ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾನ್

ವಿಕಿಸೋರ್ಸ್ದಿಂದ

ಜಾನ್ ಯೂರೋಪಿನ ಇತಿಹಾಸದಲ್ಲಿ ಈ ಹೆಸರಿನ ದೊರೆಗಳು, ಡ್ಯೂಕರು ಮುಂತಾದವರು ಅನೇಕರಿದ್ದಾರೆ. ಅವರಲ್ಲಿ ಪ್ರಮುಖರಾದವರನ್ನು ಕುರಿತ ವಿವರಗಳನ್ನು ಮುಂದೆ ಕೊಟ್ಟಿದೆ. ಜಾನ್ (ಆರಗಾನ್ ದೊರೆಗಳು): ಜಾನ್ I : 1350-1395. ಆರಗಾನನ್ನು (ಸ್ಪೇನಿನ ಈಶಾನ್ಯದಲ್ಲಿ ಫ್ರಾನ್ಸಿನ ಗಡಿಗೆ ಹೊಂದಿಕೊಂಡಂತೆ ಇರುವ ಪ್ರದೇಶ) ಆಳಿದ ದೊರೆಗಳಲ್ಲಿ ಒಬ್ಬ. 1387-1395ರಲ್ಲಿ ಆಳ್ವಿಕೆ ನಡೆಸಿದ. 1350ರ ಡಿಸೆಂಬರ್ 27ರಂದು ಹುಟ್ಟಿದ. ತಂದೆ 4ನೆಯ ಪೀಟರ್. ಈತ ಕಾವ್ಯ, ಸಂಗೀತ, ಬೇಟೆಗಳಲ್ಲಿ ಹೆಚ್ಚು ಆಸಕ್ತನಾಗಿದ್ದು, ರಾಜಕೀಯ ವ್ಯವಹಾರಗಳಲ್ಲಿ ತನ್ನ 3ನೆಯ ಪತ್ನಿ ಯಾಲಾಂಡಳ ಸಲಹೆಗಳನ್ನು ಕೇಳುತ್ತಿದ್ದ. ಹೆಚ್ಚಾಗಿ ಫ್ರೆಂಚರ ಪರವಾದ ಧೋರಣೆ ಅನುಸರಿಸಿದ. ಯೂರೋಪಿನಲ್ಲಿ ನಡೆಯುತ್ತಿದ್ದ ನೂರು ವರ್ಷಗಳ ಯುದ್ದದಲ್ಲಿ ಭಾಗಿಯಾಗಲು ಜಾನ್ ಇಷ್ಟಪಡಲಿಲ್ಲ. ಕ್ಯಾಸ್ಟೀಲನೊಡನೆ ಸೌಹಾರ್ದಯುತ ಸಂಬಂಧ ಹೊಂದಿದ್ದ. ಸಿಸಿಲಿ ಮತ್ತು ಸಾರ್ಡೀನೀಯಗಳಲ್ಲಿ ಈತ ದಂಗೆಗಳನ್ನೆದುರಿಸಬೇಕಾಯಿತು. ಆತೆನ್ಸ್ ಪ್ರದೇಶ ಇವನ ಕೈಬಿಟ್ಟಿತು. ಬೇಟೆಯ ಕಾಲದಲ್ಲಿ ಆಕಸ್ಮಿಕಕ್ಕೆ ಒಳಗಾಗಿ ಮೇ 19, 1395ರಂದು ಮರಣಹೊಂದಿದ. ಅನಂತರ ಇವನ ತಮ್ಮ ಮಾರ್ಟಿನ್ ಸಿಂಹಾಸನಕ್ಕೆ ಬಂದ.

ಜಾನ್ II : 1398-1479. ಈತ 1458-1479ರಲ್ಲಿ ಆರಗಾನಿಗೂ 1425-1479ರಲ್ಲಿ ನವಾರ್‍ಗೂ (ಸ್ಪೇನಿನ ಉತ್ತರ ಭಾಗದಲ್ಲಿ ಫ್ರಾನ್ಸಿಗೆ ಹೊಂದಿಕೊಂಡಂತೆ ಇರುವ ಪ್ರದೇಶ) ದೊರೆಯಾಗಿದ್ದ. ಒಂದನೆಯ ಫರ್ಡಿನೆಂಡಿನ ಎರಡನೆಯ ಮಗ. ನವಾರ್‍ನಲ್ಲಿ ಮೂರನೆಯ ಚಾಲ್ರ್ಸ್ ಮರಣ ಹೊಂದಿದ ಮೇಲೆ ಆ ರಾಜ್ಯದ ದೊರೆಯಾದ. ಚಾಲ್ರ್ಸನ ಮಗಳನ್ನು 1420ರಲ್ಲಿ ಮದುವೆಯಾಗಿದ್ದರಿಂದ ಆ ರಾಜ್ಯದ ಹಕ್ಕು ಇವನಿಗೆ ದೊರೆಯಿತು. 1458ರಲ್ಲಿ ತನ್ನ ಹಿರಿಯಣ್ಣ ಐದನೆಯ ಅಲ್ಫಾನ್ಸೋ ಮರಣ ಹೊಂದಿದಾಗ ಆರಗಾನಿನ ದೊರೆಯಾದ. ಸಿಸಿಲಿ, ಸಾರ್ಡೀನಿಯಗಳು ಇವನ ಆಳ್ವಿಕೆಗೆ ಒಳಪಟ್ಟಿದ್ದವು. ಕ್ಯಾಸ್ಟೀಲ್, ನೇಪಲ್ಸ್‍ಗಳ ವ್ಯವಹಾರಗಳಲ್ಲಿ ತಲೆಹಾಕಿ, ಆರಗಾನಿನ ಆಡಳಿತವನ್ನು ಉಪೇಕ್ಷಿಸಿದ. ನವಾರ್‍ನ ಆಂತರಿಕ ಯುದ್ಧದಲ್ಲಿ ಪ್ರವೇಶಿಸಿದ. ಇದರಿಂದ ಅನೇಕ ಪ್ರದೇಶಗಳನ್ನು ಫ್ರಾನ್ಸಿಗೆ ಬಿಟ್ಟು ಕೊಡಬೇಕಾಯಿತು. ಜಾನ್ ಸಮರ್ಥನಾಗಿದ್ದರೂ ರಾಜಕೀಯದ ಆಳವಾದ ಅನುಭವ ಇವನಿಗಿರಲಿಲ್ಲ. ಇವನು 1479ರ ಜನವರಿ 19ರಂದು ಮರಣಹೊಂದಿದ. (ಕೆ.ಎಸ್.ಎಸ್.; ಬಿ.ಸಿ.ಪಿ.) ಜಾನ್ (ಇಂಗ್ಲೆಂಡಿನ ದೊರೆ) : 1167-1216. ಎರಡನೆಯ ಹೆನ್ರಿಯ ಕಿರಿಯ ಮಗ. 1167ರಲ್ಲಿ ಆಕ್ಸ್‍ಫರ್ಡ್‍ನಲ್ಲಿ ಹುಟ್ಟಿದ. ರಾಜನಾಗುವುದಕ್ಕೆ ಮುಂಚೆ ಅನೇಕ ಪದವಿಗಳನ್ನು ಅಲಂಕರಿಸಿದ್ದ. ಹೆನ್ರಿ ತನ್ನ ಹಿರಿಯ ಮಗನನ್ನು ಬಿಟ್ಟು ಜಾನನಿಗೆ ವಿಶೇಷ ಪುರಸ್ಕಾರಗಳನ್ನು ನೀಡಿದ. ಮೊದಲು ತಂದೆಯ ವಿರುದ್ಧವಾಗಿ ಅಣ್ಣ 1ನೆಯ ರಿಚರ್ಡನ ಪರ ಸೇರಿದ್ದು, ಅನಂತರ ಅವನ ವಿರುದ್ಧವಾಗಿಯೂ ಇವನು ಸಂಚು ನಡೆಸಿದ. ತಂದೆ ಹೆನ್ರಿಯ ಮರಣಾನಂತರ ರಿಚರ್ಡ್ ಪಟ್ಟಕ್ಕೆ ಬಂದ. ಆಗ ಜಾನ್ ತನಗೆ ತೊಂದರೆ ಮಾಡದಂತೆ ರಿಚರ್ಡ್ ಅವನಿಗೆ ಧಾರಾಳವಾಗಿ ಕೊಡುಗೆ ನೀಡಿ ಅವನನ್ನು ದೂರದಲ್ಲೇ ಇಟ್ಟಿದ್ದ. 1199ರಲ್ಲಿ ರಿಚರ್ಡ್ ಅನಿರೀಕ್ಷಿತವಾಗಿ ತೀರಿಕೊಂಡಾಗ ಜಾನ್ ಪಟ್ಟಕ್ಕೆ ಬಂದ. ಇವನ ಪ್ರತಿಸ್ಪರ್ಧಿಯಾಗಿದ್ದ ಬ್ರಿಟನ್ನಿನ 1ನೆಯ ಆರ್ಥರನ ಬೆಂಬಲಿಗರು ಫ್ರಾನ್ಸಿನ 2ನೆಯ ಫಿಲಿಪನ ನೆರವಿನಿಂದ ದಂಗೆಯೆದ್ದರು. ಕೊನೆಗೆ ಜಾನ್ ತನ್ನ ಫ್ರೆಂಚ್ ಪ್ರದೇಶದಲ್ಲಿ ಬಹುಭಾಗವನ್ನು ಬಿಟ್ಟುಕೊಡಬೇಕಾಯಿತು. ಪೋಪ್ ಆಗಿದ್ದ 3ನೆಯ ಇನ್ನೊಸೆಂಟನಿಂದ ಈತ ಬಹಿಷ್ಕøತನಾಗಿ, ಪದಚ್ಯುತನಾಗಿ, ಇಂಗ್ಲೆಂಡನ್ನು ಅವನಿಗೆ ಒಪ್ಪಿಸಿ ಅದನ್ನು ಉಂಬಳಿಯಾಗಿ ಮತ್ತೆ ಪಡೆದ (1213). ಜಾನನನ್ನು ತೀವ್ರವಾಗಿ ಪ್ರತಿಭಟಿಸುತ್ತಿದ್ದ ಬ್ಯಾರನ್‍ಗಳು ಮ್ಯಾಗ್ನಕಾರ್ಟ ಎಂಬ ಮಹಾ ಸನ್ನದಿಗೆ ಅವನಿಂದ ಸಹಿ ಹಾಕಿಸಿಕೊಂಡರು. ಇದು ಒಂದು ಪ್ರಮುಖ ಐತಿಹಾಸಿಕ ದಾಖಲೆ. ದೊರೆಯನ್ನು ಹದ್ದುಬಸ್ತಿಗೆ ತರುವ ಪ್ರಥಮ ಪ್ರಯತ್ನವಿದೆಂದು ಹೇಳಲಾಗಿದೆ. ಇದು ಇಂಗ್ಲೆಂಡಿನಲ್ಲಿ ಕಾನೂನುಬದ್ಧ ಆಳ್ವಿಕೆಯನ್ನೂ ನಾಡಿನ ರೂಢಿ ಆಚಾರಗಳನ್ನೂ ಸ್ಥಾಪಿಸಿತು. ಸನ್ನದಿನ ನಿಬಂಧನೆಗಳನ್ನು ಜಾನ್ ಮುರಿಯದಂತೆ ನೋಡಿಕೊಳ್ಳಲು 25 ಬ್ಯಾರನ್‍ಗಳ ಒಂದು ಸಮಿತಿ ಇರಬೇಕೆಂದು ವಿಧಿಸಲಾಯಿತು. ಜಾನ್ ಬದುಕಿರುವವರೆಗೂ ಬ್ಯಾರನ್‍ಗಳೊಂದಿಗಿನ ವಿರಸ ಕೊನೆಗೊಳ್ಳಲಿಲ್ಲ. 1216ರಲ್ಲಿ ಇವನು ತೀರಿಕೊಂಡ. ಇವನ ಮರಣದಿಂದಾಗಿ ಬ್ಯಾರನ್‍ಗಳಿಗೂ ಇವನ ಉತ್ತರಾಧಿಕಾರಿಗೂ ನಡುವೆ ಒಡಂಬಡಿಕೆ ಸಾಧ್ಯವಾಗಿ ಇವನ ರಾಜವಂಶ ಉಳಿಯುವಂತಾಯಿತು. ಜಾನ್ ಪ್ರಜಾಪೀಡಕನೂ ದ್ರೋಹಿಯೂ ಕ್ರೂರಿಯೂ ಆಗಿದ್ದ. ಷೇಕ್ಸ್‍ಪಿಯರನ ನಾಟಕಗಳಲ್ಲೊಂದಕ್ಕೆ ಇವನು ವಸ್ತುವಾಗಿದ್ದಾನೆ. (ಕೆ.ಎಸ್.ಎಸ್.; ಬಿ.ಸಿ.ಪಿ.)

