ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಲಮಟ್ಟ

ವಿಕಿಸೋರ್ಸ್ದಿಂದ

ಜಲಮಟ್ಟ - ಬಾವಿ ತೋಡಿದಾಗ ನೀರು ದೊರೆಯುವ ಆಳ ಭೂಮಿಯ ಹೊರ ಚಿಪ್ಪಿನಲ್ಲಿರುವ ಸರಂಧ್ರ ಹಾಗೂ ವ್ಯಾಪ್ಯ ಶಿಲೆಗಳ ಮೂಲಕ ನೀರು ಪ್ರವಹಿಸಿ ಅನುಕೂಲಕರವಾದ ಸನ್ನಿವೇಶವಿರುವ ಆಳದಲ್ಲಿ ಶೇಖರಗೊಳ್ಳುತ್ತ ಹೋಗುತ್ತದೆ. ಈ ಆಳವನ್ನು ಮುಟ್ಟಿದ ಹೊರತು ಭೂಜಲ ನಮಗೆ ದಕ್ಕದೆ ತೋಡಿದ ಬಾವಿಯಲ್ಲಿ ನೀರು ಸಿಗಲಾರದು. ಜಲಮಟ್ಟದ ಆಳ ಸಾಮಾನ್ಯವಾಗಿ ಏಕರೀತಿಯಾಗಿ ಇರುವುದಿಲ್ಲ. ಹಾಗಿರಲು ಸಾಧ್ಯವೂ ಇಲ್ಲ. ಭೂಭಾಗದ ಒಳರಚನೆ, ಅಲ್ಲಿಯ ಶಿಲೆಗಳ ಲಕ್ಷಣ ಹಾಗೂ ಆ ಪ್ರದೇಶದ ಮಳೆಯ ವಾರ್ಷಿಕ ಪ್ರಮಾಣ ಇವನ್ನು ಅನುಸರಿಸಿ ಜಲಮಟ್ಟವೂ ವ್ಯತ್ಯಾಸಗೊಳ್ಳುತ್ತದೆ. ಉತ್ತಮ ಜಲಧರಗಳು ಅತಿ ಆಳದಲ್ಲಿರದೆ ನದಿ, ಕೆರೆ, ಕಣಿವೆ ಮುಂತಾದ ಜಲಾಶಯಗಳಿಗೆ ಸಮೀಪವಾಗಿದ್ದಲ್ಲಿ ಅಲ್ಲಿ ತೋಡುವ ಬಾವಿಗಳು ಆಳವಾಗಿರದೆ ಮೇಲುಗಡೆಯೇ ನೀರು ಸಮೃದ್ಧವಾಗಿ ದೊರೆಯುತ್ತದೆ. ಅಂದರೆ ಆ ಪ್ರದೇಶದಲ್ಲಿ ಜಲಮಟ್ಟ ಮೇಲ್ಭಾಗದಲ್ಲೇ ಇದೆ ಎನ್ನಬಹುದು. ಇದೇ ರೀತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೂ ಅದು ಹೆಚ್ಚು ಆಳದಲ್ಲಿರಲು ಸಾಧ್ಯವಿಲ್ಲ. ಮಳೆ ಅಪರೂಪದ ಬೆಂಗಾಡು ಪ್ರದೇಶಗಳ ಬಾವಿಗಳು ಈ ಕಾರಣದಿಂದಲೇ ಬಹು ಆಳವಾಗಿರುತ್ತವೆ.

ಜಲಮಟ್ಟ ಒಂದು ಪ್ರದೇಶದ ಭೂರಚನೆಗೆ ಅನುಗುಣವಾಗಿ ಮಟ್ಟಸವಾಗಿರಬಹುದು ಇಲ್ಲವೇ ಮಡಿಕೆಬಿದ್ದ ಭೂರಚನೆಗೆ ಅನುಗುಣವಾಗಿ ಏರುಪೇರುಗಳನ್ನು ತೋರಿಸಬಹುದು. ಈ ಬಗೆಯ ಜಲಮಟ್ಟವನ್ನು ಸ್ತರಭಂಗಗಳು ಛೇದಿಸಿದಾಗ ಜಲಮಟ್ಟವೂ ವ್ಯತ್ಯಾಸಗೊಂಡು ಭಂಗಕ್ಕೆ ಒಳಗಾದ ಜಾಡಿನಲ್ಲಿ ನೀರು ಚಿಲುಮೆಯಂತೆ ಹೊರಚಿಮ್ಮುತ್ತದೆ.

ಋತುಮಾನಕ್ಕೆ ಅನುಗುಣವಾಗಿಯೂ ಜಲಮಟ್ಟ ಏರುಪೇರುಗಳನ್ನು ತಳೆಯುವುದು. ಮಳೆಗಾಲದಲ್ಲಿ ಮೇಲಕ್ಕೇರಿ, ಬೇಸಿಗೆಯಲ್ಲಿ ಆಳಕ್ಕೆ ಕುಗ್ಗಿಹೋಗುತ್ತದೆ. ಈ ಕಾರಣದಿಂದಲೇ ಬಾವಿಗಳಲ್ಲಿ ನೀರಿನಮಟ್ಟ ಬೇಸಗೆಯಲ್ಲಿ ಬಹುಮಟ್ಟಿಗೆ ಕುಗ್ಗಿ ನಡುಬೇಸಗೆಯಲ್ಲಿ ನೀರೇ ಮಾಯವಾಗುವ ಸಂಭಾವ್ಯತೆಗಳೂ ಉಂಟು. ಆದರೆ ಮಳೆಗಾಲದಲ್ಲಿ ಯಥೇಚ್ಛವಾಗಿ ನೀರು ಜಿನುಗುವ ಕಾರಣ ಅದು ಮೇಲಕ್ಕೆ ಬರುತ್ತದೆ. ನೀರಿನ ಬಳಕೆ ಹೆಚ್ಚಾದಾಗ ಅಷ್ಟೇ ಶೀಘ್ರಗತಿಯಲ್ಲಿ ಭೂಜಲ ಒದಗದೆ ಜಲ ಮಟ್ಟ ಕುಗ್ಗುವುದೂ ವಾಡಿಕೆ. ಕೊಂಚ ಕಾಲಾವಕಾಶವನ್ನು ಕೊಟ್ಟಲ್ಲಿ ಮತ್ತೆ ನೀರು ತುಂಬಿ ಜಲಮಟ್ಟ ಯಥಾಸ್ಥಿತಿಗೆ ಬರುತ್ತದೆ. ಈ ವ್ಯತ್ಯಾಸಗಳನ್ನು ಅನೇಕ ಏತದ ಬಾವಿಗಳಲ್ಲಿ ವೀಕ್ಷಿಸಬಹುದು.

ಇವೇ ಅಲ್ಲದೆ ವಾಯುಮಂಡಲದಲ್ಲಿ ತಲೆದೋರುವ ಒತ್ತಡ, ವ್ಯತ್ಯಾಸಗಳು, ಸೂರ್ಯ ಚಂದ್ರರ ಆಕರ್ಷಣಬಲ, ಭೂಕಂಪನಗಳ ಹಾವಳಿ-ಇವುಗಳಿಂದಲೂ ಜಲಮಟ್ಟದಲ್ಲಿ ಸಾಕಷ್ಟು ವ್ಯತ್ಯಾಸಗಳು ತಲೆದೋರುತ್ತವೆ. (ಬಿ.ವಿ.ಜಿ)