ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಲಪಾರಗಮ್ಯತೆ
ಜಲಪಾರಗಮ್ಯತೆ - ವಸ್ತುವಿನಲ್ಲಿ ಜಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ರವಿಸಬಲ್ಲ ಸಾಮಥ್ರ್ಯ. ಇದು ಆ ಎರಡು ಸ್ಥಳಗಳ ನಡುವಿನ ಒತ್ತಡ ವ್ಯತ್ಯಾಸ ಮತ್ತು ಪ್ರಶಾಂತ ಪ್ರವಹನ (ನಾನ್‍ಟರ್‍ಬ್ಯುಲೆಂಟ್ ಫ್ಲೋ) ವೇಗಕ್ಕೆ ತಕ್ಕಂತಿರುತ್ತದೆ. ಸರಂಧ್ರ ವಸ್ತುಗಳ ಮೂಲಕ ಜಲಚಲನೆಯ ಮೂಲ ನಿಯಮವನ್ನು ಫ್ರಾನ್ಸಿನ ಹೆನ್ರಿ ಡಾರ್ಸಿ ಎಂಬಾತ ಸ್ಥಾಪಿಸಿದ : ಮರಳಿನ ಮೂಲಕ ನೀರಿನಚಲನೆಯ ವೇಗ ಅಲ್ಲಿನ ದ್ರವಚಾಲಿತ ಓಟಕ್ಕೆ (ಹೈಡ್ರಾಲಿಕ್ ಗ್ರೇಡಿಯೆಂಟ್) ಅನುಪಾತೀಯವಾಗಿದೆ ಎಂಬುದೇ ಆ ನಿಯಮ. ಪ್ರತೀಕಗಳಲ್ಲಿ ಇದು
Q = ki A
ಇಲ್ಲಿ Q ನಿರ್ದಿಷ್ಟಕಾಲದಲ್ಲಿ ಸ್ರವಿಸುವ ಜಲಪ್ರಮಾಣ ; A ಜಲ ಸ್ರವಿಸಬೇಕಾದ ಅಡ್ಡಕೊಯ್ತದ ಒಟ್ಟು ಸಲೆ ;i ದ್ರವಚಾಲಿತ ಓಟ ಅಥವಾ ಜಲಸಾಮಥ್ರ್ಯದ ಏರಿಳಿತ. (ಜಲ ಪ್ರವೇಶಿಸುವ ಮತ್ತು ನಿರ್ಗಮಿಸುವ ಬಿಂದುಗಳ ನಡುವಿನಲ್ಲಿರುವ ಒತ್ತಡ ವ್ಯತ್ಯಾಸವನ್ನು ಅದೇ ಬಿಂದುಗಳ ನಡುವಿನ ಅಂತರದಿಂದ ಭಾಗಿಸಿದಾಗ ಸಿಕ್ಕುವ ಅಂಶ) ಮತ್ತು ಞ ವಸುವಿನ ಜಲಪಾರಗಮ್ಯ ಗುಣಾಂಕ.
ಜಲಪಾರಗಮ್ಯತೆಯ ಗುಣಾಂಕವನ್ನು ಪ್ರಯೋಗಶಾಲೆಯಲ್ಲಿ ಕಾನ್ಸ್‍ಟಂಟ್ ಹೆಡ್ ಪರ್ಮಾಮೀಟರ್ ಅಥವಾ ವೇರಿಯಬಲ್ ಹೆಡ್ ಪರ್ಮಾಮೀಟರಿನಿಂದ ಅಳೆಯಬಹುದು. ಇದು ಮುಖ್ಯವಾಗಿ ವಸ್ತುವಿನ ಸರಂಧ್ರತೆ ಹಾಗೂ ಸರಂಧ್ರತೆಗೆ ಕಾರಣವಾಗುವ ಕಣಗಳ ಗಾತ್ರ, ಓರಣ, ಹಂಚಿಕೆ ಮತ್ತು ರಂಧ್ರಗಳ ಪರಸ್ಪರ ಸಂಪರ್ಕಗಳನ್ನು ಅವಲಂಬಿಸಿದೆ. ವಸ್ತುವಿನಲ್ಲಿನ ತೆರಪುಗಳ ಒಟ್ಟು ಗಾತ್ರಕ್ಕೆ ವಸ್ತುವಿನ ಕಣಗಳ ಒಟ್ಟುಗಾತ್ರದ ಅನುಪಾತವೇ ಸರಂಧ್ರತೆ. ಇದನ್ನು ಸಾಮಾನ್ಯವಾಗಿ ಸೇಕಡವಾರು ಚರ್ಚಿಸಲಾಗುತ್ತದೆ. ಕಣಗಳ ಗಾತ್ರ, ಓರಣ ಹಾಗೂ ಹಂಚಿಕೆ ಅವುಗಳ ನಿರ್ಮಾಣಕ್ರಮಕ್ಕೆ ತಕ್ಕಂತಿರುವುವು.