ಜಾನ್ (ಕ್ಯಾಸ್ಟೀಲ್ ದೊರೆಗಳು) : ಕ್ಯಾಸ್ಟೀಲನ್ನು (ಮಧ್ಯ ಮತ್ತು ಉತ್ತರ ಮಧ್ಯ ಸ್ಪೇನ್ ಪ್ರದೇಶ) ಆಳಿದ ಇಬ್ಬರು ದೊರೆಗಳು.

ಜಾನ್ I : 1358-1390. 1379 ರಿಂದ 1390ರ ವರೆಗೆ ದೊರೆಯಾಗಿದ್ದ. ಮುಂದೆ 2ನೆಯ ಹೆನ್ರಿಯಾಗಲಿದ್ದವನ ಮಗ. ಇವನು ಸದಾ ವ್ಯಾಧಿಗ್ರಸ್ತನೂ ವಿಷಾದಪರನೂ ಆಗಿದ್ದರೂ ಶ್ರದ್ಧಾವಂತ, ಸದುದ್ದೇಶಪೂರಿತ. ಕ್ಯಾಸ್ಟೀಲಿನ ಸಿಂಹಾಸನವನ್ನು ತಂದೆ ಆಕ್ರಮಿಸಿಕೊಂಡಿದ್ದರ ಫಲವನ್ನು ಇವನು ಅನುಭವಿಸಬೇಕಾಯಿತು. ಇಂಗ್ಲಿಷರ ಆಕ್ರಮಣಕಾರಿ ಸೇನೆ ಇವನ ವಿರುದ್ಧವಾಗಿ ಪೋರ್ಚುಗಲ್ಲಿನಲ್ಲಿ ಸಜ್ಜಾಗಿತ್ತು. ಇವನು 7ನೆಯ ಕ್ಲಿಮೆಂಟನಿಗೆ ಸಾಮಂತನಾಗಿರಲು ಒಪ್ಪಿ ಫ್ರೆಂಚರೊಡನೆ ಸ್ನೇಹ ಬೆಳೆಸಿದ. ಕ್ಯಾಸ್ಟೀಲ್ ಭದ್ರವಾಗಿರಬೇಕಾದರೆ ನೆರೆಯ ರಾಜ್ಯದ ಒಡೆತನ ಪಡೆಯಬೇಕು-ಎಂಬುದು ಇವನಿಗೆ ಮನವರಿಕೆಯಾಯಿತು. ತನ್ನ ಮೊದಲನೆಯ ಹೆಂಡತಿ ಸತ್ತಮೇಲೆ ಪೋರ್ಚುಗೀಸಿನ ದೊರೆ ಫರ್ಡಿನೆಂಡಿನ ಉತ್ತರಾಧಿಕಾರಿಣಿ ರಾಜಕುಮಾರಿ ಬೀಟ್ರಿಜûಳನ್ನು ಇವನು ಮದುವೆಯಾದ (1383). 1389ರ ಅನಂತರ ದೇಶದಲ್ಲಿ ಶಾಂತಿ ನೆಲಸಿತು. ಒಂದನೆಯ ಜಾನ್ 1390ರ ಅಕ್ಟೋಬರ್ 9ರಂದು ಆಕಸ್ಮಿಕಕ್ಕೆ ಒಳಗಾಗಿ ಮರಣಹೊಂದಿದ.

ಜಾನ್ II : 1405-1454. ಮೂರನೆಯ ಹೆನ್ರಿಯ ಮಗ. 1406 ರಿಂದ 1454ರ ವರೆಗೆ ಕ್ಯಾಸ್ಟೀಲನ್ನು ಆಳಿದ. ಸಿಂಹಾಸನವನ್ನೇರಿದಾಗ ಇವನು ಬಾಲಕನಾಗಿದ್ದುದರಿಂದ ಈತನ ತಾಯಿ ಮತ್ತು ಚಿಕ್ಕಪ್ಪ ಒಟ್ಟಾಗಿ ಆಡಳಿತ ನೋಡಿಕೊಳ್ಳುತ್ತಿದ್ದರು. ಎರಡನೆಯ ಜಾನನ ನೇರ ಆಳ್ವಿಕೆ ಪ್ರಾರಂಭವಾದ್ದು 1419ರಲ್ಲಿ. ಈತ ಸುಸಂಸ್ಕøತ ದೊರೆ. ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ. ಆದರೆ ರಾಜನಾಗಿ ಅಸಮರ್ಥ. ಅನ್ಯರ ಮಾತಿಗೆ ಕಿವಿಗೊಡುತ್ತ್ತಿದ್ದ. ಆದ್ದರಿಂದ ದೇಶದಲ್ಲಿ ಅಂತಃಕಲಹಗಳು ಸಂಭವಿಸಿದುವು. ರಾಜ್ಯದ ಸರದಾರರು ಪೋರ್ಚುಗೀಸರೊಡನೆ ಸೇರಿಕೊಂಡು ಕುತಂತ್ರಗಳನ್ನು ನಡೆಸಿದರು. ಇವನು 1447ರಲ್ಲಿ ಪೋರ್ಚುಗಲ್ಲಿನ ಇಸಬೆಲಳನ್ನು ವಿವಾಹವಾದ. ಇದು ಎರಡನೆಯ ಮದುವೆ. ಈಕೆ ಜಾನನ ಉತ್ತರಾಧಿಕಾರಿ ಹೆನ್ರಿಯ (ಅನಂತರ 4ನೆಯ ಹೆನ್ರಿ) ಒಂದಿಗೆ ಸೇರಿ, ಜಾನನ ನಂಬಿಕೆ ಗಳಿಸಿದ್ದ ದಕ್ಷ ಹಾಗೂ ದಿಟ್ಟ ಅಧಿಕಾರಿ ಅಲ್ವಾರೊದ ಲೂನನ ಬಗ್ಗೆ ಅವನ ಮನಸ್ಸು ಕೆಡಿಸಿ, ಲೂನನನ್ನು ಸೆರೆಹಿಡಿದು ಕೊಲ್ಲಿಸುವಂತೆ ಮಾಡಿದಳು. ಜಾನ್ 1454ರ ಜುಲೈ 21 ರಂದು ತೀರಿಕೊಂಡ. ತಾನು ಮಾಡಿದ್ದು ತಪ್ಪಾಯಿತೆಂಬ ಪಶ್ಚಾತ್ತಾಪದಿಂದ ಕೊರಗಿ ಇವನು ಸತ್ತಿರಬಹುದೆಂದು ಭಾವಿಸಲಾಗಿದೆ. (ಕೆ.ಎಸ್.ಎಸ್.; ಬಿ.ಸಿ.ಪಿ.)

ಜಾನ್ (ಡೆನ್ಮಾರ್ಕಿನ ದೊರೆ) : 1455-1513. 1483-1513 ರಲ್ಲಿ ಡೆನ್ಮಾರ್ಕ್ ಮತ್ತು ನಾರ್ವೇಗಳಿಗೂ 1497-1501ರಲ್ಲಿ ಸ್ವೀಡನ್ನಿಗೂ ದೊರೆಯಾಗಿದ್ದವ. ಒಂದನೆಯ ಕ್ರಿಶ್ಚನನ ಮಗ. ಆಲ್‍ಬಾರ್ಗ್‍ನಲ್ಲಿ 1455ರ ಫೆಬ್ರುವರಿ 2ರಂದು ಜನಿಸಿದ. ಸಿಂಹಾಸನಕ್ಕೆ ಬರುವ ಮುನ್ನ ವಿರೋಧಿಗಳಿಂದ ತೊಂದರೆಗಳನ್ನು ಎದುರಿಸಬೇಕಾಯಿತು. ವಿರೋಧವನ್ನು ಹತ್ತಿಕ್ಕಿ 1483ರಲ್ಲಿ ನಾರ್ವೇ, ಸ್ವೀಡನ್ ಮತ್ತು ಡೆನ್ಮಾರ್ಕ್‍ಗಳನ್ನು ಒಂದುಗೂಡಿಸಿ ರಾಜನಾದ. ಷ್ಲೆಸ್‍ವಿಗ್ ಮತ್ತು ಹೋಲ್‍ಸ್ಟೈನ್ ಪ್ರಾಂತ್ಯಗಳಲ್ಲಿ ತನ್ನ ತಮ್ಮನಾದ ಫ್ರೆಡರಿಕನೊಡನೆ ಜಂಟಿ ಆಡಳಿತ ನಡೆಸುವ ಅಧಿಕಾರವನ್ನು 1482ರಲ್ಲಿ ಪಡೆದ.

