ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾರ್ಖಂಡ್

ವಿಕಿಸೋರ್ಸ್ದಿಂದ

ಜಾರ್‍ಖಂಡ್ - ಭಾರತದ ಒಂದು ರಾಜ್ಯ. ಉತ್ತರ ಭಾರತದ ಪೂರ್ವಕ್ಕಿರುವ ಈ ರಾಜ್ಯವನ್ನು ದಕ್ಷಿಣದಲ್ಲಿ ಒರಿಸ್ಸ, ಪಶ್ಚಿಮದಲ್ಲಿ ಛತ್ತೀಸ್‍ಘರ್, ವಾಯುವ್ಯದಲ್ಲಿ ಉತ್ತರ ಪ್ರದೇಶ ಉತ್ತರದಲ್ಲಿ ಬಿಹಾರ ರಾಜ್ಯಗಳು ಸುತ್ತುವರೆದಿವೆ. 32,615 ಗ್ರಾಮಗಳಿಂದ 152 ನಗರ, ಪಟ್ಟಣಗಳಿಂದ ಕೂಡಿರುವ ಈ ರಾಜ್ಯದ ವಿಸ್ತೀರ್ಣ 79,714 ಚ.ಕಿ.ಮೀ. ಈ ರಾಜ್ಯವನ್ನು 22 ಜಿಲ್ಲೆಗಳಾಗಿ ವಿಂಗಡಿಸಿದೆ. ಒಟ್ಟು ಜನಸಂಖ್ಯೆ 2,69,09,428 (2001). ರಾಜಧಾನಿ ರಾಂಚಿ.

ಕೃಷಿ: ಜಾರ್‍ಖಂಡ್ ರಾಜ್ಯದಲ್ಲಿ 18,423ಚ.ಕಿ.ಮೀ. ಅರಣ್ಯ ಪ್ರದೇಶವಿದೆ. ವ್ಯವಸಾಯ ಮತ್ತು ಅದಕ್ಕೆ ಸಂಬಂಧಿಸಿದ ಉದ್ಯೋಗಗಳೇ ಈ ರಾಜ್ಯದ ಮುಖ್ಯ ಆರ್ಥಿಕ ಚಟುವಟಿಕೆಗಳಿಗೆ ಮೂಲವಾಗಿವೆ. 38ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಕಾರ್ಯ ನಡೆದಿದೆ.

