ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡೇಲಿಯ

ವಿಕಿಸೋರ್ಸ್ದಿಂದ

ಡೇಲಿಯ - ಆಸ್ಟರೇಸೀ (ಕಂಪಾಸಿóಟೀ) ಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ. ವಿವಿಧ ಬಣ್ಣಗಳಿಂದ ಕೂಡಿದ ಬಲುಸುಂದರವಾದ ಹೂಗಳನ್ನು ಬಿಡುವುದರಿಂದ ಜನಪ್ರಿಯವಾಗಿದೆ. ಸುಪ್ರಸಿದ್ಧ ಸ್ವೀಡಿಷ್ ಸಸ್ಯಶಾಸ್ತ್ರಜ್ಞ ಡಾಲ್ ಎಂಬಾತ 1789ರಲ್ಲಿ ಇದನ್ನು ಮೊದಲಬಾರಿಗೆ ಮೆಕ್ಸಿಕೋದಲ್ಲಿ ಪತ್ತೆಹಚ್ಚಿದ. ಇವನ ಗೌರವಾರ್ಥವಾಗಿಯೇ ಈ ಗಿಡಕ್ಕೆ ಡೇಲಿಯ ಎಂಬ ಹೆಸರು ಕೊಡಲಾಗಿದೆ.

ಡೇಲಿಯದಲ್ಲಿ ಷೋ ಅಥವಾ ಡಬಲ್, ಫ್ಯಾನ್ಸಿ, ಪಾಂಪಾನ್, ಡೆಕೊರೇಟಿವ್, ಡಬಲ್ ಕ್ಯಾಕ್ಟಸ್, ಸೆಮಿಡಬಲ್ ಅಥವಾ ಆರ್ಟ್, ಕಾಲರೆಟ್, ಸ್ಟಾರ್, ಸಿಂಗಲ್ ಕ್ಯಾಕ್ಟಸ್, ಸೆಂಚುರಿ, ಟಾಮ್ ತಂಬ್, ಅನಿಮೋನ್ ಫ್ಲವರ್ಡ್, ಆರ್ಕಿಡ್ ಫ್ಲವರ್ಡ್ ಎಂಬ ಅನೇಕ ಬಗೆಗಳುಂಟು.

1. ಷೋ ಅಥವಾ ಡಬಲ್ ಡೇಲಿಯ : ಇವು ಬಲು ಹಿಂದಿನ ಮಾದರಿಯವು. ಹೂಗಳು ಒರಟು ರೀತಿಯವು. ಆಕಾರ ಚಂಡಿನಂತೆ. ಪುಷ್ಪದಳಗಳು ಒಂದೇ ಬಣ್ಣದಿಂದ ಕುಡಿವೆಯಲ್ಲದೆ ಗರಿಯಂತೆ ಹರಡಿಕೊಂಡಿವೆ.

2. ಫ್ಯಾನ್ಸಿ ಡೇಲಿಯ : ಹೂಗಳ ಗಾತ್ರ ಮತ್ತು ಆಕೃತಿಯಲ್ಲಿ ಷೋ ಡೇಲಿಯಗಳಿಗೂ ಇವಕ್ಕೂ ಹೋಲಿಕೆಯುಂಟು. ಆದರೆ ದಳಗಳು ವಿವಿಧ ಬಣ್ಣದವು. ಅಲ್ಲದೆ ತೆಳುವಾಗಿಯೂ ತುದಿಯಲ್ಲಿ ಮೊನಚಾಗಿಯೂ ಪದರಪದರವಾಗಿ ಹರಡಿಕೊಂಡಂತೆಯೂ ಇವೆ.