ಒಪ್ಪಂದಕ್ಕೆ ವಿರುದ್ಧವಾಗಿ ಜಾನ್ ನಿರಂಕುಶಾಧಿಕಾರಿಯಂತೆ ಡೆನ್ಮಾರ್ಕಿನಲ್ಲಿ ಆಡಳಿತ ನಡೆಸಿದ. ಪಾರ್ಲಿಮೆಂಟನ್ನು (ರಿನ್‍ರಾಡ್) ಉದಾಸೀನಭಾವದಿಂದ ಕಂಡ. ಮಧ್ಯಮ ವರ್ಗದ ಜನರಿಗೆ ಇವನು ವಿಶೇಷ ಗಮನ ನೀಡುತ್ತಿದ್ದುದರಿಂದ ಅವರ ಬೆಂಬಲ ಇವನಿಗೆ ಇತ್ತು. ಇಂಗ್ಲೆಂಡ್ ಮತ್ತು ನೆದರ್‍ಲೆಂಡ್ಸ್‍ನೊಡನೆ 1490ರಲ್ಲಿ ಒಪ್ಪಂದ ಮಾಡಿಕೊಂಡು, ಹ್ಯಾನ್ಸಿಯಾಟಿಕ್ ಲೀಗಿನ (ವ್ಯಾಪಾರಿಗಳ ಸಂಘ) ಅಧಿಕಾರವನ್ನು ಹತ್ತಿಕ್ಕಿದ. ರಷ್ಯದ 3ನೆಯ ಇವಾನನೊಡನೆ ಸೇರಿಕೊಂಡು, ಸ್ವೀಡನ್ನಿನ ರೀಜೆಂಟ್ ಆಗಿದ್ದ ಸ್ಟೆನ್‍ಸ್ಟೂರ್ ರಾಜೀನಾಮೆ ನೀಡುವಂತೆ ಮಾಡಿದ (1497). ಬಾಲ್ಟಿಕ್ ಸಮುದ್ರದ ದಂಡೆಯಲ್ಲಿ ನೌಕಾದಳವೊಂದನ್ನು ಕಟ್ಟಲು ಇವನು ಪ್ರಯತ್ನಿಸಿದ. ಆದರೆ ಡಿಟ್‍ಮಾರ್ಷೆನ್ ಪ್ರಾಂತ್ಯದ ರೈತರು ಇವನ ಮತ್ತು ಇವನ ತಮ್ಮ ಫ್ರೆಡರಿಕನ ಯೋಧರನ್ನು ಸೋಲಿಸಿದಾಗ (1500) ಬಿಕ್ಕಟ್ಟು ಉಂಟಾಯಿತು. 1501ರಲ್ಲಿ ಸ್ವೀಡನ್ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. 1510-12ರಲ್ಲಿ ಸ್ವೀಡನ್ ಮತ್ತು ಲೂಬೆಕ್ ವಿರುದ್ಧ ನಡೆದ ಯುದ್ಧದಲ್ಲಿ ಜಾನನ ಹೊಸ ನೌಕಾಪಡೆಯ ಬಲ ಎಷ್ಟೆಂಬುದು ವ್ಯಕ್ತವಾಯಿತು. ಜಾನ್ 1513ರ ಫೆಬ್ರುವರಿ 20ರಂದು ಮರಣ ಹೊಂದಿದ. (ಕೆ.ಎಸ್.ಎಸ್.)

ಜಾನ್ (ಪೋರ್ಚುಗಲ್ ದೊರೆಗಳು) : ಜಾನ್ I : 1357-1433. ಒಂದನೆಯ ಪೇದ್ರೂನ ಮಗ. ಮಲ ಅಣ್ಣ 1ನೆಯ ಫರ್ಡಿನೆಂಡ್ ಗಂಡುಸಂತಾನವಿಲ್ಲದೆ ಮಡಿದಾಗ ಫರ್ಡಿನೆಂಡನ ಮಗಳು ರಾಣಿಯಾಗುವುದನ್ನು ತಪ್ಪಿಸಿ ಜಾನ್ ದೊರೆಯಾದ. ಇವನ ಆಳ್ವಿಕೆ ಜಯಪ್ರದವಾಗಿತ್ತು. ಈತ 1433ರಲ್ಲಿ ಮರಣ ಹೊಂದಿದ.

ಜಾನ್ II : 1455-1495. ಐದನೆಯ ಆಫೋನ್ಸೂನ ಮಗ. 1481ರಲ್ಲಿ ಪಟ್ಟಕ್ಕೆ ಬಂದ. ತರುವಾಯ ಪಾಳೆಯಗಾರರ ಪ್ರಾಬಲ್ಯ ಅಡಗಿಸಿದ. ಶತ್ರುರಾಜ್ಯವಾದ ಕ್ಯಾಸ್ಟೀಲಿನೊಡನೆ ವ್ಯವಹಾರವನ್ನಿಟ್ಟುಕೊಂಡಿದ್ದ ಬ್ರಗಾನ್‍ಜóದ ಡ್ಯೂಕನನ್ನು ಮರಣದಂಡನೆಗೆ ಗುರಿಪಡಿಸಿದ. ಮತ್ತೊಬ್ಬ ಡ್ಯೂಕನನ್ನೂ ರಾಜದ್ರೋಹದ ಆಪಾದನೆಗಾಗಿ ಮರಣದಂಡನೆಗೆ ಗುರಿಪಡಿಸಿದ. ಪರಿಶೋಧಕ ಪ್ರವಾಸಿಗಳಿಗೆ ಇವನಿಂದ ವಿಶೇಷ ಪ್ರೋತ್ಸಾಹ ಲಭಿಸಿತು. ಪೋರ್ಚುಗೀಸ್ ನಾವಿಕ ಬಾರ್ಟೂಲೂಮೇಯ ಡೀಯಸ್ ದಕ್ಷಿಣ ಆಫ್ರಿಕದ ಗುಡ್ ಹೋಪ್ ಭೂಶಿರವನ್ನು ಬಳಸಿ ಯಾನಮಾಡಿದ್ದು (1488) ಇವನ ಪೋತ್ಸಾಹದಿಂದಲೇ. ವಾಣಿಜ್ಯ ವಿಷಯಗಳ ಬಗ್ಗೆ ಇವನಿಗೆ ಕ್ಯಾಸ್ಟೀಲ್ ರಾಜ್ಯದೊಂದಿಗೆ ವೈಮನಸ್ಯ ಉಂಟಾಗಿತ್ತು. 1494ರಲ್ಲಿ ಒಪ್ಪಂದ ಏರ್ಪಟ್ಟಿತು. ಜಾನ್ ಗಂಡು ಸಂತಾನವಿಲ್ಲದೆ 1495ರಲ್ಲಿ ಮಡಿದ.

ಜಾನ್ III : 1502-1557. ಒಂದನೆಯ ಮ್ಯಾನ್ಯುಯೆಲನ ಮಗ. ಲಿಸ್ಬನ್‍ನಲ್ಲಿ 1502ರಲ್ಲಿ ಜನಿಸಿದ. 1521ರಲ್ಲಿ ಪಟ್ಟಕ್ಕೆ ಬಂದ. ಚಕ್ರವರ್ತಿ 5ನೆಯ ಚಾಲ್ರ್ಸನ ತಂಗಿ ಕ್ಯಾದರೀನಳನ್ನು 1524ರಲ್ಲಿ ಜಾನನೂ ಜಾನನ ತಂಗಿಯನ್ನು ಚಾಲ್ರ್ಸನೂ ಮದುವೆಯಾದರು. ಇವನು ಚರ್ಚಿನ ಪ್ರಭಾವಕ್ಕೆ ವಿಶೇಷವಾಗಿ ಒಳಗಾಗಿದ್ದ. 1557ರಲ್ಲಿ ಮರಣ ಹೊಂದಿದ. ಅನಂತರ ಇವನ ಮೊಮ್ಮಗ ಸೆಬಾಸ್ಟಿಯನ್ ಪಟ್ಟಕ್ಕೆ ಬಂದ.

ಜಾನ್ Iv : 1604-1656. ಬ್ರಗಾನ್‍ಜó ರಾಜಮನೆತನದ ಸ್ಥಾಪಕ. 1604ರಲ್ಲಿ ಜನಿಸಿದ. 1630ರಲ್ಲಿ ತಂದೆಯ ಮರಣಾನಂತರ ಬಗ್ರಾನ್‍ಜóದ ಡ್ಯೂಕ್ ಆದ. 1640ರಲ್ಲಿ ನಡೆದ 4ನೆಯ ರಾಷ್ತ್ರೀಯ ಕ್ರಾಂತಿಯ ಫಲವಾಗಿ ಹಿಸ್ಟಾನೊಲೂಸಿಟೇನಿಯನ್ ಪ್ರಭುತ್ವ ಕೊನೆಗೊಂಡಾಗ ಜಾನ್ ದೊರೆಯಾದ. ಈತ 1656ರಲ್ಲಿ ಮರಣ ಹೊಂದಿದ. ಇವನ ಅನಂತರ ರಾಜನಾದವನು ಇವನ ಮಗ 6ನೆಯ ಆಫೋನ್ಸೂ.

ಜಾನ್ v : 1687-1750. ಎರಡನೆಯ ಪೇದ್ರೂನ ಮಗ. 1689ರಲ್ಲಿ ಲಿಸ್ಬನ್‍ನಲ್ಲಿ ಜನಿಸಿದ. 1706ರಲ್ಲಿ ತಂದೆಯ ಮರಣಾನಂತರ ಪಟ್ಟಕ್ಕೆ ಬಂದ. ಆಸ್ಟ್ರಿಯದ ಚಕ್ರವರ್ತಿ 1ನೆಯ ಲೀಯೊಪಾಲ್ಡನ ಮಗಳು ಮಾರ್ಯಾನಾಳನ್ನು 1708ರಲ್ಲಿ ಮದುವೆಯಾದ. ಇದರಿಂದ ಆಸ್ಟ್ರ್ರಿಯದೊಡನೆ ಗಾಢ ಮೈತ್ರಿ ಏರ್ಪಡುವಂತಾಯಿತು. 1713ರಲ್ಲಿ ಫ್ರಾನ್ಸಿನೊಡನೆಯೂ 1714ರಲ್ಲಿ ಸ್ಪೇನಿನೊಡನೆಯೂ ನಿಷ್ಪಲ ಯುದ್ಧಗಳನ್ನು ನಡೆಸಿದ ತರುವಾಯ ಶಾಂತಿ ಒಪ್ಪಂದಗಳನ್ನು ಜಾನ್ ಮಾಡಿಕೊಂಡ. 1748ರಲ್ಲಿ ಪೋಪ್ 14ನೆಯ ಬೆನೆಡಿಕ್ಟ್ ಇವನಿಗೆ ಅತ್ಯಂತ ಶ್ರದ್ಧಾನ್ವಿತ ಪ್ರಭು ಎಂಬ ಬಿರುದು ನೀಡಿದ. ಜಾನ್ 1750ರಲ್ಲಿ ಮರಣಹೊಂದಿದ. ಅನಂತರ ಪಟ್ಟಕ್ಕೆ ಬಂದವನು ಮಗ ಜೋಸೆಫ್. ಜಾನ್ vI : 1767-1826. ಒಂದನೆಯ ಮರಿಯ ಮತ್ತು 3ನೆಯ ಪೇದ್ರೂ ಇವರ ಮಗ. 1767ರಲ್ಲಿ ಲಿಸ್ಬನ್ ನಗರದಲ್ಲಿ ಜನಿಸಿದ. ತಾಯಿ ಮರಿಯಳಿಗೆ 1792ರಲ್ಲಿ ಮತಿವಿಕಲ್ಪವಾದಾಗ ಇವನು ಅವಳ ಪರವಾಗಿ ಆಡಳಿತ ನಡೆಸುತ್ತಿದ್ದು, 1799ರಲ್ಲಿ ರೀಜೆಂಟ್ ಆದ. 1816ರಲ್ಲಿ ಅವಳು ತೀರಿಕೊಂಡಾಗ ಇವನಿಗೆ ದೊರೆತನ ಬಂತು. 1807ರಲ್ಲಿ ಇವನು ರೀಜೆಂಟ್ ಆಗಿದ್ದಾಗ, ನೆಪೋಲಿಯನನ ವಿರುದ್ಧ ಇಂಗ್ಲೆಂಡಿನ ಪಕ್ಷ ವಹಿಸಿದ. ಆದರೆ ಫ್ರೆಂಚ್ ಸೇನೆಯ ಆಕ್ರಮಣವನ್ನು ತಡೆಯಲಾಗಲಿಲ್ಲ. ಶತ್ರುವಿಗೆ ಸೆರೆಯಾಗದಂತೆ ತಪ್ಪಿಸಿಕೊಳ್ಳಲು ಇವನು ಇಡೀ ಆಸ್ಥಾನದೊಡನೆ ಬ್ರಜಿóಲಿಗೆ ಹೋದ. ಸರ್ಕಾರ ಅಲ್ಲಿಗೆ ವರ್ಗವಾಯಿತು. 1820ರಲ್ಲಿ ಪೋರ್ಚುಗಲ್‍ನಲ್ಲಿ ಕ್ರಾಂತಿ ಆಗಿ ಸಂವೈಧಾನಿಕ ರಾಜತ್ವ ಘೋಷಿತವಾದಾಗ ಇವನು ಸ್ವದೇಶಕ್ಕೆ ಹಿಂದಿರುಗಬೇಕಾಗಿ ಬಂತು. 1825ರಲ್ಲಿ ಇವನು ಬ್ರಜಿóಲಿನ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡಿದ. ಜಾನ್ 1826ರಲ್ಲಿ ತೀರಿಕೊಂಡ. ಅನಂತರ ಪಟ್ಟಕ್ಕೆ ಬಂದವನು ಇವನ ಮೊದಲ ಮಗ 4ನೆಯ ಪೇದ್ರೂ. (ಕೆ.ಎಸ್.ಎಸ್.; ಬಿ.ಸಿ.ಪಿ.)

