟಿರುವ ಮತ್ತು ಇಲ್ಲದಿರುವ ಪ್ರಾಣಿಗಳು 5000 ಮೀ. ಆಳದವರೆಗೂ ಪ್ರಸರಿಸಿವೆ. ಸಾಧಾರಣವಾಗಿ ಹಯೊಕ್ರೈನಿಡೀ ಮತ್ತು ಮಿಲ್ಲೇರಿಕ್ರೈನಿಡೀ ಗುಂಪಿನ ಪ್ರಾಣಿಗಳು ಆಳ ಸಮುದ್ರದ ವಾಸಿಗಳು. ಕಡಲ ಸೌತೆ ಗುಂಪಿನಲ್ಲಿ ಅನೇಕ ಜಾತಿಯವು ಆಳ ಸಮುದ್ರವಾಸಿಗಳು, ಎಲ್ಯಾಸಿಪೊಡ ಜಾತಿಯವು. 2000 ಮೀ. ಕೆಳಗಿನ ನೀರಿನಲ್ಲೂ ಸಿವಲಾಕ್ಟಿಡ ಜಾತಿಯವು 1000-5000 ಮೀ. ಆಳದಲ್ಲೂ ಜೀವಿಸಿವೆ. ಕೆಲವು 12000 ಮೀ. ಆಳದಲ್ಲೂ ಸಿಕ್ಕಿವೆ. ಇವಲ್ಲದೆ ಕೆಲವು ಸಣ್ಣ ಗುಂಪು ಗುಂಪುಗಳೂ ಆಳ ಸಮುದ್ರದಲ್ಲಿ ವಾಸಿಸುವುವು.

9 ಬ್ರಯೋeóÉೂೀವ ಜೀವಿಗಳು: 3000-5720 ಮೀ. ಆಳ ನೀರಿನಲ್ಲಿ ವಾಸಿಸುವುವು.

10 ಬ್ರ್ಯಾಕಿಯೊಪೊಡ ಪ್ರಾಣಿಗಳು : 1800-5500 ಮೀ. ಆಳದವರೆಗೂ ವ್ಯಾಪಿಸಿವೆ.

11 ಕೀಟೊನ್ಯಾತ : ಈ ಪ್ರಾಣಿಗಳು ಸಾಮಾನ್ಯವಾಗಿ 2000-3600 ಮೀ. ಆಳದಲ್ಲಿ ಸಿಕ್ಕಿವೆ. ಹೆಟರೊಕ್ರೋನಿಯ ಮಿರ್ಯಾಬಿಲಿಸ್ ಪ್ರಭೇದ 5000 ಮೀ. ಆಳದಲ್ಲಿ ಕಂಡು ಬಂದಿತು. ಸೈಪಂಕ್ಯುಲಾಯ್ಡಿಯ ಜೀವಿಗಳ ವ್ಯಾಪ್ತಿ 1900-8210 ಮೀ. ಆಳದವರೆಗೂ ಹೋಗುತ್ತದೆ. ಅನೇಕ ಪ್ರಭೇದಗಳು ನ್ಯೂಜಿûಲೆಂಡ್ ಹತ್ತಿರದ ಕಾರ್ಮಡೆಕ್ ದ್ವೀಪ ಸಮುದ್ರ ಕಣಿವೆಯಲ್ಲಿ ಕಂಡುಬಂದಿವೆ.

I I ಪ್ರೋಟೊಕಾರ್ಡೇಟ : ಈ ಗುಂಪಿನ ಟ್ಯೂನಿಕೇಟುಗಳಲ್ಲಿ ಅನೇಕ ಅಸಿಡಿಯನ್ ಪ್ರಾಣಿಗಳು ಜಲತಲ ಪ್ರದೇಶದಲ್ಲಿ ಸಿಕ್ಕಿವೆ.

I I I ಕಶೇರುಕಗಳು : ವಿವಿಧ ರೀತಿಯ ಮೀನುಗಳು ಈ ಪ್ರದೇಶದಲ್ಲಿವೆ. ಕೆಲವು ಪ್ರಭೇದಗಳಲ್ಲಿ ಬಹು ವಿಶಿಷ್ಟ ಲಕ್ಷಣಗಳಿವೆ.

