ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಿಮೇಡೀಸ್

ವಿಕಿಸೋರ್ಸ್ದಿಂದ

ಡಿಮೇಡೀಸ್ ಕ್ರಿ.ಪೂ. ಸು. 380-318. ಆತೆನ್ಸ್‍ನ ಒಬ್ಬ ವಾಗ್ಮಿ, ರಾಜಕಾರಣನಿಪುಣ. ಜನಮನವನ್ನರಿಯುವ ಸಾಮಥ್ರ್ಯ ಹಾಗೂ ಶಕ್ತಿಯುತ ವಾಗ್ಮಿತೆಯಿಂದ ಆತೆನ್ಸ್ ರಾಜಕಾರಣದಲ್ಲಿ ಶ್ರೀಸಾಮಾನ್ಯ ಪದವಿಯಿಂದ ಬಹು ಮುಖ್ಯ ಸ್ಥಾನಕ್ಕೆ ಏರಿದ. ಮ್ಯಾಸಿಡಾನಿನ 2ನೆಯ ಫಿಲಿಪನ ವಿರುದ್ಧ ಒಲಿಂತಸನ ಪರವಾಗಿ ಜನರನ್ನು ಪ್ರಚೋದಿಸಲು ಡಿಮಾಸ್ತನೀಸನ ಪ್ರಯತ್ನವನ್ನು ಇವನು ವಿರೋಧಿಸಿದ. ನಾಟಕಶಾಲೆ ಮೊದಲಾದವುಗಳಲ್ಲಿ ಬಡವರಿಗೆ ಉಚಿತ ಪ್ರವೇಶ ದೊರಕಿಸಲು ಏರ್ಪಡಿಸಿದ ನಿಧಿಯನ್ನು ಯುದ್ಧಕ್ಕಾಗಿ ಬಳಸಿಕೊಳ್ಳಲು ಡಿಮಾಸ್ತನೀಸ್ ಯತ್ನಿಸಿದಾಗ, ಅದನ್ನು ಖಂಡಿಸಿದ. ಆದರೂ ತನ್ನ ದೇಶದ ಜನತೆಯೊಂದಿಗೆ ಸೇರಿ ಮ್ಯಾಸಿಡೋನಿಯನರ ವಿರುದ್ಧ ಕರನೀಯದಲ್ಲಿ ಹೋರಾಡಿ ಸೆರೆಯಾದ. ಬಂಧನದಿಂದ ಬಿಡುಗಡೆ ಹೊಂದಿದಾಗ ಮ್ಯಾಸಿಡಾನ್ ಮತ್ತು ಆತೆನ್ಸ್ ನಡುವೆ ಶಾಂತಿಗಾಗಿ ಸಂಧಾನ ನಡೆಸಿದ. ಫಿಲಿಪನ ತರುವಾಯ ಪಟ್ಟಕ್ಕೆ ಬಂದ ಅಲೆಕ್ಸಾಂಡರ್ ಮಹಾಶಯನ ಕೃಪೆಗೆ ಒಳಗಾಗಿದ್ದ. ಅಲೆಕ್ಸಾಂಡರ್ ಗ್ರೀಸನ್ನು ಗೆದ್ದಾಗ ಡಿಮಾಸ್ತನೀಸನನ್ನೂ ಮ್ಯಾಸಿಡೋನಿಯದ ವಿರೋಧಿಗಳಾದ ಇತರ ವಾಗ್ಮಿಗಳನ್ನೂ ಅಲೆಕ್ಸಾಂಡರನ ಕೋಪಕ್ಕೆ ತುತ್ತಾಗದಂತೆ ರಕ್ಷಿಸಿದ. ಲಂಚಕ್ಕಾಗಿ ಅವನು ಹೀಗೆ ಮಾಡಿದನೆಂದು ಹೇಳಲಾಗಿದೆ. ಅಲೆಕ್ಸಾಂಡರ್ ತೀಬ್ಸನ್ನು ನಾಶಪಡಿಸಿದರೂ ಆತೆನ್ಸನ್ನು ಹಾಗೇ ಬಿಟ್ಟಿದ್ದು ಮುಖ್ಯವಾಗಿ ಡಿಮೇಡೀಸನಿಂದಾಗಿ. ಅಲೆಕ್ಸಾಂಡರನಿಗೆ ದೈವಿಕ ಮರ್ಯಾದೆಗಳನ್ನು ನೀಡಬೇಕೆಂದು ಕ್ರಿ.ಪೂ. 324ರಲ್ಲಿ ಇವನು ಸೂಚಿಸಿದ. ಆದರೆ ಅಲೆಕ್ಸಾಂಡರನ ವಿರುದ್ಧವಾಗಿ ಹಾರ್ಪಾಲಸನಿಂದ ಲಂಚ ಪಡೆದನೆಂಬ ಆಪಾದನೆ ರುಜುವಾತಾಯಿತು (ಕ್ರಿ.ಪೂ. 324-323). ಇವನು ಭಾರಿ ದಂಡ ತೆರಬೇಕಾಯಿತಲ್ಲದೆ ಪೌರತ್ವವನ್ನೂ ಕಳೆದುಕೊಂಡ. ಅಲೆಕ್ಸಾಂಡರನ ಮರಣಾನಂತರವೂ ಇವನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಲಿಲ್ಲ. ಆದರೆ 322ರಲ್ಲಿ ಪೌರತ್ವವನ್ನು ಮರಳಿ ಪಡೆದ. ಲ್ಯಾಮಿಯನ್ ಯುದ್ಧದ (ಕ್ರಿ.ಪೂ. 323-322) ಆಂಟಿಪೇಟರನೊಂದಿಗೆ ಸಂಧಾನ ನಡೆಸಲು ಇವನನ್ನು ಕಳುಹಿಸಲಾಯಿತು. ಆತೆನ್ಸಿನಿಂದ ಓಡಿಹೋಗಿದ್ದ ಡಿಮಾಸ್ತನೀಸ್ ಮತ್ತು ಅವನ ಬೆಂಬಲಿಗರಿಗೆ ಮರಣ ದಂಡನೆ ವಿಧಿಸಬೇಕೆಂದು ನಾಗರಿಕರನ್ನು ಒಡಂಬಡಿಸಿ ಅನಂತರ ಸಂಧಾನಕ್ಕಾಗಿ ತೆರಳಿದ. ಅವನ ಸಂಧಾನದಿಂದ ಫಲಿಸಿದ ಶಾಂತಿ ಕೌಲು ಆತೆನ್ಸ್ ಜನಕ್ಕೆ ಪ್ರತಿಕೂಲಕರವಾಗಿತ್ತು. ಕ್ರಿ.ಪೂ. 319ರಲ್ಲಿ ಮತ್ತೆ ಇವನನ್ನು ಆಂಟಿಪೇಟರನ ಆಸ್ಥಾನಕ್ಕೆ ಕಳುಹಿಸಲಾಯಿತು. ಪರ್ಡಿಕಾಸನೊಂದಿಗೆ ಇವನು ಸಂಚುಹೂಡಿದನೆಂದು ಆಂಟಿಪೇಟರನೋ ಅವನ ಮಗ ಕ್ಯಸಾಂಡರನೋ ಡಿಮೇಡೀಸನನ್ನು ಕೊಲ್ಲಿಸಿದ. ಡಿಮೇಡೀಸನ ಭಾಷಣಗಳು ಲಭ್ಯವಿಲ್ಲ. (ಎಸ್.ಎಸ್.ಜೆಎ.)