ಜಾನ್ (ಪೋಲೆಂಡಿನ ದೊರೆಗಳು) : ಜಾನ್ I : ಜಾನ್ ಆಲ್ಬರ್ಟ್, 1459-1501. 1492 ರಿಂದ 1501ರ ವರೆಗೆ ಪೋಲೆಂಡಿನ ರಾಜನಾಗಿದ್ದ. ನಾಲ್ಕನೆಯ ಬಸಿಮಿರನ ಮೂರನೆಯ ಮಗ. ರಾಜಕುಮಾರನಾಗಿದ್ದಾಗ ಟಾಟಾರ್ ಜನರನ್ನು ಸೋಲಿಸಿ (1487) ಖ್ಯಾತಿ ಗಳಿಸಿದ. ಒಳ್ಳೆಯ ಮೇಧಾವಿ, ಆದರೆ ಅಹಂಕಾರಿ. ಡ್ಯಾನೂಬ್ ನದೀಮುಖದ ಶಾಖೆಗಳಲ್ಲೊಂದಾದ ಕೀಲಿಯದ ದಂಡೆಯ ರೇವುಗಳನ್ನೂ ನೀಸ್ಪರ್ ನದೀಮುಖಜಭೂಮಿಯ ಬೆಲ್ಗರಾಡಿನ ರೇವುಗಳನ್ನೂ ಮತ್ತೆ ವಶಪಡಿಸಿಕೊಳ್ಳಲು ಯತ್ನಿಸಿದ. ಇದಕ್ಕಾಗಿ ಮಾಲ್ಡೇವಿಯದ ವಿರುದ್ಧ ಯುದ್ಧದಲ್ಲಿ ಉತ್ತರದಲ್ಲಿ ಬಹು ಶ್ರಮದಿಂದ ವಿಜಯಗಳಿಸಿದನಾದರೂ 1501ರಲ್ಲಿ ಇವನು ಅನಿರೀಕ್ಷಿತವಾಗಿ ತೀರಿಕೊಂಡದ್ದರಿಂದ ಇವನ ಉದ್ದೇಶ ಫಲಿಸಲಿಲ್ಲ.

ಜಾನ್ II : ಜಾನ್ ಕ್ಯಾಸಿಮಿರ್. 1609-1672. 1648 ರಿಂದ 1668ರ ವರೆಗೆ ಆಳಿದ. ಮೂರನೆಯ ಸಿಗಿಸ್‍ಮಂಡನ ಮಗ. ಮೊದಲು ಆಸ್ಟ್ರಿಯದಲ್ಲಿ ಸೇವೆ ಸಲ್ಲಿಸಿ, ಫ್ರೆಂಚರೊಡನೆ ನಡೆದ ಯುದ್ಧದಲ್ಲಿ ಭಾಗವಹಿಸಿದ್ದ. ಎರಡು ವರ್ಷ ಫ್ರಾನ್ಸಿನಲ್ಲಿ ಕೈದಿಯಾಗಿದ್ದ. ರಾಜಕೀಯದಿಂದ ಎದೆಗುಂದಿ, 1640ರಲ್ಲಿ ಕ್ರೈಸ್ತಮಂಡಲಿಯ ನವ ಸದಸ್ಯನಾಗಿ, 1646ರಲ್ಲಿ ದೀಕ್ಷಾರಹಿತ ಕಾರ್ಡಿನಲ್ ಆಗಿದ್ದ. ಆದರೆ 1648ರಲ್ಲಿ ಇವನನ್ನು ಪೋಲೆಂಡಿನ ರಾಜನಾಗಿ ಆರಿಸಲಾಯಿತು. ಕಾಸ್ಯಾಕ್ಸ್ ಮತ್ತು ಟಾಟಾರ್ ಜನಾಂಗಗಳ ಮೇಲೆ ಯುದ್ಧ ಮಾಡಿ ಜಯಗಳಿಸಿದ. ಉಕ್ರೇನಿನ ಮೇಲೆ ಹತೋಟಿ ಸ್ಥಾಪಿಸಿದ. ಸ್ವೀಡನ್ನಿನ 10ನೆಯ ಚಾಲ್ರ್ಸ್ ಗುಸ್ತಾವಸ್ ಪೋಲೆಂಡಿನ ಮೇಲೆ ದಾಳಿ ಮಾಡಿದಾಗ, ಕ್ಯಾಸಿಮಿರ್ ಸಿಂಹಾಸನ ತ್ಯಜಿಸಿ (1655) ಓಡಿಹೋದ. ರೈತರು ದಂಗೆ ಎದ್ದಾಗ ಮತ್ತೆ ಪೋಲೆಂಡಿಗೆ ಬಂದ (1656). ಸ್ವೀಡನ್ನಿನ ವಿರುದ್ಧ ಸತತ ಕದನ ನಡೆಸಿದ. 1660ರಲ್ಲಿ ಯುದ್ಧ ಕೊನೆಗೊಂಡಿತು. ರಷ್ಯದೊಡನೆ 1667ರಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡ. ಈ ಯುದ್ಧಗಳಿಂದ ಪೋಲೆಂಡಿನ ಆರ್ಥಿಕ ಸ್ಥಿತಿ ಹದಗೆಟ್ಟಿತು. ಅನಾಯಕತ್ವ ತಲೆದೋರಿತು. ಪಾಳೆಯಗಾರರು ದಂಗೆ ಎದ್ದರು. ಜಾನನ ನಿರಂಕುಶಾಧಿಕಾರವನ್ನು ಎದುರಿಸಿದರು. ಇದರಿಂದ ಬೇಸತ್ತ ಜಾನ್ 1668ರ ಸೆಪ್ಟೆಂಬರ್ 16ರಂದು ಸಿಂಹಾಸನ ತ್ಯಜಿಸಿದ. 1672ರಲ್ಲಿ ಮರಣ ಹೊಂದಿದ. (ಕೆ.ಎಸ್.ಎಸ್.)

ಜಾನ್ III : 1629-1696. 1674 ರಿಂದ 1696ರ ವರೆಗೆ ಪೋಲೆಂಡನ್ನಾಳಿದ ದೊರೆ. ವಿದ್ಯಾವಂತ. ಶಿಕ್ಷಣ ಗಳಿಸಿದ ಮೇಲೆ ಫ್ರಾನ್ಸ್, ಇಂಗ್ಲೆಂಡ್ ಮತ್ತು ನೆದರ್‍ಲೆಂಡ್‍ಗಳಲ್ಲಿ ಎರಡು ವರ್ಷ ಸಂಚರಿಸಿ 1648ರಲ್ಲಿ ಪೋಲಂಡಿಗೆ ಹಿಂದಿರುಗಿದ. ನಾನಾ ಕದನಗಳಲ್ಲಿ ಭಾಗವಹಿಸಿದ ಜಾನ್ 1673ರ ವೇಳೆಗೆ ಬಲಿಷ್ಠನಾಗಿದ್ದ. ಪೋಲೆಂಡಿನ ಆಗಿನ ದೊರೆ ಸತ್ತ ಸುದ್ದಿ ತಿಳಿದಾಗ ಅವನು ಗಡಿಯಲ್ಲಿದ್ದ. ಅಲ್ಲಿಂದ 6,000 ಯೋಧರೊಡನೆ ಹಿಂದಿರುಗಿ, ದೊರೆತನಕ್ಕೆ ಇದ್ದ ಸ್ಪರ್ಧಿಗಳನ್ನು ಬೆದರಿಸಿದ. 1674ರಲ್ಲಿ ಅವನು ದೊರೆಯಾಗಿ ಆಯ್ಕೆ ಹೊಂದಿದ. ಡ್ಯೂಕ್ ಪ್ರಷ್ಯ ಪ್ರದೇಶವನ್ನು ಹೋಹೆನ್‍ಜಾಲರ್ನ್ಸ್ ಮನೆತನದವರಿಂದ ಕಸಿದುಕೊಳ್ಳಲು ಫ್ರಾನ್ಸಿನ 14ನೆಯ ಲೂಯಿ ದೊರೆಯ ಸಹಾಯವನ್ನು ಪಡೆಯಲು ಯತ್ನಿಸಿ ವಿಫಲನಾದ. ಅನಂತರ ಪೋಲೆಂಡ್ ಮತ್ತು ಫ್ರಾನ್ಸ್‍ಗಳ ನಡುವೆ ಸ್ನೇಹಭಾವ ಕುಗ್ಗಿತು. ಪವಿತ್ರ ರೋಮನ್ ಚಕ್ರವರ್ತಿ 1ನೆಯ ಲೀಯೊಪಾಲ್ಡನೊಡನೆ 1683ರಲ್ಲಿ ತುರ್ಕರ ವಿರುದ್ಧ ವಾರ್ಸ ಒಪ್ಪಂದ ಮಾಡಿಕೊಂಡು, ವಿಯೆನ್ನ ಮತ್ತು ಹಂಗರಿಯನ್ನು ಮುತ್ತಿದ್ದ ತುರ್ಕರನ್ನು ಬಡಿದೋಡಿಸಿ ಸಾಹಸ ಪ್ರದರ್ಶಿಸಿದ. ಜಾನನ ಕೊನೆಯ ಹನ್ನೆರಡು ವರ್ಷಗಳ ಆಳ್ವಿಕೆ ಕಷ್ಟಕರವಾಗಿತ್ತು. ಪಾರ್ಲಿಮೆಂಟಿನ ವಿರೋಧ, ಹೆಂಡತಿಯ ಕುತಂತ್ರ. ಹಿಂಸಾಚಾರ ಮೊದಲಾದ ಘಟನೆಗಳಿಂದ ಕೂಡಿತ್ತು. ದುಃಖತಪ್ತನಾದ ಜಾನ್ 1696ರಲ್ಲಿ ಮಡಿದ. (ಬಿ.ಸಿ.ಪಿ.)

