ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೇವರಗಿ

ವಿಕಿಸೋರ್ಸ್ದಿಂದ

ಜೇವರಗಿ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಒಂದು ತಾಲ್ಲೂಕು; ಅದರ ಮುಖ್ಯಸ್ಥಳ. ಮೊದಲು ಇದನ್ನು ಆಂದೋಲಾ ಎಂದು ಕರೆಯಲಾಗುತ್ತಿತ್ತು. ತಾಲ್ಲೂಕಿನ ಮುಖ್ಯಸ್ಥಳವಾದ ಜೇವರಗಿಯಲ್ಲಿ ಅನೇಕ ಬಸದಿಗಳಿವೆ. ಇದು ಜೈನರ ಯಾತ್ರಾಸ್ಥಳ. ಈ ಪಟ್ಟಣದ ಉತ್ತರಕ್ಕೆ ಭೀಮಾನದಿ ಹರಿಯುತ್ತದೆ. ಗುಲ್ಬರ್ಗ-ಬಿಜಾಪುರ ಮಾರ್ಗ ಜೇವರಗಿ ಪಟ್ಟಣದ ಮೂಲಕ ಹಾಯ್ದು ಹೋಗುತ್ತದೆ.

ಜೇವರಗಿ ತಾಲ್ಲೂಕಿನ ವಿಸ್ತೀರ್ಣ 1,932.6 ಚ.ಕಿ.ಮೀ. ಜನಸಂಖ್ಯೆ 1,36,358 (1971). ತಾಲ್ಲೂಕಿನಲ್ಲಿ ಐದು ಉಪವಿಭಾಗಗಳಿವೆ. 1 ಜೇವರಗಿ, 2 ಇಜೇರಿ, 3 ನೆಲೋಗಿ 4 ಯಡ್ರಾಮಿ ಮತ್ತು 5 ಆಂದೋಲಾ, ತಾಲ್ಲೂಕಿನಲ್ಲಿರುವ ಹಳ್ಳಿಗಳು 162. ಫೆಬ್ರವರಿ ಅಂತ್ಯದಿಂದ ಜೂನ್ ತಿಂಗಳ ಮೊದಲ ವಾರದವರೆಗೆ ಬಿಸಿಲು ಹೆಚ್ಚು. ವಾರ್ಷಿಕ ಸರಾಸರಿ ಮಳೆ 600 ಮಿಮೀ. ತಾಲ್ಲೂಕಿನದು ಆರೋಗ್ಯಕರವಾದ ಶುಷ್ಕ ವಾಯುಗುಣ. ಈ ತಾಲ್ಲೂಕಿನಲ್ಲಿ ಸುಣ್ಣದ ಕಲ್ಲು ಹೇರಳವಾಗಿ ಸಿಗುತ್ತದೆ. ಅದನ್ನು ವಾಡಿ ಹಾಗೂ ಶಾಹಬಾದ್ ಸಿಮೆಂಟ್ ಕಾರ್ಖಾನೆಗಳಿಗೆ ಕಳಿಸುತ್ತಾರೆ. ಇಲ್ಲಿಯದು ಫಲವತ್ತಾದ ಕಪ್ಪುಭೂಮಿ. ಜನರ ಪ್ರಧಾನ ಕಸಬು ಕೃಷಿ. ಜೋಳ, ಸಜ್ಜೆ, ಗೋದಿ, ಮೆಣಸಿನಕಾಯಿ, ಹತ್ತಿ, ಎಣ್ಣೆಕಾಳುಗಳು-ಇವು ಇಲ್ಲಿಯ ಕೃಷಿ ಉತ್ಪನ್ನಗಳು, ತಾಲ್ಲೂಕಿನ ಉತ್ತರ ಭಾಗದಲ್ಲಿ ಭೀಮಾ ನದಿಯ ನೀರನ್ನು ಸ್ವಲ್ಪಮಟ್ಟಿಗೆ ಬಳಸಿಕೊಳ್ಳುತ್ತಾರೆ. ತಾಲ್ಲೂಕಿನ ಬಹುಭಾಗದಲ್ಲಿ ಮಳೆಯನ್ನೇ ಆಶ್ರಯಿಸಿ ಬೆಳೆ ತೆಗೆಯುತ್ತಾರೆ. ಗುಲ್ಬರ್ಗ ಜಿಲ್ಲೆಯ ಇತರ ಭಾಗಗಳಂತೆ ಇದೂ ಅನೇಕ ಬಾರಿ ಅಭಾವ ಪರಿಸ್ಥಿತಿಗೆ ಒಳಗಾಗಿದೆ. 1972ರಲ್ಲಿ ಈ ತಾಲ್ಲೂಕಿನಲ್ಲಿ ಅಭಾವ ಪರಿಸ್ಥಿತಿ ಉಂಟಾಗಿತ್ತು.

ಶಿಕ್ಷಣ ಕ್ಷೇತ್ರದಲ್ಲಿ ಈ ತಾಲ್ಲೂಕು ಇನ್ನೂ ಬಹಳ ಅಭಿವೃದ್ದಿ ಹೊಂದಬೇಕಾಗಿದೆ. 1965ರ ಅಂಕಿ ಅಂಶಗಳಂತೆ ಇಡೀ ತಾಲ್ಲೂಕಿನಲ್ಲಿ ಕೇವಲ 10 ಪ್ರಾಥಮಿಕ ಮತ್ತು 2 ಮಾಧ್ಯಮಿಕ ಶಾಲೆಗಳಿದ್ದುವು. ಜೇವರಗಿಯಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. (ಎಸ್.ಎನ್.ಎ.ಆರ್.ಇ.)