ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟುಲರೀಮಿಯ

ವಿಕಿಸೋರ್ಸ್ದಿಂದ
Jump to navigation Jump to search

ಟುಲರೀಮಿಯ ಇಲಿ ಅಳಿಲುಗಳಂತೆ ಬಾಚಿಹಲ್ಲುಗಳಿರುವ ದಂಶಕ ಗಣ, ರಾಡೆನ್ಯಿಯ ಕುಂದಿಲಿ ಮುಂತಾದ ಸ್ತನಿಗಳಲ್ಲಿ ಕಾಣಿಸಿಕೊಳ್ಳುವ ಪ್ಲೇಗಿನ ಮಾದರಿಯ ಸಾಂಕ್ರಾಮಿಕ ರೋಗ. ಯೂರೊಪ್, ಉತ್ತರ ಅಮೆರಿಕ, ಏಷ್ಯ ಖಂಡದ ಕೆಲವು ಭಾಗಗಳಲ್ಲೂ ಇದರ ವ್ಯಾಪ್ತಿ ಉಂಟು. ಆದರೆ ಭಾರತದಲ್ಲಿ ಇದು ಕಾಣಿಸಿಕೊಂಡಿದ್ದಕ್ಕೆ ಅಧಿಕೃತ ಪುರಾವೆ ಇಲ್ಲ. ಈ ರೋಗ ಮಾನವರಲ್ಲಿ ಪ್ರಾಸಂಗಿಕವಾಗಿ ಮಾತ್ರ ಕಂಡುಬರುತ್ತದೆ. ಉಣ್ಣಿ, ಚಿಗಟ ಮುಂತಾದ ಕೀಟಗಳಿಂದ ಒಂದು ಸ್ಥಳದ ಎಲ್ಲ ಪ್ರಾಣಿಗಳಿಗೂ ಸೋಂಕು ಅಂಟಿ ರೋಗ ಸ್ಥಳೀಕವಾಗಿ ನೆಲೆಗೊಳ್ಳುವುದೇ ಅಲ್ಲದೆ, ರೋಗಗ್ರಸ್ತವಾದ ಪ್ರಾಣಿಗಳ ನೇರ ಅಥವಾ ಬಳಸು ಸಂಪರ್ಕದಿಂದ ಮಾನವರಲ್ಲೂ ರೋಗಪ್ರಾಪ್ತಿಯಾಗಿ ಸಾಂಕ್ರಾಮಿಕವಾಗಿ ಹರಡಬಹುದು. ಮನುಷ್ಯನಲ್ಲಿ ಈ ರೋಗ ಹೆಚ್ಚು ಕಡಿಮೆ ಪ್ಲೇಗಿನ ಚಿಹ್ನೆಗಳನ್ನೇ ಪ್ರದರ್ಶಿಸುತ್ತದೆ. 2-4 ವಾರಗಳು ಚಳಿಸಿದರೂ ಪ್ಲೇಗಿನಷ್ಟು ಭೀಕರವಾಗಿರುವುದಿಲ್ಲ. ಇದರಿಂದ ಪೀಡಿತರಾದ ರೋಗಿಗಳಲ್ಲಿ ಸಾಮಾನ್ಯವಾಗಿ ನೂರಕ್ಕೆ 95 ರೋಗಿಗಳು ಗುಣಮುಖರಾಗುತ್ತಾರೆ. ಹಾಗೆ ಗುಣವಾದರೂ ಅತಿ ನಿಶ್ಯಕ್ತಿಯುಂಟಾಗಿ ಪೂರ್ಣವಾಗಿ ಚೇತರಿಸಿಕೊಳ್ಳಲು ಹಲವಾರು ತಿಂಗಳುಗಳೇ ಬೇಕಾಗುತ್ತದೆ. ರೋಗ ತಗುಲಿ ಗುಣವಾದವರಿಗೆ ಪುನಃ ಸೋಂಕು ಸಾಮಾನ್ಯವಾಗಿ ತಗಲುವುದಿಲ್ಲ. ಟುಲರೀಮಿಯ ಸಾಂಕ್ರಾಮಿಕ ರೋಗವಾದರೂ ಮಾನವರಿಂದ ಮಾನವರಿಗೆ ಸೋಂಕು ತಗಲುವುದಿಲ್ಲ. ರೋಗಗ್ರಸ್ತ ಪ್ರಾಣಿಗಳ ಸಂಪರ್ಕ ಸಂಭವಿಸಬಹುದಾದ ಬೇಟೆಗಾರರು, ರೈತರು, ಕಾಸಾಯಿಗಳು, ಬಾಣಸಿಗರು