ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡೆಕರ್, ತಾಮಸ್

ವಿಕಿಸೋರ್ಸ್ದಿಂದ

ಡೆಕರ್, ತಾಮಸ್ 1570-1632. ಇಂಗ್ಲಿಷ್ ನಾಟಕಕಾರ ಹಾಗೂ ಲಘು ಪುಸ್ತಿಕೆಗಳ ಕರ್ತೃ. ಲಂಡನ್ನಿನಲ್ಲಿ ಹುಟ್ಟಿ ತನ್ನನ ಜೀವಿತದ ಬಹುಕಾಲವನ್ನು ಅಲ್ಲಿಯೇ ಕಳೆದವ. ಕಣ್ಣಿಗೆ ಕಟ್ಟುವಂತೆ ಲಂಡನಿನ ಜನಜೀವನವನ್ನು ಚಿತ್ರಿಸಿರುವ ಈತನನ್ನು ಎಲಿಜಬೆತ್ ಕಾಲದ ಡಿಕನ್ಸ್ ಎನ್ನಲಾಗಿದೆ. ಈತನ ಜೀವನದ ಬಗ್ಗೆ ಖಚಿತವಾಗಿ ಹೆಚ್ಚು ತಿಳಿದಿಲ್ಲ. ಜೀವನದುದ್ದಕ್ಕೂ ಈತ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಕ್ಕಿ ಬಳಲಿದನೆಂಬುದಂತೂ ಸ್ಪಷ್ಟ.

ಸುಮಾರು 30 ವರ್ಷಗಳ ರಂಗಭೂಮಿಯ ಸಂಪರ್ಕವಿಟ್ಟುಕೊಂಡಿದ್ದ ಈತ ಬೇರೆ ಬೇರೆ ನಾಟಕಕಾರರ ಜೊತೆಗೂಡಿ ಸುಮಾರು 42 ನಾಟಕಗಳನ್ನು ಬರೆದಿದ್ದಾನೆ. ಬರೆಯುವುದು ಎಂದರೆ ಹಳೆಯ ಕಥೆಗಳಿಗೆ ನಾಟಕದ ರೂಪ ಕೊಡುವುದೊ, ಇಲ್ಲವೇ ಹಳೆಯ ನಾಟಕಗಳನ್ನೇ ಕೈಯಾಡಿಸಿ ತಿದ್ದಿ ಮಾರ್ಪಡಿಸಿ ಒಪ್ಪ ಓರಣ ಮಾಡಿ ಬರೆದಿಡುವುದೊ ಆಗಿತ್ತು. ಡೆಕರನ ನಾಟಕಗಳಲ್ಲಿ ಓಲ್ಡ್ ಫಾಚ್ರ್ಯೂನೇಟಸ್ (1600); ದಿ ಷೂ ಮೇಕರ್ಸ್ ಹಾಲಿಡೇ (1300); ಸ್ಯಾಟೈರೊಮ್ಯಾಸ್ಟಿಕ್ಸ್ (1602) ; ದಿ ಆನೆಸ್ಟ್ ಹ್ವೋರ್ (1604)-ಇವು ನಾಲ್ಕು ಜನಪ್ರಿಯವಾದವು. ಜನಪ್ರಿಯವಾಗಲು ನಾಟಕಗಳಲ್ಲಿರಬೇಕಾಗಿದ್ದ ಎಲ್ಲ ಅಂಶಗಳನ್ನೂ ಡೇಕರ್ ಇವುಗಳಲ್ಲಿ ಸೇರಿಸಿದ್ದ. ಓತಪ್ರೋತವಾಗಿ ಹರಿಯುವ ಭಾಷೆ, ಕೋಮಲವಾದ ಭಾವ, ಕರುಣರಸ, ಕೇಕೆ ಗದ್ದಲಗಳಿಂದ ಕೂಡಿದ ಹರ್ಷಸನ್ನಿವೇಶಗಳು, ಹೃದ್ಯವಾದ ಪಾತ್ರಚಿತ್ರಣ. ಕೊನೆಯಲ್ಲಿ ಸತ್ಯಕ್ಕೇ ಜಯ ಎಂಬ ನೀತಿಸೂತ್ರ-ಇತ್ಯಾದಿ ಲಕ್ಷಣಗಳನ್ನೂ ಚಾಚೂ ತಪ್ಪದೆ ಡೇಕರ್ ತನ್ನ ನಾಟಕಗಳಲ್ಲಿ ತರುತ್ತಿದ್ದ. ರಚನೆಯಲ್ಲಿ, ಸನ್ನಿವೇಶ ಸೃಷ್ಟಿಯಲ್ಲಿ ಹಲವಾರು ದೋಷಗಳಿದ್ದರೂ ಅವೆಲ್ಲವನ್ನೂ ಮರೆಸಿಬಿಡುವ ಡೇಕರನ ಸೂಕ್ಷ್ಮ ಅವಲೋಕನಾಸಾಮಥ್ರ್ಯ, ನಿರರ್ಗಳವಾದ ಭಾಷೆ. ಸುಲಲಿತವಾದ ಶೈಲಿಗಳಿಂದಾಗಿ ನಾಟಕಗಳು ರಂಗದ ಮೇಲೆ ಅದ್ಭುತವಾದ ಯಶಸ್ಸು ಪಡೆದವು.

