ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತನ್ಬರ್ಜಿಯ

ವಿಕಿಸೋರ್ಸ್ದಿಂದ

ತನ್‍ಬರ್ಜಿಯ - ಅಕ್ಯಾಂತೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಇದರಲ್ಲಿ ಸುಮಾರು ಎಪ್ಪತ್ತೈದು ಪ್ರಭೇದಗಳಿವೆ. ಆಫ್ರಿಕದ ಉಷ್ಣ ಪ್ರದೇಶ. ಆಸ್ಟ್ರೇಲಿಯ, ಭಾರತ, ಮಲಯ ಬರ್ಮ, ಹಿಮಾಲಯಗಳಲ್ಲೆಲ್ಲ ಇವುಗಳ ವ್ಯಾಪ್ತಿ ಉಂಟು. ಇವೆಲ್ಲವೂ ಪ್ರಧಾನವಾಗಿ ಬಹುವಾರ್ಷಿಕ ಸಸ್ಯಗಳು. ಕೆಲವು ಬಳ್ಳಿಯಂತೆ ಹಬ್ಬಿಕೊಂಡು ಬೆಳೆಯುವುದಾದರೆ ಮತ್ತೆ ಕೆಲವು ಪೊದೆಗಳು, ಜಾಳಂದರ, ಬೇಲಿ, ಸಣ್ಣ ಮರಗಳ ಮೇಲೆ ಹಬ್ಬಿಸುವುದಕ್ಕೂ ವೆರಾಂಡ, ಗ್ರೀನ್ ಹೌಸ್, ಇತ್ಯಾದಿ ಸ್ಥಳಗಳಲ್ಲಿ ಬೆಳೆಯುವುದಕ್ಕೂ ಉತ್ತಮ ಗಿಡಗಳೆನಿಸಿವೆ. ಇವುಗಳ ಎಲೆಗಳು ಸರಳ ರೀತಿಯವು: ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ ಎಲೆಯ ಅಂಚು ಗರಗಸದಂತೆ. ಹೂಗಳು ಎಲೆಗಳ ಕಂಕುಳಲ್ಲಿ ಒಂಟೊಂಟಿಯಾಗಿ ಅಥವಾ ರೇಸೀಮ್ ಮಾದರಿಯ ಹೂಗೊಂಚಲುಗಳಲ್ಲಿ ಅರಳುವುವು. ಹೂಗಳ ಬಣ್ಣ ನೀಲಿ, ಹಳದಿ, ಊದಾ ಅಥವಾ ಬಿಳಿ. ಪುಷ್ಪ ಪತ್ರದ ಸುತ್ತ ದೊಡ್ಡಗಾತ್ರದ ಎರಡು ಬ್ರಾಕ್ಟುಗಳಿವೆ. ಪುಷ್ಪಗಳ ಆಕಾರ ಕೊಳವೆ ಇಲ್ಲವೆ ಗಂಟೆಯಂತೆ. ಕೇಸರಗಳು ನಾಲ್ಕುಪುಷ್ಪದಳ ಸಮೂಹದ ಗಂಟಲಿಗೆ ಅಂಟಿಕೊಂಡಿವೆ. ಇವುಗಳಲ್ಲಿ ಎರಡು ಕೇಸರಗಳು ಮಿಕ್ಕೆರಡಕ್ಕಿಂತ ಗಾತ್ರದಲ್ಲಿ ದೊಡ್ಡವು. ಅಂಡಾಶಯ ಎರಡು ಕಾರ್ಪೆಲುಗಳಿಂದ ಕೂಡಿದೆ. ಇದು ಉಚ್ಚಸ್ಥಾನದ್ದು.

ತನ್ ಬರ್ಜಿಯದ ಮುಖ್ಯ ಪ್ರಭೇದಗಳು ಈ ರೀತಿ ಇವೆ.