3. ಪಂಪಾನ್ ಡೇಲಿಯ : ಇವು 19ನೆಯ ಶತಮಾನದ ಮಧ್ಯ ಭಾಗದಲ್ಲಿ ಜರ್ಮನಿಯಲ್ಲಿ ಪತ್ತೆಯಾದುವು. ಹೂಗಳು ಆಕೃತಿಯಲ್ಲಿ ಷೋ ಮತ್ತು ಫ್ಯಾನ್ಸಿ ಡೇಲಿಯಗಳಂತಿವೆ. ಗಾತ್ರದಲ್ಲಿ ಸಣ್ಣವು. ಬಲು ಆಕರ್ಷಕವಾಗಿವೆ. ಗಿಡಗಳು ಎತ್ತರವಾಗಿ ಬೆಳೆಯದೆ ಹರಡಿಕೊಂಡು, ಪೊದೆಯಂತೆ ಬೆಳೆಯುವುವು ಮತ್ತು ಹೂಗಳನ್ನು ಹುಲುಸಾಗಿ ಬಿಡುತ್ತದೆ. ಆದ್ದರಿಂದ ಹೂ ಮಡಿಗಳು ಮತ್ತು ಹೂ ಮಡಿಗಳ ಅಂಚುಗಳಲ್ಲಿ ಬೆಳೆಯಲು ಇವು ಬಲು ಉಪಯುಕ್ತ.

4. ಡೆಕೊರೇಟಿವ್ ಡೇಲಿಯ : ಹೆಸರಿಗೆ ತಕ್ಕಂತೆ ಗಿಡ ನೋಡಲು ಬಲು ಸುಂದರವಾಗಿ ಪಾಂಪಾನ್ ಡೇಲಿಯದಂತೆ ಹೆಚ್ಚಿಗೆ ಹೂಗಳನ್ನು ಬಿಡುತ್ತವೆ. ಇತರ ಬಗೆಗಳಿಗಿಂತ ಮುಂಚಿತವಾಗಿ ಇದು ಹೂ ಬಿಡುತ್ತದೆ. ಹೂಗಳು 9"-10" ಅಗಲವೂ ಚಪ್ಪಟೆಯೂ ಆಗಿದ್ದು ನೋಡಲು ಬಲು ಅಂದವಾಗಿವೆ. ದಳಗಳ ತುದಿ ದುಂಡು ಅಥವಾ ಮೊನಚಾಗಿದೆ. ಇವುಗಳಲ್ಲಿ ಜಯಂಟ್ ಡೆಕೊರೇಟಿವ್ ಡೇಲಿಯ ಎಂಬ ತಳಿಯೊಂದು ಉಂಟು.

5. ಡಬಲ್ ಕ್ಯಾಕ್ಟಸ್ ಡೇಲಿಯ : ಹೂಗಳು ವಿವಿಧ ಬಣ್ಣದವು. ಬಲು ಸುಂದರವಾಗಿವೆ. ದಳಗಳು ಬಹು ನೀಳವಾಗಿ ಮೊನಚಾಗಿವೆ.

6. ಸೆಮಿಡಬಲ್ ಅಥವಾ ಆರ್ಟ್ ಡೇಲಿಯ : ಹೂಗಳು ಬಲು ಅಗಲವಾಗಿ, ನೋಡಲು ಅರ್ಧ ಚಂದ್ರನಂತೆ ಕಾಣುವುವು. ಹೂವಿನ ಮಧ್ಯಭಾಗ ಹಳದಿ ಬಣ್ಣದ್ದು. ಇದರ ಸುತ್ತಲೂ 2-3 ಸಾಲು ಅಗಲವಾದ ತೆಳುವಾದ ಮತ್ತು ಮೊನಚಾದ ತುದಿಯುಳ್ಳ ದಳಗಳುಂಟು. ಒಳಸಾಲಿನ ದಳಗಳು ಒಂದಕ್ಕೊಂದು ಹೆಣೆದುಕೊಂಡು ಹೂವಿನ ಮಧ್ಯಭಾಗದ ಮೇಲೆ ಬಾಗಿಕೊಂಡಿರುವುದರಿಂದ, ಹೂಗಳು ನೋಡಲು ಪೀಯನೀಯಂತೆ ಕಾಣುತ್ತವೆ. ಆದ್ದರಿಂದ ಇವನ್ನು ಪೀಯನೀ ಡೇಲಿಯ ಎಂದೂ ಕರೆಯುತ್ತಾರೆ.

