ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟರ್ನಿಪ್

ವಿಕಿಸೋರ್ಸ್ದಿಂದ

ಟರ್ನಿಪ್ ಕ್ರೂಸಿಫೆರೀ (ಬ್ಯಾಸಿಕೇಸೀ) ಕುಟುಂಬಕ್ಕೆ ಸೇರಿದ ತರಕಾರಿಗಿಡ. ಇದರ ವೈಜ್ಞಾನಿಕ ಹೆಸರು ಬ್ರ್ಯಾಸಿಕ ರೇಪ ಅಥವಾ ಬ್ರ್ಯಾಸಿಕ ಕ್ಯಾಂಪೆಸ್ಟ್ರಿಸ್. ಯೂರೋಪಿನಲ್ಲಿ ಸುಮಾರು 4,000 ವರ್ಷಗಳಿಗಿಂತಲೂ ಹಿಂದಿನಿಂದ ಇದರ ಬೇಸಾಯ ಇದೆಯಾದರೂ ಇದರ ಮೂಲ ನೆಲೆ ಯಾವುದೆಂದು ಖಚಿತವಾಗಿ ತಿಳಿದುಬಂದಿಲ್ಲ. ಬಹುಶಃ ಇದು ಮಧ್ಯ ಮತ್ತು ದಕ್ಷಿಣ ಯೂರೋಪುಗಳ ಮೂಲವಾಸಿಯಿರಬೇಕು. ಇದು ಸ್ವಾಭಾವಿಕವಾಗಿ ರಷ್ಯ ಮತ್ತು ಸೈಬೀರಿಯದಲ್ಲಿ ಬೆಳೆಯುತ್ತದೆ. ಪ್ರಪಂಚದಾದ್ಯಂತ ಇದರ ಬೇಸಾಯ ಉಂಟು. ತಂಪು ಹವೆಯಿರುವ ಪ್ರದೇಶಗಳಲ್ಲಿ ಇದರ ಬೆಳೆವಣಿಗೆ ಹುಲುಸು.

ಟರ್ನಿಪ್ ಒಂದು ದ್ವೈವಾರ್ಷಿಕ ಮೂಲಿಕೆ. ಇದರಲ್ಲಿ ತಾಯಿಬೇರು ದಪ್ಪವಾಗಿ ಗುಂಡಗಿದೆ. ಬೇರಿನ ತುದಿ ಮಾತ್ರ ಬಹಳ ಸಣ್ಣದಾಗಿ ಚಾಟಿಯಂತಿದೆ. ಇಡೀ ಬೇರೇ ತರಕಾರಿಯಾಗಿ ಬಳಕೆಯಾಗುವ ಭಾಗ. ಇದು ವರ್ಧನ ಅಂಗಾಂಶದ (ಕೇಂಬಿಯಮ್) ಒಳಭಾಗದಿಂದ ಉತ್ಪತ್ತಿಯಾದ ಮೃದುವಾದ ಜೀವಕೋಶಗಳಿಂದ ಹೆಚ್ಚಾಗಿ ವುಡ್ ಪರಂಕಿಮ ಕೋಶಗಳಿಂದ ಕೂಡಿದೆ. ಗಿಡದ ಬೆಳೆವಣಿಗೆಯ ಮೊದಲನೆಯ ವರ್ಷದಲ್ಲಿ ಕಾಂಡ ಬಹಳ ಕಿರಿದಾಗಿದ್ದು ಬೇರಿನ ಮೆಲ್ತುದಿಯಲ್ಲಿ ಅಚ್ಚಹಸಿರು ಬಣ್ಣದ ಎಲೆಗಳ ಗುಂಪೊಂದು ಮಾತ್ರ ಇರುತ್ತದೆ. ಎಲೆಗಳ ಮೇಲೆಲ್ಲ ಒರಟಾದ ತುಪ್ಪಳ ಇದೆ. ಎರಡನೆಯ ವರ್ಷದಲ್ಲಿ ಎಲೆಗಳ ಗುಂಪಿನ ಮಧ್ಯದಲ್ಲಿರುವ ಕುಡಿ 1'-3' ಉದ್ದದ ಬಲಿಷ್ಠ ಕಾಂಡವಾಗಿ ಬೆಳೆಯುತ್ತದೆ. ಇದರ ಮೇಲೆ ಕೆಲವು ಮೃದುವಾದ ಎಲೆಗಳಿರುವುದುಂಟು. ಅನಂತರ ಅಚ್ಚಹಳದಿಯ ಹೂ ಗೊಂಚಲು ಬೆಳೆಯತೊಡಗುತ್ತದೆ. ಟರ್ನಿಪ್ಪಿನ ಬೇರುಗಳನ್ನು ತರಕಾರಿಯಾಗಿ ಬಳಸುವುದರಿಂದ ಬೇರುಗಳು ದಪ್ಪವಿರುವಾಗಲೇ ಇವನ್ನು ಕೀಳುತ್ತಾರೆ. ಆದ್ದರಿಂದ ಹೂಬಿಡುವವರೆಗೂ ಇದನ್ನು ಬೆಳೆಸದೆ ಏಕವಾರ್ಷಿಕ ಸಸ್ಯವನ್ನಾಗಿ ನೋಡಿಕೊಳ್ಳಲಾಗುತ್ತದೆ.