ಜಾನ್ (ಫ್ರಾನ್ಸಿನ ದೊರೆಗಳು) : ಜಾನ್ I : ಜನನ ಮತ್ತು ಮರಣ 1316. ನವಾರ್ ದೊರೆ. ಹತ್ತನೆಯ ಲೂಯಿಯ ಮರಣೋತ್ತರ ಮಗ. 1316ರ ನವೆಂಬರ್ 14ರಂದು ಜನಿಸಿದ. ಐದು ದಿನಗಳ ಅನಂತರ, ನವೆಂಬರ್ 19ರಂದು ಗತಿಸಿದ. ಅನಂತರ 5ನೆಯ ಫಿಲಿಪ್ ಎಂದು ಸಿಂಹಾಸನವನ್ನೇರಿದ ಚಿಕ್ಕಪ್ಪನೇ ಇವನನ್ನು ಕೊಲ್ಲಿಸಿದನೆಂದು, ಇಲ್ಲವೇ ಜಾನನ ಬದಲು ಅವನ ಸ್ಥಳದಲ್ಲಿ ಸತ್ತ ಮಗುವೊಂದನ್ನು ಇಟ್ಟನೆಂದು ಅಪವಾದ ಬಂದಿತ್ತು. 1358ರಲ್ಲಿ ಗೈಯನಿನೊ ಎಂಬವನು ತಾನೇ 1ನೆಯ ಜಾನನೆಂದು ಅವನ ತಾಯಿ ಕ್ಲೆಮೆನ್ಸಳನ್ನು ನಂಬಿಸಿದ್ದ. ಆದರೆ ಅವನ ಯತ್ನ ಫಲಿಸಲಿಲ್ಲ. ಅವನು ಕಾರಾಗೃಹದಲ್ಲಿ 1363ರಲ್ಲಿ ತೀರಿಕೊಂಡ.

ಜಾನ್ II: 1319-1364. ಈತ 1350ರಿಂದ 1364ರ ವರೆಗೆ ಫ್ರಾನ್ಸಿನ ದೊರೆಯಾಗಿದ್ದ. ಇವನು 6ನೆಯ ಫಿಲಿಪನ ಹಿರಿಯ ಪುತ್ರ. 1332ರಲ್ಲಿ ಲುಕ್ಸೆಂಬರ್ಗಿನ ಬೋನಳನ್ನು ಮದುವೆಯಾದ. ಆಕೆ 1349ರಲ್ಲಿ ಮರಣ ಹೊಂದಿದಳು. 1350ರಲ್ಲಿ ಜೀನಳನ್ನು ಮದುವೆಯಾದ. 1333ರಲ್ಲಿ ಜಾನನ ತಂದೆ ಇವನನ್ನು ನಾರ್ಮಂಡಿಯ ಡ್ಯೂಕನನ್ನಾಗಿ ನೇಮಿಸಿದ. ಇಂಗ್ಲೀಷರೊಡನೆ 1340, 1341-42 ಮತ್ತು 1346ರಲ್ಲಿ ಯುದ್ಧ ಮಾಡಿದ. ಇವನು 1350ರ ಆಗಸ್ಟ್ 22ರಂದು ಫ್ರಾನ್ಸಿನ ದೊರೆಯಾದ. ನೂರು ವರ್ಷಗಳ ಯುದ್ಧದಲ್ಲಿ ಭಾಗವಹಿಸಿದ. ತೆರಿಗೆಗಳನ್ನು ಹೆಚ್ಚಿಸಿ ರಾಜ್ಯದೊಳಗೆ ಅಶಾಂತಿಯನ್ನು ಹೆಚ್ಚಿಸಿದ. ಪ್ರಜೆಗಳನ್ನು ಹಿಂಸಿಸಿ ಅನ್ಯಾಯವೆಸಗಿದ. 1356ರಲ್ಲಿ ಇಂಗ್ಲಿಷರು ಇವನನ್ನು ಯುದ್ಧದಲ್ಲಿ ಸೆರೆಹಿಡಿದು ಬೋರ್ಡೋಗೂ ಅನಂತರ (1357) ಲಂಡನಿಗೂ ಕರೆದೊಯ್ದರು. ಲಂಡನಿನಲ್ಲಿ ಇವನು ಇಂಗ್ಲಿಷರೊಡನೆ 1358 ಮತ್ತು 1359ರಲ್ಲಿ ಎರಡು ಒಪ್ಪಂದಗಳನ್ನು ಮಾಡಿಕೊಂಡು ಅವರ ಅನೇಕ ಷರತ್ತುಗಳಿಗೆ ಒಪ್ಪಿಗೆ ನೀಡಿದ. ಆದರೆ ಫ್ರಾನ್ಸಿನಲ್ಲಿ ಈ ಒಪ್ಪಂದದ ಬಗ್ಗೆ ವಿರೋಧ ಹುಟ್ಟಿತು. ಕೊನೆಗೆ 1360ರಲ್ಲಿ ಮಾಡಿಕೊಳ್ಳಲಾದ ಬ್ರೆಟನಿ ಕೌಲಿನ ಪ್ರಕಾರ ಜಾನನನ್ನು ಸೆರೆಯಿಂದ ಬಿಡಿಸಿಕೊಳ್ಳಲಾಯಿತು. 1360ರ ಡಿಸೆಂಬರ್‍ನಲ್ಲಿ ಇವನು ಪ್ಯಾರಿಸಿಗೆ ಹಿಂದಿರುಗಿದ. ಇವನು ಸೆರೆಯಲ್ಲಿದ್ದ ಕಾಲದಲ್ಲಿ ಇವನ ಮಗ 5ನೆಯ ಚಾಲ್ರ್ಸ್ ಅಧಿಕಾರ ನಡೆಸುತ್ತಿದ್ದ.

ಜಾನ್ ಧೈರ್ಯವಂತನೂ ಯೋಧನೂ ಆದಾಗ್ಯೂ ರಾಜ್ಯದ ಪಾಳೆಯಗಾರರನ್ನು ಹತೋಟಿಯಲ್ಲಿಟ್ಟುಕೊಳ್ಳುವುದರಲ್ಲಿ ವಿಫಲನಾದ. ಈತನ ರಾಬರ್ಟ್ ಲೂಯಿ, ನಿಕೋಲಸ್ ಎಂಬ ಮಂತ್ರಿಗಳು ಹೀನಕುಲಜರೆಂದು ಪಾಳೆಯಗಾರರು ಟೀಕಿಸಿದರು. ರಾಜನ ಜಡತ್ವದಿಂದಾಗಿ ಫ್ರಾನ್ಸಿನಲ್ಲಿ ಪಾಳೆಯಗಾರರ ಖಾಸಗಿ ಸೇನೆಗಳನ್ನು ಹತ್ತಿಕ್ಕುವ ಕಾರ್ಯ ಸಫಲವಾಗಲಿಲ್ಲ. ಇದಲ್ಲದೆ ಆರು ವರ್ಷಗಳ ಅಂತರದಲ್ಲಿ ದೇಶದ ನಾಣ್ಯದಮೌಲ್ಯ 70ರಷ್ಟು ಕಡಿಮೆಯಾಯಿತು. ಕೊಡಬೇಕಾದ ಹಣಕ್ಕಾಗಿ ಇಂಗ್ಲಿಷರಲ್ಲಿ ಇಡಲಾಗಿದ್ದ ಒತ್ತೆಯಾಳು ಕೇಲೆಯಿಂದ ತಪ್ಪಿಸಿಕೊಂಡಾಗ ಜಾನ್ ಮತ್ತೆ ಲಂಡನಿಗೆ 1364ರಲ್ಲಿ ಹಿಂದಿರುಗಬೇಕಾಯಿತು. 1364ರ ಏಪ್ರಿಲ್ 3ರಂದು ಅವನು ಸವಾಯ್ ಅರಮನೆಯಲ್ಲಿ ಮರಣಹೊಂದಿದ. (ಕೆ.ಎಸ್.ಎಸ್.; ಬಿ.ಸಿ.ಪಿ.)

ಜಾನ್ (ಬಿeóÁಂಟನ್ ಚಕ್ರವರ್ತಿಗಳು) : ಪೂರ್ವ ರೋಮನ್ ಅಥವಾ ಬಿeóÁಂಟಿನ್ ಚಕ್ರಾಧಿಪತ್ಯವನ್ನು ಆಳಿದ ಈ ಹೆಸರಿನ ಚಕ್ರವರ್ತಿಗಳು ಎಂಟು ಮಂದಿ.

ಜಾನ್ I: 925-976. ಇವನು 968ರಿಂದ 976ರ ವರೆಗೆ ಚಕ್ರವರ್ತಿಯಾಗಿ ಆಳಿದ. ಇವನು ಮೊದಲು ಒಬ್ಬ ಸೇನಾಧಿಪತಿ. 2ನೆಯ ಬೇಸಿಲ್‍ನ ರಕ್ಷಕ. ಚಕ್ರವರ್ತಿಯಾಗಿದ್ದ 2ನೆಯ ನೈಸೆಪೊರಸ್ ಫೋಕಾಸನನ್ನು ಕೊಲ್ಲಿಸಿ ಅಧಿಕಾರ ಗಳಿಸಿಕೊಂಡ. ಚಕ್ರಾಧಿಪತ್ಯದ ರಕ್ಷಣೆಗಾಗಿ ಇವನು ಬಲ್ಗೇರಿಯದಲ್ಲಿ ರಷ್ಯನರ ವಿರುದ್ಧವಾಗಿಯೂ ಅರಬರನ್ನು ಎದುರಿಸಿಯೂ ಯುದ್ಧ ಮಾಡಬೇಕಾಯಿತು. ಅವರಿಂದ ಇವನು ಎಡೆಸ್ಸ ಮತ್ತು ಡಮಾಸ್ಕಸನ್ನು ಪಡೆದುಕೊಂಡ.

ಜಾನ್ II : 1088-1143. ಇವನು 1118ರಿಂದ ಚಕ್ರಾಧಿಪತಿಯಾಗಿದ್ದ. ಸರ್ಬ್ ಮತ್ತು ಹಂಗರಿಯನರ ವಿರುದ್ಧ ಇವನು ಹೋರಾಡಿ ಸಾಮ್ರಾಜ್ಯ ರಕ್ಷಿಸಿದ. ಈಜಿಯನ್ ಪ್ರದೇಶಕ್ಕೆ ವೆನಿಸಿನವರು ಅತಿಕ್ರಮಿಸದಂತೆ ಎದುರಿಸಿದ. ಸೈಲೀಷಿಯ ಮತ್ತೆ ಸಾಮ್ರಾಜ್ಯದ ವಶವಾಯಿತು. ಒಂದನೆಯ ಧಾರ್ಮಿಕ ಯುದ್ಧದ ಪರಿಣಾಮವಾಗಿ ಪಶ್ಚಿಮ ಏಷ್ಯದಲ್ಲಿ ಉದ್ಭವಿಸಿದ ಸಮಸ್ಯೆಗಳನ್ನು ಈತ ಎದುರಿಸಬೇಕಾಯಿತು.

