ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಿಗಿಕೀಟಗಳು

ವಿಕಿಸೋರ್ಸ್ದಿಂದ

ಜಿಗಿಕೀಟಗಳು -

	ಹೋಮಾಪ್ಟರ ಗಣದ ಸಿಕಾಡಾಯ್ಡಿಯ ಮತ್ತು ಫಲ್ಗೋರಾಯ್ಡಿಯ ಅಧಿ ಕುಟುಂಬಗಳಿಗೆ ಸೇರಿದ ಹಲವಾರು ಬಗೆಯ ಕೀಟಗಳು (ಹಾಪರ್ಸ್). ಇವುಗಳಲ್ಲಿ ಮುಖ್ಯವಾದವು ಜಾಸಿಡೀ ಅಥವಾ ಸಿಕಾಡೆಲ್ಲಿಡೀ ಕುಟುಂಬದ ಎಲೆಜಿಗಿಕೀಟಗಳು, ಮೆಂಬ್ರೇಸಿಡೀ ಕುಟುಂಬದ ಮರಜಿಗಿಕೀಟಗಳು, ಸರ್ಕಾಪಿಡೀ ಕುಟುಂಬಕ್ಕೆ ಸೇರಿದ ಕಪ್ಪೆಜಿಗಿಕೀಟಗಳು ಮತ್ತು ಫಲ್ಗಾರಿಡೀ ಕುಟುಂಬದ ಸಸ್ಯಜಿಗಿಕೀಟಗಳು. ಇವೆಲ್ಲವೂ ಗಾತ್ರದಲ್ಲಿ ಹೆಚ್ಚುಕಡಿಮೆ ಒಂದೇ ಸಮನಿದ್ದರೂ ರೂಪ, ಆಕಾರ, ಬಣ್ಣಗಳಲ್ಲಿ ವಿಧವಿಧವಾಗಿವೆ. ಸಾಮಾನ್ಯವಾಗಿ ಹಸಿರು ಎಲೆ, ಹುಲ್ಲು, ಪೊದೆ ಮುಂತಾದುವುಗಳ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಬೆಳಕಿನಿಂದ ಆಕರ್ಷಿತವಾಗುವುದು ಇವುಗಳ ಪ್ರಧಾನ ಸ್ವಭಾವ. ಸಣ್ಣ ಗಾತ್ರದ ಕೀಟಗಳಿವು. ಇವುಗಳ ದೇಹ ಬೆಣೆಯಾಕಾರದ್ದು. ತಲೆ ಅಗಲವಾಗಿದೆ. ಬಾಯಿಯ ಅಂಗಗಳು ಆಹಾರವನ್ನು ಚುಚ್ಚಿ ಹೀರಿಕೊಳ್ಳಲು ಅನುಕೂಲವಾಗಿವೆ. ಯಾವಾಗಲೂ ಕುಪ್ಪಳಿಸುವುದಕ್ಕೆ ತಯಾರಾಗಿರುವಂತೆ ತಲೆಯನ್ನು ಎತ್ತಿ ಕುಳಿತಿರುವುದು ಇವುಗಳ ವಿಶೇಷ ಲಕ್ಷಣ. ಇವುಗಳ ದೇಹ ಹಸಿರು, ಹಳದಿ, ನೀಲಿ, ಕೆಂಪು, ಬೂದು, ಕಪ್ಪು, ಬಿಳಿ-ಹೀಗೆ ವರ್ಣರಂಜಿತ. ಎಲೆಜಿಗಿಗಳಿಗೆ ಹಿಂಗಾಲುಗಳ ಮೊಣಕಾಲುಗಳ ಮೇಲೆ ಉದ್ದಕ್ಕೂ ಎರಡು ಸಮಾನಾಂತರ ಸಾಲಿನಲ್ಲಿ ಮುಳ್ಳುಗಳಿವೆ. ಇವುಗಳಲ್ಲಿ ನೆಪೊಟೇಟಿಕ್ಸ್ ಮತ್ತು ಡೆಲ್ಟೊಸಿಫ್ಯಾಲಸ್‍ಗಳು ಬತ್ತದ ಬೆಳೆಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತವೆ. ಎಂಪೋವಾಸ್ಕ ಡಿವಾಸ್ಟೆನ್ಸ್ ಎಂಬುದು ಹತ್ತಿ, ಹರಳು ಮತ್ತು ತರಕಾರಿಗಳ ಪಿಡುಗು, ಇಡಿಯೊಸಿರಸ್ ಬಗೆಗಳು ಮಾವಿನ ಫಸಲಿಗೆ ಧಕ್ಕೆ ತರುತ್ತವೆ. ಟಿಪ್ಲೊಸೈಬ ಮತ್ತು ಸಿಕಾಡುಲ ಪೌರ್ವಾತ್ಯ ದೇಶಗಳ ಬತ್ತಕ್ಕೆ ಅಂಟುವ ಎಲೆಜಿಗಿಗಳು. ಎರಿಥ್ರೊನ್ಯೂರ ಕಾಮಿಸ್ ಎಂಬುದು ದ್ರಾಕ್ಷಿ, ಸಕ್ಕರೆ, ಬೀಟ್ ಎಲೆ, ಆಲೂಗಡ್ಡೆ, ಸೇಬು ಮುಂತಾದ ಎಲೆಗಳ ತುದಿ ಸುಡುವ ರೋಗವನ್ನು ಉಂಟು ಮಾಡುತ್ತದೆ.