ಲಂಡನ್ ಜನಜೀವನನ್ನು ಚಿತ್ರಿಸುವಾಗಲಂತೂ ಈತನ ಅಭಿಮಾನ, ಉದಾತ್ತಭಾವನೆಗಳು ತುಂಬಿಬರುತ್ತಿದ್ದವು. ಗಟ್ಟಿಯಾದ ಮಧ್ಯಮವರ್ಗದ ಜನ, ನೈಚ್ಯಭಾವವಿಲ್ಲದ ಸೇವಕರು ಡೇಕರನ ಅಚ್ಚುಮೆಚ್ಚಿನ ಪಾತ್ರಗಳು. ಡೆಕರ್‍ನನ್ನು ಬೆನ್ ಜಾನ್ಸನ್ ತನ್ನ ಪೊಯಟಾಸ್ಟರ್ ಎಂಬ ಕವನದಲ್ಲಿ ಮಂಕುದಿಣ್ಣೆ ಡಿಮೀಟ್ರಿಯಸ್ ಫ್ಯಾನಿಯಸ್ ಎಂಬ ಪಾತ್ರವನ್ನಾಗಿ ಮಾಡಿ ಅಪಹಾಸ್ಯಮಾಡಿದ, ಡೆಕರ್ ಇದಕ್ಕೆ ಪ್ರತಿಯಾಗಿ ಜೆ. ಮಾರ್ಸ್‍ಟನ್‍ನೊಡನೆ ಸೇರಿ ಬರೆದ ಸ್ಯಾಟೈರೊಮ್ಯಾಸ್ಟಿಕ್ಸ್ ಎಂಬ ಕಾವ್ಯದಲ್ಲಿ ಬೆನ್ ಜಾನ್ಸನ್ನನ ಮೇಲೆ ಮುಯ್ಯಿ ತೀರಿಸಿಕೊಂಡ.

ವಿಲಿಯಂ ಹಾಟನ್ ಮತ್ತು ಹೆನ್ರಿ ಜೆಟಲ್‍ರೊಂದಿಗೆ ಸೇರಿ ಪೇಷೆಂಟ್ ಗ್ರಿಸಿಲ್ (1603) ಮ್ಯಾಸಿಂಜರ್‍ನೊಂದಿಗೆ ಸೇರಿ ದಿ ಗಲ್ ಹಾರ್ನ್‍ಬುಕ್ (1609) ಫೋರ್ಡ್‍ನೊಂದಿಗೆ ಸೇರಿ ದಿ ವರ್ಜಿನ್ ಮಾರ್ಟಿರ್, ಮಿಡ್ಲ್‍ಟನ್‍ನೊಂದಿಗೆ ಸೇರಿ ದಿ ಸನ್ಸ್ ಡಾರ್ಲಿಂಗ್, ಜೆಟಲ್ ಮತ್ತು ವೆಬ್‍ಟರ್‍ರೊಂದಿಗೆ ಸೇರಿ ದಿ ರೋರಿಂಗ್ ಗರ್ಲ್ ಕೃತಿಗಳನ್ನು ಡೇಕರ್ ರಚಿಸಿದ್ದಾನೆ.