ಮೃದ್ವಸ್ಥಿ ಮೀನುಗಳು ಕೆಲವು ಮಾತ್ರ. ಕೆಲವು ಶಾರ್ಕ್ ಮೀನುಗಳು 1500-3000 ಮೀ. ಆಳದಲ್ಲಿ ವಾಸಿಸುವುವು. ಕೈಮೀರ ಮೀನುಗಳು 2000 ಮೀ. ಆಳದಲ್ಲಿ ಕಂಡುಬಂದಿವೆ. ಎಲುಬುಮೀನುಗಳ ಗುಂಪಿನಲ್ಲಿ ಅನೇಕ ಜಾತಿಯ ಟೀಲಿಯಾಸ್ಟಿಯೈ ಮೀನುಗಳು ಜಲತಲ ಪ್ರದೇಶದಲ್ಲಿ ವಾಸಿಸುವುವು. ಕೆಲವು ಪ್ರಭೇದಗಳು 8200 m. ಆಳದವರೆಗೂ ಪ್ರಸರಿಸಿವೆ. ಗಲಾತಿಯ ಸಮುದ್ರಯಾನ ತಂಡದವರು ನ್ಯೂಜಿûಲ್ಯಾಂಡ್ ಬಳಿಯ ಕಾರ್ನಡೆಕ್ ದ್ವೀಪ ಸಮುದ್ರದ 8200 ಮೀ. ಆಳದ ಕಣಿವೆಯೊಂದರಿಂದ 18 ಮೀನು ಪ್ರಭೇದಗಳನ್ನು ಗುರುತಿಸಿದರು. ಅದೇ ಸಮುದ್ರಯಾನದಲ್ಲಿ 3590 ಮೀ. ಆಳದಲ್ಲಿ ಗಲಾತಿಯ ತಾಮ ಆಕ್ಸೆಲಿ ಎಂಬ ವಿಚಿತ್ರವಾದ ದೀಪ್ತಿ ಸೂಸುವ ಗಾಳದ ಮೀನು, 1090 ಮೀ. ಆಳದಲ್ಲಿ ತನ್ನ ಬಾಯನ್ನು ಸಲಿಕೆ ರೀತಿ ಮುಂಚಾಚುವ ಟಿಪ್ಲೊನಸ್ ಎಂಬ ಕುರುಡು ಮೀನೂ 7130 ಮೀ. ಆಳದಲ್ಲಿ ಬಾಸೊಜೈಗ್ಯಾಸ್ ಮೀನುಗಳೂ ಸಿಕ್ಕಿದವು.

ಸಾಮಾನ್ಯವಾಗಿ 6000 ಮೀ. ಆಳಕ್ಕಿಂತ ಕೆಳಗೆ ಮೀನುಗಳು ವಾಸಿಸುವುದಿಲ್ಲ ಎಂದು ತಿಳಿದುಬಂದಿದೆ. 1951ರವರೆಗೆ ಸುಮಾರು 8 ಪ್ರಭೇದಗಳು ಮಾತ್ರ ಈ ಆಳದಲ್ಲಿ ಸಿಕ್ಕಿವೆ. ಆದ್ದರಿಂದ ಆಳ ಸಮುದ್ರದಲ್ಲಿ ಹಿಂಸ್ರ ಮೀನುಗಳ ಹಾವಳಿ ಕಡಿಮೆಯಾಗಿ ಸಮುದ್ರ ತಳದಲ್ಲಿ ವಾಸಿಸುವ ಮಿಕ್ಕ ಜೀವಿಗಳಿಗೆ ಹೆಚ್ಚು ನೆಮ್ಮದಿಯುಂಟು.