ಇವರುಗಳಿಗೆ ಆ ಪ್ರಾಣಿಗಳಿಂದಾದ ಗಾಯದ ಮೂಲಕವೋ ಆ ಪ್ರಾಣಿಗಳ ಮೃತದೇಹವನ್ನು ಒಯ್ಯುವಾಗ ಅಥವಾ ಕೊಯ್ಯುವಾಗ ಅಕಸ್ಮಾತ್ತಾಗಿ ಆದ ಗಾಯದ ಅಥವಾ ಮುಂಚೆಯೇ ಇದ್ದ ಗಾಯದ ಮೂಲಕವೋ ನೇರವಾಗಿ ಸೋಕು ಅಂಟುವುದು ಸಹಜ. ರೋಗಗ್ರಸ್ತ ಪ್ರಾಣಿಗಳ ಮಾಂಸವನ್ನು ಅಪಕ್ವವಾಗಿ ಬೇಯಿಸಿ ತಿಂದರೂ ಅವುಗಳಿಂದ ಕಲುಷಿತವಾದ ನೀರನ್ನು ಕುಡಿದರೂ ಮಾನವರಲ್ಲಿ ಟುಲರೀಮಿಯ ಪ್ರಾಪ್ತವಾಗುತ್ತದೆ. ಸೊಳ್ಳೆ, ಚಿಗಟ, ತೊಣಚಿ, ತಿಗಣೆ, ಕೂರೆ, ಉಣ್ಣಿಗಳೂ ಬೆಕ್ಕು ನಾಯಿ ನರಿಗಳೂ ರೋಗಗ್ರಸ್ತ ಪ್ರಾಣಿಗಳನ್ನು ಕಡಿದು ಬಳಿಕ ಮಾನವರನ್ನು ಕಡಿದರೆ ಈ ರೋಗ ಕಾಣಿಸಿಕೊಳ್ಳುತ್ತದೆ. ಉಣ್ಣಿಗಳಿಗೆ ಸೋಂಕು ತಗುಲಿದಾಗ ಅವು ಇಡುವ ಮೊಟ್ಟೆಗಳು ಕೂಡ ಸೋಂಕು ಉಳ್ಳವಾಗಿರುವುದರಿಂದ ಉಣ್ಣಿಗಳ ಪ್ರತಿ ಸಂತತಿಯಲ್ಲೂ ಸೋಂಕು ಇದ್ದು ಒಂದು ಸ್ಥಳದಲ್ಲಿ ಟುಲರೀಮಿಯ ನೆಲೆಯಾಗಿ ನಿಲ್ಲುವ ಸಂಭವವಿರುತ್ತದೆ. ಮನುಷ್ಯನಲ್ಲಿ ಟುಲರೀಮಿಯವು ತಲೆನೋವು, ಮೈಕೈನೋವು, ಹೆಚ್ಚಾದ ಜ್ವರ ಅತಿ ಬಳಲಿಕೆ ಮತ್ತು ನಿತ್ರಾಣವನ್ನು ಉಂಟುಮಾಡುತ್ತದೆ. ಹಸಿವು ಮುಚ್ಚುವುದು, ಬೆವರುವುದು, ಮೈಕೈ ನಡುಕ ಇವೂ ಕಾಣಬರುತ್ತವೆ. ಪ್ಲೇಗನ್ನೇ ಹೋಲುವ ಈ ವ್ಯಾಧಿಯಲ್ಲಿ ಕಂಕುಳು ತೊಡೆ ಸಂದುಗಳಲ್ಲಿ ಗೆಡ್ಡೆಕಟ್ಟುವುದೂ ಅದು ಒಡೆದು ಕೀವು ಸುರಿಯುವುದೂ ಸೋಂಕು ಉಂಟಾದ ಸ್ಥಳದಲ್ಲಿ ಸಹ ಒಂದು ಗಂಟಾಗಿ ಕೀವು ತುಂಬಿ ಒಡೆದು ವ್ರಣವಾಗುವುದೂ ಮುಖ್ಯ ಲಕ್ಷಣ. ಇನ್ನೊಂದು ವಿಧವಾದ ಟುಲರೀಮಿಯ ಹೆಚ್ಚು ಕಡಿಮೆ ವಿಷಮಶೀತಜ್ವರವನ್ನು ಹೋಲುತ್ತದೆ. ಪಾಶ್ಚಾತ್ಯ ವೈದ್ಯದಲ್ಲಿ ಟುಲರೀಮಿಯ ಎಂದು ಕರೆದಿರುವುದಕ್ಕೆ ಅಮೆರಿಕ ಸಂಯುಕ್ತಸಂಸ್ಥಾನದ ಕ್ಯಾಲಿಪೋರ್ನಿಯದಲ್ಲಿರುವ ಟುಲೇರ್ ಎಂಬ ಸ್ಥಳದಲ್ಲಿ 1912ರಲ್ಲಿ ಈ ವಿಶೇಷ ರೀತಿಯ ಸೋಂಕಿಗೆ ಸಿಕ್ಕಿದ ಅಳಿಲುಗಳನ್ನು ಮೊದಲ ಬಾರಿಗೆ ಗುರುತಿಸಿದ್ದೇ ಕಾರಣ. ಟುಲರೀಮಿಯಕ್ಕೆ ಕಾರಣಭೂತವಾದ ವಿಷಕ್ರಿಮಿ ಪ್ಲೇಗಿನ ಕ್ರಿಮಿಯಂತೆಯೇ ಪಾಶ್ಚರೆಲ್ಲ ಎಂಬ ಏಕಾಣುಜೀವಿಗಳ ಗುಂಪಿಗೆ ಸೇರಿದೆ. ಕೆಲವು ವಿಜ್ಞಾನಿಗಳು ಈ ಕ್ರಿಮಿಯು ಬ್ರೂಸೆಲ್ಲ ಗುಂಪಿಗೆ ಸೇರಬೇಕೆಂದು ವಾದಿಸುತ್ತಾರೆ. ಎಲ್ಕೋಸಿನ್ ಮುಂತಾದ ಸಲ್ಫೋನೆಮೈಡುಗಳಾಗಲಿ ಪೆನಿಸಿಲಿನ್ ಟೆರ್ರಮೈಸಿನ್‍ಗಳಾಗಲಿ ಈ ಏಕಾಣುವಿನ ಮೇಲೆ ಏನೂ ಪ್ರಭಾವ ಬೀರುವುದಿಲ್ಲವಾದ್ದರಿಂದ ಟುಲರೀಮಿಯದ ಚಿಕಿತ್ಸೆಯಲ್ಲಿ ಅವು ಅನುಪಯುಕ್ತ. ಆದರೆ ಸ್ವಲ್ಪ ಮಟ್ಟಿಗೆ ಕ್ಲೋರೋಮೈಸಿಟಿನ್ ಮತ್ತು ಬಹುಮಟ್ಟಿಗೆ ಸ್ಟ್ರೆಪ್ಟೊಮೈಸಿನ್ ಚಿಕಿತ್ಸೆಗೆ ಸಹಾಯಕವಾಗಿವೆ. ಆದರೆ ಈ ಏಕಾಣುಗಳು ಶೀಘ್ರವಾಗಿ ನಿರೋಧಶಕ್ತಿಯನ್ನು ಪಡೆಯುವುದರಿಂದ ಸ್ಟ್ರೆಪ್ಟೊಮೈಸಿನ್ ಕೂಡ ಫಲಕಾರಿಯಾಗಿರುತ್ತೆಂಬುದು ನೆಚ್ಚಿಗೆ ಇಲ್ಲ. ಈ ಏಕಾಣುಗಳು 55ಲಿ-60ಲಿಸೆಂ.ಮೀನಷ್ಟು ಉಷ್ಣತೆಯನ್ನು 10 ಮಿನಿಟುಗಳು ಕೂಡ ತಡಕೊಳ್ಳಲಾರವಾದ್ದರಿಂದ ನೀರನ್ನು ಚೆನ್ನಾಗಿ ಕುದಿಸಿಕುಡಿಯುವುದರಿಂದ ಮತ್ತು ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ಟುಲರೀಮಿಯವನ್ನು ತಡೆಗಟ್ಟಬಹುದು. ರೋಗ ಅಷ್ಟು ತೀಕ್ಷ್ಣವಾಗಿಲ್ಲದಿರುವುದರಿಂದಲೂ ಇದು ಮುಖ್ಯವಾಗಿ ಕಾಡುಮೃಗಗಳದ್ದಾಗಿ ಕೆಲವು ಮಾನವರಿಗೆ ಪ್ರಾಸಂಗಿಕವಾಗಿ ಮಾತ್ರ ಪ್ರಾಪ್ತವಾಗಬಹುದಾದ್ದರಿಂದಲೂ ಇದರ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ನಡೆದಿಲ್ಲ. ನಿರೋಧ ಲಸಿಕೆ ತಯಾರಿಕೆ ಇತ್ಯಾದಿ ಚಟುವಟಿಕೆಗಳೂ ನಡೆದಂತೆ ಕಾಣಬರುವುದಿಲ್ಲ. (ಎಸ್.ಆರ್. ಆರ್.)