ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜ್ಯೋತಿರೀಶ್ವರ ಕವಿಶೇಖರ

ವಿಕಿಸೋರ್ಸ್ದಿಂದ

ಜ್ಯೋತಿರೀಶ್ವರ ಕವಿಶೇಖರ

ಧೂರ್ತಸಮಾಗಮ ಹಾಗೂ ಪಂಚಸಾಯಕವೆಂಬ ಸಂಸ್ಕøತ ಪ್ರಹಸನಗಳ ಕರ್ತೃ. ಮಿಥಿಲೆಯಲ್ಲಿ ಆಳುತ್ತಿದ್ದ ಕರ್ಣಾಟವಂಶದ (ನರಸಿಂಹ?) ಹರಸಿಂಹ ಅಥವಾ ಹರಿಸಿಂಹನ (14ನೆಯ ಶತಮಾನದ ಆದಿಭಾಗ) ಆಸ್ಥಾನದಲ್ಲಿದ್ದನೆಂದು ಕೆಲವರೂ ವಿಜಯನಗರವನ್ನು ಆಳಿದ ನರಸಿಂಹನ (1487-1508) ಆಸ್ಥಾನದಲ್ಲಿದ್ದನೆಂದು ಮತ್ತೆ ಕೆಲವರೂ ಅಭಿಪ್ರಾಯಪಡುತ್ತಾರೆ. ಇತ್ತೀಚಿನ ಸಂಶೋಧನೆಗಳು ಈ ಎರಡನೆಯ ಪಂಥದ ನಂಬಿಕೆ ಸರಿಯಲ್ಲವೆಂಬುದನ್ನು ಸ್ಥಿರಪಡಿಸಿದೆ. ಈತನ ಕೃತಿ ಧೂರ್ತಸಮಾಗಮದ ವಸ್ತು ಕಲ್ಪಿತ. ಎಲ್ಲ ಪ್ರಹಸನಗಳಂತೆ ಇಲ್ಲೂ ಸಾಮಾಜಿಕ ಮತ್ತು ಧಾರ್ಮಿಕ ಲೋಪದೋಷಗಳ ವಿಡಂಬನೆ ಇದೆ. ಹಾಸ್ಯ ಬಹಳ ಕೀಳುಮಟ್ಟದ್ದು. ಕಥಾವಸ್ತು ಹೀಗಿದೆ: ವೇಶ್ಯೆ ಅನಂಗಸೇನೆಯನ್ನು ಮೊದಲು ನೋಡಿದ್ದು ಶಿಷ್ಯ ದುರಾಚಾರ ಎಂಬಾತನಾಗಿದ್ದರೂ ಆತನ ಗುರು ವಿಶ್ವನಾಗರ ಆಕೆಯನ್ನು ತಾನು ಪಡೆಯಲು ಜಗಳವಾಡುತ್ತಾನೆ. ಇವರ ವ್ಯಾಜ್ಯದ ತೀರ್ಮಾನವನ್ನು ಮೂರನೆಯವರೊಬ್ಬರಿಗೆ ವಹಿಸಿ ಅದರಂತೆ ನಡೆಯಬೇಕೆಂದು ಅನಂಗಸೇನೆಯೇ ಸಲಹೆ ಮಾಡುತ್ತಾಳೆ. ಅದರಂತೆ ವ್ಯಾಜ್ಯದ ತೀರ್ಮಾನವನ್ನು ಅಸಜ್ಞಾತಿ ಎಂಬ ಬ್ರಾಹ್ಮಣನಿಗೆ ಒಪ್ಪಿಸಲು ಆತ ಬೆಕ್ಕಿನ ಜಗಳವನ್ನು ಕೋತಿ ಬಗೆಹರಿಸಿದಂತೆ ಮಾಡಿ ಜಾಣ್ಮೆಯಿಂದ ಅವಳು ತನ್ನ ಪಾಲಾಗಬೇಕೆಂದು ತೀರ್ಮಾನಿಸುತ್ತಾನೆ. ಈ ಮಧ್ಯೆ ವಿದೂಷಕನೂ ಅನಂಗಸೇನೆಯ ಮೇಲೆ ಕಣ್ಣು ಹಾಯಿಸುತ್ತಾನೆ. ಹೀಗೆ ಉಂಟಾದ ಗುಲ್ಲೇ ಕಥೆಯ ಆದಿ. ಅಂತ್ಯವಾಗಿ ಭಾಷೆಯೂ ಅದಕ್ಕೆ ತಕ್ಕ ಹಾಗೆ ಓಡುತ್ತದೆ. ಇಲ್ಲಿ ಬರುವ ಪಾತ್ರಗಳ ಹೆಸರುಗಳು ಅನ್ವರ್ಥವಾಗಿದೆ. ಪಂಚಸಾಯಕವೆಂಬ ಈತನ ಮತ್ತೊಂದು ಗ್ರಂಥವೂ ಕಾಮಕಲೆಯ ಸವಿಸ್ತಾರ ವರ್ಣನೆಗೆ ಮೀಸಲಾಗಿದೆ. (ಟಿ.ಎಸ್.ಕೆ.ಎಂ.)