ಜಲತಲ ಪ್ರದೇಶದ ಪ್ರಾಣಿಗಳ ಹೊಂದಾಣಿಕೆಗಳು : ಜಲತಲ ಪ್ರದೇಶದ ಪ್ರತಿಕೂಲ ಪರಿಸರದಲ್ಲಿ ಜೀವಿಸಲು ಅನುಕೂಲಿಸುವಂತೆ ಇಲ್ಲಿಯ ಪ್ರಾಣಿಗಳಲ್ಲಿ ಅನೇಕ ಹೊಂದಾಣಿಕೆಗಳನ್ನು ಕಾಣಬಹುದು. ಆಸರೆಯನ್ನು ಹಿಡಿದುಕೊಳ್ಳಲು ಅನುಕೂಲವಾದ ನೀಳವಾದ ಸ್ಪಿಕ್ಯೂಲುಗಳು ಅಥವಾ ತೊಟ್ಟುಗಳು ಹೆಕ್ಸಾಕ್ಟಿನೆಲ್ಲಿಡ ಸ್ಪಂಜುಗಳಲ್ಲಿಯೂ ಕಡಲ ಲೇಖಣಿ, ಕಡಲ ಬೀಸಣಿಗೆ (ಗಾರ್ಗೊನಿಯ) ಮತ್ತು ಕ್ರೈನಾಯ್ಡ್‍ಗಳಲ್ಲಿಯೂ ಇವೆ. ತೆಳ್ಳಗೆ ನೀಳವಾಗಿರುವ ಅಂಗಾಗಗಳು ಕಠಿಣ ಚರ್ಮಿಗಳಲ್ಲಿಯೂ (ಉದಾಹರಣೆಗೆ ಕೊಲೊಸೆಂಡೀಸ್ ಆರ್ಕೇಟಸ್) ಇವೆ. ಈ ರೀತಿಯ ಅಂಗಗಳು ಮೃದುವಾದ ಉಸುಬಿನ ಮೇಲೆ ನಡೆಯಲು ಅನುಕೂಲವಾಗಿವೆ.

ಆಳ ನೀರಿನ ಮೀನುಗಳ ದೇಹ ಸಾಮಾನ್ಯವಾಗಿ ನೀಳವಾಗಿಯೂ ಚಪ್ಪಟೆಯಾಗಿಯೂ ಇರುತ್ತದೆ. ಬಾಲ ಚಾಟಿಯಂತಿರುವುದು. ಈ ಪ್ರದೇಶದಲ್ಲಿ ಉಷ್ಣತೆ ಕಡಿಮೆಯಾಗಿರುವುದರಿಂದ ಕ್ಯಾಲ್ಸಿಯಮ್ ಚಯಾಪಚಯ ಕ್ರಿಯೆ ಬಲು ಮಂದಗತಿಯದಾಗಿದೆ. ಇದರಿಂದ ಬಾರ್ನಕಲ್ ಪ್ರಾಣಿಗಳಲ್ಲಿ, ಕಠಿಣಚರ್ಮಿ ಮತ್ತು ಮೃದ್ವಂಗಿಗಳಲ್ಲಿ ಕ್ಯಾಲ್ಸಿಯಮ್ ಅತ್ಯಲ್ಪ ಮೊತ್ತದಲ್ಲಿದೆ. ಅನೇಕ ಮೀನುಗಳ ಕಂಕಾಲದಲ್ಲೂ ಕ್ಯಾಲ್ಸಿಯಮ್ ಅಂಶ ಬಹು ಕಡಿಮೆ. ಆದ್ದರಿಂದ ಇಲ್ಲಿನ ಪ್ರಾಣಿಗಳ ದೇಹದ ಹೊದಿಕೆ, ಚಿಪ್ಪುಗಳು ಮತ್ತು ಕಂಕಾಲ ಬಹು ಬಿಧುರವಾಗಿಯೂ ದುರ್ಬಲವಾಗಿಯೂ ಇವೆ. ಎಲುಬುಗಳು ಸಣ್ಣವಾಗಿಯೂ ಹಗುರವಾಗಿಯೂ ಇವೆಯಲ್ಲವೆ ಸ್ನಾಯುಗಳು ಕೃಶವಾಗಿವೆ. ದೇಹದ ಬೆಳವಣಿಗೆ ಕುಂಠಿತವಾಗಿರುವುದು. ಈ ರೀತಿಯ ದೇಹದ ರಚನೆ ಈ ಪ್ರಾಣಿಗಳಿಗೆ ಈಜಲು ಅನುಕೂಲವಾಗಿದೆ. ಅಂದರೆ ಪ್ಲವನತೆ, ಈ ಪರಿಸರದ ಪ್ರಾಣಿಗಳ ಒಂದು ಮುಖ್ಯ ಗುಣ. ಇಲ್ಲಿನ ಪ್ರಾಣಿಗಳು ಸಾಮಾನ್ಯ ಗಾತ್ರದವು. ಗಾತ್ರ ಅನುವಂಶೀಯವಾಗಿರಬಹುದಾದರೂ ಇಲ್ಲಿ ದೊರೆಯುವ ಕನಿಷ್ಠ ಆಹಾರದ ಅಂಶದ ಮೇಲೂ ಇದು ಅವಲಂಬಿತವಾಗಿದೆ. ಈ ಪ್ರದೇಶದ ಪ್ರಾಣಿಗಳು ಸಾಮಾನ್ಯವಾಗಿ ಪೇಲವ ಬಣ್ಣದವು. ಅಕಶೇರುಕಗಳಲ್ಲಿ ಕೆಂಪು ಬಣ್ಣವೂ ಮೀನುಗಳಲ್ಲಿ ಕಪ್ಪು ಅಥವಾ ನೇರಳೆ ಬಣ್ಣಗಳೂ ಪ್ರಧಾನವಾಗಿದೆ. ಮೀನುಗಳ ಮೈಮೇಲೆ ಕೆಲವು ವೇಳೆ ಬೆಳ್ಳಿ ಬಣ್ಣದ ಗುರುತುಗಳಿರುವುವು.