ನೀರಾವರಿ ಮತ್ತು ವಿದ್ಯುತ್: ದಾಮೋದರ, ಮೌರಾಕ್ಷಿ, ಬರಕರ್, ಉತ್ತರಕೊಯಲ್, ದಕಿಣ ಕೊಯಲ್, ಶಂಖ್, ಸುವರ್ಣರೇಖಾ, ಕಾರ್‍ಕಾಯ್ ಮತ್ತು ಅಜಯ್ ನದಿಗಳು ಈ ರಾಜ್ಯದ ಮುಖ್ಯ ನೀರಾವರಿಯ ಮೂಲಗಳಾಗಿವೆ. ನೀರಾವರಿಗೆ 1.57ಲಕ್ಷ ಹೆಕ್ಟೇರ್ ಪ್ರದೇಶ ಒಳಪಟ್ಟಿದ್ದು ಇದು ಒಟ್ಟು ಬಿತ್ತನೆಯಾದ ಭೂಪ್ರದೇಶದಲ್ಲಿ ಶೇ.8 ಭಾಗವಾಗಿದೆ. ವಿದ್ಯುದುತ್ಪಾದನೆಯಲ್ಲಿ ಈ ರಾಜ್ಯದ ತೆನುಘಾಟ್ ಕೇಂದ್ರ 420ಮೆ.ವಾ. ಪ್ರಸಿದ್ಧ ದಾಮೋದರ ಕಣಿವೆ ಯೋಜನಾ ಕೇಂದ್ರದಿಂದ 1200ಮೆ.ವಾ. ಉತ್ಪಾದಿಸಲಾಗುತ್ತಿದ್ದ ಒಟ್ಟು 2590ಮೆ.ವಾ. ಮತ್ತೆ ಕೆಲವು ಕೇಂದ್ರಗಳಲ್ಲೂ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕೈಗಾರಿಕೆ ಮತ್ತು ಖನಿಜಗಳು: ಜಾರ್‍ಖಂಡ್ ರಾಜ್ಯದಲ್ಲಿ ಪ್ರಸಿದ್ಧವಾದ ತಾತ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಜೆಮಷೆಡ್‍ಪುರದಲ್ಲಿದೆ ಹಾಗೇ ಬೊಕಾರೊ ಉಕ್ಕು ಸ್ಥಾವರ ಇಲ್ಲಿವೆ. ತಾತ ಎಂಜಿನಿಯರಿಂಗ್ ಮತ್ತು ಲೊಕೊಮೋಟಿವ್ ಕಂಪನಿ, ಟಿಮ್‍ಕೆನ್ ಇಂಡಿಯಾ, ಲಿಮಿಟೆಡ್ (ಜೆಂಷೆಡ್‍ಪುರ) ಭಾರತ ಕುಕಿಂಗ್ ಲಿಮಿಟೆಡ್ (ಧನಬಾದ್), ಖಿಲಾರಿ ಸಿಮೆಂಟ್ ಕಾರ್ಖಾನೆ (ಪಲಮು), ಇಂಡಿಯನ್ ಅಲ್ಯೂಮಿನಿಯಂ (ಮುರಿ), ಎ.ಸಿ.ಸಿ. ಸಿಮೆಂಟ್ (ಚೈಬ್‍ಸ), ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್ (ರಾಂಚಿ), ಉಷಾ ಮಾರ್ಟಿನ್, ಉಷಾ ಬೆಲ್ಟ್ರಾನ್, ಯುರೇನಿಯಂ ಕಾರ್ಪೊರೆಷನ್ ಲಿಮಿಟೆಡ್ (ಜದುಗೊರ) ಹಿಂದುಸ್ತಾನ್ ಕಾಸರ್ ಲಿಮಿಟೆಡ್ (ಮುಸ್ಸಬನಿ), ಟಿನ್ ಪ್ಲೇಟ್ ಕಂಪನಿ ಆಫ್ ಇಂಡಿಯ ಲಿಮಿಟೆಡ್ (ಜೆಂಷೆಡ್‍ಪುರ), ಇಂಡಿಯನ್ ಎಕ್ಸ್‍ಪ್ಲೊಸಿವ್ (ಗೊಮಿಯ) ಮತ್ತು ಲೋಹರ್‍ದಗದಲ್ಲಿರುವ ಹಿಂಡಲ್ಕೊ ಬಾಕ್ಸೈಟ್ ಇವು ಪ್ರಸಿದ್ಧವಾದವು. ಈ ರಾಜ್ಯ ಹೆಚ್ಚು ಖನಿಜ ಸಂಪತ್ತನ್ನು ಹೊಂದಿದೆ. ಇದ್ದಿಲು, ಕಬ್ಬಿಣದ ಅದಿರು, ಸುಣ್ಣಕಲ್ಲು, ತಾಮ್ರ, ಬಾಕ್ಸೈಟ್, ಪೈರೇಟ್, ಚೀನಕ್ಲೆ, ಕೈನೈಟ್, ಫೈನ್‍ಕ್ಲೆ, ಡಾಲೊಮೈಟ್, ಗ್ರಾಫೈಟ್, ಬೆಂಟೊನೈಟ್, ಸೋಪ್‍ಸ್ಟೋನ್, ಕ್ವಾಟ್ರ್ಜ್ ಮರಳು, ಸಿಲಿಕ ಮರಳು ಇವೆಲ್ಲಾ ಹೆಚ್ಚಾಗಿ ದೊರಕುತ್ತವೆ. ಮಯಕ, ಇದ್ದಿಲು ಮುಂತಾದವುಗಳನ್ನು ಸಿಂಗ್‍ಭೂಮ್, ಬೊಕಾರೊ, ಹಜಾರಿಬಾಗ್, ರಾಂಚೆ, ಕೊಡರ್ಮ ಮತ್ತು ಧನಬಾದ್‍ಗಳಲ್ಲಿ ಹೆಚ್ಚಾಗಿ ಗಣಿಗಾರಿಕೆಯಿಂದ ಪಡೆಯಲಾಗುತ್ತಿದೆ.

ಸಾರಿಗೆ ಸಂಪರ್ಕ: ಜಾರ್‍ಖಂಡ ರಾಜ್ಯದಲ್ಲಿ ಒಟ್ಟು 4311ಕಿ.ಮೀ. ರಸ್ತೆಯಿದೆ. ಇದರಲ್ಲಿ 1500ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಮತ್ತು 2711 ಕಿ.ಮೀ. ರಾಜ್ಯ ಹೆದ್ದಾರಿ ಸೇರಿದೆ. ರೈಲು ಸಂಪರ್ಕ ಮಾರ್ಗವಿದ್ದು ರಾಂಚಿ, ಬೊಕಾರೊ, ಧನಬಾದ್, ಜೆಂಷೆಡ್‍ಪುರ ಮುಂತಾದ ಮುಖ್ಯ ರೈಲು ನಿಲ್ದಾಣಗಳಿದ್ದು ಇತರೇ ಸಾಮಾನ್ಯ ರೈಲು ನಿಲ್ದಾಣಗಳನ್ನು ಹೊಂದಿದೆ. ರಾಜಧಾನಿ ರಾಂಚಿಯಲ್ಲಿ ಮುಖ್ಯ ವಿಮಾನ ನಿಲ್ದಾಣವಿದೆ. ಇಲ್ಲಿಂದ ದೆಹಲಿ, ಪಟ್ನ, ಮುಂಬಯಿ, ಜೆಂಷೆಡ್‍ಪುರ, ಬೊಕಾರೊ, ಗಿರಿಧಿ, ದಿಯೋಗರ್, ಹಜಾರಿಬಾಗ್, ದಾಲ್ಟನ್‍ಗಂಜ್ ಮತ್ತು ಗೋವಾಮುಂಡಿಗಳಿಗೆ ವಿಮಾನ ಸಂಪರ್ಕವಿದೆ. ಈ ರಾಜ್ಯದ 22 ಜಿಲ್ಲೆಗಳ ವಿವರ ಈ ಕೆಳಕಂಡಂತಿದೆ (* - 1991ರ ಜನಸಂಖ್ಯೆ)

