ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡೆವನ್ಪೋರ್ಟ್
ಡೆವನ್ಪೋರ್ಟ್ ಆಸ್ಟ್ರೇಲಿಯದಲ್ಲಿ ಟಾಸ್ಮೇನಿಯದ ಉತ್ತರ ಕರಾವಳಿಯಲ್ಲಿರುವ ಒಂದು ರೇವುಪಟ್ಟಣ. ನದಿಯ ಅಳಿವೆಯ ಎರಡೂ ದಡಗಳಲ್ಲಿ ಹಬ್ಬಿದೆ. ಲಾಲ್ಸ್‍ಟನ್ ನಗರದ ವಾಯುವ್ಯಕ್ಕೆ ರೈಲಿನ ಮೇಲೆ 82 ಮೈ. ದೂರದಲ್ಲಿದೆ. ಜನಸಂಖ್ಯೆ 19,240 (1970 ಅಂ.) ಅಳಿವೆಯ ಪಶ್ಚಿಮದಡದ ಟಾಕ್ರ್ವೆ ಮತ್ತು ಪೂರ್ವದಂಡೆಯ ಫಾರ್ಮ್‍ಬಿ ಹಳ್ಳಿಗಳು ಕ್ರಮೇಣ ಬೆಳೆದು ಡೆವನ್ ಪೋರ್ಟ್ ಪಟ್ಟಣವಾಯಿತು. ಇದರ ಸುತ್ತಣ ಪ್ರದೇಶ ಪ್ರಮುಖವಾಗಿ ವ್ಯವಸಾಯಪ್ರಧಾನವಾಗಿದ್ದು, ಇಲ್ಲಿ ಆಹಾರ ಪರಿಷ್ಕರಣ, ಜವಳಿ, ಕ್ಷೀರೋತ್ಪನ್ನ ಮುಂತಾದ ಕೈಗಾರಿಕೆಗಳು ಇವೆ.
ಇಲ್ಲಿಂದ ನಿರ್ಯಾತವಾಗುವ ಪ್ರಮುಖ ಸರಕುಗಳು ಹಣ್ಣು, ಕ್ಷೀರೋತ್ಪನ್ನ, ಉಣ್ಣೆ ಮತ್ತು ಉಣ್ಣೆಯ ಉತ್ಪನ್ನಗಳು, ಖನಿಜಗಳು, ಆಲೂಗೆಡ್ಡೆ, ಸಿಮೆಂಟ್ ಮತ್ತು ಮರಮುಟ್ಟು, ಡೆವನ್‍ಪೋರ್ಟ್ ಆಸ್ಟ್ರೇಲಿಯದ ಉತ್ತಮ ರೇವು; ಸುರಕ್ಷಿತ ಬಂದರುಕಟ್ಟೆಯನ್ನೊಳಗೊಂಡಿದೆ. ತಂಪಾದ ವಾಯುಗುಣದಿಂದ ಕೂಡಿದ್ದು ಪಶ್ಚಿಮಮಾರುತಗಳಿಂದ ಚಳಿಗಾಲದಲ್ಲಿ ಮಳೆಯನ್ನು ಪಡೆಯುವ ಡೆವನ್‍ಪೋರ್ಟ್‍ನ ಹಿನ್ನಾಡಿನದು ಮೆಡಿಟರೇನಿಯನ್ ಮಾದರಿಯ ವಾಯುಗುಣ. ಚೆರಿ, ಪೀಚ್, ದ್ರಾಕ್ಷಿ, ಕಿತ್ತಳೆ ಮುಂತಾದ ಹಣ್ಣುಗಳ ವ್ಯವಸಾಯಕ್ಕೆ ಅದು ಅನುಕೂಲವಾಗಿದೆ. ಒಳನಾಡಿನಲ್ಲಿ ಮೆರಿನೋ ಜಾತಿಯ ಕುರಿಗಳನ್ನೂ ದನಗಳನ್ನೂ ಸಾಕುತ್ತಾರೆ. ಕ್ಷೀರೋದ್ಯಮ ಲಾಭದಾಯಕವಾದ್ದು.
ಡೆವನ್‍ಪೋರ್ಟಿನಿಂದ ಮೆಲ್‍ಬರ್ನ್‍ಗೆ (210 ಮೈ.) ಹಡಗು ಮತ್ತು ವಿಮಾನ ಸಂಪರ್ಕವುಂಟು. ಇಲ್ಲಿಂದ ಟಾಸ್ಮೇನಿಯದ ಒಳನಾಡಿನ ಎಲ್ಲ ಪ್ರಮುಖ ನಗರಗಳಿಗೂ ಉತ್ತಮ ರಸ್ತೆ ಸೌಲಭ್ಯವಿದೆ. ಡೆವನ್‍ಪೋರ್ಟಿನಿಂದ ಲಾನ್‍ಸ್ಟನ್‍ಗೆ ರೈಲು, ವಿಮಾನ ಹೋಗಿಬರುತ್ತವೆ. (ಎಸ್.ಕೆ.ಆರ್.)