ಜಾನ್ III : 1193-1254. ಈತ ಚಕ್ರವರ್ತಿಯಾಗಿ ಆಳ್ವಿಕೆ ನಡೆಸಿದ್ದು 1222ರಿಂದ. ಧಾರ್ಮಿಕ ಯುದ್ಧದಲ್ಲಿ ಈ ಚಕ್ರಾಧಿಪತ್ಯದ ರಾಜಧಾನಿ ಶತ್ರುಗಳ ವಶವಾದ್ದರಿಂದ (1204) ಜಾನ್ ನೈಸೀಯವನ್ನು ರಾಜಧಾನಿಯಾಗಿ ಮಾಡಿಕೊಳ್ಳಬೇಕಾಯಿತು. ಲ್ಯಾಟಿನರ ವಿರುದ್ಧ ಇವನು ಪ್ರಬಲವಾದ ಪ್ರತಿಕಾರ್ಯಾಚರಣೆ ನಡೆಸಿ 1235ರಲ್ಲಿ ಕಾನ್‍ಸ್ಟಾಂಟಿನೋಪಲ್ಲಿಗೆ ಮುತ್ತಿಗೆ ಹಾಕಿದನಾದರೂ ಅದನ್ನು ಮತ್ತೆ ವಶಪಡಿಸಿಕೊಳ್ಳಲಾಗಲಿಲ್ಲ. ಇವನು ಬಲ್ಗೇರಿಯನರಿಂದ ಮ್ಯಾಸೆಡೋನಿಯವನ್ನೂ ದಕ್ಷಿಣ ತ್ರೇಸನ್ನೂ ಪುನಃ ಗೆದ್ದುಕೊಂಡ.

ಜಾನ್ Iv : ಸು. 1250-ಸು.1300. ಇವನು 1258 ರಿಂದ 1259ರ ವರೆಗೆ ಚಕ್ರವರ್ತಿಯಾಗಿ ಆಳಿದ. ಇವನ ತಂದೆ 2ನೆಯ ತೀಯೊಡೋರ್ ಡ್ಯೂಕಾಸನ ಸ್ಥಾನದಲ್ಲಿ ನೈಸೀಯದಲ್ಲಿ ಪಟ್ಟಾಭಿಷಿಕ್ತನಾದಾಗ ಇವನಿಗೆ ಏಳು ವರ್ಷ ವಯಸ್ಸು. ಇವನ ಪೋಷಕ 8ನೆಯ ಮೈಕೇಲ್ ಇವನ ಕಣ್ಣನ್ನು ತೆಗೆಸಿ ಸೆರೆಯಲ್ಲಿಟ್ಟು ತಾನೇ ಚಕ್ರವರ್ತಿಯಾದ.

ಜಾನ್ v : 1332-1391. ಇವನು ಚಕ್ರವರ್ತಿಯಾದ್ದು 1341ರಲ್ಲಿ. 1347ರ ವರೆಗೆ ಇವನ ತಾಯಿ--ಸವಾಯಿಯ ಆನ್-ರೀಜೆಂಟ್ ಆಗಿ ಆಡಳಿತ ನಡೆಸಿದಳು. ಆಗ ಇವನು 6ನೆಯ ಜಾನನಿಂದ ಪದಚ್ಯುತಿ ಹೊಂದಿದ. 1355ರಲ್ಲಿ ಇವನು ಮತ್ತೆ ಸಿಂಹಾಸನವನ್ನು ಗೆದ್ದುಕೊಂಡನಾದರೂ ಬಲ್ಗೇರಿಯನರು ಇವನನ್ನು ಸೋಲಿಸಿ ಸೆರೆಹಿಡಿದರು. ತುರ್ಕರು 1362ರಲ್ಲಿ ಅಡ್ರಿಯಾನೊಪಲನ್ನು ವಶಪಡಿಸಿಕೊಂಡು ಅದನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡರು. 1376ರಲ್ಲಿ ಇವನ ಮಗ 4ನೆಯ ಆಂಡ್ರೋನಿಕಸ್ ಇವನನ್ನು ಸಿಂಹಾಸನದಿಂದ ಕೆಳಕ್ಕಿಳಿಸಿದ. 1379ರಲ್ಲಿ ವೆನಿಷಿಯನರ ಸಹಾಯದಿಂದ ಜಾನ್ ಮತ್ತೆ ಸಿಂಹಾಸನವನ್ನು ಗೆದ್ದುಕೊಂಡು, ತುರ್ಕರ ಸುಲ್ತಾನ 1ನೆಯ ಮುರಾದನ ಸಾಮಂತನೆಂದು ಒಪ್ಪಿಕೊಂಡು, ಮಗನಾದ 2ನೆಯ ಮ್ಯಾನ್ಯುಯೆಲನೊಂದಿಗೆ ಆಳಿದ.

ಜಾನ್ vI : ಸು.1292-1383. ಇವನು 1347ರಿಂದ 1355ರ ವರೆಗೆ ಚಕ್ರವರ್ತಿಯಾಗಿ ಆಳಿದ. ಐದನೆಯ ಜಾನನಿಂದ ಸಿಂಹಾಸನವನ್ನು ಕಿತ್ತುಕೊಂಡು ಅವನೊಂದಿಗೆ ಆಳ್ವಿಕೆ ನಡೆಸುತ್ತಿರುವುದಾಗಿ ಹೇಳಿಕೊಳ್ಳುತ್ತ ತಾನೇ ನಿರಂಕುಂಶ ಪ್ರಭುವಾಗಿ ಆಳ್ವಿಕೆ ನಡೆಸಿದ. ಹೊರಗಿನ ಶತ್ರುಗಳನ್ನು ಇವನು ಎದುರಿಸುತ್ತಲೇ ಇರಬೇಕಾಯಿತು. ಆಗ ಅತ್ಯಂತ ಪ್ರಬಲರಾಗಿದ್ದ ಸರ್ಬರನ್ನು ತಡೆಗಟ್ಟುವ ಉದ್ದೇಶದಿಂದ ಅವನು ತುರ್ಕರ ಸಖ್ಯ ಬೆಳಸಿದ. ತುರ್ಕರು ಆ ಸಮಯದಲ್ಲಿ ಗಲಿಪೋಲಿಯಲ್ಲಿ ಸ್ಥಿರವಾಗಿ ನಿಂತು ಯೂರೋಪಿನಲ್ಲಿ ತಮ್ಮ ಸ್ಥಾನ ಭದ್ರಮಾಡಿಕೊಂಡಿದ್ದರು. ಆರನೆಯ ಜಾನನ ಹಂಚಿಕೆ ಫಲಪ್ರದವಲ್ಲವೆಂಬುದು 1355ರ ವೇಳೆಗೆ ಸ್ಪಷ್ಟವಾಯಿತು. ಐದನೆಯ ಜಾನ್ ಮತ್ತೆ ಅಧಿಕಾರ ವಹಿಸಿಕೊಂಡ. ತನ್ನ ಕಾಲದ ಇತಿಹಾಸ ಬರೆಯಲೆಂದು 6ನೆಯ ಜಾನನನ್ನು ಸಂನ್ಯಾಸಿ ಮಠವೊಂದಕ್ಕೆ ರವಾನಿಸಲಾಯಿತು.

ಜಾನ್ vII : 1360-1412. ಈತ 1425ರಿಂದ ಚಕ್ರವರ್ತಿಯಾಗಿದ್ದ. ಆದರೆ ಇವನು ಸ್ವತಂತ್ರವಾಗಿ ಯಾವಾಗಲೂ ಆಳ್ವಿಕೆ ನಡೆಸಲಿಲ್ಲ. ಪ್ರಬಲರಾದ ತುರ್ಕರಿಂದ ಅಪಾಯವಾಗಬಹುದೆಂಬ ಅಂಜಿಕೆಯಿತ್ತು. ತನ್ನ ಚಿಕ್ಕಪ್ಪ 2ನೆಯ ಮ್ಯಾನ್ಯುಯೆಲನೊಡನೆ ಇವನು ಸಂಯುಕ್ತವಾಗಿ ಆಳಿದ.

ಜಾನ್ vIII : 1391-1448. ಇವನು ಚಕ್ರವರ್ತಿಯಾಗಿದ್ದದ್ದು 1425ರಿಂದ. ತುರ್ಕರ ವಿರುದ್ಧ ಬಿeóÁಂಟಿನ್ ಸಾಮ್ರಾಜ್ಯವನ್ನು ರಕ್ಷಿಸಲು ಕೊಟ್ಟಕೊನೆಯದಾಗಿ ಉಗ್ರವಾಗಿ ಯತ್ನ ನಡೆಸಿದ. ಇದಕ್ಕಾಗಿ ವೆನಿಷಿಯನರ ನೆರವು ಗಳಿಸಿಕೊಂಡ. ಪಶ್ಚಿಮದ ನೆರವನ್ನೂ ಪಡೆಯುವ ಉದ್ದೇಶ ಇವನದಾಗಿತ್ತು. ಅದಕ್ಕಾಗಿ ಇವನು ರೋಮನ್ ಚರ್ಚಿನಲ್ಲಿ ಗ್ರೀಕ್ ಚರ್ಚನ್ನು ಮತ್ತೆ ಸಮಾವೇಶಗೊಳಿಸಲು ಯುಜೀನಿಯಸನಿಗೆ ವಾಗ್ದಾನ ಮಾಡಿ ಫ್ಲಾರೆನ್ಸ್ ಪರಿಷತ್ತಿನಲ್ಲಿ ಭಾಗವಹಿಸಲು 1439ರಲ್ಲಿ ಇಟಲಿಗೆ ಹೋಗಿದ್ದ. (ಕೆ.ಎಸ್.ಎಸ್.)