ಜಲತಲ ಪ್ರದೇಶದ ಕಾರ್ಗತ್ತಲೆ ಇಲ್ಲಿನ ಪ್ರಾಣಿಗಳ ಕಣ್ಣುಗಳ ಮೇಲೆ ಪ್ರಭಾವ ಬೀರಿದೆ. ಅನೇಕ ಅಕಶೇರುಕಗಳಲ್ಲಿ ಕಣ್ಣುಗಳು ಕ್ಷೀಣಿಸಿವೆ. ಕೆಲವಲ್ಲಿ ಕಣ್ಣುಗಳೇ ಇಲ್ಲ. ಶಿರೋಪಾದಿಗಳಲ್ಲಿ ಕೆಲವು ಕುರುಡಾಗಿದ್ದರೆ (ಉದಾಹರಣೆಗೆ ಸಿರೋತೌಮ ಮುರ್ರೆಯಿ), ಕೆಲವಲ್ಲಿ ಬಹು ದೊಡ್ಡ ಕಣ್ಣುಗಳಿವೆ. ಮತ್ತೆ ಕೆಲವಲ್ಲಿ ದೂರದರ್ಶಕ ರೀತಿಯ ಕಣ್ಣುಗಳಿವೆ. ಈ ರೀತಿಯ ಮಾರ್ಪಾಡುಗಳನ್ನು ಮೀನುಗಳಲ್ಲೂ ಕಾಣಬಹುದು. ಕೆಲವು ಮೀನುಗಳಲ್ಲಿ ಕಣ್ಣುಗಳಿದ್ದರೂ ಅವಕ್ಕೆ ದೃಷ್ಟಿಮಾಂದ್ಯವಿರಬಹುದೆಂದು ಕೆಲವರ ಅಭಿಪ್ರಾಯ. ಜಲತಲ ಪ್ರದೇಶದ ಎಲ್ಲ ಮೀನುಗಳಲ್ಲಿ ರೆಟಿನ ರಾಡ್‍ಗಳಿಂದ ಮಾತ್ರ ರೂಪುಗೊಂಡಿದೆ. ಕುರುಡು ಅಥವಾ ಕ್ಷೀಣಗೊಂಡ ಕಣ್ಣುಳ್ಳ ಮೀನುಗಳಲ್ಲಿ ಬೆನ್ನಿನ ರೆಕ್ಕೆ, ಹೊಟ್ಟೆ ಅಥವಾ ಬಾಲಗಳಲ್ಲಿರುವ ಉದ್ದವಾದ ತಂತುಗಳು ಸ್ಪಶೇಂದ್ರಿಯಗಳಾಗಿ ಮಾರ್ಪಾಡಾಗಿವೆ. ಬೇತಿಟೀರಾಯಿಸ್ ಮೀನಿನ ಎದೆಯ ಜೋಡಿರೆಕ್ಕೆಗಳಲ್ಲಿ ಅದರ ದೇಹದಷ್ಟೇ ಉದ್ದವಾದ ತಂತುಗಳುಂಟು. ಆಲ್ಟಿಮೊಸ್ಟೋಮಿಯಾಸ್ ಮೀನಿನ ಮೂತಿಯ ಮೇಲಿನ ಮೀಸೆಗಳು ದೇಹದ ಹತ್ತು ಪಟ್ಟು ಉದ್ದವಾಗಿದೆ. ಸೀಗಡಿ ಮುಂತಾದ ಅಕಶೇರುಕಗಳಲ್ಲಿ ಉದ್ದವಾದ ಮೀಸೆಗಳೇ ಅವುಗಳ ಸ್ಪಶೇಂದ್ರಿಯಗಳು (ಉದಾಹರಣೆಗೆ ನೆಮಟೋಕಾರ್ಸಿನಸ್ ಸೀಗಡಿ). ಬಹುತೇಕ ಅಕಶೇರುಕಗಳು ಉಸುಬನ್ನು ತಿಂದು ಅದರ ಜೈವಿಕ ಭಾಗಗಳನ್ನು ಜೀರ್ಣಿಸಿಕೊಳ್ಳುವುವು. ಶಿರೋಪದಿಗಳು ಹಾಗೂ ಅನೇಕ ಮೀನುಗಳು ಮಾಂಸಾಹಾರಿಗಳು. ಕೊಳೆತ ಉಸುಬನ್ನು ತಿನ್ನುವ ಪ್ರಾಣಿಗಳಲ್ಲಿ ವದನಾಂಗಗಳು ಬಲು ಕ್ಷೀಣವಾಗಿವೆ. ಆದರೆ ಮಾಂಸಾಹಾರಿ ಮೀನುಗಳಲ್ಲಿ ಬಲಯುತ ಹಲ್ಲುಗಳುಂಟು. ಕೆಲವು ಮೀನುಗಳು ತಮ್ಮಷ್ಟೇ ದೊಡ್ಡ ಪ್ರಾಣಿಗಳನ್ನೂ ನುಂಗಬಲ್ಲವು (ಉದಾಹರಣೆಗೆ ಬಿಯಾಸ್ಮೊಡಾನ್, ಯೂರಿಪ್ಯಾರಿಂಕ್ಸ್). ಇವುಗಳಲ್ಲಿ ಚೀಲದಂಥ ದೊಡ್ಡ ಹೊಟ್ಟೆಯಿದೆ.

ಇಲ್ಲಿನ ಮೀನುಗಳಲ್ಲಿ ಪಾಶ್ರ್ವಪಂಕ್ತಿ ಅಂಗಗಳು ಚೆನ್ನಾಗಿ ರೂಪುಗೊಂಡಿದ್ದು ಶಬ್ದದ ಅಲೆಗಳನ್ನು ಸ್ವಲ್ಪ ದೂರದಿಂದಲೇ ಕಂಡುಹಿಡಿಯಬಲ್ಲವಾಗಿವೆ. ಇದರಿಂದ ಶತ್ರು ಅಥವಾ ಬೇಟೆಯ ಇರುವಿಕೆಯನ್ನು ಇವು ತಿಳಿಯುವುವು. ಘ್ರಾಣೇಂದ್ರಿಯಗಳು ಈ ಪರಿಸರದಲ್ಲಿ ಬಹುಮುಖ್ಯ. ಗಂಡು ಮತ್ತು ಹೆಣ್ಣುಗಳು ಸಂತಾನೋತ್ಪತ್ತಿಯ ಸಮಯದಲ್ಲಿ ಹತ್ತಿರ ಬರಲು ಇವು ಸಹಾಯಕವಾಗಿವೆ. ಅನೇಕ ಗಾಲದ ಮೀನುಗಳಲ್ಲಿ ಗಂಡಿನಲ್ಲಿರುವ ಘ್ರಾಣೇಂದ್ರಿಯಗಳು ಮಿಕ್ಕ ಕಶೇರುಕಗಳ ಇಂದ್ರಿಯಗಳಿಗಿಂತ ದೊಡ್ಡವು. ಬರ್ಟೆಲ್‍ಸನ್ ಎಂಬಾತನ ಊಹೆಯ ಪ್ರಕಾರ ನಿಧಾನವಾಗಿ ಚಲಿಸುವ ಹೆಣ್ಣು ತನ್ನ ಹಿಂದೆ ಒಂದು ರೀತಿಯ ವಾಸನೆಯ ಜಾಡನ್ನು ಬಿಡುತ್ತದೆ. ಈ ವಾಸನೆ ಹರಡುತ್ತಿರುವಾಗ ಗಂಡುಗಳು ಇದನ್ನು ಪತ್ತೆ ಹಚ್ಚಿ ಜಾಡನ್ನು ಹಿಂಬಾಲಿಸುತ್ತವೆ.