ಶಿಲೆಗಳ ಭೌತ ಮತ್ತು ರಾಸಾಯನಿಕ ಶಿಥಿಲೀಕರಣಗಳಿಂದಾಗಿ ಮಣ್ಣು ಉಂಟಾಗುವುದು. ಇದರ ಗುಣ ಮೂಲ ಶಿಲೆ ಹಾಗೂ ಶಿಥಿಲೀಕರಣಕ್ಕೆ ಸಂಬಂಧಿಸಿ ಉಂಟು, ಮಣ್ಣನ್ನು ಗರಸು, ಮರಳು, ಸಿಲ್ಟ್ ಮತ್ತು ಜೇಡಿ ಎಂದು ವಿಂಗಡಿಸಬಹುದು. ಗರಸು ಮರಳನ್ನು ಕಣಗಾತ್ರಾನುಸಾರವಾಗಿ ಉರುಟು ನುಣುಪು ಮತ್ತು ಅತಿನುಣುಪು ಮುಂತಾಗಿ ಕೂಡ ವಿಭಾಗಿಸುವುದು ಸಾಧ್ಯ. ಇಂಥ ಭಿನ್ನ ಬಗೆಯ ಮಣ್ಣುಗಳು ನದಿ ಸರೋವರ ಹಾಗೂ ಸಾಗರ ಪ್ರವಾಹಗಳಿಂದ ಸಾಗಿಸಲ್ಪಟ್ಟು ಸಂಚಿತವಾಗಿರುತ್ತವೆ. ಗಾಳಿಯಿಂದ ಸಾಗಿಸಲ್ಪಟ್ಟ ಶಿಥಿಲ ಶಿಲಾಕಣಗಳು ಲೋಯೆಸ್ ಮತ್ತು ಇಯೋಲಿನ್ ಎಂಬ ಸಂಚಯನಗಳಾಗುತ್ತವೆ. ಮರಳು ಜೇಡಿ ಸಿಲ್ಟ್ ಸಾವಯವ ವಸ್ತುಗಳ ಮಿಶ್ರಕ್ಕೆ ಲೋಮ್ ಎಂದು ಹೆಸರು.
ಜಲಚಲನೆಗೆ ಗರಸು ಅತ್ಯುತ್ತಮ. ಚೊಕ್ಕವಾಗಿರುವ ಗರಸು ಪದರದಲ್ಲಿ ಸರಂಧ್ರತೆ ಮತ್ತು ಜಲಪಾರಗಮ್ಯತೆ ಇರುವುದು. ಆದರೆ ಗರಸಿನೊಡನೆ ನುಣುಪು ಮಣ್ಣು ಬೆರೆತಿರುವುದು ಹೆಚ್ಚು. ಇದು ತೆರಪುಗಳಲ್ಲಿ ಸೇರಿಕೊಂಡು ಜಲಚಲನೆಯನ್ನು ಸ್ಥಗಿತಗೊಳಿಸುತ್ತದೆ. ಮರಳಿಗೆ ಉತ್ತಮ ಸರಂಧ್ರತೆ ಉಂಟು. ಅಲ್ಲದೆ ಇದರಲ್ಲಿ ಕಣಗಾತ್ರ ಹಾಗೂ ಓರಣ ಒಂದೇ ರೀತಿ ಇವೆ. ಇದರಿಂದಾಗಿ ಮರಳಿನಲ್ಲಿ ಜಲಚಲನೆ ಸರಾಗ. ಇದು ಕೆಲವೊಮ್ಮೆ ಗರಸಿಗಿಂತಲೂ ಹೆಚ್ಚು ಜಲಪಾರಗಮ್ಯವಾಗಿರುತ್ತದೆ. ಸಿಲ್ಟ್ ಮತ್ತು ಜೇಡಿಮಣ್ಣುಗಳ ಕಣಗಾತ್ರ ಬಲು ಸೂಕ್ಷ್ಮ. ಇದರಿಂದಾಗಿ ಇವುಗಳ ನಡುವಿನ ತೆರಪುಗಳು ಇನ್ನೂ ಸೂಕ್ಷ್ಮ, ಜಲಪಾರಗಮ್ಯತೆ ಗಣನೆಗೂ ಕಡಿಮೆ. ಇವು ನೀರನ್ನು ಹೀರಿ ಭದ್ರವಾಗಿ ಹಿಡಿದುಕೊಂಡು ನಿಧಾನವಾಗಿ ಹೊರಬಿಡುತ್ತವೆ. (ವೈ.ಎಲ್.)