ಲಂಡನ್ನಿನ ಮಹಾಪ್ಲೇಗು ಉಪದ್ರವದ ಕಾಲದ ಚಿತ್ರವನ್ನು ದಿ ವಂಡರ್‍ಪುಲ್ ಇಯರ್ ಎಂಬ ಪುಸ್ತಕದಲ್ಲಿ ಕಣ್ಣಿಗೆ ಕಟ್ಟುವ ಹಾಗೆ ಬಣ್ಣಿಸಿದ್ದಾನೆ. ಪತ್ರಿಕೋದ್ಯಮ ಕಲೆಯನ್ನು ಮೀರಿಸಿದ ಸೊಗಸು ಈ ಕೃತಿಯಲ್ಲಿದೆ. ಸಣ್ಣಪುಟ್ಟ ವಿವರಗಳನ್ನೂ ಬಿಡದೆ ಸ್ವಾರಸ್ಯವಾಗಿ ಕಥನಿಸುವ ಡೆಕರನ ಶೈಲಿ ಕಾದಂಬರೀ ಲೇಖನಕ್ಕೆ ಹೇಳಿಮಾಡಿಸಿದಂತಿದೆ. ಬರೆಹದಲ್ಲಿ ಡೆಕರನ ಧಾರ್ಮಿಕ ಶ್ರದ್ಧೆ, ಸಾತ್ತ್ವಿಕ ಸ್ವಭಾವ ಪಡಿಮೂಡಿವೆ. ಯಾವುದನ್ನೂ ಆತ ಮರೆಮಾಚುವುದಿಲ್ಲ. ರಾಬರ್ಟ್ ಗ್ರೀನ್‍ನಿಂದ ಸಂಪಾದಿಸಿದ ಸಾಮಗ್ರಿಯನ್ನು ಉಪಯೋಗಿಸಿಕೊಂಡು ವಂಚಕತನ ಮತ್ತು ಅಪರಾಧಗಳನ್ನು ಪ್ರಕಟಪಡಿಸುವ ದಿ ಬೆಲ್‍ಮನ್ ಆಫ್ ಲಂಡನ್ (1608) ಎಂಬ ಪುಸ್ತಕವನ್ನು ಡೆಕರ್ ಬರೆದಿದಾನೆ. ಈ ಪುಸ್ತಕಗಳ ಸರಣಿಯಲ್ಲಿ ದಿ ಗಲ್ಸ್ ಹಾರ್ನ್‍ಬುಕ್ (1609) ಅತ್ಯುತ್ತಮವಾದುದೆಂದು ಹೆಸರಾಗಿದೆ. ಇದರಲ್ಲಿ ಲಂಡನ್ ನಾಟಕ ಮಂದಿರಗಳ ನೈಜ ಜೀವಂತ ಚಿತ್ರ ದೊರೆಯುತ್ತದೆ. ಡೆಕರ್ ಸಾಲವೊಂದರಲ್ಲಿ ಸಿಕ್ಕಿಕೊಂಡು ಸೆರೆಮನೆಯಲ್ಲಿದ್ದಾಗ ಪಡೆದ ಅನುಭವದಿಂದ ಬರೆದ ಕ್ಯಾರೆಕ್ಟರ್ಸ್ (1616) ಎಂಬ ಕೃತಿಯಲ್ಲಿ ಆರು ಸೆರೆವಾಸದ ಚಿತ್ರಗಳನ್ನು ಕೊಟ್ಟಿದ್ದಾನೆ. ಸರ್ ತಾಮಸ್ ಓವರ್‍ಬರಿ ಎಂಬುವನ ಪುಸ್ತಕದಲ್ಲಿ ಇವು ಪ್ರಕಟವಾದವು.

ಭಾವಗೀತೆಗಳನ್ನು ಅದರಲ್ಲೂ ಧಾರ್ಮಿಕ ಗೀತೆಗಳನ್ನು ರಚಿಸುವುದರಲ್ಲಿ ಡೆಕರ್‍ನ ಸ್ವಂತಿಕೆ ಮತ್ತು ನೈಜಪ್ರತಿಭೆಗಳು ಕಾಣುತ್ತವೆ. ಸುಂದರವೂ ಭಾವಪೂರ್ಣವೂ ಆದ ಅನೇಕ ಹಾಡುಗಳನ್ನು ಈತ ಬರೆದಿದ್ದಾನೆ. ಚಾಲ್ರ್ಸ್‍ಲ್ಯಾಮ್ ಈತನ ನಾಟಕಗಳಲ್ಲಿ ಬರುವ ಗೀತೆಗಳನ್ನು ಬಹಳ ಮೆಚ್ಚಿಕೊಂಡಿದ್ದನೆನ್ನಲಾಗಿದೆ. (ಕೆ.ಬಿ.ಪಿ.)