ಸಂದೀಪ್ತಿ (ಲೂಮಿನಿಸೆನ್ಸ್) ಜಲತಲ ಪ್ರದೇಶದ ಪ್ರಾಣಿಗಳ ಒಂದು ವಿಶೇಷ ಲಕ್ಷಣ. ಆಳ ಸಮುದ್ರದಲ್ಲಿ ಸಂದೀಪ್ತಶೀಲ ಜೀವಿಗಳು ಹೆಚ್ಚಾಗಿವೆ. ಕೆಲವು ಸ್ವತಃ ಪ್ರಕಾಶವನ್ನು ಹೊರಗೆಡಹಿದರೆ ಮಿಕ್ಕವು ಸಂದೀಪ್ತಶೀಲ ಬ್ಯಾಕ್ಟೀರಿಯಗಳ ಸಹಾಯದಿಂದ ಬೆಳಕನ್ನು ಚೆಲ್ಲುತ್ತವೆ. ಸುಮಾರು 50 ಬಗೆಯ ಮೀನುಗಳು ಸಂದೀಪ್ತಶೀಲ ಅಂಟನ್ನು ಸ್ರವಿಸುತ್ತವೆ ಅಥವಾ ಸಂದೀಪ್ತಶೀಲ ವಿಶೇಷಾಂಗವನ್ನು ಪಡೆದಿವೆ. ಸಂದೀಪ್ತಶೀಲ ಅಂಗಗಳು ದೇಹದ ವಿವಿಧ ಭಾಗಗಳಲ್ಲಿರಬಹುದು. ಫೋಟೋಸ್ಟೋಮಿಯಾಸ್ ಮತ್ತು ಗ್ಯಾಸ್ಟ್ರೊಸ್ಟೊಮಸ್ ಪ್ರಭೇದಗಳಲ್ಲಿ ಈ ಅಂಗಗಳು ಕ್ರಮವಾಗಿ ಪಾಶ್ರ್ವ ಪಂಕ್ತಿಗಳ ಕೆಳಗೂ ಮತ್ತು ಮೇಲೂ ಪ್ರಸರಿಸಿವೆ. ಅನೇಕ ಗಾಳದ ಮೀನುಗಳಲ್ಲಿಯೂ ಈ ಅಂಗಗಳು ಕಂಡುಬರುವುವು. ಕೆಲವಲ್ಲಿ ಬೆನ್ನುರೆಕ್ಕೆಯಲ್ಲಿರುವುದು. ಗಲಾತಿಯತೌಮ ಆಕ್ಸೆಲಿ ಮೀನಿನಲ್ಲಿ ಇದು ಬಾಯಲ್ಲಿದೆ. ಕುರುಡು ಮೀನುಗಳಲ್ಲಿಯೂ ಸಂದೀಪ್ತಶೀಲ ಅಂಗಗಳು ಉಂಟು. (ಉದಾಹರಣೆಗೆ ಇಪ್ನಾಪ್ಸ್). ಬೆಳಕು ಉತ್ಪತ್ತಿ ಮಾಡುವ ವಿಶೇಷಾಂಗಗಳಿಗೆ ಫೋಟೊಫೋರುಗಳೆಂದು ಹೆಸರು. ಇವುಗಳ ಗ್ರಂಥಿ ಕೋಶಗಳಲ್ಲಿ ಸಂದಿಪ್ತಶೀಲ ಬ್ಯಾಕ್ಟೀರಿಯಗಳಿವೆ. ಫೋಟೊಫೋರುಗಳಲ್ಲಿ ಎರಡು ವಿಧ. ಸರಳ ರೀತಿಯವು ಮತ್ತು ಸಂಕೀರ್ಣ ರೀತಿಯವು. ಸಂಕೀರ್ಣ ರೀತಿಯವುಗಳಲ್ಲಿ ಮಸೂರ ಇದೆ. ಕೆಲವು ಮೀನುಗಳಲ್ಲಿ ಫೋಟೊಫೋರುಗಳು ಕಣ್ಣಿನ ಮುಂಬಾಗದಲ್ಲಿಯೂ ಕೆಲವಲ್ಲಿ ಕಣ್ಣಿನ ಕೆಳಭಾಗದಲ್ಲಿಯೂ ಇರುವುದುಂಟು. ಡಯಪ್ಲುಸ್ ಮೀನಿನಲ್ಲಿ ಸಂದೀಪ್ತಶೀಲ ಅಂಗ ತಲೆಯ ಮುಂಬಾಗದಲ್ಲಿ ಗಣಿಕೆಲಸಗಾರರ ತಲೆಯ ದೀಪದ ಹಾಗಿರುವುದು. ಅಕಶೇರುಕಗಳಲ್ಲಿಯೂ ಸಂದೀಪ್ತಶೀಲ ಅಂಗಗಳಿವೆ. ಸೀಗಡಿಯಲ್ಲೂ (ನೆಮಟೋಕಾರ್ಸಿನಸ್) ಶಿರೋಪಾದಿಗಳಲ್ಲೂ (ಹೆಟರೊಟ್ಯೂರಿಸ್ ಡಿಸ್‍ಪರ್) ಬಾಯಿಯ ಹತ್ತಿರ ಇರುವ ಕೆಲವು ವಿಶೇಷ ಗ್ರಂಥಿಗಳು ಒಂದು ರೀತಿಯ ಜಿಗುಟು ದ್ರವವನ್ನು ಸ್ರವಿಸುತ್ತವೆ. ಈ ದ್ರವ ಗ್ರಂಥಿಯಿಂದ ಹೊರಬಂದು ನೀರನ್ನು ತಾಗಿದೊಡನೆ ಬೆಳಕಿನ ಕಿಡಿಗಳು ಉತ್ಪತ್ತಿಯಾಗುವುವು. ಶತ್ರುಗಳಿಂದ ತಪ್ಪಿಸಿಕೊಳ್ಳಲು ಇದು ಒಳ್ಳೆಯ ಸಾಧನ. ಲ್ಯೂಸಿಫರಿನ್ ಎಂಬ ರಾಸಾಯನಿಕ ಹಾಗೂ ಲ್ಯೂಸಿಫರೇಸ್ ಕಿಣ್ವಗಳು ಆಕ್ಸಿಜನ್ ಸಮ್ಮುಖದಲ್ಲಿ ಪರಸ್ಪರ ಕಲೆತಾಗ ನಡೆಯುವ ಪ್ರಕ್ರಿಯೆಯಿಂದ ಸಂದೀಪ್ತಿ ಉಂಟಾಗುತ್ತದೆ. ಸಂದೀಪ್ತ ಶೀಲ ಅಂಗಗಳು ಬೇಟೆಯನ್ನು ಆಕರ್ಷಿಸುವುದಕ್ಕೂ ರಕ್ಷಣೆಗೂ ಒಂದು ಪ್ರಭೇದದ ಗಂಡು ಹೆಣ್ಣುಗಳು ಪರಸ್ಪರ ಆಕರ್ಷಣೆಗೂ ಸಹಾಯಕ ಎಂದೂ ತಿಳಿಯಲಾಗಿದೆ.

