ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೆರಮೀಯ
ಜೆರಮೀಯ - ಬೈಬಲಿನ ಹಳೆಯ ಒಡಂಬಡಿಕೆಯ ಒಂದು ಪ್ರವಾದನ ಗ್ರಂಥ ಹಾಗೂ ಪ್ರವಾದಿಯ ಹೆಸರು. ಚೆರಮೀಯನ ಕಾಲ ಕ್ರಿ.ಪೂ.ಸು. 650?-588? ಎನ್ನಲಾಗಿದೆ. ಈತ ಒಬ್ಬ ಹೀಬ್ರೂ ಪ್ರವಾದಿ. ಈತನ ವಂಶದವರು ನೀತಿಪ್ರಧಾನ ಏಕದೇವವಾದದ ಪ್ರಚಾರ, ಪಾಪಖಂಡನೆಗಳಿಂದಾಗಿ ರಾಷ್ಟ್ರದ ಧಾರ್ಮಿಕ, ಕೆಲವೊಮ್ಮೆ ರಾಜಕೀಯ ಮುನ್ನಡೆಗೆ ಕಾರಣಕರ್ತರಾಗಿದ್ದಂಥವರು.
ಜೆರಮೀಯನ ಶಿಷ್ಯನಾದ ಬಾರುಖ್ ಎಂಬಾತ ಕ್ರಿ.ಪೂ. 605ರಲ್ಲಿ ಬರೆದಿಟ್ಟ ತನ್ನ ಗುರುವಿನ ಪ್ರವಾದನೆಗಳಲ್ಲಿ ಕೆಲವು ಸೇರ್ಪಡೆ, ಮಾರ್ಪಾಡುಗಳಾಗಿ ಈಗ ಜೆರಮೀಯ ಗ್ರಂಥವಾಗಿ ಲಭಿಸಿದೆ. ಈತನವೇ ಎನ್ನಲಾದ ಶೋಕಗೀತೆಗಳ ಕರ್ತೃತ್ವದ ಬಗ್ಗೆ ವಿದ್ವಾಂಸರಲ್ಲಿ ಸಂದೇಹವಿದೆ. ಈತನ ಉಪದೇಶ (ನಿಂದನೆ ಮತ್ತು ತೀರ್ಪು) ಹಳೆಯ ಒಡಂಬಡಿಕೆಯಲ್ಲಿ ಜೆರಮೀಯ ಅಂಡ್ ಲ್ಯಾಮೆಂಟೇಷನ್ ಎಂಬುದಾಗಿ ಸೇರ್ಪಡೆಯಾಗಿದೆ.
ಜೆರಮೀಯ ಗ್ರಂಥದ ಸಾರವಿಷ್ಟು : ಜೆರಮೀಯ ಇಸ್ರೇಲಿನ ಜನತೆಯನ್ನು ಅಪಾರವಾಗಿ ಪ್ರೀತಿಸಿದ್ದರೂ ತನ್ನ 40 ವರ್ಷ ಅವಧಿಯ ಪ್ರವಾದಿಕಾರ್ಯದಲ್ಲಿ ಜನತೆಗೂ ಅರಸನಿಗೂ ಅಪ್ರಿಯವಾದ ವಿಷಯಗಳನ್ನೇ ಈತ ಹೇಳಬೇಕಾಯಿತು. ಪಾಪಕಾರ್ಯದೆಡೆಗೇ ವಾಲಿದ್ದ ಆ ರಾಷ್ಟ್ರದ ಆಮೂಲಾಗ್ರ ವಿನಾಶವನ್ನು ತನ್ನ ಜೀವನದಲ್ಲಿ ಸಂಕೇತೀಕರಿಸಲು ಆಜ್ಞಪ್ತನಾದ ಈತ ಅವಿವಾಹಿತನಾಗಿದ್ದುಕೊಂಡು ಸಮಾಜಕ್ಕೆ ವಿಮುಖನಾಗಿ ಜೀವಿಸಬೇಕಾಯಿತು. ತತ್ಪರಿಣಾಮವಾಗಿ ತನ್ನ ಜನರ ಕೈಯಿಂದಲೇ ಕಷ್ಟನಿಷ್ಠುರಗಳನ್ನು ಅನುಭವಿಸಬೇಕಾಯಿತು. ನಿರ್ಲಕ್ಷಿಸಲ್ಪಟ್ಟ ಈತನ ಭವಿಷ್ಯವಾಣಿ ರುಜುವಾತಾದಾಗ ಜೆರೊಸಲೇಮನ್ನು ಗೆದ್ದ ಪರಕೀಯರು ಈತನನ್ನು ರಕ್ಷಿಸಿದರೂ ಕ್ರಮೇಣ ಈತ ಈಜಿಪ್ಟ್ ದೇಶಕ್ಕೆ ಒತ್ತೆಯಾಳಾಗಿ ಹೋಗಬೇಕಾಯಿತು. (ಎ.ಎನ್.ಎಸ್.ಜೆ.)