7. ಕಾಲರೆಟ್ ಡೇಲಿಯ : ಇವು ಪೀಯನೀ ಡೇಲಿಯಗಳಂತೆ ಹೊಸ ಜಾತಿಯವು ಮತ್ತು ಸೆಮಿಡಬಲ್ ರೀತಿಯವು. ಹೂವಿನ ಮಧ್ಯಭಾಗದ ಸುತ್ತಲೂ 1-2 ಸಾಲು ಅಗಲವಾದ, ವರ್ಣರಂಜಿತ ದಳಗಳುಂಟು. ಒಳಸಾಲಿನ ದಳಗಳು ಒಂದಕ್ಕೊಂದು ಸರದಂತೆ ಕಾಣುತ್ತವೆ.

8. ಸ್ಟಾರ್ ಡೇಲಿಯ : ಹೂಗಳು ಬಲು ಆಕರ್ಷಕವಾಗಿವೆ. ದಳಗಳ ಸಂಖ್ಯೆ ಎಂಟು. ದಳಗಳು ನೀಳವಾಗಿಯೂ ಅಗಲವಾಗಿಯೂ ಇದ್ದು ಸುತ್ತಲೂ ಹೆಣೆದುಕೊಂಡಿರುತ್ತವೆ.

9. ಸಿಂಗಲ್ ಕ್ಯಾಕ್ಟಸ್ ಡೇಲಿಯ : ಇವುಗಳ ದಳಗಳು ಗರಿಗಳಂತೆ ನೀಳವಾಗಿಯೂ ಮೊನಚಾಗಿಯೂ ಇವೆ.

10. ಸೆಂಚುರಿ ಡೇಲಿಯ : ಹೂ ಬಲು ಅಗಲವಾಗಿವೆ. ದಳಗಳು ಚಿಕ್ಕವು ; ಮುತ್ತು ಜೋಡಿಸಿದಂತೆ ಇವೆ.

11. ಟಾಮ್ ತಂಬ್ ಅಥವಾ ಪಿಗ್ಮಿ ಡೇಲಿಯ : ಗಿಡ ಸುಮಾರು 1'-1ಳಿ' ಎತ್ತರ ಬೆಳೆದು ಹೆಚ್ಚಿಗೆ ಹೂಗಳನ್ನು ಬಿಡುತ್ತದೆ. ಇವಕ್ಕೆ ಬೆಡ್ಡಿಂಗ್ ಅಥವಾ ಡ್ವಾರ್ಫ್ ಡೇಲಿಯ ಎಂಬ ಹೆಸರೂ ಉಂಟು. ಇವನ್ನು ಮಡಿಗಳಲ್ಲಿ ಬೆಳೆಸಬಹುದು.

ಡೇಲಿಯನ್ನು ಬೀಜಗಳಿಂದಲೂ ಕಾಂಡತುಂಡುಗಳಿಂದಲೂ ಗೆಡ್ಡೆಗಳಿಂದಲೂ ವೃದ್ಧಿ ಮಾಡಬಹುದು.

