ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾವ ಮಾನವ
ಜಾವ ಮಾನವ - ಸುಮಾರು 7,00,000 ವರ್ಷಗಳ ಹಿಂದೆ ಏಷ್ಯ, ಆಫ್ರಿಕ ಖಂಡಗಳ ಕೆಲವು ಭಾಗಗಳಲ್ಲೂ ಬಹುಶಃ ಯೂರೋಪಿನ ಹಲವೆಡೆಗಳಲ್ಲೂ ಜೀವಿಸಿದ್ದನೆನ್ನಲಾದ ಒಬ್ಬ ಮಂಗಮಾನವ. ಹೋಮೋ ಎರೆಕ್ಟಸ್ ಈತನ ವೈಜ್ಞಾನಿಕ ನಾಮ. ಡೂಬ್ವಾ ಎಂಬ ಡಚ್ ವಿಜ್ಞಾನಿ ಜಾವದಲ್ಲಿನ ಸೋಲೋ ನದೀದಂಡೆಯ ಮೇಲಿನ ಟ್ರಿನಿಲ್ ಎಂಬ ಹಳ್ಳಿಯ ಬಳಿ 1891ರಲ್ಲಿ ಮೊಟ್ಟಮೊದಲು ಈ ಮಾನವನ ತಲೆಬುರುಡೆ ಮತ್ತು ತೊಡೆ ಮೂಳೆಗಳನ್ನು (ಫೀಮರ್) ಪತ್ತೆ ಹಚ್ಚಿದ. ಇದರಿಂದಾಗಿ ಜಾವ ಮಾನವ ಎಂಬ ಹೆಸರು ಬಂದಿತು. ಡೂಬ್ವಾ ಈತನಿಗೆ ಪಿತಿಕ್ಯಾಂತ್ರಪಸ್ ಎರೆಕ್ಟಸ್ ಎಂಬ ಹೆಸರನ್ನು ಕೊಟ್ಟಿದ್ದ. ಆದರೆ ಹೋಮಿನಿಡೀ ಕುಟುಂಬದ ವರ್ಗೀಕರಣದ ಹಾಗೂ ಆಧುನಿಕ ನಾಮಕರಣ ಪದ್ಧತಿಯ ಪ್ರಮಾಣಬದ್ಧ ನಿಯಮಗಳಿಗೆ ಅನುಸಾರವಾಗಿ ಈ ಹೆಸರನ್ನು ಹೋಮೋ ಎರಕ್ಟಸ್ ಎಂದು ಬದಲಾಯಿಸಲಾಯಿತು. ಜಾವ ಮಾನವನ ಪಳೆಯುಳಿಕೆಗಳ ಶೋಧನೆಯಾದ ಕೆಲವು ವರ್ಷಗಳ ಬಳಿಕ ಚೀನದ ರಾಜಧಾನಿ ಪೀಕಿಂಗ್ ಬಳಿ ಇನ್ನೊಂದು ಮಾನವ ಪ್ರಭೇದದ ಪಳೆಯುಳಿಕೆಗಳ ಪತ್ತೆಯಾಯಿತು. ಇದಕ್ಕೆ ಸೈನ್ಯಾಂತ್ರಪಸ್ ಪೀಕಿನೆನ್ಸಿಸ್ (ಪೀಕಿಂಗ್ ಮಾನವ) ಎಂಬ ಹೆಸರನ್ನು ಕೊಡಲಾಯಿತು. ಆದರೆ ಸೂಕ್ಷ್ಮ ಪರಿಶೀಲನೆಯ ಅನಂತರ ಈ ಮಾನವನ ತಲೆಬುರುಡೆ ಹಾಗೂ ಇತರ ಮೂಳೆಗಳು ಜಾವ ಮಾನವನ ಪಳೆಯುಳಿಕೆಗಳನ್ನೇ ಹೋಲುವುದು ಕಂಡುಬಂದುದರಿಂದ ಇವನ್ನೂ ಜಾವ ಮಾನವನ ಪಳೆಯುಳಿಕೆಗಳೆಂದೇ ಪರಿಗಣಿಸಲಾಯಿತು. ಇವೆರಡೂ ಹೋಮೋ ಎರೆಕ್ಟಸ್ ಪ್ರಭೇದದ ವಿಕಾಸದಲ್ಲಿನ ಎರಡು ಹಂತಗಳೆಂದೂ ಪೀಕಿಂಗ್ ಹಂತ ಜಾವ ಹಂತಕ್ಕಿಂತ ಇತ್ತೀಚಿನದು ಮತ್ತು ಹೆಚ್ಚು ಮುಂದುವರಿದುದು ಎಂದೂ ಬಗೆಯಲಾಗಿದೆ. ಇದೇ ರೀತಿ 1949ರಲ್ಲಿ ದಕ್ಷಿಣ ಆಫ್ರಿಕದ ಸ್ವಾರ್ಟ್‍ಕ್ರಾನ್ಸ್‍ನಲ್ಲಿ ಟೆಲ್ಯಾಂತ್ರಪಸ್ (ಸ್ವಾರ್ಟ್‍ಕ್ರಾನ್ಸ್ ಮಾನವ) ಮಾನವನ ಪಳೆಯುಳಿಕೆಗಳೂ 1961ರಲ್ಲಿ ಪೂರ್ವ ಆಫ್ರಿಕದ ಓಲ್ಡವೇ ಕಮರಿಯಲ್ಲಿ 5,00,000 ವರ್ಷಗಳ ಹಿಂದಿನ ಎರೆಕ್ಟಸ್ ಪ್ರಭೇದದ ಪಳೆಯುಳಿಕೆಗಳೂ 1963-64ರಲ್ಲಿ ಚೀನದ ಲಾಂಶಿಯನ್ ಬಳಿ ಲಾಂಶಿಯನ್ ಮಾನವನ ಪಳೆಯುಳಿಕೆಗಳೂ 1965ರಲ್ಲಿ ಹಂಗರಿಯಲ್ಲಿ ಎರೆಕ್ಟಸ್ ಪ್ರಭೇದದ ಹೆಚ್ಚು ಮುಂದುವರಿದ ಹಂತವನ್ನು ಪ್ರದರ್ಶಿಸುವ ಮಾನವನ ಅವಶೇಷಗಳೂ ಪತ್ತೆಯಾದವು. ಸ್ವಾರ್ಟ್‍ಕ್ರಾನ್ಸ್ ಮತ್ತು ಲಾಂಶಿಯನ್ ಮಾನವ ಪಳೆಯುಳಿಕೆಗಳು ಕೂಡ ಎರೆಕ್ಟಸ್ ಪ್ರಭೇದದ ಎರಡು ಬಗೆಗಳೆಂದು ತಿಳಿಯಲಾಗಿದೆ. 7,00,000 ವರ್ಷಗಳ ಹಿಂದೆ ಮೊದಲಿಗೆ ಕಾಣಿಸಿಕೊಂಡ ಜಾವ ಮಾನವ ಸುಮಾರು 2,00,000 ವರ್ಷಗಳ ಕಾಲ ಜೀವಿಸಿದ್ದು ಮಧ್ಯ ಪ್ಲೀಸ್ಟೊಸೀನ್ ಅವಧಿಯ ಆರಂಭದಲ್ಲಿ ಅಂದರೆ 5,00,000 ವರ್ಷಗಳ ಹಿಂದೆ ಅಳಿದು ಹೋದ.