ಟರ್ನಿಪ್ಪನ್ನು ಬೇರಿನ ಮಾದರಿಯ ಆಧಾರದ ಮೇಲೆ ಉದ್ದನೆಯ, ಕದರಿನಂಥ, ಗುಂಡನೆಯ, ಚಪ್ಪಟೆಯಾದ-ಹೀಗೆ ಹಲವಾರು ಬಗೆಗಳಾಗಿ ವಿಂಗಡಿಸುವುದುಂಟು. ಹವಾಪರಿಸ್ಥಿತಿಗೆ ಅನುಗುಣವಾಗಿ ಯೂರೋಪಿನ ಮತ್ತು ಏಷ್ಯದ ಟರ್ನಿಪ್ ಎಂಬ ಎರಡು ಬಗೆಗಳಿವೆ. ಯೂರೋಪಿನ ಬಗೆಗಳು ಸಿಹಿಯಾಗಿಯೂ ಬಹು ಆಕರ್ಷಕವಾಗಿಯೂ ಇವೆ. ಏಷ್ಯದ ಬಗೆಗಳು ಅಷ್ಟು ಸಿಹಿಯಲ್ಲ. ಇವು ಹೆಚ್ಚಾಗಿ ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಕೆಯಾಗುತ್ತವೆ. ಅಲ್ಲದೆ ಇವು ಬಹಳ ಉಷ್ಣಸಹಿಷ್ಣುಗಳು. ಬೇರಿನ ಹೊರಬಣ್ಣ ಮತ್ತು ತಿರುಳಿನ ಬಣ್ಣಗಳಿಗನುಗುಣವಾಗಿ ಇವುಗಳಲ್ಲಿ ಹಳದಿ ಮತ್ತು ಬಿಳಿ ಬಗೆಗಳನ್ನು ಗುರುತಿಸಲಾಗುತ್ತದೆ. ಹಳದಿ ಟರ್ನಿಷ್‍ಗಳು ಬಹಳ ನಿಧಾನವಾಗಿ ಬೆಳೆಯುವಂಥವು. ಇವು ಮೃದುವಾಗಿವೆ ಮತ್ತು ಬಿಳಿಯವುಗಳಿಗಿಂತ ಇವುಗಳಲ್ಲಿ ಉತ್ತಮ ಪೌಷ್ಟಿಕ ಅಂಶ ಉಂಟು. ಇದಲ್ಲದೆ ಟರ್ನಿಪ್‍ನಲ್ಲಿ ಒಳ್ಳೆಯ ಮಿಶ್ರ ತಳಿಗಳೂ ಇಲ್ಲದಿಲ್ಲ. ಇವುಗಳಲ್ಲಿ ಮುಖ್ಯವಾದುವು: ಪರ್ಪಲ್ ಟಾಪ್, ಹ್ವೈಟ್ ಗ್ಲೋಬ್, ಸ್ನೋಬಾಲ್, ಗೋಲ್ಡನ್ ಬಾಲ್, ಅರ್ಲಿ ಮಿಲಾನ್, ರೆಡ್ ಟಾಪ್ ಮೊದಲಾದವು.