ಜಾನ್ (ಬೋಹೀಮೀಯದ ದೊರೆ) : 1296-1346. ಮುಂದೆ ಜರ್ಮನ್ ದೊರೆಯಾಗಲಿದ್ದ 7ನೆಯ ಹೆನ್ರಿಯ ಮಗನಾಗಿ 1296ರ ಆಗಸ್ಟ್ 10ರಂದು ಜನಿಸಿದ. ತಾಯಿ ಮಾರ್ಗರೆಟ್. 1310ರಲ್ಲಿ ಈತ ಲಕ್ಸೆಂಬರ್ಗಿನ ಕೌಂಟ್ ಆದ. ಇದೇ ಸಮಯದಲ್ಲಿ ಇವನಿಗೆ ಬೋಹೀಮೀಯದ ಸಿಂಹಾಸನವನ್ನು ನೀಡಲಾಯಿತು. ಜಾನನ ಪತ್ನಿ ಎಲಿಜûಬೆತ್. ಈಕೆ ಗತಿಸಿದ ಬೋಹೀಮೀಯನ್ ದೊರೆ ವೆನ್ಸೆಸ್ಲಾಸನ ತಂಗಿ. ಇವನು ಪಟ್ಟಕ್ಕೆ ಬಂದದ್ದು 1311ರಲ್ಲಿ. ಇವನು ಮೊರೇವಿಯ ಪ್ರಾಂತ್ಯವನ್ನು ಗೆದ್ದು ಬೋಹೀಮೀಯ ರಾಜ್ಯಕ್ಕೆ ಸೇರಿಸಿದ. ಪಟ್ಟಾಭಿಷೇಕದ ಕಾಲದಲ್ಲಿ ಇವನು ಒಂದು ಸನ್ನದನ್ನು ಹೊರಡಿಸಿ, ರಾಜ್ಯದ ಸರದಾರರ ಸ್ವಾತಂತ್ರ್ಯವನ್ನು ಮನ್ನಿಸಿದನಲ್ಲದೆ ವಿದೇಶೀಯರಿಗೆ ತನ್ನ ರಾಜ್ಯದಲ್ಲಿ ಅಧಿಕಾರ ನೀಡುವುದಿಲ್ಲವೆಂದು ಭರವಸೆ ನೀಡಿದ. ಆಮೇಲೆ ಇವನು ಬವೇರಿಯದ ಲೂಯಿಯ ಪಕ್ಷ ಸೇರಿ, ಜರ್ಮನ್ ರಾಜ್ಯಕ್ಕೆ ಅವನ ಪ್ರತಿಸ್ಪರ್ಧಿಯಾಗಿದ್ದ ಆಸ್ಟ್ರಿಯದ ಫ್ರೆಡರಿಕ್ ವಿರುದ್ಧ ಯುದ್ಧದಲ್ಲಿ ಬೆಂಬಲ ನೀಡಿ ಅವನು ಸೋಲುವ ಹಾಗೆ ಮಾಡಿದ. 1325ರಲ್ಲಿ ಪೋಲೆಂಡಿನ ರಾಜ 3ನೆಯ ಕಾಸಿಮೀರನ ವಿರುದ್ಧ ಯುದ್ಧ ಮಾಡಿ ರಾಕ್ಲಾಡ್ಯೂಕನಿಗೆ ತಾನು ಉತ್ತರಾಧಿಕಾರಿಯೆಂದೂ ಇಡೀ ಸೈಲೀಸಿಯದ ಮಹಾಪ್ರಭುವೆಂದೂ ಆತ ಒಪ್ಪುವ ಹಾಗೆ ಮಾಡಿದ. ಈತ 1337ರಲ್ಲಿ ಕುರುಡನಾದ, ಆದರೆ ಅದಕ್ಕೆ ಮುಂಚೆ ಇವನು ಅನೇಕ ಕಡೆಗಳಲ್ಲಿ ಯುದ್ಧಗಳಲ್ಲಿ ಭಾಗವಹಿಸಿದ. ಇತರರಿಗೆ ನೆರವು ನೀಡುವುದೇ ಇವನ ಉದ್ಯೋಗವಾಗಿತ್ತು. ಈ ಯುದ್ಧಗಳಿಂದ ಇವನು ತನ್ನ ರಾಜ್ಯವಾದ ಬೋಹೀಮೀಯದ ಕಡೆಗೆ ಹೆಚ್ಚು ಗಮನ ಕೊಡಲಿಲ್ಲ. ಯುದ್ಧದ ವೆಚ್ಚದ ಬಿಸಿ ತಗುಲಿದಾಗ ಇವನು ತೆರಿಗೆಗಳನ್ನು ಹೆಚ್ಚಿಸಬೇಕಾಯಿತು. ಇದರಿಂದ ಇವನು ಜನಾನುರಾಗ ಕಳೆದುಕೊಂಡ. ಪಾಳೆಯಗಾರರು ದಂಗೆ ಎದ್ದರು. ಪಾರ್ಲಿಮೆಂಟ್ ಪ್ರಬಲವಾಯಿತು. 1333ರಲ್ಲಿ ರಾಜ್ಯದಲ್ಲಿ ಇವನು ತನ್ನ ಮಗ ಚಾಲ್ರ್ಸನನ್ನು ಬೋಹೀಮೀಯದ ರೀಜೆಂಟ್ ಆಗಿ ಮಾಡಿದಾಗ ದೇಶದಲ್ಲಿ ಶಾಂತಿ ನೆಮ್ಮದಿ ನೆಲಸಿದುವು. 1346ರಲ್ಲಿ ಪೋಪನ ನೆರವಿನಿಂದ ಲೂಯಿಯನ್ನು ಅಧಿಕಾರದಿಂದ ಇಳಿಸಿ ತನ್ನ ಮಗ ಚಾರಲ್ಸ್ ಜರ್ಮನರ ದೊರೆಯಾಗಿ ಆಯ್ಕೆಯಾಗುವಂತೆ ಮಾಡಿದ. ಇಂಗ್ಲಿಷರ ವಿರುದ್ಧ ಯುದ್ಧದಲ್ಲಿ ಫ್ರಾನ್ಸಿನ ದೊರೆ 5ನೆಯ ಫಿಲಿಪ್ಪನಿಗೆ ನೆರವು ನೀಡಲು ಹೋಗಿ ಕ್ರೇಸೀಯಲ್ಲಿ ಹೋರಾಡುತ್ತ 1346ರ ಆಗಸ್ಟ್ 26ರಂದು ಮಡಿದ. (ಕೆ.ಎಸ್.ಎಸ್.; ಬಿ.ಸಿ.ಪಿ.)

ಜಾನ್ (ಬ್ರೀಯೆನ್ಸಿನ) : 1148-1237. ಜೆರೂಸಲೆಮ್ ದೊರೆ (1210-1225). ಜೆರೂಸಲೆಮ್‍ನ ರಾಣಿ ಮೇರಿ ದ ಮಾನ್‍ಫೆರಾಳನ್ನು 1210ರಲ್ಲಿ ಮದುವೆಯಾದ. 1212ರಲ್ಲಿ ಅವಳು ತೀರಿಕೊಂಡ ಮೇಲೆ ಅವನು ರೀಜೆಂಟ್ ಆದ. ಈಜಿಪ್ಟ್ ವಿರುದ್ಧ ಐದನೆಯ ಧಾರ್ಮಿಕ ಯುದ್ಧದಲ್ಲಿ (1212-21) ಭಾಗವಹಿಸಿದ. ಜೆರೂಸಲೆಮನ್ನು ಬಿಟ್ಟು ಪಶ್ಚಿಮ ಯೂರೋಪಿನ ಹಲವು ಕಡೆಗಳಲ್ಲಿ ವಾಸಮಾಡಿದ (1223-29). ಚಕ್ರವರ್ತಿ 2ನೆಯ ಫ್ರೆಡರಿಕ್ ಇವನ ಸಿಂಹಾಸನವನ್ನು ಕಸಿದುಕೊಂಡದ್ದು 1225ರಲ್ಲಿ. ಜಾನ್ 1228ರಲ್ಲಿ ಕಾನ್‍ಸ್ಟಾಂಟಿನೋಪಲಿನ ಚಕ್ರವರ್ತಿಯಾಗಿ ಆಯ್ಕೆಯಾಗಿ 1237ರ ವರೆಗೆ, 2ನೆಯ ಬಾಲ್ಡ್‍ವಿನ್ ವಯಸ್ಸಿಗೆ ಬರುವ ತನಕ, ಆ ಸ್ಥಾನದಲ್ಲಿದ್ದ. ಗ್ರೀಕರ ಮತ್ತು ಬಲ್ಗರರ ದಾಳಿಗಳನ್ನು ಹಿಮ್ಮೆಟ್ಟಿಸಿದ್ದು (1235) ಇವನ ಒಂದು ಸಾಧನೆ. (ಕೆ.ಎಸ್.ಎಸ್.)

ಜಾನ್ (ಹಂಗರಿಯ ದೊರೆ) : (1487-1540). 1526ರಿಂದ 1510ರ ವರೆಗೆ ದೊರೆಯಾಗಿದ್ದ. ಹಂಗರಿಯ ಪ್ಯಾಲಟೈನ್ (ರಾಜಾಧಿಕಾರಿ) ಇಸ್ತ್ವಾನ್ eóÁಪೊಲ್ಯಾನ ಮಗ. ಇವನ ಸಾರ್ವಜನಿಕ ಜೀವನ ಆರಂಭವಾದ್ದು 1505ರಲ್ಲಿ. ಪಾರ್ಲಿಮೆಂಟಿನಲ್ಲಿ ಇವನು ಮಂಡಿಸಿದ ಒಂದು ಮಸೂದೆಯನ್ನು ಆ ಸಭೆ ಅಂಗೀಕರಿಸಿ, ಆಗ ಆಳುತ್ತಿದ್ದ ದೊರೆ ಉಲಾಸ್‍ಜ್ಲೋನ ಮರಣಾನಂತರ ಹಂಗರಿಯ ಸಿಂಹಾಸನಕ್ಕೆ ವಿದೇಶಿ ರಾಜಕುಮಾರನನ್ನು ತರಬಾರದೆಂದು ತೀರ್ಮಾನಿಸಿತು. ಅನಂತರ ಇವನೇ ಸಿಂಹಾಸನಕ್ಕೆ ರಾಷ್ಟ್ರೀಯ ಅಭ್ಯರ್ಥಿಯಾದ, ಇದು ಇವನ ಮನೆತನದ ದೀರ್ಘಕಾಲದ ಕನಸಾಗಿತ್ತು. 1511ರಲ್ಲಿ ಇವನು ಟ್ರಾನ್‍ಸಿಲ್ವೇನಿಯದ ಅಧಿಕಾರಿಯಾದ. 1514ರಲ್ಲಿ ನಡೆದ ರೈತರ ದಂಗೆಯನ್ನು ಹತ್ತಿಕ್ಕಿ ಜಮೀನುದಾರರ ಬೆಂಬಲ ಪಡೆದ. 1516ರಲ್ಲಿ ಉಲಾಸ್‍ಜ್ಲೋ ಮರಣಹೊಂದಿದಾಗ ಪಾರ್ಲಿಮೆಂಟು ಜಾನನನ್ನು ಬಾಲದೊರೆ 2ನೆಯ ಲೂಯಿಯ ಪಾಲಕನಾಗಿ ನೇಮಿಸಿತು. ಪ್ಯಾಲಟೈನ್ ಅಧಿಕಾರ ಪಡೆಯುವುದು ಇವನ ಉದ್ದೇಶವಾಗಿತ್ತು. ಆದರೆ ಆಡಳಿತವರ್ಗ ಜಾನ್ ತೊರಿಯನ್ನು ನೇಮಕ ಮಾಡಿತು (1519). ಅನಂತರ ಸಂಭವಿಸಿದ ಒಳಜಗಳದ ಉಪಯೋಗ ಪಡೆದುಕೊಂಡು ತುರ್ಕರು 1521ರಲ್ಲಿ ಬೆಲ್‍ಗ್ರೇಡನ್ನು ಆಕ್ರಮಿಸಿದರು. ಹಂಗರಿಯ ತರುಣ ದೊರೆ ಸೈನ್ಯದೊಂದಿಗೆ ನಾಶಹೊಂದಿದ. 1526ರಲ್ಲಿ ಜಾನನನ್ನು ದೊರೆಯಾಗಿ ಆಯ್ಕೆ ಮಾಡಿತು. ಜಾನನಿಗೂ ಆಸ್ಟ್ರಿಯದ ದೊರೆ ಫರ್ಡಿನೆಂಡನಿಗೂ ಹಂಗರಿಯ ಸಿಂಹಾಸನಕ್ಕಾಗಿ ವಿರಸ ಬೆಳೆಯಿತು. ತುರ್ಕರು ಜಾನನಿಗೆ ಬೆಂಬಲ ನೀಡಿದರು. ಕೊನೆಗೆ ಜಾನನಿಗೆ ಹಂಗರಿಯ ದೊರೆಯೆಂದು ಫರ್ಡಿನೆಂಡ್ ಮನ್ನಣೆ ನೀಡಿದನಾದರೂ (1538) ಅವನ ಮರಣಾನಂತರ ಹಂಗರಿಯ ಸಿಂಹಾಸನ ತನಗೆ ಸೇರಬೇಕೆಂಬುದು ಫರ್ಡಿನೆಂಡನ ಷರತ್ತು. ಆದಾಗ್ಯೂ ತುರ್ಕರ ಬೆಂಬಲದಿಂದ ಜಾನ್ ಹಂಗರಿಯ ಸಿಂಹಾಸನಕ್ಕೆ ತನ್ನ ಮಗನನ್ನು ಉತ್ತರಾಧಿಕಾರಿಯಾಗಿ ಮಾಡಿದ. 1540ರ ಜುಲೈ 22ರಂದು ಜಾನ್ ಮರಣಹೊಂದಿದ. (ಕೆ.ಎಸ್.ಎಸ್.; ಬಿ.ಸಿ.ಪಿ.)

ಜಾನ್ (ಸ್ಯಾಕ್ಸನಿಯ ದೊರೆ) : 1801-1873. ಈತ 1854-73ರಲ್ಲಿ ಸ್ಯಾಕ್ಸನಿಯನ್ನಾಳಿದ. ಜನನ ಡ್ರೆಸ್ಡನಿನಲ್ಲಿ, ಸೋದರ ಫ್ರೆಡರಿಕ್ 2ನೆಯ ಆಗಸ್ಟಸನ ಅನಂತರ ದೊರೆಯಾದ. ಏಳು ವಾರಗಳ ಯುದ್ಧದಲ್ಲಿ ಆಸ್ಟ್ರಿಯವನ್ನು ಬೆಂಬಲಿಸಿದ. ಉತ್ತರ ಜರ್ಮನ್ ಒಕ್ಕೂಟವನ್ನು ಸೇರಲು ಪ್ರಷ್ಯದ ಒತ್ತಾಯಕ್ಕೆ ಇವನು ಮಣಿಯಬೇಕಾಯಿತು. ಫ್ರಾಂಕೊ-ಪ್ರಷ್ಯನ್ ಯುದ್ಧದಲ್ಲಿ (1870-71) ಈತ ಪಾತ್ರವಹಿಸಿದ್ದ. ಇಟಾಲಿಯನ್ ಸಾಹಿತ್ಯದಲ್ಲಿ, ಡಾಂಟೇಯ ಕೃತಿಗಳಲ್ಲಿ ಇವನಿಗೆ ಬಹಳ ಆಸಕ್ತಿಯಿತ್ತು. ಫಿಲಲೀತೀಸ್ (ಸತ್ಯಪ್ರಿಯ) ಎಂಬ ಕಾವ್ಯನಾಮದಲ್ಲಿ ಇವನು ಕೃತಿಗಳನ್ನು ರಚಿಸಿದ್ದಾನೆ. ಡಾಂಟೇಯ ಡಿವೈನ್ ಕಾಮೆಡಿಯನ್ನು ಇವನು ಪ್ರಕಟಿಸಿದ್ದಾನೆ. (ಕೆ.ಎಸ್.ಎಸ್.)

ಜಾನ್ (ಇತರರು) : ಯೂರೋಪಿನ ರಾಜಕೀಯ ಇತಿಹಾಸದಲ್ಲಿ ಜಾನ್ ಎಂಬ ಹೆಸರಿನಲ್ಲಿ ಪ್ರಸಿದ್ಧರಾದ ಡ್ಯೂಕರೇ ಮುಂತಾದವರು ಹಲವರಿದ್ದಾರೆ. ಪ್ರಮುಖರಾದ ಕೆಲವರನ್ನು ಮುಂದೆ ಉಲ್ಲೇಖಿಸಿದೆ:

ಜಾನ್ (ನಿರ್ಭೀತ) : 1371-1419. ಬರ್ಗಂಡಿಯ ಡ್ಯೂಕ್ (1404-1419), ಡ್ಯೂಕ್ ಫಿಲಿಪನ ಮಗ. ಜಾನ್ (ಹ್ಯಾನ್ಸ್) : 1513-1571. ಬ್ರ್ಯಾಂಡನ್‍ಬರ್ಗ್ ಪಾಳೆಯಗಾರ. ಚುನಾಯಕ 1ನೆಯ ಜೋಕಿಮನ ಮಗ. ಧರ್ಮಸುಧಾರಣೆಯನ್ನು ಜಾರಿಗೆ ತಂದವ (1537).

ಜಾನ್ (ಆಸ್ಟ್ರಿಯದ) : ಆಸ್ಟ್ರಿಯದ ಜಾನರು ಇಬ್ಬರು. 1547-1578ರಲ್ಲಿ ಬದುಕಿದ್ದವನು ಹಿರಿಯ. ಇವನು ಡಾನ್ ಹ್ವಾನ್ ಎಂದು ಪ್ರಸಿದ್ಧ. ಈತ ಸ್ಪ್ಯಾನಿಷ್ ಸೇನಾಧಿಕಾರಿ. ಐದನೆಯ ಚಾಲ್ರ್ಸನಿಗೆ ಬಾರ್ಬರ ಬ್ಲಾಮ್‍ಬರ್ಗಳಲ್ಲಿ ಹುಟ್ಟಿದವ. 1558ರಲ್ಲಿ ಚಾಲ್ರ್ಸ್ ಇವನನ್ನು ತನ್ನ ಮಗನೆಂದು ಉಯಿಲಿನಲ್ಲಿ ಉಲ್ಲೇಖಿಸಿದ. ಎರಡನೆಯ ಫಿಲಿಪ್ ಇವನಿಗೆ ರಾಜಕುಮಾರನ ಸ್ಥಾನ ನೀಡಿದ. ಇವನು ಬಾರ್ಬರಿ ಕಡಲ್ಗಳ್ಳರ ವಿರುದ್ಧ ಸೇನಾಧಿಪತಿಯಾಗಿ ಭಾಗವಹಿಸಿದ. ಆಂಡಾಲೂಸಿಯದಲ್ಲಿ ದಂಗೆಯನ್ನು ಅಡಗಿಸಿದವನು ಈತ (1569-70). ತುರ್ಕರನ್ನು ಲೆಪಾಂಟೊದಲ್ಲಿ ಸೋಲಿಸಿದ (1571). ನೌಕಾಪಡೆಯ ಅಧಿಪತಿ ಈತ. ತುರ್ಕರಿಂದ 1573ರಲ್ಲಿ ಇವನು ಟ್ಯೂನಿಸನ್ನು ಗೆದ್ದ. 1576ರಲ್ಲಿ ಇವನು ನೆದರ್ಲೆಂಡ್ಸಿನ ಮಹಾರಾಜ್ಯಪಾಲನಾಗಿ ನೇಮಕ ಹೊಂದಿದ. ಇವನು ಘೆಂಟ್ ಪ್ರದೇಶವನ್ನು ಹತೋಟಿಗೆ ಒಳಪಡಿಸಿದ್ದು 1576ರಲ್ಲಿ. ಸ್ಪೇನಿನ ವಿರುದ್ಧ ಇವನು ಡಚ್ ಪ್ರಾಂತ್ಯವನ್ನು ಸಂಘಟಿಸಿದ. 1578ರಲ್ಲಿ ಡಚ್ಚರನ್ನು ಕದನವೊಂದರಲ್ಲಿ ಸೋಲಿಸಿದ. ಆದರೆ ಫಿಲಿಪನ ನೆರವು ಸಾಕಷ್ಟು ದೊರಕಲಿಲ್ಲವಾದ್ದರಿಂದ ಅಂತಿಮ ವಿಜಯ ಇವನದಾಗಲಿಲ್ಲ. ಈತ ಹಠಾತ್ತನೆ 1578ರಲ್ಲಿ ತೀರಿಕೊಂಡ.

ಆಸ್ಟ್ರಿಯದ ಇನ್ನೊಬ್ಬ ಜಾನನೂ ಡಾನ್ ಹ್ವಾನ್ ಎಂದು ಪ್ರಸಿದ್ಧ. ಇವನು ಕಿರಿಯ ಜಾನ್ (1629-1679). ಸ್ಪ್ಯಾನಿಷ್ ಸೇನಾಧಿಕಾರಿ. ಸ್ಪೇನಿನ 4ನೆಯ ಫಿಲಿಪನಿಗೆ ಮರಿಯ ಕಾಲ್ಡೆರಾನಳಲ್ಲಿ ಜನಿಸಿದವ. ದೊರೆ ಇವನಿಗೆ ತನ್ನ ಮಗನೆಂದು ಮನ್ನಣೆ ನೀಡಿ ಶಿಕ್ಷಣ ನೀಡಿದ. ಇವನಿಗೆ ರಾಜಕುಮಾರನ ಸ್ಥಾನಮಾನ ದೊರಕಿದುವು. ದಂಗೆಯೊಂದನ್ನಡಗಿಸಲು ದೊರೆ ಇವನನ್ನು ನೇಪಲ್ಸಿಗೆ ಕಳಿಸಿದ (1647). ಇವನು ಸಿಸಿಲಿಯ ವೈಸ್‍ರಾಯ್ (1647-51) ಆಗಿದ್ದ. ಇವನು ಕೆಟಲೋನಿಯದ ದಂಗೆಯನ್ನಡಗಿಸಿದ (1651-52). ಫ್ಲಾಂಡರ್ಸಿನಲ್ಲಿ ದಂಡಾಧಿಕಾರಿಯೂ (1656) ಆಗಿದ್ದ. ಪೋರ್ಚುಗಲ್ ವಿರುದ್ಧ ಯುದ್ಧ ಮಾಡಿ (1561-63) ಸೋತ. ದೊರೆ ಫಿಲಿಪ್ ತೀರಿಕೊಂಡಮೇಲೆ ಇವನ ಪ್ರಭಾವ ಕಳೆದುಹೋಯಿತು. ರಾಣಿ ಇವನನ್ನು ಅಧಿಕಾರದಿಂದ ಕಿತ್ತುಹಾಕಿದಳು. ರಾಣಿಗೆ ವಿರುದ್ಧವಾದ ದಂಗೆಗಳಲ್ಲಿ ಇವನು ಭಾಗವಹಿಸಿದ. ಕೊನೆಗೆ ರಾಣಿಯನ್ನು ಪ್ರಭಾವದ ಸ್ಥಾನದಿಂದ ಇಳಿಸಿ, ದೊರೆ 2ನೆಯ ಚಾಲ್ರ್ಸನ ಆಸ್ಥಾನದಲ್ಲಿ ಪ್ರಥಮ ಮಂತ್ರಿಯಾದ (1677-79). ಇವನ ಆಡಳಿತ ಅಷ್ಟೇನೂ ಯಶಸ್ವಿಯಾಗಲಿಲ್ಲ. 1679ರಲ್ಲಿ ಈತ ತೀರಿಕೊಂಡ. (ಕೆ.ಎಸ್.ಎಸ್.; ಬಿ.ಸಿ.ಪಿ.)