ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಯಾನಾ
ಡಯಾನಾ - ರೋಮನ್ ಪುರಾಣದ ಪ್ರಕಾರ ಚಂದ್ರಾಧಿದೇವತೆ, ಅರಣ್ಯ ಹಾಗೂ ಪ್ರಾಣಿಗಳ ದೇವತೆ, ಸ್ತ್ರೀಯರ ಸಂರಕ್ಷಣೆಯ ಹೊರೆ ಹೊತ್ತ ದೇವಿ. ಈಕೆ ಹಾಗೂ ಗ್ರೀಕರ ಆರ್ಟೆಮಿಸ್ ಇಬ್ಬರೂ ಅಭಿನ್ನರೆಂಬ ಭಾವನೆ ಕೆಲಕಾಲಾನಂತರ ಬಲವಾಯಿತು. ಪ್ರಪಂಚದ ಏಳು ಅದ್ಭುತಗಳಲ್ಲಿ ಡಯಾನಾದೇವಿ ಗುಡಿಯೂ ಒಂದಾಗಿದೆ. ಇದು ಏಷ್ಯ ಮೈನರಿನ ಎಫೀಸಸ್ ಎಂಬ ಗ್ರೀಕ್ ನಗರದಲ್ಲಿದೆ; ಇದನ್ನು ಆರ್ಟೆಮಿಸ್ ಅಥವಾ ಆರ್ಟಮಿಸಿಯಾನ್ ದೇವಿಯ ಗುಡಿಯೆಂದೂ ಹೇಳುವುದುಂಟು. ವಸ್ತುತಃ, ಆ ಸ್ಥಳದಲ್ಲಿ ಒಂದಾದ ಮೇಲೆ ಒಂದರಂತೆ ಅನೇಕ ಗುಡಿಗಳು ನಿರ್ಮಾಣವಾಗಿವೆ. ಎಲ್ಲಕ್ಕಿಂತ ಪ್ರಾಚೀನವಾದ ಗುಡಿಯ ನಿರ್ಮಾಣಕಾಲ ಕ್ರಿ. ಪೂ. 550. ಅರಿಸಿಯಾದ ವನಾಂತರದಲ್ಲಿರುವ ಈಕೆಯ ಪ್ರಸಿದ್ಧ ದೇವಾಲಯವನ್ನು ಮೊದಲು ಜೆ. ಜಿ. ಫ್ರೇಜóರ್ ತನ್ನ ಗೋಲ್ಡನ್ ಬೋ ಗ್ರಂಥದಲ್ಲಿ ವಿಸ್ತಾರವಾಗಿ ವರ್ಣಿಸಿದ್ದಾನೆ. ಅಲ್ಲಿ ಡಯಾನಾ ಸಂಗಡ ಆಕೆಯ ಪತಿಯಾದ ವರ್ಬಿಯಸ್ ಅಥವಾ ಹಿಪ್ಟೊಲೈಟಸ್ ಕೂಡ ಪೂಜಿಸಲ್ಪಡುತ್ತಿದ್ದರು. ಆ ದೇವಿಯ ಪೂಜಾರಿ ಆ ಸ್ಥಾನಕ್ಕೆ ಬರುವ ಮೊದಲು ತನ್ನ ಹಿಂದಿನ ಪೂಜಾರಿಯನ್ನು ದ್ವಂದ್ವಯುದ್ಧದಲ್ಲಿ ಕೊಂದೇ ಬರಬೇಕೆಂಬ ಕಟ್ಟಳೆ ಇತ್ತು. ಆದ್ದರಿಂದ ಎಂದೂ ಡಯಾನಾ ಪೂಜಾರಿಯ ಜೀವ ಸಂಶಯದಲ್ಲಿಯೇ ಇರುತ್ತಿತ್ತು.
ರೋಮನರ ಪೂಜಾವಿಧಾನಗಳೆಲ್ಲ ಹೆಚ್ಚು ಕಡಿಮೆ ಗ್ರೀಕ್ ಪೂಜಾವಿಧಿಗಳೇ ಆಗಿವೆ. ರೋಮ್ ನಗರ ದೊಡ್ಡ ಕ್ಷಾಮದಿಂದ (ಕ್ರಿ. ಪೂ. 399) ಪೀಡಿತವಾದಾಗ ರೋಮನರು ಪೂಜಿಸಿದರೆಂದು ಲಿವಿ ಎಂಬ ಇತಿಹಾಸಕಾರ ಹೇಳುವ ಆರು ದೇವತೆಗಳಲ್ಲಿ ಡಯಾನಾದೇವಿಯ ಹೆಸರೂ ಬಂದಿದೆ. ಮರದ ಮೂರ್ತಿಗಳನ್ನು ಮಾಡಿ ಗ್ರೀಕ್ ಮಾದರಿಯ ಆಸನಗಳಲ್ಲಿರಿಸಿ ಅವುಗಳ ಮುಂದೆ ಭೋಜನದ ನೈವೇದ್ಯವನ್ನಿಡುತ್ತಿದ್ದರೆಂದು ವರ್ಣಿಸಲಾಗಿದೆ. ಗ್ರೀಕ್ ಪೂಜಾರಿಗಳು ಬರಿತಲೆಯಾಗಿರುತ್ತಿದ್ದರೆ, ರೋಮನ್ ಪೂಜಾರಿಗಳು ತಲೆಗೆ ಟೋಪಿ ಹಾಕಿಕೊಳ್ಳುತ್ತಿದ್ದರು-ಇಷ್ಟೇ ವ್ಯತ್ಯಾಸ. ಈ ದೇವತೆಯ ಪೂಜೆಯನ್ನು ಪೂಜಾರಿಯೊಬ್ಬನೇ ವಿಧ್ಯುಕ್ತವಾಗಿ ಮಾಡಿದರೂ ಮಿಕ್ಕ ಊರಿನ ಹೆಂಗಸರು ಗಂಡಸರು ಮಕ್ಕಳೆಲ್ಲ ಪೂಜೆಯಾದ ದೇವತೆಯ ಮೆರವಣಿಗೆಯಲ್ಲಿ ಯಥೇಚ್ಛವಾಗಿ ಭಾಗವಹಿಸುತ್ತಿದ್ದರು. (ಕೆ.ಕೆ.)