ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟೈ - ಪೇ

ವಿಕಿಸೋರ್ಸ್ದಿಂದ

.ಟೈ - ಪೇ ಟೈವಾನಿನ ರಾಜಧಾನಿ. 1708ರಲ್ಲಿ ಸ್ಥಾಪಿತವಾಯಿತು. 19ನೆಯ ಶತಮಾನದ ಮಧ್ಯದ ಅನಂತರ ಸಾಗರಾಂತರ ವ್ಯಾಪಾರದ ಪ್ರಮುಖ ಕೇಂದ್ರವಾಯಿತು. ಹೊರ ಬಂದರಾವ ಡಾನ್ ಷ್ವೇ ಮೂಲಕ ಇದರ ವಿದೇಶಿ ವ್ಯಪಾರ ನಡೆಯುತ್ತದೆ. ಜನಸಂಖ್ಯೆ 17,42,626 (1971 ಅಂ.) ಉತ್ತರ ಟೈವಾನಿನ ವಿಶಾಲ ಕೃಷಿ ಪ್ರದೇಶದ ನಡುವೆ ಇರುವ ಟೈ-ಪೇ ಕೈಗಾರಿಕಾ ವಲಯದ ಕೇಂದ್ರ ಕೂಡ. ಹಗುರ ಮತ್ತು ಭಾರಿ ಕೈಗಾರಿಕೆಗಳು, ಹತ್ತಿ ಮತ್ತು ಕೃತಕ ತಂತು ಬಟ್ಟೆ , ರಬ್ಬರ್ ಸರಕು, ವಿದ್ಯುದುಪಕರಣ, ಪಾನೀಯ ರಬ್ಬರ್ ಸರಕು, ಲೋಹವಸ್ತು, ರಾಸಾಯನಿಕ ಮುಂತಾದ ಕೃಗಾರಿಕೆಗಳಿವೆ. ಟೈ-ಪೇ ಮುಖ್ಯ ಸಾರಿಗೆ ಕೇಂದ್ರ ಕೂಡ. ಇಲ್ಲೊಂದು ಅಂತರರಾಷ್ಟ್ರೀಯ ವಿಮಾನನಿಲ್ದಾಣವಿದೆ. ರಾಷ್ಟ್ರೀಯ ಟೈವಾನ್ ವಿಶ್ವವಿದ್ಯಾಲಯವೂ ಹಲವು ವೃತ್ತಿಶಿಕ್ಷಣ ಸಂಸ್ಥೆಗಳೂ ಇವೆ. ಚೀನದ ಮುಖ್ಯ ಭೂಪ್ರದೇಶದ ಅನೇಕ ಜನ ಇಲ್ಲಿದ್ದಾರೆ. ಚಹ, ತಂಬಾಕು, ಮರದ ದಿಮ್ಮಿ, ಕರ್ಪೂರ ಇಲ್ಲಿಂದ ರಫ್ತಾಗುತ್ತವೆ.

ಟೈವಾನ್ ಜಪಾನಿನ ಆಡಳಿತಕ್ಕೆ ಒಳಪಟ್ಟಿದ್ದಾಗ (1895-1945) ಇದು ಆ ದ್ವೀಪದ ಆಡಳಿತ ಕೇಂದ್ರವಾಗಿತ್ತು. ಆದ್ದರಿಂದ ಸರ್ಕಾರಿ ಭವನಗಳೂ ವಸತಿ ಗೃಹಗಳೂ ಆಗ ನಿರ್ಮಾಣವಾದುವು. 1949ರಲ್ಲಿ ಚೀನದಲ್ಲಿ ಕಮ್ಯೂನಿಸ್ಟ್ ಆಡಳಿತ ಸ್ಥಾಪಿತವಾದಾಗ ಅಲ್ಲಿಂದ ಪಲಾಯನ ಮಾಡಿದ ಚಿಯಾಂಗ್ ಕೈ-ಷೆಕ್‍ನ ರಾಷ್ಟ್ರೀಯ ಸರ್ಕಾರಕ್ಕೆ ಟೈ-ಪೇ ರಾಜಧಾನಿಯಾಯಿತು. (ಕೆ.ಆರ್.)