ಟರ್ನಿಪ್ ಚಳಿಗಾಲದ ಬೆಳೆ. ಬೇಸಿಗೆಯಲ್ಲಿ ಇದನ್ನು ಬೆಳೆಸಬಹುದಾದರೂ ಇದು ಚಳಿಗಾಲದ 10'-50' ಅ. ಉಷ್ಣತೆಯಲ್ಲಿ ಹುಲುಸಾಗಿ ಬೆಳೆಯುತ್ತದೆ. ಮೂಲಂಗಿಯಂತೆಯೇ ಇದು ಎಲ್ಲ ತರದ ಮಣ್ಣಿನಲ್ಲಿ ಬೆಳೆಯಬಲ್ಲುದು. ಆದರೂ ಜೇಡಿ ಮತ್ತು ಮರಳು ಮಿಶ್ರಿತ ನೆಲದಲ್ಲಿ ಚೆನ್ನಾಗಿ ಬೆಳೆಯುವುದು. ಬೇರುಗಳ ಬೆಳೆವಣಿಗೆಗೆ ಅನುಕೂಲವಾಗುವಂತೆ ಭೂಮಿಯನ್ನು ಹೆಂಟೆಗಳಿಲ್ಲದಂತೆ ಹದಗೊಳಿಸಬೆಕು. ಇದರ ಬೆಳೆವಣಿಗೆ ಬಹಳ ತೀವ್ರಗತಿಯದು. ಆದ್ದರಿಂದ ನೆಲ ಬಹಳ ಫಲವತ್ತಾಗಿರಬೇಕು. ನೆಲವನ್ನು ಹದಗೊಳಿಸುವಾಗ ಪ್ರತಿ ಹೆಕ್ಟೇರಿಗೆ 20-25 ಟನ್ನಿನಷ್ಟು ತಿಪ್ಪೆ ಗೊಬ್ಬರವನ್ನು ಹಾಕಿ ಅನಂತರ ಬೀಜ ಬಿತ್ತುವಾಗ 35 ಞg. ನೈಟ್ರೊಜನ್, ತಲಾ 50 ಞg. ಫಾಸ್ಫರಸ್ ಮತ್ತು ಪೊಟ್ಯಾಷ್‍ಗಳನ್ನು ಹಾಕಿಬೇರು ಬಲಿಯುವಾಗ ಮತ್ತೆ 35 ಞg. ನೈಟ್ರೊಜನ್ನನ್ನು ಹಾಕಬೇಕು.

ಸಾಮಾನ್ಯವಾಗಿ ಏಷ್ಯದ ಬಗೆಗಳನ್ನು ಜುಲೈನಿಂದ ಸೆಪ್ಟೆಂಬರ್‍ವರೆಗೂ ಯೂರೋಪಿನ ಬಗೆಗಳನ್ನು ಸೆಪ್ಟೆಂಬರ್‍ನಿಂದ ಡಿಸೆಂಬರ್‍ವರೆಗೂ ಉತ್ತರ ಭಾರತದ ಸಮತಲ ಪ್ರದೇಶದಲ್ಲಿ ಬಿತ್ತುತ್ತಾರೆ. ಗುಡ್ಡಪ್ರದೇಶಗಳಲ್ಲಿ ಬಿತ್ತನೆ ಮಾರ್ಚ್‍ನಿಂದ ಮೇವರೆಗೆ ನಡೆಯುತ್ತದೆ. ಹೆಕ್ಟೇರಿಗೆ ಸುಮಾರು 3-4 ಞg.ಯಷ್ಟು ಬೀಜ ಬೇಕಾಗುತ್ತವೆ. ಗಿಡದಿಂದ ಗಿಡಕ್ಕೆ 5"-6" ಅಂತರವಿರುವಂತೆ ಬೀಜ ಬಿತ್ತಲಾಗುತ್ತದೆ. ಮೂಲಂಗಿಯ ಬೇಸಾಯದಲ್ಲಿಯಂತೆ ಪ್ರತಿ ಸಾಲಿಗೂ ದಿಂಡನ್ನು ಕಟ್ಟಿ ಬೇರಿನ ಭಾಗವನ್ನು ಮುಚ್ಚಲಾಗುತ್ತದೆ. ಬಗೆಗಳನ್ನು ಅವಲಂಬಿಸಿ ಸಾಲುಗಳ ಅಂತರ ವ್ಯತ್ಯಾಸವಾಗುವುದು. ಬಿತ್ತುವಿಕೆಯಿಂದ ಹಿಡಿದು ಕೀಳುವವರೆಗೂ ನೀರನ್ನು ಚೆನ್ನಾಗಿ ಹಾಯಿಸಲಾಗುತ್ತದೆ. ಬಿತ್ತಿದ 45-70 ದಿವಸಗಳಲ್ಲಿ ಬೆಳೆ ಸಿದ್ಧವಾಗುತ್ತದೆ. ಬೇಸಿಗೆ ದಿನಗಳಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ಬೇರುಗಳು ಒರಟಾಗುವುದುಂಟು. ಪ್ರತಿ ಹೆಕ್ಟೇರಿನಿಂದ 30,000-40,000 ಞg. ಗಳಷ್ಟು ಇಳುವರಿ ಪಡೆಯಬಹುದು. ಬೀಜಗಳನ್ನು ಬಹಳ ಎಚ್ಚರಿಕೆಯಿಂದ ಸಾಸುವೆಯೊಂದಿಗೆ ಮಿಶ್ರವಾಗದಂತೆ ಸಂಗ್ರಹಿಸಲಾಗುತ್ತದೆ. ಅನೇಕ ಸಲ ಗಿಡಗಳ್ನು ಬೇರು ಸಮೇತ ಕಿತ್ತು ಬೇರೆ ಕಡೆ ನೆಟ್ಟು ಬೀಜಗಳನ್ನು ಆಯುವುದುಂಟು. ಸರಾಸರಿ ಬೀಜದ ಇಳುವರಿ ಹೆಕ್ಟೇರಿಗೆ 550 ಞg.

ಇತರ ಬೇರು ತರಕಾರಿಗಳಂತೆ ಟರ್ನಿಪ್ ಸಹ ಅನೇಕ ರೋಗಗಳಿಗೆ ತುತ್ತಾಗುವುದುಂಟು. ಹೀಗೆ ಇದಕ್ಕೆ ಅಂಟುವ ರೋಗಗಳಲ್ಲಿ ಸಿಸ್ಟೋಪಸ್ ಕ್ಯಾಂಡಿಡಸ್ ಎಂಬ ಶಿಲೀಂಧ್ರದಿಂದ ಬರುವ ಬಿಳಿ ಮಚ್ಚೆರೋಗ, ಪೆರನಾಸ್ಪೊರ ಪ್ಯಾರಸಿಟಿಕದಿಂದ ಬರುವ ಡೌನಿ ಮಿಲ್ ಡ್ಯೂ ರೋಗ ಮತ್ತು ಆಲ್ಟರ್ನೇರಿಯ ಬ್ರಾಸಿಕೀ ಎಂಬುದರಿಂದ ಉಂಟಾಗುವ ಬ್ಲೈಟ್ ರೋಗಗಳು ಪ್ರಧಾನವಾಗಿವೆ. ಇವುಗಳಲ್ಲಿ ಬ್ಲೈಟ್ ರೋಗ ಬಹಳ ತೀಕ್ಷ್ಣವಾದದ್ದು. ಬೋರ್ಡೋ ಮಿಶ್ರಣದ ಸಿಂಪಡಿಕೆಯಿಂದ ಈ ಬೂಷ್ಟು ರೋಗಗಳನ್ನು ತಡೆಗಟ್ಟಬಹುದು. ಅಲ್ಲದೆ ಟರ್ನಿಪ್‍ಗೆ ಪ್ಲಾಸ್ಮೋಡಿಯೋಫೋರ ಬ್ರಾಸಿಕೀ ಎಂಬ ಶಿಲೀಂಧ್ರ ಅಂಟಿಕೊಂಡು ದೊಣ್ಣೆ ಬೇರು ರೋಗವನ್ನು (ಕ್ಲಬ್‍ರೂಟ್) ಉಂಟುಮಾಡುತ್ತದೆ. ಈ ರೋಗ ಆಮ್ಲಯುಕ್ತ ನೆಲದಲ್ಲಿ ಹೆಚ್ಚಾಗಿ ಕಾಣಬರುವುದರಿಂದ ಬೆಳೆಗಳ ಬದಲಿಕೆಯಿಂದಲೂ ನೆಲಕ್ಕೆ ಪ್ರತ್ಯಾಮ್ಲವನ್ನು ಹಾಕುವುದರಿಂದಲೂ ಇದನ್ನು ಹೋಗಲಾಡಿಸಬಹುದು. ಅಲ್ಲದೆ ಕ್ಸಾಂತೋಮೊನಾಸ್ ಸಿಟ್ರೈ ಎಂಬ ಬ್ಯಾಕ್ಟೀರಿಯದಿಂದ ಬ್ಲಾಕ್‍ರಾಟ್ ರೋಗವೂ ಬರುವುದು. ಈ ರೋಗ ಹೆಚ್ಚಾಗಿ ಬೀಜಗಳಿಂದ ಪ್ರಸಾರವಾಗುವುದರಿಂದ ಬೀಜಗಳನ್ನು 50( ಅ. ಉಷ್ಣತೆಯುಳ್ಳ ನೀರಿನಲ್ಲಿ 25-30 ಮಿನಿಟುಗಳ ಕಾಲ ನೆನೆಸುವುದರಿಂದ ರೋಗವನ್ನು ತಡೆಗಟ್ಟಬಹುದು. ಹಲವು ಬಗೆಯ ಕೀಟಗಳೂ ಟರ್ನಿಪ್ ಬೆಳೆಯನ್ನು ನಾಶಮಾಡುತ್ತವೆ. ಇವುಗಳಲ್ಲಿ ಕ್ಯಾಬೇಜ್ ಮಿಡತೆ, ಕ್ಯಾಬೇಜ್ ಚಿಟ್ಟೆಯ ಕಂಬಳಿಹುಳುಗಳು ಮುಖ್ಯವಾದುವು. ಕೆಲವು ತೆರನ ಬೇರುಹುಳುಗಳು ಮತ್ತು ಜೀರುಂಡೆಗಳ ಬಾಧೆಯೂ ಟರ್ನಿಪ್‍ಗೆ ಉಂಟು. ಹೊಗೆಸೊಪ್ಪಿನ ದ್ರಾವಣವನ್ನೋ ಸೋಪಿನ ದುರ್ಬಲ ದ್ರಾವಣವನ್ನೋ ಸಿಂಪಡಿಸುವುದರಿಂದ ಈ ಕೀಟಗಳ ಹಾವಳಿಯನ್ನು ತಡೆಗಟ್ಟಬಹುದು.

ಟರ್ನಿಪ್ ಬಹಳ ಒಳ್ಳೆಯ ತರಕಾರಿ ಎನಿಸಿದೆ. ಇದರಲ್ಲಿರುವ ವಿವಿಧ ಆಹಾರಾಂಶಗಳು ಹೀಗಿವೆ : ಪ್ರತಿ 100 g., ನಲ್ಲಿ ತೇವಾಂಶ 9.6 g., ಪ್ರೋಟೀನು 0.5 g., ಕೊಬ್ಬು 0.2 g., ಖನಿಜಗಳು 0.6 g., ನಾರು 0.9 g., ಇತರ ಪಿಷ್ಟ ಪದಾರ್ಥಗಳು 6.2 g., ಕ್ಯಾಲ್ಸಿಯಮ್ 30 mg., ಫಾಸ್ಫರಸ್ 40 mg., ಕಬ್ಬಿಣ 0.4 mg., ತಯಮೀನ್ 0.04 mg., ರೈಬೊಫ್ಲೇವಿನ್ 0.04 mg., ನಿಕೊಟಿನಿಕ್ ಆಮ್ಲ 0.05 mg. (ಹಸಿರು ಎಲೆಗಳಲ್ಲಿ 5.4 mg.), ವೈಟಮಿನ್ ಅ 43 mg. (ಹಸಿರು ಎಲೆಗಳಲ್ಲಿ 180 mg). ವೈಟಮಿನ್ ಂ ಹಸಿರು ಎಲೆಗಳಲ್ಲಿ ಮಾತ್ರ ಇದೆ.

