ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೇನುಸಾಕಣೆ

ವಿಕಿಸೋರ್ಸ್ದಿಂದ

ಜೇನುಸಾಕಣೆ ಕರ್ನಾಟಕದಲ್ಲಿ ಪುರಾತನ ಕಾಲದಿಂದಲೂ ರೂಢಿಯಲ್ಲಿರುವ ಒಂದು ಉದ್ಯಮ. ಹಳೆಯ ಕ್ರಮದ ಜೇನುಸಾಕಣೆಯಲ್ಲಿ ಜೇನುನೊಣಗಳ ಆವಶ್ಯಕತೆಗಳನ್ನು ಪೂರೈಸಲಾಗುತ್ತಿರಲಿಲ್ಲವಾದ್ದರಿಂದ ಜೇನು ತುಪ್ಪದ ಉತ್ಪತ್ತಿ ಹೆಚ್ಚಾಗಿರುತ್ತಿರಲಿಲ್ಲ. ಅಲ್ಲದೆ ಕೈಯಿಂದ, ಬಟ್ಟೆಯಿಂದ ಹಿಂಡಿ ಜೇನನ್ನು ತೆಗೆಯುತ್ತಿದ್ದುದರಿಂದ ಅದು ಉತ್ತಮ ಮಟ್ಟದ್ದಾಗಿರುತ್ತಿರಲಿಲ್ಲ. ಆಧುನಿಕ ಜೇನುಕೃಷಿ ಪದ್ಧತಿಯಲ್ಲಿ ಉತ್ತಮವಾದ ಮರದಿಂದ, ಸರಿಯಾದ ಆಳತೆಯಲ್ಲಿ ತಯಾರುಮಾಡಿದ ಪೆಟ್ಟಿಗೆಗಳಲ್ಲಿ ಜೇನುನೊಣಗಳ ಕುಟುಂಬಗಳನ್ನು ಸಾಕಲಾಗುತ್ತದೆ. ಸಂಸಾರ ಬೆಳೆಸುವ ಅನುಕೂಲತೆಗೂ ಹೆಚ್ಚಾಗಿ ಬರುವ ಜೇನುತುಪ್ಪದ ಶೇಖರಣೆಗೂ ಬೇರೆ ಬೇರೆ ಕೋಣೆಗಳನ್ನು ಒದಗಿಸುವುದರಿಂದ ಮತ್ತು ಜೇನುತುಪ್ಪವನ್ನು ಸುಧಾರಿತ ರೀತಿಯ ಯಂತ್ರದ ಸಹಾಯದಿಂದ ತೆಗೆಯುವುದರಿಂದ ಉತ್ತಮವಾದ ಜೇನುತುಪ್ಪ ದೊರೆಯುತ್ತದೆ. ಈ ಪದ್ಧತಿಯಲ್ಲಿ ಜೇನುನೊಣಗಳ ಆವಶ್ಯಕತೆಯನ್ನು ಆಗಿಂದಾಗ್ಗೆ ಪೂರೈಸಿಕೊಡಲಾಗುತ್ತಿರುವುದರಿಂದಲೂ ಕುಟುಂಬಕ್ಕೆ ಸಾಕಷ್ಟು ಆಹಾರವನ್ನು ಒದಗಿಸುವುದರಿಂದಲೂ ಜೇನು ಕುಟುಂಬಗಳು ಹೆಚ್ಚು ವರ್ಷಗಳವರೆಗೆ ಗೂಡುಗಳಲ್ಲಿ ಉಳಿದು ಆರ್ಥಿಕ ದೃಷ್ಟಿಯಿಂದ ಹೆಚ್ಚು ಲಾಭವನ್ನು ಒದಗಿಸಿಕೊಡುತ್ತವೆ.

ಜೇನುಕೃಷಿ ಲಾಭದಾಯಕವಾಗಿರಬೇಕಾದರೆ ಕೆಳಗಿನ ಮೂರು ಅಂಶಗಳು ಅಗತ್ಯ. 1 ಜೇನು ನೊಣಗಳಿಗೆ ಧಾರಾಳವಾಗಿ ಮಕರಂದ ಮತ್ತು ಪರಾಗವನ್ನು ಒದಗಿಸಿಕೊಡುವ ಗಿಡಮರಗಳಿರಬೇಕು. 2 ಜೇನುಕೃಷಿಯನ್ನು ಪ್ರಾರಂಭಿಸುವ ಸ್ಥಳದಲ್ಲಿ ನಿಸರ್ಗದ ಜೇನುಕುಟುಂಬಗಳು ಹೇರಳವಾಗಿ ಬರುತ್ತಿರಬೇಕು. 3 ಸಾಕಣೆಗಾರರಿಗೆ ಜೇನುಸಾಕಣೆಯಲ್ಲಿ ಆಸಕ್ತಿ ಇರಬೇಕು.

