ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜ್ಯೇಷ್ಠಾ 2
ಜ್ಯೇಷ್ಠಾ 2 -
ಅಲಕ್ಷ್ಮಿಯ ಹೆಸರು. ಕ್ಷುತ್‍ಪಿಪಾಸಾಮಲಾಂ ಜ್ಯೇಷ್ಠಾ ಮಲಕ್ಷ್ಮೀಂ ನಾಶಯಾವ್ಯಹಂ ಎಂದು ಶ್ರೀಸೂಕ್ತದಲ್ಲಿ ಹೇಳಿದೆ. ದೇವಾಸುರರು ನಡೆಸಿದ ಸಮುದ್ರಮಥನಕಾಲದಲ್ಲಿ ಲಕ್ಷ್ಮಿ ಹುಟ್ಟುವ ಮೊದಲು ಕೆಂಪು ಹಾರ, ಕೆಂಪು ಬಟ್ಟೆ ಧರಿಸಿದ ದೇವಿಯೊಬ್ಬಳು ಅವಿರ್ಭವಿಸಿದಳು. ಆದುದರಿಂದ ಈಕೆಗೆ ಜ್ಯೇಷ್ಠಾದೇವೀ ಎಂದು ಹೆಸರಾಯಿತು. ಹುಟ್ಟಿದೊಡನೆ ತನ್ನ ಕೆಲಸವೇನೆಂದು ದೇವತೆಗಳನ್ನು ಈಕೆ ಕೇಳಿದಾಗ, ಯಾವ ಮನೆಯಲ್ಲಿ ಸದಾ ಜಗಳ ನಡೆಯುತ್ತಿರುವುದೋ ಕಟುವಾಗಿ ಮಾತನಾಡುವವರು, ಸುಳ್ಳಾಡುವವರು ಇರುವರೋ, ಕಸ-ಕೂದಲು-ಬೂದಿ ಮೊದಲಾದುವನ್ನು ಗುಡಿಸದೆ ಹರಡಿಕೊಂಡಿರುವರೋ ಕೈಕಾಲು ತೊಳೆಯದೆ ಆಚಮನ ಮಾಡುವರೋ ಅಂಥ ಮನೆಯಲ್ಲಿ ನೀನು ವಾಸವಾಗಿದ್ದುಕೊಂಡು ಆ ಜನರಿಗೆ ದುಃಖದಾರಿದ್ರ್ಯವನ್ನು ಕೊಡುವವಳಾಗಿರು ಎಂದು ಆದೇಶ ಮಾಡಿ ಕಳುಹಿಸಿದರು. ಈ ದೇವತೆಯ ಅನುಗ್ರಹಕ್ಕಾಗಿ ಭಾದ್ರಪದ ಮಾಸದಲ್ಲಿ ಜ್ಯೇಷ್ಠಾ ನಕ್ಷತ್ರದ ದಿನ ಜ್ಯೇಷ್ಠಾದೇವೀ ವ್ರತವನ್ನು ಆಚರಿಸಬೇಕೆಂದು ವಿಧಾನ ಮಾಡಿದ್ದಾರೆ. ಮಂಕು, ಸೋಮಾರಿತನ, ಮುಜುಗರ ಎಂಬರ್ಥದಲ್ಲಿ ಕನ್ನಡದಲ್ಲಿ ಜಷ್ಠೆ ಎಂಬ ಪ್ರಯೋಗವಿದೆ.
ಈಕೆಯ ಮಗನೆ ಅಧರ್ಮಾ.
ದಕ್ಷಬ್ರಹ್ಮನ ಮಕ್ಕಳಲ್ಲಿ ಒಬ್ಬಳಿಗೆ ಜ್ಯೇಷ್ಟಾ ಎಂಬ ಹೆಸರಿದೆ. ಈಕೆ ಚಂದ್ರನ ಹೆಂಡತಿ.
ಇಪ್ಪತ್ತೇಳು ನಕ್ಷತ್ರಗಳಲ್ಲಿ ಒಂದನ್ನು ಜ್ಯೇಷ್ಠಾ ಎಂದು ಕರೆವುದಿದೆ. (ಆರ್.ಎಸ್.ಎಸ್.)