ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾಗಟೆ

ವಿಕಿಸೋರ್ಸ್ದಿಂದ
Jump to navigation Jump to search

ಜಾಗಟೆ - ವಾದ್ಯೋಪಕರಣಗಳಲ್ಲೊಂದು. ಪಂಚಮಹಾವಾದ್ಯಗಳಲ್ಲಿ ಇದನ್ನು ಸೇರಿಸಲಾಗಿದೆ. ಜೇಗಟೆ, ಜೇಗಂಟೆ ಎಂದೂ ಇದನ್ನು ಕರೆವುದಿದೆ. ಬಹುಶಃ ಜಯಘಂಟೆ ಎಂಬುದರ ತದ್ಭವ ರೂಪವೇ ಜಾಗಟೆ ಇರಬಹುದು.

ಜಾಗಟೆಯನ್ನು ಕಂಚಿನಿಂದ ತಯಾರಿಸುತ್ತಾರೆ. ನಾಜೂಕಾಗಿ ಬೆಳ್ಳಿಯಿಂದಲೂ ಮಾಡುವುದುಂಟು. ಇದು ಆಕಾರದಲ್ಲಿ ತಟ್ಟೆಯಂತಿರುತ್ತದೆ. ತಟ್ಟೆ ಅಂಚಿಲ್ಲದ ದೋಸೆಯ ಕಾವಲಿಯಂತೆ ಗುಂಡಾಗಿರಬಹುದು ಇಲ್ಲವೆ ಎತ್ತರ ಅಂಚಿನ ಬೋಗುಣಿಯಂತಿರಬಹುದು. ದಪ್ಪ ಹುರಿಯೊಂದನ್ನು ಕಟ್ಟಿ ಎಡಗೈಯಲ್ಲಿ ಹಿಡಿದು ದಪ್ಪನೆಯ ಮರದ ದಾಂಡೊಂದರಿಂದ ಬಡಿಯುತ್ತಾರೆ. ಆಗ ಢಣಾರ್ ಢಣಾರ್ ಎಂಬ ನಾದ ಹೊಮ್ಮುತ್ತದೆ. ಜಗನ್ನಾಥದ ಜಾಗಟೆ ಬಹು ಪ್ರಸಿದ್ಧವಾದ್ದು. ಇದು ತೆಳ್ಳಗೆ ಅಗಲವಾಗಿರುತ್ತದಾಗಿ ಒಳ್ಳೆಯ ನಾದ ಹೊಮ್ಮಿ ಚೆನ್ನಾಗಿ ಅನುರಣನಗೊಳ್ಳುತ್ತದೆ. ದೇವರ ಪೂಜಾಸಮಯದಲ್ಲಿ ಶಂಖ, ಘಂಟೆ, ತುತೂರಿಗಳೊಂದಿಗೆ ಜಾಗಟೆಯನ್ನೂ ಬಳಸುವುದಿದೆ. ಯಕ್ಷಗಾನ ಪ್ರಸಂಗಗಳಲ್ಲಿ ಇದನ್ನು ಭಾಗವತರು ತಾಳವನ್ನಾಗಿ ಬಳಸುತ್ತಾರೆ. ಲೌಕಿಕ ವ್ಯವಹಾರದಲ್ಲಿ ಜಾಗಟೆಗೆ ಸ್ಥಾನವಿಲ್ಲದಿಲ್ಲ. ಕಚೇರಿಗಳಲ್ಲಿ ಕಾಲ ತೋರಿಸಲು ಗಂಟೆಗೆ ಬದಲು ಜಾಗಟೆಯನ್ನೂ ಬಳಸುವುದಿದೆ. (ಸಿ.ಜಿ.ಪಿ.)