ಬೀಜಗಳಿಂದ ವೃದ್ಧಿಮಾಡುವ ವಿಧಾನದಲ್ಲಿ ಮೊದಲು ಬೀಜಗಳನ್ನು ಸೀಡ್ ಪ್ಯಾನ್‍ಗಳಲ್ಲಿ ಅಥವಾ ಚಿಕ್ಕಚಿಕ್ಕಮಡಿಗಳಲ್ಲಿ ಬಿತ್ತಲಾಗುತ್ತದೆ. ಬಿತ್ತಿದ 5-6 ದಿವಸಗಳಲ್ಲಿ ಅವು ಮೊಳೆಯುತ್ತವೆ. 3"-4" ಎತ್ತರದ ಸಸಿಗಳನ್ನು ಹೂವಿನ ಮಡಿಗಳಿಗೂ ಕುಂಡಕ್ಕೂ ವರ್ಗಾಯಿಸಿ ಗಿಡ ಎತ್ತರವಾಗಿ ಬೆಳೆದಂತೆಲ್ಲ ತುದಿ ಚಿವುಟುವುದು, ಗೊಬ್ಬರ ಕೊಡುವುದು, ಗುಳಿ ಕೆದಕುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬೀಜಗಳಿಂದ ಬೆಳೆಸಿದ ಗಿಡಗಳು ಹೂಗಳನ್ನು ಹೆಚ್ಚಿಗೆ ಬಿಡುವುವಾದರೂ ಹೂಗಳ ಗಾತ್ರ ತಾಯಿಗಿಡದ ಹೂವಿನಷ್ಟು ಇರುವುದಿಲ್ಲ.

ಕಾಂಡತುಂಡಗಳಿಂದ ವೃದ್ಧಿಮಾಡುವ ಕ್ರಮದಲ್ಲಿ ಗಿಡದ ಎರಡು ಪಕ್ಕಗಳಲ್ಲಿ ಹೊರಡುವ ಕವಲುಗಳು 3"-4" ಎತ್ತರ ಬೆಳೆದ ಮೇಲೆ ತಾಯಿ ಗಿಡದಿಂದ ಬೇರ್ಪಡಿಸಿ, ಮರಳಿನಲ್ಲಿ ನೆಟ್ಟು ಪ್ರತಿನಿತ್ಯ ನೀರು ಹಾಕಲಾಗುತ್ತದೆ. 20-25 ದಿನಗಳ ಅನಂತರ, ತುಂಡುಗಳು ಚೆನ್ನಾಗಿ ಬೇರುಬಿಟ್ಟು ಚಿಗುರತೊಡಗುವುವು. ಅನಂತರ, ಎಚ್ಚರಿಕೆಯಿಂದ ಈ ಗಿಡಗಳನ್ನು ಕುಂಡಗಳಿಗೆ ಅಥವಾ ಮಡಿಗಳಿಗೆ ವರ್ಗಾಯಿಸಲಾಗುತ್ತದೆ. ತುಂಡುಗಳಿಂದ ವೃದ್ಧಿಮಾಡಿದ ಗಿಡದ ಹೂಗಳು ಎಲ್ಲ ವಿಧಗಳಲ್ಲಿಯೂ ತಾಯಿಗಿಡದ ಹೂಗಳನ್ನೇ ಹೋಲುವುವು.

ಗೆಡ್ಡೆಗಳಿಂದ ವೃದ್ಧಿಮಾಡಿದ ಗಿಡದ ಹೂಗಳು ಎಲ್ಲ ವಿಧಗಳಲ್ಲಿಯೂ ತಾಯಿ ಗಿಡದ ಹೂಗಳನ್ನೇ ಹೋಲುವುವು.

ಗೆಡ್ಡೆಗಳಿಂದ ವೃದ್ಧಿಮಾಡುವಿಕೆಯಲ್ಲಿ ಉತ್ತಮಗಾತ್ರದ ಮತ್ತು ಒಳ್ಳೆಯ ಜಾತಿಯ ಹೂಗಳನ್ನು ಬಿಡುವ ತಳಿಗಳಿಂದ ಗೆಡ್ಡೆಗಳನ್ನು ಕತ್ತರಿಸಿ ಬಳಸಲಾಗುತ್ತದೆ. ನೆಡುವುದಕ್ಕೆ 6-8 ದಿವಸಗಳಿಗೆ ಮುಂಚಿತವಾಗಿ ಗೆಡ್ಡೆಗಳನ್ನು ಮರಳಿನಲ್ಲಿಟ್ಟು ನೀರು ಹಾಕಲಾಗುತ್ತದೆ. 5-6 ದಿವಸಗಳಲ್ಲಿ ಕಣ್ಣುಗಳಿಂದ ಮೊಳಕೆಗಳು ಕಾಣಿಸಿಕೊಳ್ಳುತ್ತವೆ. ಅನಂತರ ಗಡ್ಡೆಯನ್ನು ಸಣ್ಣ ಸಣ್ಣ ಚೂರುಗಳಾಗಿ, ಪ್ರತಿಯೊಂದು ಚೂರಿನಲ್ಲಿ ಕೊನೆಯಪಕ್ಷ 2-3 ಕಣ್ಣುಗಳಿರುವಂತೆ, ಕತ್ತರಿಸಲಾಗುತ್ತದೆ. ಚೂರುಗಳನ್ನು 12"-14" ಕುಂಡಗಳಲ್ಲಿ, ಮೊಳಕೆಯ ಭಾಗ ಮೇಲೆ ಕಾಣಿಸುವಂತೆ ನೆಡಲಾಗುವುದು. ನೆಟ್ಟ 7-8 ದಿವಸಗಳ ಬಳಿಕ ಎಲೆಗಳು ಹುಟ್ಟುವುವು. ಗೆಡ್ಡೆಗಳನ್ನು ನೆಡುವ ಪ್ರಾರಂಭದಲ್ಲಿ ಕುಂಡದ ಅರ್ಧಭಾಗದಷ್ಟು ಗೊಬ್ಬರದ ಮಿಶ್ರಣವನ್ನು (ಸಾರ್ವೆ ಗೊಬ್ಬರದ) ತುಂಬಲಾಗುತ್ತದೆ. 2 ಭಾಗ ಕುದುರೆ ಗೊಬ್ಬರ, 2 ಭಾಗ ಕೆಂಪುಮಣ್ಣು, 2 ಭಾಗ ಮರಳು, 2 ಭಾಗ ಎಲೆಗೊಬ್ಬರ, 1 ಭಾಗ ಗೋಡು ಮತ್ತು ¼ ಭಾಗ ಇದ್ದಲಿನ ಪುಡಿಗಳ ಮಿಶ್ರಣವೇ ಸಾರ್ವೆ ಗೊಬ್ಬರ. ಗಿಡ ಮೇಲೆ ಬೆಳೆದಂತೆ ಬಿಟ್ಟು ಸಾರ್ವೆ ಗೊಬ್ಬರವನ್ನು ಮೇಲ್ಪದರವಾಗಿ ಹೊರಗೆ ಕೊಡಬೇಕು. ಹುಚ್ಚೆಳ್ಳು ಮತ್ತು ಹೊಂಗೆ ಹಿಂಡಿಯ ದ್ರವಮಿಶ್ರಣವನ್ನು 4-5 ಸಲ ಹಾಕಲಾಗುವುದು. ಅನಂತರ 40-45ನೆಯ ದಿನದಲ್ಲಿ ಪ್ರತಿಗಿಡಕ್ಕೂ ಸುಮಾರು ಳಿ ಔನ್ಸಿನಷ್ಟು ಯೂರಿಯ ಮತ್ತು ಮೂಳೆಗೊಬ್ಬರಗಳ ಸಮಭಾಗ ಮಿಶ್ರಣವನ್ನು ಕೊಡಲಾಗುತ್ತದೆ. ಆಗಿಂದಾಗ್ಗೆ ತುದಿಗಳನ್ನು ಚಿವುಟುತ್ತಿದ್ದು ಗಿಡ 2'-2ಳಿ' ಎತ್ತರ ಬೆಳೆದಾಗ ಗಾಳಿಯ ಹೊಡೆತಕ್ಕೆ ಮತ್ತು ಹೂವಿನ ಭಾರಕ್ಕೆ ಬಾಗದಂತೆ ಬಿದಿರಿನ ದಬ್ಬೆಗಳನ್ನು ಗಿಡದ ಸುತ್ತಲೂ ಕಟ್ಟಲಾಗುತ್ತದೆ. 60-65 ದಿವಸಗಳ ಅನಂತರ ಹೂಗಳೂ ಒಂದೊಂದಾಗಿ ಅರಳಲು ಪ್ರಾರಂಭಿಸುವುವು. ಪ್ರತಿಗೊಂಚಲಿಗೂ ಹೀಗೆ ಮಾಡುವುದರಿಂದ ಹೂಗಳು ಒಳ್ಳೆಯ ಗಾತ್ರದವಾಗಿ ಬೆಳೆಯುತ್ತವೆ. ಸುಮಾರು 2 ತಿಂಗಳವರೆಗೂ ಗಿಡ ಹೂಗಳನ್ನು ಬಿಡುತ್ತಿರುತ್ತದೆ. ಹೂಗಳು ಅರಳಿದಂದಿನಿಂದ 12-15 ದಿವಸಗಳವರೆಗೂ ಬಾಡದೆ ಇರುವುವು. ಗಿಡ ಹೂಬಿಡುವುದುನ್ನು ನಿಲ್ಲಿಸಿದಮೇಲೆ ಗೆಡ್ಡೆಗಳನ್ನು ಕುಂಡಗಳಿಂದ ಹೊರತೆಗೆದು ಶೀತವಲ್ಲದ ಮತ್ತು ನೆರಳಿರುವ ಸ್ಥಳದಲ್ಲಿ ಮರಳಿನಲ್ಲಿ ಮತ್ತೆ ನೆಡುವವರೆಗೂ ಹೂತಿಡಬೇಕು.

