ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಿಂಗೋ
ಡಿಂಗೋ ಆಸ್ಟ್ರೇಲಿಯದ ಕಾಡು ನಾಯಿ. ಆಸ್ಟ್ರೇಲಿಯದ ಜರಾಯು ಪ್ರಾಣಿಗಳಲ್ಲಿ ಇದೂ ಒಂದು. ವಾರಿಗಲ್ ಪರ್ಯಾಯ ನಾಮ. ಸಸ್ತನಿ ವರ್ಗದ, ಕಾರ್ನಿವೊರ ಗಣದ ಕ್ಯಾನಿಡೀ ಕುಟುಂಬಕ್ಕೆ ಸೇರಿದೆ. ಕೇನಿಸ್ ಡಿಂಗೋ ವೈe್ಞÁನಿಕ ಹೆಸರು. ಬಹು ಹಿಂದೆ ಅಂದರೆ ಸುಮಾರು 40,000 ವರ್ಷಗಳ ಹಿಂದೆ, ಏಷ್ಯದಿಂದ ಆಸ್ಟ್ರೇಲಿಯಕ್ಕೆ ವಲಸೆ ಹೋದ ಮಾನವ ಈ ನಾಯಿಯನ್ನು ತನ್ನ ಜೊತೆಯಲ್ಲಿ ಕೊಂಡೊಯ್ದಿರಬೇಕೆಂದು ಹೇಳಲಾಗಿದೆ. ಹೀಗೆ ಕೊಂಡೊಯ್ಯುವಾಗ ಸಾಕುಪ್ರಾಣಿಯಾಗಿಯೇ ಇತ್ತೆಂದೂ ಕಾಲಕ್ರಮೇಣ ತಪ್ಪಿಸಿಕೊಂಡು ಕಾಡುಪ್ರಾಣಿಯಾಯಿತೆಂದೂ ನಂಬಲಾಗಿದೆ. ತೋಳಕ್ಕಿಂತ ಚಿಕ್ಕಗಾತ್ರದ ಪ್ರಾಣಿ ಇದು; (ಭುಜದ ಬಳಿ) ಎತ್ತರ ಸುಮಾರು 60 ಸೆಂ.ಮೀ. ಉದ್ದ 90 ಸೆಂ.ಮೀ. ಸುಮಾರು 30 ಸೆಂ.ಮೀ. ಉದ್ದದ ಪೊದೆಪೊದೆಯಾದ ಬಾಲವಿದೆ. ದೇಹದ ಮೇಲೆಲ್ಲ ಕೆಂಗೆಂದು ಬಣ್ಣದ ಮೃದುವಾದ ತುಪ್ಪಳದಂಥ ಕೂದಲಿದೆ. ಕೆಲವು ಸಲ ಮೈ ಕಪ್ಪುಬಣ್ಣಕ್ಕಿರುವುದೂ ಉಂಟು. ದೇಹದ ಗಾತ್ರಕ್ಕೆ ಹೋಲಿಸಿದರೆ ಕೊಂಚ ಉದ್ದ ಕಾಣುವ ಕಾಲುಗಳುಂಟು. ಮೂತಿ ಅಗಲವಾಗಿ ಮೋಟಾಗಿ ಇದೆ. ದವಡೆಗಳು ಬಹಳ ಬಲವಾಗಿವೆಯಲ್ಲದೆ ಕೆಳದವಡೆ ಮೇಲಕ್ಕೆ ಕೆಳಕ್ಕೆ ಮಾತ್ರ ಚಲಿಸುವಂತಿದೆ. ಇದರಿಂದ ತನ್ನ ಎರೆಗಳು ತಪ್ಪಿಸಿಕೊಳ್ಳದ ಹಾಗೆ ಹಿಡಿಯಲು ಅನುಕೂಲ. ಮುಂದಿನ ಕಾಲಿನಲ್ಲಿ ಐದು ಬೆರಳುಗಳು ಹಿಂಗಾಲಿನಲ್ಲಿ ನಾಲ್ಕು ಬೆರಳುಗಳು ಉಂಟು. ಬೆರಳಿನಲ್ಲಿರುವ ಉಗುರುಗಳನ್ನು ಹಿಂದಕ್ಕೆ ಎಳೆದುಕೊಳ್ಳಲಾರದು. ಇದರಿಂದ ಡಿಂಗೊ ನಡೆಯುತ್ತಿರುವಾಗ ಶಬ್ದವುಂಟಾಗುತ್ತದೆ. ಬಯಲುಗಳಲ್ಲಿ ಕುರುಚಲುಕಾಡು ಇರುವಂಥ ಪ್ರದೇಶದಲ್ಲಿ ಡಿಂಗೋ ವಾಸಿಸುತ್ತದೆ. ಹಗಲೆಲ್ಲ ಪೊದೆಯೊಂದರಲ್ಲಿ ಅಡಗಿದ್ದು ರಾತ್ರಿ ಬೇಟೆಗೆಂದು ಹೊರಡುತ್ತದೆ. ಕಾಂಗರೂ ಇದರ ಮೆಚ್ಚಿನ ಆಹಾರ. ಒಂಟೊಂಟಿಯಾಗಿ ಇಲ್ಲವೆ ಸಣ್ಣಗುಂಪುಗಳಲ್ಲಿ ಬೇಟೆಯಾಡುತ್ತದೆ. ಕೆಲವು ಸಲ ಕೋಳಿಗಳನ್ನೂ ಕುರಿಗಳನ್ನೂ ಹಿಡಿದು ತಿನ್ನುವುದುಂಟು. ಇದರಿಂದಾಗಿ ಆಸ್ಟ್ರೇಲಿಯದಲ್ಲಿ ಜನರ ದ್ವೇಷ ಗಳಿಸಿದೆ. ಇದು ನಾಯಿಯಾಗಿದ್ದರೂ ಅದರಂತೆ ಬೊಗುಳುವುದಿಲ್ಲ: ಕುಂಯಿಗುಡುತ್ತದೆ ಇಲ್ಲವೆ ಊಳಿಡುತ್ತದೆ ಮಾತ್ರ. ನಾಯಿ ಕುಟುಂಬದ ಇತರ ಪ್ರಾಣಿಗಳಲ್ಲಿರುವ ಹಾಗೆಯೇ ಡಿಂಗೋವಿನಲ್ಲೂ ಗಂಡಿನ ಶಿಶ್ನದ ಮುಂಭಾಗದ ಸುತ್ತಲೂ ಹಿಂದಕ್ಕೆ ಬಾಗಿರುವ ಕೊಕ್ಕೆಗಳಂಥ ರಚನೆಗಳಿವೆ. ಇವು ಸಂಭೋಗ ಕಾಲದಲ್ಲಿ ಉಬ್ಬಿಕೊಳ್ಳುವುದರಿಂದ ಸಂಭೋಗದ ಅವಧಿ ಹೆಚ್ಚಾಗುವುದಲ್ಲದೆ, ಸಂಭೋಗಕ್ರಿಯೆ ಕೊನೆಗೊಳ್ಳುವವರೆಗೂ ಶಿಶ್ನವನ್ನು ಸುಲಭವಾಗಿ ಹಿಂತೆಗೆದುಕೊಳ್ಳಲು ಆಗುವುದಿಲ್ಲ. ಗರ್ಭಧಾರಣೆಯ ಅವಧಿ 2 ತಿಂಗಳು. ಒಂದು ಸಲಕ್ಕೆ 4-8 ಮರಿಗಳು ಹುಟ್ಟುತ್ತವೆ. (ಕೆ.ಪಿ.ಆರ್.)