ಉಪಯೋಗಗಳು : ಟರ್ನಿಪ್ಪನ್ನು ಹೆಚ್ಚಾಗಿ ಬೇರು ತರಕಾರಿಯಾಗಿ ಬಳಸುತ್ತಾರೆ. ಇದರ ಎಲೆಗಳನ್ನೂ ತರಕಾರಿಯಾಗಿ ಉಪಯೋಗಿಸುವುದುಂಟು. ಕೆಲವೊಮ್ಮೆ ಬೇರಿನಿಂದ ಉಪ್ಪಿನಕಾಯಿ ತಯಾರಿಸುವುದೂ ಇದೆ. ಇಂಗ್ಲೆಂಡಿನಲ್ಲಿ 1724ರಿಂದಲೂ ಕುರಿ ಮತ್ತು ದನಗಳಿಗೆ ಮೇವಾಗಿ ಇದನ್ನು ಉಪಯೋಗಿಸಲಾಗುತ್ತಿದೆ. ಇತರ ಪಾಶ್ಚಾತ್ಯ ದೇಶಗಳಲ್ಲಿ ಇದನ್ನು ತರಕಾರಿಯಾಗಿಬಳಸುವ ಅಭ್ಯಾಸ ಈಚೆಗೆ ಪ್ರಾರಂಭವಾಗಿದೆ. ಇದರ ಬೀಜಗಳಿಂದ ಎಣ್ಣೆಯನ್ನು ತೆಗೆಯುವುದಿದೆ. ಅಲ್ಲದೆ ಇದಕ್ಕೆ ಔಷಧೀಯ ಗುಣಗಳೂ ಇವೆ. ಬಿಳಿ ಟರ್ನಿಪ್‍ಗಳನ್ನು ಜಠರೋತ್ತೇಜಕವಾಗಿಯೂ ಜಂತುನಾಶಕವಾಗಿಯೂ ಬಳಸುತ್ತಾರೆ. ಅಲ್ಲದೆ ಇದು ಕಫ ಮತ್ತು ವಾತ ನಿವಾರಕವೆಂದು ಹೇಳಲಾಗಿದೆ. ಆಯುರ್ವೇದ ಪದ್ಧತಿಯಲ್ಲಿ ಇದನ್ನು ಚರ್ಮರೋಗ, ಹಲ್ಲುನೋವು, ತೊನ್ನು, ನವೆ, ಮೇಹ ರೋಗ ಮುಂತಾದ ರೋಗಚಿಕಿತ್ಸೆಯಲ್ಲಿ ಬಳಸುತ್ತಾರೆ. ಟರ್ನಿಪ್ ಎಣ್ಣೆಯನ್ನು ಕರ್ಪೂರದೊಡನೆ ಬೆರೆಸಿ ಒಳ್ಳೆಯ ತೈಲವನ್ನಾಗಿ ಮಾಡಿ ಮೈಕೈನೋವಿಗೂ ಕತ್ತಿನ ಉಳುಕಿಗೂ ಸೆಳೆತಕ್ಕೂ ತಿಕ್ಕುತ್ತಾರೆ. ಜ್ವರದ ತಾಪವನ್ನು ಕಡಿಮೆ ಮಾಡಲು ಮತ್ತು ಕಫವನ್ನು ನೀರಾಗಿಸಲು ಈ ತೈಲವನ್ನು ಎದೆಯ ಮೇಲೆ ಸವರುವುದುಂಟು. ಇಂಡೋಚೀನದಲ್ಲಿ ಬೀಜಗಳನ್ನು ಮತ್ತು ಎಲೆಗಳನ್ನು ಒಳ್ಳೆಯ ಜಠರೋತ್ತೇಜಕ ಎಂದು ಪರಿಗಣಿಸಲಾಗಿದೆ. ಎಲೆಗಳನ್ನು ಕುರುಗಳಿಗೂ ಬೀಜಗಳನ್ನು ಹೊಟ್ಟೆ ನುಲಿತಕ್ಕೂ ಬಳಸುತ್ತಾರೆ. (ಕೆ.ಎಸ್.ಎನ್‍ಎ., ಎಸ್‍ಐ.ಎಚ್.)