ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟ್ಯೂಲಿಪ್
ಟ್ಯೂಲಿಪ್ ಲಿಲ್ಲಿಯೇಸೀ ಕುಟಂಬಕ್ಕೆ ಸೇರಿದ ಲಶುನ ಸಸ್ಯ. ಸೈಬೀರಿಯ, ತುರ್ಕಿ, ಏಷ್ಯಮೈನರ್, ಚೀನ, ಜಪಾನ್, ಯೂರೋಪಿನ ಮೆಡಿಟರೇನಿಯನ್ ವಲಯ, ಮಧ್ಯ ಏಷ್ಯಗಳಲೆಲ್ಲ ಇದು ಬೆಳೆಯುವುದು. ಈ ಜಾತಿಯಲ್ಲಿ ಸುಮಾರು ಐವತ್ತು ಪ್ರಭೇದಗಳಿವೆ. ಅಂದವಾದ ಹೂವುಗಳನ್ನು ಬಿಡುವುದರಿಂದ ಇವನ್ನು ಅಲಂಕಾರ ಸಸ್ಯಗಳಾಗಿ ಬೆಳೆಸುತ್ತಾರೆ.
ಇವು ಬಲು ಚಿಕ್ಕಗಾತ್ರದ ಮೂಲಿಕೆಗಳು. ಕಾಂಡ ಭೂಮಿಯ ಒಳಗಡೆ ಗುಪ್ತವಾಗಿದ್ದು ಈರುಳ್ಳಿಗಡ್ಡೆಯಂಥ ಗಡ್ಡೆಯ ರೂಪದಲ್ಲಿರುತ್ತದೆ. ಎಲೆಗಳ ಸಂಖ್ಯೆ ಕಡಿಮೆ. ಇವು ಉದ್ದವಾಗಿ ನೀಳಾಕಾರದವಾಗಿವೆ. ಭೂಮಿಯೊಳಗಿನ ಗೆಡ್ಡೆಯಿಂದ ಹೂಗೊಂಚಲಿನ ಉದ್ದವಾದ ತೊಟ್ಟು ಹೊರಬರುತ್ತದೆ. ಹೂಗೊಂಚಲಿನ ತೊಟ್ಟಿನ ಮೇಲೂ ಒಂದೆರಡು ಎಲೆಗಳು ಇರಬಹುದು. ಹೂಗಳು ಬಲು ದೊಡ್ಡವು. ಪುಷ್ಪದಳಕ್ಕೂ ಪುಷ್ಪಪಾತ್ರೆಗೂ ಯಾವ ವ್ಯತ್ಯಾಸವೂ ಇಲ್ಲ. ಎರಡನ್ನೂ ಒಟ್ಟಿಗೆ ಪರಿಯಾಂತ್ ಎಂದು ಕರೆಯಲಾಗುತ್ತದೆ. ಹೂವಿನ ಬಣ್ಣ ವೈವಿಧ್ಯಮಯ, ಬಲು ಆಕರ್ಷಕ. ಪೆರಿಯಂತ್ ಸಮೂಹ 6 ಹಾಲೆಗಳಿಂದ ಕೂಡಿದೆ. ಇದರ ಆಕಾರ ಗಂಟೆಯಂತೆ ಇಲ್ಲವೆ ಆಲಿಕೆಯಂತೆ. ಪ್ರತಿ ಹೂವಿನಲ್ಲಿ 6 ಕೇಸರಗಳಿವೆ. ಅಂಡಾಶಯ ಉಚ್ಚ ರೀತಿಯದು. ಇದರಲ್ಲಿ 3 ಕೋಣೆಗಳಿವೆ. ಫಲ ಸಂಪುಟ ಮಾದರಿಯದು. ಬೀಜಗಳು ಅಸಂಖ್ಯ ಚಪ್ಪಟೆಯಾಗಿವೆ.
ಟ್ಯೂಲಿಪ್ಪಿನ ವಿವಿಧ ಬಗೆಗಳನ್ನು ಗೆಡ್ಡೆಗಳ ಮೂಲಕ ವೃದ್ಧಸಲಾಗುವುದು. ಇವುಗಳಿಗೆ ಮರಳುಮಿಶ್ರಿತ ಮಣ್ಣು ಒಳ್ಳೆಯದು. ಬೀಜಗಳಿಂದಲೂ ವೃದ್ಧಿಸುವುದುಂಟು. ಆದರೆ ಈ ವಿಧಾನದಿಂದ ಬೆಳೆಸುವುದಕ್ಕೆ ಬಹಳ ಸಮಯ ಹಿಡಿಯುತ್ತದೆ. ಸಸಿಗಳನ್ನು ಎರಡು ವರ್ಷಕಾಲ ಹಾಗೆಯೇ ಬಿಟ್ಟಿದ್ದು ಅನಂತರ ಬೇರೆಡೆಗೆ ನಾಟಿಮಾಡಲಾಗುತ್ತದೆ. ಇವು ಬೆಳೆದು ಸುಮಾರು ಏಳನೆಯ ವರ್ಷದಿಂದ ಹೂ ಬಿಡಲು ಆರಂಭಿಸುತ್ತವೆ.
ಟ್ಯೂಲಿಪ್ಪುಗಳಲ್ಲಿ ಬೇಗ ಹೂ ಬಿಡುವ ವ್ಯಾನ್ ತಾಲ್ ಎಂಬುವೂ ವಿಳಂಬವಾಗಿ ಹೂ ಬಿಡುವ ಬಗೆಗಳೂ ಉಂಟು. ಮೊದಲ ಗುಂಪಿನವು ಕೆಂಪುಬಣ್ಣದ ಹೂವುಳ್ಳವು. ಉದಾಹರಣೆ: ಟ್ಯೂಲಿಪ ಸುಯೇವಿಯೊಲೆನ್ಸ್. ಎರಡನೆಯ ಗುಂಪಿನವು ಹಳದಿ ಹೂವುಳ್ಳವು_ಇವು ಟ್ಯೂ. ಜೆಸ್ನೀರಿಯಾನ ಎಂಬ ಪ್ರಭೇದದಿಂದ ತಳಿಯೆಬ್ಬಿಸಿ ಪಡೆದಂಥವು ಇವುಗಳಲ್ಲಿ ಅರ್ಲಿ ಬ್ರೀಡರ್, ಕಾಟೇಜ್, ಡಾರ್ವಿನ್, ಪ್ಯಾರಟ್ ಮುಂತಾದ ಪ್ರರೂಪಗಳುಂಟು. (ಬಿ.ವಿ.)