ಜಿಲ್ಲೆ (ಚ.ಕಿ.ಮೀ.) ವಿಸ್ತಾರ ಜನಸಂಖ್ಯೆ (2001) ಆಡಳಿತ ಕೇಂದ್ರ


ಬೊಕಾರೊ 2,860.82 17,75,961 ಬೊಕಾರೊ


ಚೌತ್ರ 3706.22 790680 ಚೌತ್ರ


ದಿಯೊಗರ್ 2478.61 1161370 ದಿಯೊಗರ್


ಧನಬಾದ್ 2074.68 2394434 ಧನಬಾದ್


ದುಮ್ಕ 3716.36 950853 * ದುಮ್ಕ


ಗಾರ್ವ 4044.22 1034151 ಗಾರ್ವ


ಗಿರಿಧಿ 4887.05 1901564 ಗಿರಿಧಿ


ಗೊಡ್ಡ 2110.45 1047264 ಗೊಡ್ಡ


ಗುಮ್ಲ 5320.94 707555 * ಗುಮ್ಲ


ಹಜûರಿಬಾಗ್ 5965.35 2277108 ಹಜûರಿಬಾಗ್


ಜಂತರ 1801.98 544856 * ಜಂತರ


ಕೊಡರಮ 1311.62 498683 ಕೊಡರಮ


ಲಟೇರ 3660.47 467071 * ಲಟೇರ


ಲೊಹರ್‍ದಗ 1490.80 364405 ಲೊಹರ್‍ದಗ


ಪಕೌರ್ 1805.59 701616 ಪಕೌರ್


ಪಲಮು 4015.16 1182770 * ಡಾಲ್ಟೊಗಂಜ್


ಪಶ್ಚಿಮ ಸಿಂಗಭೂಮ್ 5290.21 1080780 * ಚಬಾಸ


ಪೂರ್ವ ಸಿಂಗಭೂಮ್ 3553.35 1978671 ಜೆಂಷೆಡ್‍ಪುರ


ರಾಂಚಿ 7573.68 2783577 ರಾಂಚಿ


ಸಾಹಿಬ್‍ಗಂಜ್ 1705.98 927584 ಸಾಹಿಬ್‍ಗಂಜ್


ಸೆರೈಕೆಲ 2724.55 707175 * ಸೆರೈಕೆಲ


ಸಿಂದೆಗ 3756.19 446421 * ಸಿಂದೆಗ


ಪ್ರವಾಸೋದ್ಯಮ: ಜಾರ್‍ಖಂಡ್ ರಾಜ್ಯದಲ್ಲಿ ಅನೇಕ ಪ್ರವಾಸಿ ಆಕರ್ಷಕ ಸುಂದರ ತಾಣಗಳಿವೆ. ಅವುಗಳಲ್ಲಿ ಇಚಾಬಾಗ್, ಉಧವ, ಚಂದ್ರಾಪುರ ಮತ್ತು ತೆನುಘಾಟ್‍ನ ಪಕ್ಷಿಧಾಮಗಳು, ಸಾಹಿಬ್‍ಗಂಜ್‍ನ ಪಥರ ಸರೋವರ, ಕೊಡರಮ ಜಿಲ್ಲೆಯ ತಿಲಾಯ ಜಲಾಶಯದ ಮೊಸಳೆಗಳ ಪಾಲನ ಸ್ಥಳ ಚಚ್ರೋ, ಬೊಕಾರೊದಲ್ಲಿರುವ ಜವಾಹರಲಾಲ್ ನೆಹರೂ ಪ್ರಾಣಿ ಸಂಗ್ರಹಾಲಯ ವನ, ಜೆಂಷೆಡ್‍ಪುರದ ದಾಲ್ಮ ಅರಣ್ಯ ಮೃಗಧಾಮ, ತಾತ ಉಕ್ಕು ಪ್ರಾಣಿ ಸಂಗ್ರಹಾಲಯ, ಗುಮ್ಲ ಜಿಲ್ಲೆಯ ಪಾಲ್ಕೊಟೆ ಅರಣ್ಯ ಮೃಗಧಾಮ, ರಾಜ್ಯದ ರಾಜಧಾನಿ ರಾಂಚಿಯಲ್ಲಿರುವ ಭಗವಾನ್ ಬಿರ್ಸ ಪ್ರಾಣಿವನ, ಮತ್ಸ್ಯಸಂಗ್ರಹಾಲಯ, ಕಾಲ್ಮತಿ ರಾಂಚಿಯಲ್ಲಿರುವ ಬಿರ್ಸ ಜಿಂಕೆಗಳ ಧಾಮ, ಹಜûರಿಬಾಗ್‍ನ ರಾಷ್ಟ್ರೀಯ ಉದ್ಯಾನವನ, ದುಮ್ಕದಲ್ಲಿರುವ ತಕೋಲೈ ಬಿಸಿನೀರ ಬುಗ್ಗೆ ಇವಲ್ಲದೆ ಸರಂದ ಅರಣ್ಯ ಪ್ರದೇಶ, ಮಸಾಂಜೊರೆ ಜಲಾಶಯ ಬಹುಮುಖ್ಯವೆನಿಸಿವೆ. ಜಾರ್‍ಖಂಡ್‍ಧಾಮ್, ಲಗ್ನಟಬಾಲಾ ದೇವಾಲಯ, ಮಾತೆ ಬಿಂದ ವಾಸಿನಿ ದೇವಾಲಯಗಳೂ ಪ್ರಸಿದ್ಧವಾದವು.

ಭಾರತದ 28ನೇ ರಾಜ್ಯವಾಗಿ 2000, ನವಂಬರ್ 15ನೆ ದಿನದಂದು ಈ ರಾಜ್ಯ ಅಸ್ತಿತ್ವಕ್ಕೆ ಬಂತು. ಬ್ರಿಟಿಷರ ಆಳ್ವಿಕೆಯಲ್ಲಿ ಬೆಂಗಾಲ್ ಪ್ರೆಸಿಡೆನ್ಸಿ ವಿಭಾಗಕ್ಕೆ ಸೇರಿತ್ತು. 1912ರಲ್ಲಿ ಬಿಹಾರ, ಒರಿಸ್ಸದೊಡನೆ ಇದು ಹೊರ ಬಂತು. 1965ರಲ್ಲಿ ಸ್ಥಾಪಿಸಲ್ಪಟ್ಟ ಚೋಟಾನಾಗಪುರ್ ಉನ್ನತಿ ಸಮಾಜ್ ಸ್ಥಳೀಯ ಆದಿವಾಸಿಗಳ ಕಲ್ಯಾಣವನ್ನು, ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡಿದ್ದು 1928ರಲ್ಲಿ ಪ್ರಥಮ ಬಾರಿಗೆ ಸೈಮನ್ ಕಮಿಷನ್ ಮುಂದೆ ಪ್ರತ್ಯೇಕ ಜಾರ್‍ಖಂಡ್ ಬೇಡಿಕೆಯನ್ನಿಟ್ಟಿತು. 1933ರಲ್ಲಿ ಚೋಟಾನಾಗಪುರ ಮತ್ತು ಸಂತಾಲ್ ಪರಗಣ ಗೇಣಿಗೆ ಕಾಯಿದೆಯನ್ನು ಸ್ಥಳೀಯ ಗುಡ್ಡುಗಾಡು ಜನರ ಏಳಿಗೆಗಾಗಿ ಜಾರಿಗೆ ತರಲಾಯಿತು. ಮುಂದೆ ಜಾರ್‍ಖಂಡ್ ಮುಕ್ತಿಮೋರ್ಚಾ ಪಕ್ಷ ಭಾರತ ಸರ್ಕಾರದ ಮೇಲೆ ಒತ್ತಡ ಹೇರಿ 2000ರ ನವಂಬರ್ 15ರಂದು ಜಾರ್‍ಖಂಡ್ ರಾಜ್ಯದ ಉದಯಕ್ಕೆ ಕಾರಣವಾಯಿತು. 1928ರಲ್ಲಿ ಹಾಕಿಯಲ್ಲಿ ಭಾರತ ಒಲಂಪಿಕ್ ಸ್ವರ್ಣಪದಕ ಗೆಲ್ಲಲು ಇಲ್ಲಿಯ ಹಾಕಿಪಟು ಜಯಪಾಲ್‍ಸಿಂಗ್ ಮುಂಡ ಹೆಚ್ಚು ಶ್ರಮಿಸಿದ್ದನೆಂಬುದನ್ನು ಭಾರತೀಯರು ಮರೆಯಲಾರರು. (ಬಿ.ಶಾಮಸುಂದರ)