ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟೆಸಿಫಾನ್

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಟೆಸಿಫಾನ್ ಇರಾಕಿನ ಬಾಗ್ದಾದಿನ ಆಗ್ನೇಯಕ್ಕೆ 20 ಕಿಮೀ. ದೂರದಲ್ಲಿರುವ ಪಾಳುನಗರ. ಟೈಗ್ರಿಸ್ ನದಿಯ ದಡದ ಮೇಲಿದ್ದ ಅನೇಕ ಪ್ರಾಚೀನ ಸ್ಮಾರಕಗಳಿಂದಾಗಿ ಇದು ಪ್ರಸಿದ್ಧವಾಗಿದೆ.

ಕ್ರಿ. ಪೂ. 129ರಲ್ಲಿ ಪಾರ್ಥಿಯನ್ ರಾಜರು ಇದನ್ನು ವಶಪಡಿಸಿಕೊಂಡರು. ಇದು ಅವರ ಠಾಣೆಯೂ ಚಳಿಗಾಲದ ರಾಜಧಾನಿಯೂ ಆಗಿತ್ತು. ಸಾಸೇನಿಯನರ ಕಾಲದಲ್ಲೂ ಇದು ರಾಜಧಾನಿಯಾಗಿತ್ತು. ಕ್ರಿ. ಪೂ. 55 ರಲ್ಲಿ ಇಲ್ಲಿ ಒಂದು ಅರಮನೆಯನ್ನು ಕಟ್ಟಲಾಯಿತು. ಇಲ್ಲಿರುವ ಭವ್ಯ ಕಟ್ಟಡಗಳಲ್ಲಿ ಟೆಸಿಫಾನಿನ ಕಮಾನು ಎಂದು ಕರೆಯಲಾಗಿರುವ ಅರಮನೆ ಅತ್ಯಂತ ಗಮನಾರ್ಹ. ಇದರ ನಿರ್ಮಾಣ 1 ನೆಯ ಸೇಪಾರನ ಆಳ್ವಿಕೆಯ ಕಾಲದಲ್ಲಿ (241-272) ಆರಂಭವಾಯಿತು. ಇದರ ಕಮಾನು 1ನೆಯ ಖೊಸ್ರೂನ (531-579) ಕಾಲದಲ್ಲಿ ನಿರ್ಮಿತವಾಯಿತೆಂದು ಹೇಳಲಾಗಿದೆ. ಸಿಂಹಾಸನವಿರುವ ಪಡಸಾಲೆಯನ್ನು ಸಾಸೇನಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸು.21 1/2 ಮೀ. ಅಗಲ 48 1/2 ಮೀ, ಉದ್ದ ಇರುವ ಈ ಪಡಸಾಲೆಯ ಎತ್ತರ 36 ಮೀ ಇದರ ಕಮಾನು ಅತ್ಯಂತ ಭವ್ಯವಾದ್ದು. ಇದರ ಮುಂಭಾಗ ಪೂರ್ತಿ ತೆರೆದುಕೊಂಡಿದೆ. ಬಹುಶಃ ಇದನ್ನು ಪರದೆಗಳಿಂದ ಮುಚ್ಚುತ್ತಿದ್ದರು. ಟೆಸಿಫಾನ್ ನಗರ ಪದೇಪದೇ ಹೊರಗಿನವರ ದಾಳಿಗಳಿಗೆ ತುತ್ತಾಗುತ್ತಿತ್ತು. 637 ರಲ್ಲಿ ಅರಬರು ಇದನ್ನು ಆಕ್ರಮಿಸಿಕೊಂಡಾಗ ಇಲ್ಲಿಯ ಅಪಾರ ಸಂಪತ್ತನ್ನು ಕೊಳ್ಳೆಹೊಡೆದರು. ಆನಂತರದ ಕಾಲದಲ್ಲಿ ಟೆಸಿಫಾನಿನ ಅರಮನೆಯನ್ನು ಮಸೀದಿಯಾಗಿ ಬದಲಾಯಿಸುವಂತೆ ತೋರುತ್ತದೆ. ಹೊಸ ರಾಜಧಾನಿ ಬಾಗ್‍ದಾದನ್ನು ಕಟ್ಟಿದ ಮೇಲೆ ಟೆಸಿಫಾನ್ ನಗರ ಪೂರ್ತಿ ಪಾಳುಬಿತ್ತು. (ಎ.ಎಸ್.ಯು.)