ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜುನಾಗಢ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಜುನಾಗಢ ಗುಜರಾತಿನ ಒಂದು ಜಿಲ್ಲೆ ಹಾಗೂ ಜಿಲ್ಲಾ ಕೇಂದ್ರ. ಜಿಲ್ಲೆಯ ವಿಸ್ತೀರ್ಣ 10,607 ಚ. ಕಿಮೀ. ಜನಸಂಖ್ಯೆ 16,56,677 (1971). ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಜುನಾಗಢ ಒಂದು ಸಂಸ್ಥಾನವಾಗಿತ್ತು. ಇಲ್ಲಿಯ ನವಾಬ 1807ರಲ್ಲಿ ಬ್ರಿಟಿಷರೊಡನೆ ಒಪ್ಪಂದ ಮಾಡಿಕೊಂಡು ಅವರ ಆಶ್ರಿತರಾಜನಾದ. ಭಾರತದ ವಿಭಜನೆಯಾದಾಗ ಜನಮತದ ವಿರುದ್ಧ ಈ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸಲು ಇಲ್ಲಿಯ ನವಾಬ ವಿಫಲ ಪ್ರಯತ್ನ ಮಾಡಿ ಸೋತು ಕೊನೆಗೆ ತಾನು ಮಾತ್ರ ಪಾಕಿಸ್ತಾನ ಸೇರಿದ.

ಇಲ್ಲಿಯದು ಫಲವತ್ತಾದ ಕಪ್ಪುಮಣ್ಣು. ಹತ್ತಿ, ಗೋದಿ, ಬೇಳೆ, ಎಣ್ಣೆ ಕಾಳು-ಇಲ್ಲಿನ ಪ್ರಮುಖ ಕೃಷಿ ಉತ್ಪನ್ನಗಳು. ಉದ್ದನೆಯ ಕರಾವಳಿಯನ್ನು ಪಡೆದಿರುವ ಈ ಜಿಲ್ಲೆಯಲ್ಲಿ ವೇರಾವಲ್, ನವಬಂದರ್, ಮಂಗ್ರೋಲ್ ಮತ್ತು ಪೋರ್ ಬಂದರ್ ಪ್ರಮುಖ ಬಂದರುಗಳು. ಪ್ರಸಿದ್ಧ ಜೈನಕ್ಷೇತ್ರವಾದ ಗಿರ್ನಾರ್ (ನೋಡಿ- ಗಿರ್ನಾರ್) ಬೆಟ್ಟ ಮತ್ತು ಗಿರ್ ಅರಣ್ಯ (ನೋಡಿ- ಗಿರ್-ಅರಣ್ಯ) ಇರುವುದು ಈ ಜಿಲ್ಲೆಯಲ್ಲಿಯೇ. ಗಿರ್ನಾರ್ ಬೆಟ್ಟ ದೇವಾಲಯಗಳಿಗಲ್ಲದೆ ಪ್ರಾಚೀನ ಶಿಲಾಶಾಸನಗಳಿಗಾಗಿಯೂ ಪ್ರಸಿದ್ಧ. ಇಲ್ಲಿ ಅಶೋಕನ (ಕ್ರಿ.ಪೂ. 250) ಮತ್ತು ರುದ್ರ ದಾಮನ್ನನ (ಕ್ರಿ.ಶ. 150) ಶಾಸನಗಳಿವೆ. ಘಜ್ನಿ ಮಹಮೂದನ ದಾಳಿಗಳಿಗೆ ತುತ್ತಾದ ಇತಿಹಾಸಪ್ರಸಿದ್ಧ ಸೋಮನಾಥ ದೇವಾಲಯ ಇರುವುದು ಈ ಜಿಲ್ಲೆಯಲ್ಲಿಯೇ.

ಜುನಾಗಢ ಪಟ್ಟಣ ಗಿರ್ನಾರ್ ಬೆಟ್ಟಗಳ ತಪ್ಪಲಿನಲ್ಲಿದೆ. ಇದು ಜಿಲ್ಲೆಯ ಆಡಳಿತ ಕೇಂದ್ರ. ಜನಸಂಖ್ಯೆ 95,900 (1971). ಹಳೆಯ ಪಟ್ಟಣದಲ್ಲಿ ಕೆಲವು ಬೌದ್ಧಗುಹೆಗಳಿವೆ. ಇಲ್ಲಿರುವ ಕೋಟೆ ಬಹಳ ಪ್ರಾಚೀನವಾದುದು. ಊರಿನಲ್ಲಿ ಕೆಲವು ಐತಿಹಾಸಿಕ ಸ್ಮಾರಕಗಳಿವೆ. (ಸಿ.ಜಿ.ಪಿ.)