ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೊರೋಮ್, ಜೆರೋಮ್ ಕ್ಲಾಪ್ಕ

ವಿಕಿಸೋರ್ಸ್ದಿಂದ
Jump to navigation Jump to search

ಜೊರೋಮ್, ಜೆರೋಮ್ ಕ್ಲಾಪ್ಕ 1859-1927. ಕಾದಂಬರಿಕಾರ ಹಾಗೂ ನಾಟಕಕಾರ. ಸ್ಟ್ಯಾಟ್‍ಫರ್ಡ್‍ಷೈರಿನಲ್ಲಿ ಹುಟ್ಟಿದ ಈತ ತನ್ನ ವ್ಯಾಸಂಗ ಮುಗಿದ ಅನಂತರ ರೈಲ್ವೆ ಗುಮಾಸ್ತನಾಗಿ, ಬಾತ್ಮೀದಾರನಾಗಿ, ಉಪಾಧ್ಯಾಯನಾಗಿ ಕೆಲಸ ಮಾಡಿದ. ರಂಗಭೂಮಿಯಲ್ಲಿ ಕೆಲಸಮಾಡಿದ್ದೂ ಉಂಟು. ಆನ್ ದಿ ಸ್ಟೇಜ್ ಅಂಡ್ ಆಫ್ (1885) ಎಂಬ ಗ್ರಂಥದಲ್ಲಿ ತನ್ನ ರಂಗಭೂಮಿಯ ಅನುಭವಗಳನ್ನು ಈತ ವಿವರಿಸಿದ್ದಾನೆ. 1889ರಲ್ಲಿ ಹೊರಬಂದ ಐಡ್‍ಲ್ ತಾಟ್ಸ್ ಆಫ್ ಎನ್ ಐಡ್ಲ್ ಫೆಲೊ ಎಂಬ ಪುಸ್ತಕದಿಂದ ಈತ ಪ್ರಸಿದ್ಧಿಗೆ ಬಂದ. ಈತನ ಪ್ರಮುಖ ಕೃತಿಯಾದ ತ್ರಿ ಮೆನ್ ಇನ್ ಎ ಬೋಟೆ ಎಂಬುದರ ಹತ್ತು ಲಕ್ಷ ಪ್ರತಿಗಳು ಖರ್ಚಾದುವಂತೆ. ಜರ್ಮನಿಯಲ್ಲಿ ಈತ ನಡೆಸಿದ ಪ್ರವಾಸದ ವಿಷಯ ತ್ರಿ ಮೆನೆ ಆನ್ ದಿ ಬಮೆಲ್ (1900) ಎಂಬುದರಲ್ಲಿದೆ. ಪಾಲ್ ಕೆಲ್ವರ್ (1902) ಒಳ್ಳೆಯ ಕಾದಂಬರಿ. ಜೆರೋಮ್ 1892ರಲ್ಲಿ ಐಡ್ಲರ್ ಎಂಬ ಪತ್ರಿಕೆಯ ಜಂಟಿಸಂಪಾದಕನಾದನಲ್ಲದೆ 1893ರಲ್ಲಿ ತನ್ನದೇ ಆದ ಟುಡೆ ಎಂಬ ಎರಡು ಪೆನಿ ವಾರಪತ್ರಿಕೆಯನ್ನು ಹೊರಡಿಸಿದ.

ಈತನ ನಾಟಕಗಳಲ್ಲಿ ಖ್ಯಾತವಾದುದು ದಿ ಪಾಸಿಂಗ್ ಆಫ್ ದಿ ತರ್ಡ್ ಪ್ಲೋರ್ ಬ್ಯಾಕ್ (1908). ಒಂದನೆಯ ಮಹಾಯುದ್ಧದಲ್ಲಿ ಜೆರೋಮ್ ಆಂಬುಲೆನ್ಸ್ ವಾಹನದ ಚಾಲಕನಾಗಿ ಕೆಲಸಮಾಡಿದ.

ಮೈ ಲೈಫ್ ಅಂಡ್ ಟೈಮ್ಸ್ (1926) ಎಂಬುದು ಈತನ ಆತ್ಮಕಥೆ. (ಎಚ್.ವಿ.ಎಸ್.)