ಮರಜಿಗಿಕೀಟಗಳ ತಲೆಯ ಮೇಲೆ ದೇಹದ ಹಿಂತುದಿಯೆಡೆಗೆ ಬಾಗಿರುವ ಒಂದು ಕೊಂಬು ಇದೆ. ಇವುಗಳ ರೆಕ್ಕೆ ಪೊರೆಯಂತಿದೆ. ಇವು ಮರಗಿಡಗಳ ರೆಂಬೆಗಳನ್ನು ಸುತ್ತುಗಟ್ಟಿ ಕುಳಿತಿರುತ್ತವೆ. ಅಲುಗಾಡಿಸಿದಾಗ ಎಲೆ ಹಾಗೂ ರೆಂಬೆಗಳ ಹಿಂದೆ ಅಡಗುತ್ತವೆ. ಕೆಲವು ಬಗೆಗಳು ಸಿಹಿ ಅಂಟೊಂದನ್ನು ಸ್ರವಿಸುವುದುಂಟು. ಅನೇಕ ಗಿಡಮರಗಳ ಮೇಲೆ ಇವು ಕಂಡುಬಂದಿದ್ದರೂ ಇವುಗಳಿಂದ ಯಾವ ರೀತಿಯ ಹಾನಿಯೂ ವರದಿಯಾಗಿಲ್ಲ.

ಕಪ್ಪೆಜಿಗಿಕೀಟಗಳು ಒಂದು ಬಗೆಯ ನೊರೆಯಂತಿರುವ ವಿಸರ್ಜನೆಯ ಒಳಗೆ ಹುದುಗಿರುತ್ತವೆ. ಇದನ್ನು ಕಕೂಸ್ಪಿಟ್ ಎನ್ನುತ್ತಾರೆ. ಕಬ್ಬಿನ ಕಪ್ಪೆಜಿಗಿಕೀಟ (ಟೊಮಾಸ್‍ಪನ್ ಸ್ಯಾಕರೈನ) ಟ್ರಿನಿಡಾಡಿನಲ್ಲಿ ಹಾನಿಕರ. ಟಯಿಲಸ್, ಕ್ಲೋವಿಯ ಮತ್ತು ಕಾಸ್‍ಮೊಕಾರ್ಟ ರಿಲೇಟ ಎಂಬುವು ಹಲಸು, ಅಂಜೂರ ಇತ್ಯಾದಿಗಳಿಗೆ ಹಾನಿಕರ. ಸಸ್ಯಜಿಗಿಗಳಲ್ಲಿ ಪೆರಿಗ್ರೈನಸ್ ಮೈಡಿಸ್ ಎಂಬುದು ಜೋಳದ ಬೆಳೆಗೆ ಹಾನಿಯುಂಟುಮಾಡುತ್ತದೆ. ಹವಾಯಿ ದ್ವೀಪದಲ್ಲಿ ಕಾಣ ಬರುವ ಪರ್ಕಿನ್ಸಿಯಲ ಸಕಾರಿಸಿಡ ಎಂಬುದು ಕಬ್ಬಿನ ಬೆಳೆಯ ಪಿಡುಗು ಎನಿಸಿವೆ. (ಜಿ.ಕೆ.ವಿ.)