ಡೇಲಿಯವನ್ನು ಭಾರತದ ಎಲ್ಲ ಭಾಗಗಳಲ್ಲೂ ಬೆಳೆಸಬಹುದು. ಆದರೆ ಅತಿ ಉಷ್ಣತೆಯನ್ನಾಗಲಿ ಅತಿಚಳಿಯನ್ನಾಗಲಿ ಇದು ತಡೆದುಕೊಳ್ಳಲಾರದು. ಡೇಲಿಯಕ್ಕೆ ಹಲವಾರು ರೀತಿಯ ಕ್ರಿಮಿಕೀಟಗಳ ಬೂಷ್ಟು ರೋಗಗಳ ಬಾಧೆಯುಂಟು. ಇವುಗಳಲ್ಲಿ ಮುಖ್ಯವಾದವು :

1. ಏಫಿಡ್ಡುಗಳು : ಇವು ಹಸಿರು ಮತ್ತು ಕಪ್ಪುಬಣ್ಣದ ಹುಳುಗಳು ಗಿಡದ ರಸವನ್ನು ಹೀರುತ್ತವೆ. ಇದರಿಂದ ಗಿಡದ ಬೆಳೆವಣಿಗೆ ಕುಂಠಿತವಾಗುವುದಲ್ಲದೆ ಡೇಲಿಯ ಶಬಲ (ಮೋಸೆóೀಯಿಕ್) ಎಂಬ ರೋಗಬರುತ್ತದೆ. 50% ಡಿ.ಡಿ.ಟಿ (1 ಪೌಂಡ್ ಡಿ.ಡಿ.ಟಿ + 30 ಗ್ಯಾಲನ್ ನೀರು) ಅಥವಾ ಹೊಗೆಸೊಪ್ಪಿನ ದ್ರಾವಣವನ್ನು (1 ಪೌಂಡ್ ಹೊಗೆಸೊಪ್ಪಿನಪುಡಿ+2 ಗ್ಯಾಲನ್ ನೀರು), 10 ದಿವಸಗಳಿಗೊಂದಾವರ್ತಿ ಸಿಂಪಡಿಸುವುದರಿಂದ ಇಲ್ಲವೆ 5% ಬಿ.ಎಚ್.ಸಿ. ಪುಡಿಯನ್ನು ಉದುರಿಸುವುದರಿಂದ ಕೀಟಗಳನ್ನು ತಡೆಗಟ್ಟಬಹುದು.

