ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟಿಲ್ಲೈಟ್
ಟಿಲ್ಲೈಟ್ ಹಿಮನದಿಯ ಕಾರ್ಯಾಚರಣೆಯಿಂದ ಉಂಟಾದ ಶಿಲೆ. ಭೂಭಾಗಗಳ ಗತಕಾಲದ ಹವಾಗುಣದ ನಿರ್ಧಾರದಲ್ಲಿ ಇದು ಬಲು ಉಪಯುಕ್ತ. ಹಿಮ ನದಿ ಹೊತ್ತು ತಂದು ಶೇಖರವಾಗುವ ಮೆಕ್ಕಲಿಗೆ ಟಿಲ್ ಎಂದು ಹೆಸರು. ಕ್ರಮೇಣ ವಿವಿಧ ಕಣಗಳು ಮತ್ತು ಶಿಲಾಛಿದ್ರಗಳಿಂದ ಕೂಡಿದ ಈ ಮೆಕ್ಕಲು ಶಿಲೆಯಾಗಿ ಮಾರ್ಪಟ್ಟು ಟಿಲ್ಲೈಟ್ ಎನಿಸಿಕೊಳ್ಳುತ್ತದೆ. ಅಸ್ತವ್ಯಸ್ತವಾದ ರಚನೆಯಿರುವ ವಿವಿಧ ಗಾತ್ರದ, ವಿವಿಧ ಆಕಾರದ ಮತ್ತು ವಿವಿಧ ಬಗೆಯ ಶಿಲಾಚೂರುಗಳೇ ಟಿಲ್ಲೈಟ್. ಹೀಗಿದ್ದರೂ ಅನೇಕ ವೇಳೆ ಕಣಗಳೂ ಮತ್ತು ಶಿಲಾಛಿದ್ರಗಳು ಒಂದು ದಿಶೆಯಲ್ಲಿ ಎಳೆಯಲ್ಪಟ್ಟು ಒಂದು ತೆರನಾದ ವಿಶೇಷ ರಚನೆಯನ್ನು ತೋರಗೊಡುತ್ತವೆ. ಸಾಮಾನ್ಯವಾಗಿ ಇದು ಹಿಮನದಿ ಹರಿದ ದಿಶೆಯನ್ನು ಅನುಸರಿಸಿರುತ್ತದೆ. ಕೆಲವು ಶಿಲಾಛಿದ್ರಗಳ ಮೇಲೆ ಸೂಕ್ಷ್ಮವಾದ ಸಮಾಂತರ ರೇಖೆಗಳನ್ನು ಗುರುತಿಸಬಹುದು. ಹಿಮನದಿಯ ತುಯ್ತದಿಂದ ಉಂಟಾದ ಗೆರೆಗಳಿವು. ಬಣ್ಣದಲ್ಲಿ ಟಿಲ್ಮೈಟ್ ಸಾಮಾನ್ಯವಾಗಿ ಊದಾ ಅಥವಾ ಹಸಿರು ಮಿಶ್ರಿತ ಕಪ್ಪು. ಇವುಗಳೊಡನೆ ವಾರ್ವ್ ಜೇಡು ಸ್ತರಗಳೂ ಇರುವುದುಂಟು. ಒಂದೇ ಸಮವಾದ ಮಂದವಿರುವ ಪದರ ರಚನೆ ಈ ಜೇಡಿನ ವೈಶಿಷ್ಟ್ಯ.
ಭೂವಿಜ್ಞಾನದ ಅಧ್ಯಯನದಲ್ಲಿ ಟಿಲ್ಲೈಟ್ ಬಹು ಉಪಯುಕ್ತವಾದ ಶಿಲೆ. ಕಾರಣ ಇದು ಒಂದು ಪ್ರದೇಶದ ಗತಕಾಲದ ಹವಾಗುಣದ ಮುಖ್ಯ ಸೂಚಿಕೆಯಾಗಿದೆ. ಇದರ ಸಹಾಯದಿಂದ ಆ ಭೂಭಾಗ ಹಿಮನದಿಗಳಿಂದ ಆವೃತವಾಗಿದ್ದು ಅತಿ ಶೀತ ಹವೆಯನ್ನು ಹೊಂದಿತ್ತೆಂದು ಊಹಿಸಬಹುದು. ಪ್ರಿಕೇಂಬ್ರಿಯನ್ ಯುಗದ ಟಿಲ್ಲೈಟುಗಳನ್ನು ಪ್ರಪಂಚದ ಹಲವಾರು ಪ್ರದೇಶಗಳಲ್ಲಿ ಗುರುತಿಸಲಾಗಿದೆ. ಇವುಗಳಲ್ಲಿ ಕೆನಡದ ಆಂಟೇರಿಯೊ ಮತ್ತು ಕ್ವಿಬೆಕ್ ಪ್ರಾಂತಗಳಲ್ಲಿನ ಗೌಗಾಂಡಾ ಟಿಲ್ಲೈಟುಗಳು ಸಹಸ್ರಾರು ಚದರ ಕಿಲೊಮೀಟರುಗಳಷ್ಷು ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿಕೊಂಡು ಪ್ರಸಿದ್ಧವಾಗಿವೆ. ಹೀಗೆಯೇ ಪರ್ಮೊಕಾರ್ಬಾನಿಫೆರಸ್ ಯುಗದ ದಕ್ಷಿಣ ಆಫ್ರಿಕದ ಡ್ವೈಕ ಟಿಲ್ಲೈಟುಗಳು ಮತ್ತು ಇಂಡಿಯಾದ ಗೊಂಡ್ವಾನ ಶ್ರೇಣಿಯ ಟಾಲ್‍ಚಿರ್ ಟಿಲ್ಲೈಟುಗಳು; ಮತ್ತು ಕಾರ್ಬಾನಿಫೆರಸ್‍ಲ್ಯುಗದ ಬ್ರಜಿಲಿನ ಟಿಲ್ಲೈಟುಗಳು ಪ್ರಖ್ಯಾತವಾಗಿವೆ. (ಬಿ.ವಿ.ಜಿ.)