ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟೇಲರ್, ಜೆರಿಮಿ

ವಿಕಿಸೋರ್ಸ್ದಿಂದ

ಟೇಲರ್, ಜೆರಿಮಿ 1613-1667. ಇಂಗ್ಲಿಷ್ ಉಪದೇಶಕ ಮತ್ತು ಬರಹಗಾರ. ಆಕ್ಸ್‍ಫರ್ಡಿನಲ್ಲಿ ವಿದ್ಯಾಭ್ಯಾಸ ಮಾಡಿ ಚರ್ಚ್‍ನಲ್ಲಿ ಉದ್ಯೋಗ ಮಾಡಿದ. ಸ್ವಲ್ಪ ಕಾಲದಲ್ಲಿಯೇ ಮನ್ನಣೆ ಪಡೆದು ಅರಸನ ಪುರೋಹಿತ (ಚ್ಯಾಪ್ಲೆನ್) ಆದ. ಯಾದವೀಕಲಹದಲ್ಲಿ ಅರಸನ ಪಕ್ಷಕ್ಕೆ ಸೇರಿ ಸೆರೆಮನೆಯನ್ನು ಕಂಡ. ಕೆಲವು ಕಾಲ ವೇಲ್ಸ್‍ನಲ್ಲಿದ್ದು ರಾಜಪ್ರಭುತ್ವದ ಪುನಃಸ್ಥಾಪನೆಯಾದ ಅನಂತರ ಮತ್ತೆ ಉನ್ನತ ಪದವಿಗೇರಿದ. ಟೇಲರ್‍ನದು ಆಕರ್ಷಕ ವ್ಯಕ್ತಿತ್ವ. ಶುದ್ಧಚಾರಿತ್ರ್ಯವನ್ನು ಶುಭ್ರಕೀರ್ತಿಯನ್ನು ಪಡೆದಿದ್ದ ಈತನ ಔದಾರ್ಯ, ಸ್ನೇಹಪರತೆ ಮತ್ತು ಸೌಜನ್ಯ ಎಲ್ಲರ ಮೆಚ್ಚಿಕೆಯನ್ನು ಗಳಿಸಿದ್ದವು.

ಟೇಲರ್‍ನ ವಾಗ್ಮಿತೆ ಅವನ ಮತದೃಷ್ಟಿಯನ್ನು ಒಪ್ಪದಿದ್ದವರವನ್ನೂ ಒಲಿಸುತ್ತಿತ್ತು. ಈತ ವಿಪುಲವಾಗಿ ಬರೆದ. ಇವನ ಕೃತಿಗಳಲ್ಲಿ ಇಂದಿಗೂ ಓದುಗರನ್ನು ಸೆಳೆಯಬಲ್ಲವು ಇವು : ಎ ಡಿಸ್‍ಕೋರ್ಸ್ ಆಫ್ ದಿ ಲಿಬರ್ಟಿ ಆಫ್ ಪ್ರಾಫಿಸೀಯಿಂಗ್ (1647) , ದಿ ಗೋಲ್ಡನ್ ಗ್ರೋವ್ (1655), ದಿ ರೂಲ್ ಆ್ಯಂಡ್ ಎಕ್ಸರ್ ಸೈಸಸ್ ಆಫ್ ಹೋಲಿ ಲಿವಿಂಗ್ (1650), ದಿ ರೂಲ್ ಆ್ಯಂಡ್ ಎಕ್ಸರ್‍ಸೈಸಸ್ ಆಫ್ ಹೋಲಿ ಡೈಯಿಂಗ್ (1651) ವಿದ್ವಾಂಸನಾದರೂ ಟೇಲರ್ ಜನಸಾಮಾನ್ಯರಿಗೆ ಅರ್ಥವಾಗುವ ಆಕರ್ಷಕ ಶೈಲಿಯಲ್ಲಿ ಬರೆದ. ಈತನ ಉದಾರವಾದ ಮತ್ತು ಶ್ರದ್ಧಾವಂತ ಚೇತನ ಈತನ ಕೃತಿಗಳಲ್ಲಿ ಪ್ರಕಟವಾಗಿದೆ. ಇವನ ಉಪದೇಶಗಳು ಮತ್ತು ಬರಹಗಳು ನಿದರ್ಶನಗಳ ಮತ್ತು ಪ್ರತಿಮೆಗಳ ವೈಪುಲ್ಯ ಮತ್ತು ಸ್ಪಷ್ಟವೂ ಸರಳವೂ ಆದ ಶೈಲಿಗಳಿಂದ ವಿಶಾಲವಾದ ವಾಚಕವರ್ಗವನ್ನು ಆಕರ್ಷಿಸಿದವು. ಮಿಲ್ಟನನ ಸಮಕಾಲೀನನಾದ ಈತನ ಗದ್ಯಶೈಲಿಯ ಸರಳತೆ ವಿಸ್ಮಯಕರವಾದುದು. (ಎಲ್.ಎಸ್.ಎಸ್.)