ಸಂತಾನೋತ್ಪತ್ತಿ : ಈ ಪ್ರಭೇದಗಳಲ್ಲಿ ಬೆಳವಣಿಗೆ ಸಾಮಾನ್ಯವಾಗಿ ಡಿಂಬಗಳಿಲ್ಲದೆ ಆಗುವುದು. ಈ ಪ್ರಾಣಿಗಳ ಮೊಟ್ಟೆಗಳು ಬಹು ದೊಡ್ಡ ಗಾತ್ರವಾದ್ದರಿಂದ ಭ್ರೂಣ ಪ್ರೌಢಾವಸ್ಥೆಯ ರೂಪ ತಳೆಯುವವರೆಗೂ ಮೊಟ್ಟೆಯಲ್ಲಿಯೇ ಬೆಳವಣಿಗೆ ಮುಂದುವರಿಯುವುದು. ಈ ಪ್ರದೇಶಗಳಲ್ಲಿ ಪ್ರಾಣಿಗಳು ಬಲು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಗಂಡು ಹೆಣ್ಣುಗಳ ಭೇಟಿ, ಮಿಲನಗಳ ಅವಕಾಶ ಮತ್ತು ಗರ್ಭಾಂಕುರತೆ-ಇವು ಬಲು ಕಷ್ಟಸಾಧ್ಯ. ಈ ಸಮಸ್ಯೆಗಳನ್ನು ಕೆಲವು ಮೀನುಗಳು ಸುಲಭವಾಗಿ ಪರಿಹರಿಸಿಕೊಂಡಿವೆ. ಉದಾಹರಣೆಗೆ ಗಾಳದ ಮೀನುಗಳಲ್ಲಿ ದೊಡ್ಡ ಘ್ರಾಣೇಂದ್ರಿಯಗಳಿರುವ ಕುಬ್ಜ ಗಂಡು ಮೀನುಗಳು ಹೆಣ್ಣು ಮೀನುಗಳ ದೇಹವನ್ನು ತಮ್ಮ ಬಲವಾದ ಹಲ್ಲುಗಳಿಂದ ಹಿಡಿದುಕೊಂಡು ಪರಾವಲಂಬಿಗಳಾಗಿ ಬಿಡುತ್ತವೆ. ಈ ರೀತಿ ಹೆಣ್ಣಿನ ಜೊತೆಯಲ್ಲಿ ಜೀವನದ ಅಂತ್ಯದವರೆಗೂ ಇರುವುದರಿಂದ ಹೆಣ್ಣುಗಳು ಗಂಡುಗಳ ಅನ್ವೇಷಣೆಗೆ ಹೋಗಬೇಕಾಗಿಯೇ ಇಲ್ಲ.

ಈವರೆಗೆ ಅನೇಕ ವೈಜ್ಞಾನಿಕ ಸಮುದ್ರಯಾನಗಳಾಗಿದ್ದರೂ ಕಡಲಜೀವಿ ಪ್ರಬೇಧಗಳ ಮಾಹಿತಿ ಇನ್ನೂ ಬಹಳವಾಗಿ ಆಗಬೇಕಾಗಿದೆ. ಹೀಗಿರುವಲ್ಲಿ ಜಲತಲ ಪ್ರದೇಶದ ಪ್ರಭೇದಗಳ ವಿಕಾಸದ ವಿಚಾರವಾಗಿ ಖಚಿತವಾಗಿ ಏನೂ ಹೇಳುವಂತಿಲ್ಲ. ರೇಡಿಯೋಲೇರಿಯನ್ ಉಸುಬುಗಳು ಮತ್ತು ಕೆಂಪು ಜೇಡಿ ಮಣ್ಣಿನಲ್ಲಿ ರೇಡಿಯಮ್ ಹೆಚ್ಚು ಮೊತ್ತದಲ್ಲಿ ಇರುವುದರಿಂದ ಇದರ ಪ್ರಭಾವ ಇಲ್ಲಿನ ಪ್ರಾಣಿಗಳ ಮೇಲೆ ಇರಲೇಬೇಕು. ಆದ್ದರಿಂದ ಇಲ್ಲಿನ ಪ್ರಬೇಧೀಕರಣ ಮಿಕ್ಕಸಾಗರ ಪ್ರದೇಶಗಳಿಗಿಂತ ತೀವ್ರಗತಿಯಲ್ಲಿ ಆಗಿರಬಹುದು. ಅದರಲ್ಲೂ ತಳಭಾಗದಲ್ಲಿ ವಿಕೃತಿಗಳ (ಮ್ಯುಟೇಷನ್ಸ್) ಪ್ರಮಾಣ, ವಿಕಿರಣ ಪ್ರಭಾವದಿಂದ ಹೆಚ್ಚಾಗಿರಬೇಕು. ಈ ವಿಚಾರಗಳನ್ನು ತಿಳಿಯಲು ಮೂಲಭೂತ ಅಂಶಗಳು ಬಹು ಅವಶ್ಯಕ. ಈ ದಿಸೆಯಲ್ಲಿ ಸಂಶೋಧನೆಗಳಾಗುತ್ತಿದ್ದು, ಅನೇಕ ಮಾಹಿತಿಗಳು ಸಂಗ್ರಹವಾಗುತ್ತಿವೆ.