2. ನುಸಿ : ಇವು ಕರಿಯ ಇಲ್ಲವೆ ಮಾಸಲು ಕಂದುಬಣ್ಣದ ಬಹು ಸಣ್ಣ ಕೀಟಗಳು. ಇವುಗಳ ಮರಿಗಳ ಬಣ್ಣ ಹಳದಿ. ಇವು ಹೂಗಳನ್ನು ತಿನ್ನುತ್ತದೆ. ಇದರಿಂದ ಗಿಡಕ್ಕೆ ವೈರಸ್ ವಿಲ್ಟ್ ಎಂಬ ರೋಗ ಬರುತ್ತದಲ್ಲದೆ ಗಿಡ ಇದ್ದಕ್ಕಿದಂತೆ ಬಾಡಿಹೋಗುತ್ತದೆ. 50% ಡಿ.ಡಿ.ಟಿ ಅಥವಾ ಫಾಲಿಡಾಲನ್ನು (1mಟ. +1 ಗ್ಯಾಲನ್ ನೀರು) ಸಿಂಪಡಿಸಬೇಕು.

3. ರೆಡ್‍ಸ್ಟೈಡರ್ ಮೈಟ್ಸ್ (ಟೆಟ್ರಾನಿಕಸ್ ಟೆಲ್ಯಾರಿಯಸ್) :ಇವು ಮಾಸಲು ಹಳದಿ ಮತ್ತು ಹಸಿರು ಬಣ್ಣದವು. ಇವುಗಳ ಉದ್ದ 1/60". ಹವಾಗುಣ ಬೆಚ್ಚಗಿರುವ ಕಾಲಗಳಲ್ಲಿ ಇವುಗಳ ಹಾವಳಿ ಹೆಚ್ಚು. ಇವು ಎಲೆಗಳ ತಳಭಾಗದಲ್ಲಿದ್ದು ರಸವನ್ನು ಹೀರುವುದರಿಂದ ಎಲೆಗಳು ಹಳದಿ ಇಲ್ಲವೆ ಬೂದುಬಣ್ಣಕ್ಕೆ ತಿರುಗಿ ಒಣಗಿಹೋಗುತ್ತವೆ. 5% ಡಿ.ಡಿ.ಟಿ. 1% ಪ್ಯಾರಾತಿಯನ್ ಇಲ್ಲವೆ, 5% ಮ್ಯಾಲಾತಿಯನ್ ಪುಡಿಗಳನ್ನು 8 ದಿನಗಳಿಗೊಂದಾವರ್ತಿ ಉದುರಿಸುವುದರಿಂದ ನಿಯಂತ್ರಿಸಬಹುದು.

4. ಕ್ಯಾಪ್ಸಿಡ್ ತಿಗಣೆಗಳು : ಇವು ಹಸುರುಬಣ್ಣದವು. ಅಲ್ಲಲ್ಲಿ ಕಂದು ಬಣ್ಣದ ಚುಕ್ಕೆಗಳು ಉಂಟು. ಇವುಗಳ ಉದ್ದ ¼" ಇವು ಎಲೆ ಮತ್ತು ಮೊಗ್ಗುಗಳನ್ನು ತಿಂದು ನಾಶಪಡಿಸುತ್ತವೆ. 50% ಬಿ.ಎಚ್.ಸಿ. ಸಿಂಪಡಿಸಬೇಕು.