ಕರ್ನಾಟಕದಲ್ಲಿ ಹೆಚ್ಚಾಗಿ ಮಲೆನಾಡು ಪ್ರದೇಶಗಳಲ್ಲಿ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮತ್ತು ಹಾಸನ, ಶಿವಮೊಗ್ಗ, ಧಾರವಾಡ, ಬೆಳಗಾಂವಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಜೇನುಸಾಕಣೆ ಹೆಚ್ಚು ಲಾಭದಾಯಕವಾದ ಕುಶಲ ಕೈಗಾರಿಕೆಯಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ, ಅಂದರೆ ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಕೆಲವು ನೈಸರ್ಗಿಕ ವನಸ್ಪತಿಗಳ ಮತ್ತು ವ್ಯವಸಾಯದ ಬೆಳೆಗಳ ಅವಲಂಬನೆಯಲ್ಲಿ ಜೇನುಸಾಕಣೆ ನಡೆಸುವುದಿದೆ. ಜೇನುನೊಣಗಳು ವ್ಯವಸಾಯದ ಬೆಳೆಗಳ ಪರಾಗಸ್ಪರ್ಶ ಕಾರ್ಯವನ್ನು ನಡೆಸಿ ಬೆಳೆಯ ಉತ್ಪತ್ತಿಯನ್ನು ಹೆಚ್ಚು ಮಾಡುವುದರಿಂದ ಎಲ್ಲ ಕಡೆಗಳಲ್ಲೂ ಜೇನುಸಾಕಣೆಗೆ ಆದ್ಯತೆ ನೀಡಲಾಗಿದೆ.

ಜೇನುಸಾಕಣೆಗೆ ರಾಜ್ಯ ಸರ್ಕಾರದ ಪ್ರೋತ್ಸಾಹವೊಂದೇ ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗಳ ಮತ್ತು ಜೇನುಕೃಷಿಕರ ಸಹಕಾರ ಸಂಘಗಳ ನೆರವೂ ಉಂಟು. ಜೇನುಕೃಷಿಗೆ ಅಗತ್ಯವಾದ ಜೇನುಪೆಟ್ಟಿಗೆ ಮತ್ತು ಇತರ ಉಪಕರಣಗಳನ್ನು ಈ ಸಂಘ ಸಂಸ್ಥೆಗಳು ಒದಗಿಸಿ ಕೊಡುತ್ತವೆ. ಈ ಕೃಷಿಯಲ್ಲಿ ಪರಿಣತರಾದವರನ್ನು ಅಲ್ಲಲ್ಲಿ ನೇಮಿಸಿ ಅವರಿಂದ ಗ್ರಾಮಾಂತರ ಜನರಿಗೆ ಜೇನುಕೃಷಿಯನ್ನು ಮಾಡಲು ಅನುಕೂಲವಾದ ಮಾಹಿತಿಯನ್ನು, ತಾಂತ್ರಿಕ e್ಞÁನವನ್ನು ಒದಗಿಸಲಾಗುತ್ತಿದೆ. ಜೇನುತುಪ್ಪಕ್ಕೆ ಯೋಗ್ಯಮಾರುಕಟ್ಟೆ ಸಿಕ್ಕುವಂತೆ ತಕ್ಕ ಏರ್ಪಾಟೂ ಉಂಟು. ಜೇನುಕೃಷಿಯಲ್ಲಿ ಹೆಚ್ಚು ತಿಳಿವಳಿಕೆಯನ್ನು ಕೊಡುವ ಸಲುವಾಗಿ ರಾಜ್ಯಸರ್ಕಾರ ಎರಡು ತಿಂಗಳ ಅವಧಿಯ ತರಬೇತಿ ನೀಡುವ ವ್ಯವಸ್ಥೆ ಮಾಡಿದೆ.

ಬೆಂಗಳೂರು ಮತ್ತು ಮಡಿಕೇರಿಯಲ್ಲಿ ಜೇನುಸಾಕಣೆಯ ಎರಡು ಪ್ರಮುಖ ಕೇಂದ್ರಗಳುಂಟು. ಕೊಡಗಿನ ಭಾಗಮಂಡಲದಲ್ಲಿ ಜೇನುಕೃಷಿ ತರಬೇತಿಕೇಂದ್ರ ಇದೆ. (ಕೆ.ಎಂ.ಜೆ.)