ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಿಗಿಜಿಂಕೆ

ವಿಕಿಸೋರ್ಸ್ದಿಂದ
Jump to navigation Jump to search

ಜಿಗಿಜಿಂಕೆ -

	ದಕ್ಷಿಣ ಆಫ್ರಿಕ, ಕಲಹರಿ ಮರುಭೂಮಿ, ಅಂಗೋಲಗಳಲ್ಲಿನ ಮರಗಳಿಲ್ಲದ ವೆಲ್ಟ್ ಪ್ರದೇಶಗಳಲ್ಲಿ ಮಾತ್ರ ಕಾಣದೊರೆಯುವ ಒಂದು ಸಸ್ತನಿ (ಸ್ಪ್ರಿಂಗ್ ಬಾಕ್). ಆರ್ಟಿಯೊಡ್ಯಾಕ್ಟಿಲ ಗಣದ ಬೋವಿಡೀ ಕುಟುಂಬಕ್ಕೆ ಸೇರಿದೆ. ಆಂಟಿಡಾರ್ಕಾಸ್ ಮಾಸ್ರ್ಯುಪಿಯೇಲಿಸ್ ಇದರ ಶಾಸ್ತ್ರೀಯ ನಾಮ. ಗೆಜೆóಲ್ ಜಿಂಕೆಯಂತೆಯೇ ಇರುವ ಇದು ಅದಕ್ಕೆ ಹತ್ತಿರ ಸಂಬಂಧಿಯೂ ಹೌದು. ಜಿಗಿ ಜಿಂಕೆಯ ಕೆಳವಡೆಯಲ್ಲಿ 5 ಜೊತೆ ಅರೆಯುವ ಹಲ್ಲುಗಳಿದ್ದರೆ ಗೆಜೆóಲಿನಲ್ಲಿ 6 ಜೊತೆಗಳಿವೆ. ಜೊತೆಗೆ ಜಿಗಿಜಿಂಕೆಯ ಬೆನ್ನಮೇಲೆ ಬಾಲದವರೆಗೆ ಬಿಳಿಯ ಕೂದಲಿನ ಸಾಲು ಇದೆ. ಪ್ರಾಣಿ ಗಾಬರಿಗೊಂಡಾಗ ಈ ಸಾಲಿನಲ್ಲಿರುವ ಕೂದಲುಗಳು ನಿಮಿರಿ ನಿಲ್ಲುತ್ತವೆ. ಇದು ಗುಂಪಿನ ಇತರ ಪ್ರಾಣಿಗಳಿಗೆ ಎಚ್ಚರಿಕೆಯ ಸೂಚನೆಯಾಗುತ್ತದೆ. ಈ ರೀತಿಯ ಕೂದಲ ಸಾಲು ಗೆಜೆóಲುಗಳಲ್ಲಿಲ್ಲ. ಜಿಗಿಜಿಂಕೆ ಆಡಿನ ಗಾತ್ರದ ಪ್ರಾಣಿ ; ದೇಹದ ಉದ್ದ 1.2-1.4m. ಎತ್ತರ 73-87 ಛಿm ; ತೂಕ 32-36 ಞg ; ಬಣ್ಣ ಹಳದಿಮಿಶ್ರಿತ ಕಂದು. ಉದರ ಭಾಗ ಮತ್ತು ಕಾಲುಗಳ ಒಳಭಾಗ ಬೆಳ್ಳಗಿವೆ. ದೇಹದ ಎರಡೂ ಪಕ್ಕಗಳಲ್ಲಿ ಬೆನ್ನು ಉದರ ಸೇರುವೆಡೆ ಕಗ್ಗಂದು ಬಣ್ಣದ ಅಡ್ಡಪಟ್ಟೆಯುಂಟು. ಅಂಚು ಬೆಳ್ಳಗಿದೆ. ಗಂಡು, ಹೆಣ್ಣುಗಳೆರಡರಲ್ಲೂ ಕರಿಯ ಬಣ್ಣದ ಕೋಡುಗಳುಂಟು. ಒಂದೊಂದು ಕೋಡಿನಲ್ಲೂ 20 ಉಂಗುರ ಗುರುತುಗಳಿವೆ. ಜಿಗಿಜಿಂಕೆ ಓಡುವಾಗ 3-3.5 m. ಎತ್ತರಕ್ಕೆ ಜಿಗಿಯುತ್ತ ಮುಂದುವರಿಯುತ್ತದೆ. ಇದರಿಂದಲೇ ಇದಕ್ಕೆ ಜಿಗಿಜಿಂಕೆ ಎಂದು ಹೆಸರು. ಸಣ್ಣಪುಟ್ಟ ಗಿಡಗೆಂಟೆಗಳ ಚಿಗುರು, ಹುಲ್ಲು ಇದರ ಪ್ರಧಾನ ಆಹಾರ. ನೀರಿಲ್ಲದೆ ಬಹುಕಾಲ ಇರಬಲ್ಲುದು. 

ಜಿಗಿಜಿಂಕೆ ಸಂಘಜೀವಿ. ಸಾವಿರಾರು ಪ್ರಾಣಿಗಳ ಗುಂಪುಗಳಲ್ಲಿ ಜೀವಿಸುತ್ತದೆ. ಒಂದು ಕಾಲದಲ್ಲಿ ದಶಲಕ್ಷಕ್ಕೂ ಮೀರಿದ ಭಾರಿ ಗುಂಪುಗಳಲ್ಲಿ ಆಫ್ರಿಕಾದ ಮೈದಾನಗಳಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸುತ್ತಿದ್ದವಂತೆ. ಹೀಗೆ ಸಾಗುವಾಗ ದಾರಿಯಲ್ಲಿ ಸಿಕ್ಕ ಹೊಲಗದ್ದೆಗಳೆಲ್ಲ ನಿರ್ನಾಮವಾಗುತ್ತಿದ್ದವಂತೆ. ಇದನ್ನು ತಡೆಯಲು ಆಗಿನ ಸರ್ಕಾರವೇ ಬಂದೂಕುಗಳನ್ನು ಹಂಚಿ ಜಿಗಿಜಿಂಕೆಗಳ ಸಾಮೂಹಿಕ ನಾಶವನ್ನು ಕೈಗೊಂಡಿತು. ಇಂಥ ಬೃಹತ್ ಪ್ರಮಾಣದ ಕೊಲ್ಲುವಿಕೆಯಿಂದಾಗಿ ಇವುಗಳ ಸಂಖ್ಯೆ ಇಂದು ಬಹಳ ಇಳಿದುಹೋಗಿದ್ದು ಮತ್ತೆ ಸರ್ಕಾರವೇ ಕಾನೂನಿನ ಮೂಲಕ ಇವುಗಳ ರಕ್ಷಣೆಯನ್ನು ಮಾಡುತ್ತಿದೆ.

ಜಿಗಿಜಿಂಕೆಯನ್ನು ಸಾಕುವುದು ಸುಲಭ. ಇದು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಲಾಂಛನವೂ ಆಗಿದೆ.

                                        (ಎ.)