5. ತಂತಿಹುಳುಗಳು (ವೈರ್‍ವಮ್ರ್ಸ್) : ಇವು ಭೂಮಿಯೊಳಗೆ ವಾಸಿಸುತ್ತಿದ್ದು ಗೆಡ್ಡೆಗಳನ್ನು ಕೊರೆದು ತಿನ್ನುತ್ತವೆ. ಗೆಡ್ಡೆ ನೆಡುವುದಕ್ಕೆ ಮುಂಚೆ ಪಾತಿಗಳಿಗೆ 5% ಬಿ.ಎಚ್.ಸಿ. ಪುಡಿಯನ್ನು ಉದುರಿಸಬೇಕು.

6. ಇರುವೆಗಳು : ಇವು ಗಿಡಗಳಿಗೆ ನೇರವಾಗಿ ಅಪಾಯಕಾರಿಗಳಲ್ಲದಿದ್ದರೂ ಏಫಿಡ್ಡುಗಳು ಗಿಡದಿಂದ ಗಿಡಕ್ಕೆ ಹರಡಲು ಸಹಾಯ ಮಾಡುತ್ತವೆ. ಗಿಡದ ಬುಡದ ಸುತ್ತಲೂ ಗ್ಯಾಮಕ್ಸೇನ್ ಅಥವಾ ಬಿ.ಎಚ್.ಸಿ ಪುಡಿಯನ್ನು ಉದುರಿಸುವುದರಿಂದ ಇರುವೆಗಳನ್ನು ತಡೆಗಟ್ಟಬಹುದು.

7. ಡೇಲಿಯ ಸ್ಮಟ್ಸ್ : ಎಂಟೆಲೋ ಮಡೇಲಿಯಿ ಎಂಬ ಬೂಷ್ಟು ರೋಗ ಶೀತ ಹವೆಯ ಸಮಯದಲ್ಲಿ ಬರುತ್ತದೆ. ಮೊದಮೊದಲು ಎಲೆಗಳ ಮೇಲ್ಭಾಗದಲ್ಲಿ ಹಸಿರು ಮಿಶ್ರಿತ ಬೂದಿಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಅನಂತರ ಚುಕ್ಕಿಗಳು ಮಾಸಲು ಕಂದುಬಣ್ಣಕ್ಕೆ ತಿರುಗಿ ಎಲೆಯ ಮೇಲೆ ರಂಧ್ರಗಳು ಉಂಟಾಗುವುವು. ಕಾಲಕ್ರಮೇಣ ಗಿಡ ಸಾಯುತ್ತದೆ. 15 ದಿವಸಗಳಿಗೊಂದಾವರ್ತಿ 2-3 ಸಾರಿ ಬೋರ್ಡೋ ಮಿಶ್ರಣವನ್ನು ಸಿಂಪಡಿಸುವುದರಿಂದ ರೋಗವನ್ನು ಹತೋಟಿಯಲ್ಲಿಡಬಹುದು.

8. ಡೇಲಿಯ ಕ್ರೌನ್‍ಗಾಲ್ : ಟ್ಯುಮೆಫೇಸಿಯನ್ಸ್ ಎಂಬ ಬ್ಯಾಕ್ಟೀರಿಯದಿಂದ ಉಂಟಾಗುತ್ತದೆ. ಗಿಡದ ಬುಡದಲ್ಲಿ ಬೂದು ಬಣ್ಣದ ಅಣಬೆಗಳು ಬೆಳೆದುಕೊಂಡಿವುದು ಈ ರೋಗದ ಲಕ್ಷಣ. ರೋಗ ಅಷ್ಟು ಅಪಾಯಕಾರಿಯಲ್ಲದಿದ್ದರೂ ರೋಗ ತಗುಲಿರುವ ಗಿಡಗಳನ್ನು ನಾಶಪಡಿಸಬೇಕು ; ಅಲ್ಲದೆ ರೋಗಪೀಡಿತ ಗೆಡ್ಡೆಗಳನ್ನು ಉಪಯೋಗಿಸಬಾರದು. (ಕೆ.)