ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಾಕಿನ್ನನ ದ್ರಾವಣ
ಡಾಕಿನ್ನನ ದ್ರಾವಣ - ಸೋಂಕು ತಾಗಿದ ಗಾಯಗಳನ್ನು ತೊಳೆಯಲು ಉಪಯೋಗಿಸುವ ಸೋಡಿಯಮ್ ಬೈ ಕಾರ್ಬನೇಟ್ ಸಮೇತವಾದ 0.4-0.5% ಸೋಡಿಯಮ್ ಹೈಪೊಕ್ಲೋರೈಟ್ ದ್ರಾವಣ (ಡಾಕಿನ್ಸ್ ಸೊಲ್ಯೂಷನ್ ಆರ್ ಫ್ಲೂಯಿಡ್). ಒಂದನೆಯ ಮಹಾಯುದ್ಧದಲ್ಲಿ ಇದನ್ನು ಬಳಕೆಗೆ ತಂದವ ಅಮೆರಿಕದ ಇಂಗ್ಲಿಷ್ ರಸಾಯನಿ (ಕೆಮಿಸ್ಟ್) ಹೆನ್ರಿ ಡಾಕಿನ್ (1880-1952). ಅಂತೆಯೇ ಅವನ ಹೆಸರು ಇದಕ್ಕೆ ಬಂದಿದೆ. ಡಾಕಿನ್ನನ ದ್ರಾವಣ ತಯಾರಿಸಲು ಯುಕ್ತಪ್ರಮಾಣಗಳಲ್ಲಿ ಕ್ಲೋರಿನ್‍ಯುಕ್ತ ಸುಣ್ಣ (ಚೆಲುವೆ ಪುಡಿ), ಸೋಡಿಯಮ್ ಕಾರ್ಬನೇಟ್ ಮತ್ತು ಬೋರಿಕ್ ಪುಡಿಯನ್ನು ಒಟ್ಟಾಗಿ ತೆಗೆದುಕೊಂಡು ಕಲ್ಪತ್ತಿನಲ್ಲಿ ಕುಲುಕಿ ಇಡಬೇಕು. 10 ಮಿನಿಟುಗಳ ಬಳಿಕ ಹಂದಾಡದಂತೆ ತಿಳಿ ಬಸಿದುಕೊಳ್ಳಬೇಕು. ಈ ಸ್ವಚ್ಫ ದ್ರವವೇ ಡಾಕಿನ್ನನ ದ್ರಾವಣ. ಇದನ್ನು ತಂಪಾದ, ಬೆಳಕಿಲ್ಲದ ಸ್ಥಳದಲ್ಲಿ ಚೆನ್ನಾಗಿ ಮುಚ್ಚಿ ಇಡಬೇಕು. ಹಾಗಿಲ್ಲದಿದ್ದರೆ ಇದರ ಸಾಮಥ್ರ್ಯ ಕುಗ್ಗುತ್ತದೆ. ಮೂರು ನಾಲ್ಕು ದಿವಸಗಳ ಒಳಗೆ ವಿನಿಯೋಗಿಸಬೇಕು.
ಡಾಕಿನ್ನನ ದ್ರಾವಣ ವಿಷಾಣುಯುಕ್ತ ವ್ರಣ ಮತ್ತು ಗಾಯಗಳಿಗೆ ಬಲು ಗುಣಕಾರಿ. ಇದು ಉರಿ ಉಂಟುಮಾಡುವುದಿಲ್ಲ. ಇದರಿಂದ ತೊಳೆದಾಗ ಸುಟ್ಟಗಾಯ ಮತ್ತು ವ್ರಣಗಳು ಜಾಗ್ರತೆ ನಂಜು ವಿಮುಕ್ತವಾಗುತ್ತವೆ. ಮತ್ತು ಮಾಯುತ್ತವೆ. ದುರ್ವಾಸನೆ ಹೋಗುತ್ತದೆ. ಡಾಕಿನ್ನನ ದ್ರಾವಣದೊಡನೆ ಸಾಕಷ್ಟು ನೀರು ಅಥವಾ ಉಪ್ಪು ನೀರು ಬೆರೆಸಿ ಮೂತ್ರಕೋಶ ಸೇಚನೆಗೆ ಉಪಯೋಗಿಸುತ್ತಾರೆ. ಪಾದದ ಅಣಬೆ ಸೋಂಕನ್ನು ಹೋಗಲಾಡಿಸುತ್ತದೆ. 15% ಸೋಡಿಯಮ್ ಹೈಡ್ರಾಕ್ಸೈಡ್ ದ್ರವದೊಡನೆ ಡಾಕಿನ್ನನ ದ್ರಾವಣವನ್ನು ಸಮಭಾಗವಾಗಿ ಬೆರೆಸಿದರೆ ಅದಕ್ಕೆ ಆಂಟಿಫಾರ್ಮಿನ್ ದ್ರಾವಣವೆಂದು ಹೆಸರು. ಇದನ್ನು ಮಲ ಮತ್ತು ಕಫದಲ್ಲಿರುವ ಕ್ಷಯ ಕ್ರಿಮಿಯನ್ನು ಪತ್ತೆಮಾಡಲು ಉಪಯೋಗಿಸುತ್ತಾರೆ. ಬಾಯಿ ಹುಣ್ಣು ಮತ್ತು ಗಂಟಲು ನೋವುಗಳಲ್ಲಿ ಡಾಕಿನ್ನನ ದ್ರಾವಣಕ್ಕೆ 3-4 ಭಾಗ ಹೆಚ್ಚು ನೀರನ್ನು ಬೆರೆಸಿ ಬಾಯಿ ಮುಕ್ಕಳಿಸಿದರೆ ಅವು ಜಾಗ್ರತೆ ಮಾಯುತ್ತವೆ.
(ಎಸ್.ಕೆ.ಎಚ್.)