ಜಾವ ಮಾನವನ ಕಂಕಾಲ ಆಧುನಿಕ ಮಾನವನ (ಹೋಮೋ ಸೇಪಿಯನ್ಸ್) ಕಂಕಾಲದಂತೆಯೇ ಇತ್ತು. ಆದರೆ ಮಿದುಳು ಚಿಕ್ಕದಾಗಿತ್ತು. ತಲೆಬುರುಡೆ ಚಪ್ಪಟೆಯಾಗಿಯೂ ದಪ್ಪವಾಗಿಯೂ ಇತ್ತು. ಹುಬ್ಬಿನ ಏಣುಗಳು ಮುಂಚಾಚಿಕೊಂಡಿದ್ದವು. ಹಲ್ಲುಗಳು ದೊಡ್ಡವು ಮತ್ತು ಹೆಚ್ಚು ಹಿಂದುಳಿದ ರೀತಿಯವು. ಜಾವ ಮಾನವ ಕುಳ್ಳು ಗಾತ್ರದವನಾಗಿದ್ದ. ಈತನ ಪಳೆಯುಳಿಕೆಗಳು ದೊರೆತ ಸ್ಥಳಗಳ ಬಳಿ ಇದ್ದಿಲು ಮತ್ತು ಮಡಿಕೆಯ ಚೂರುಗಳು ಸಿಕ್ಕಿರುವುದರಿಂದ ಜಾವ ಮಾನವನಿಗೆ ಬೆಂಕಿಯ ಬಳಕೆ ತಿಳಿದಿತ್ತೆಂದೂ ಅವನದೇ ಆದ ಸಂಸ್ಕøತಿಯಿತ್ತೆಂದೂ ಊಹಿಸಲಾಗಿದೆ. ಜೊತೆಗೆ ದೊಡ್ಡ ಗಾತ್ರದ ಪ್ರಾಣಿಗಳ ಎಲುಬುಗಳೂ ಇಲ್ಲಿ ದೊರೆಯುವುದರಿಂದ ಜಾವ ಮಾನವ ಬೇಟೆ ಜೀವನ ನಡೆಸುತ್ತಿದ್ದನೆಂದು ತಿಳಿಯಲಾಗಿದೆ. ಈ ಮಾನವ ಜೀವಿಸುತ್ತಿದ್ದ ಗುಹೆಗಳಲ್ಲಿ ದೊರೆತ ಕೆಲವು ತಲೆಬುರುಡೆಗಳು ಹೊಡೆತಕ್ಕೆ ಈಡಾಗಿ ಚೂರುಚೂರಾಗಿರುವಂತೆ ತೋರುವುದರಿಂದ, ಇಂದು ಕಲವು ಆದಿವಾಸಿ ಜನಾಂಗಗಳಲ್ಲಿ ಕಾಣಬರುವಂತೆ ಜಾವ ಮಾನವ ಕೂಡ ಮೂಢನಂಬಿಕೆಯ ಕಾರಣಗಳಿಗಾಗಿ ತನ್ನ ಶತ್ರುಗಳ ಮಿದುಳನ್ನು ಹೊರ ತೆಗೆಯುತ್ತ್ತಿದ್ದನೆಂದು ಹೇಳಲಾಗಿದೆ.
ಜಾವ ಮಾನವನಿಗೂ ಆಧುನಿಕ ಮಾನವನಿಗೂ ಜಾವದಲ್ಲಿ ಪ್ಲೀಸ್ಟೊಸೀನ್ ಕಲ್ಪದ ಪೂರ್ವಾರ್ಧದಲ್ಲಿ (ವರ್ತಮಾನಕಾಲದಿಂದ 1 ದಶಲಕ್ಷ ವರ್ಷಗಳಷ್ಟು ಪ್ರಾಚೀನದ ವರೆಗಿನ ಅವಧಿ) ದೊರೆತ ಸೋಲೋ ಮಾನವ, ಆಫ್ರಿಕದ ರೊಡೀಸಿಯನ್ ಮಾನವ, ಹೈಡೆಲ್‍ಬರ್ಗ್ ಮಾನವ, ಆಲ್ಜೀರಿಯದ ಟರ್ನಿಫೈನ್ ಬಳಿ ದೊರೆತ ಮಾನವ-ಮುಂತಾದವುಗಳಿಗೂ ಇರುವ ಸಂಬಂಧಗಳ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಲೇ ಇದೆ. (ಎನ್.ವಿ.ಎ.; ಬಿ.ಕೆ.ಜಿ.)