1. ತ. ಅಫಿನಿಸ್: ಇದು ಆಫ್ರಿಕದ ಮೂಲವಾಸಿ. 10'-12' ಎತ್ತರಕ್ಕೆ ಪೊದೆಯಂತೆ ಬೆಳೆಯುತ್ತದೆ. ಕಾಂಡ ನಾಲ್ಕು ಮೂಲೆಯದು. ಹೂವು ದಟ್ಟ ಊದಾ ಬಣ್ಣದ್ದು ಹೂವಿನ ಕೇಂದ್ರ ಭಾಗ ಮಾತ್ರ ಹಳದಿ ಬಣ್ಣಕ್ಕಿದೆ.

2. ತ. ಏಲೇಟ: ಇದಕ್ಕೆ ಬ್ಲಾಕ್ ಐಡ್ ಸುಸಾನ್ ಎಂಬ ಹೆಸರುಂಟು. ಇದು ಕೂಡ ಹಬ್ಬಿ ಬೆಳೆಯುವ ಬಗೆಯದು. ಎಲೆಗಳ ತೊಟ್ಟುಗಳು ಎಲೆಗಳ ಅಲಗಿನಷ್ಟೇ ಉದ್ದ ಇವೆ. ಹೂಗಳು ಎಲೆಗಳ ಕಂಕುಳಲ್ಲಿ ಅರಳುತ್ತವೆ. ಇದರಲ್ಲಿ ಆಲ್ಬ, ಆರೆಂಟಿಯಾಕ, ಡಾಡ್‍ಸಿಯೈ, ಬೇಕರೈ, ಫ್ರೈಯೆರಿ, ಸಲ್ಫೂರಿಯ ಮತ್ತು ಲೂಟಿಯ ಎಂಬ ಬಗೆಗಳುಂಟು.

3 ತ. ಫ್ರಾಗ್ರೆನ್ಸ್ : ಇದು ಭಾರತದ ಮತ್ತು ಮಲೆಯಗಳ ಮೂಲನಿವಾಸಿ. ಡೊಂಕು ಡೊಂಕಾಗಿ ಹಬ್ಬಿ ಬೆಳೆಯುವ ಕಾಂಡವೂ ತೆಳುವಾದ. ಉದ್ದವಾದ ತ್ರಿಕೋನಾಕಾರದ ಎಲೆಗಳೂ ಇದರ ಲಕ್ಷಣಗಳು. ಹೂಗಳ ಬಣ್ಣ ಬಿಳಿ. ಇದು ಬೇಸಿಗೆಯಲ್ಲಿ ಹೂವು ಬಿಡುವುದು.

4 ತ. ಇರೆಕ್ಟ : ಇದು ಆಫ್ರಿಕದ ಉಷ್ಣ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದರ ಎತ್ತರ ಸು. 3' ರೆಂಬೆಗಳಿಂದ ತುಂಬಿ ಹರಡಿಕೊಂಡು ಪೊದೆಯಾಗಿ ಬೆಳೆಯುತ್ತದೆ. ಹೂಗಳು ಎಲೆಗಳ ಕಂಕುಳಲ್ಲಿ ಇಲ್ಲವೆ ರೆಂಬೆಗಳ ತುದಿಗಳಲ್ಲಿ ಅರಳುವುವು. ಇದರಲ್ಲಿ ಆಲ್ಬ ಮತ್ತು ಸೀರೊಲಿಯ ಎಂಬ ಎರಡು ಬಗೆಗಳುಂಟು.

5 ತ. ನೇಟಾಲೆನ್ಸಿಸ್ : ಇದು ಆಫ್ರಿಕ ಮತ್ತು ಆಸ್ಟ್ರೇಲಿಯಗಳಲ್ಲಿ ಕಾಣದೊರೆಯುವುದು. 2” ಗಿಂತ ಹೆಚ್ಚು ಎತ್ತರ ಬೆಳೆಯುತ್ತದೆ. ಹೂಗಳ ಬಣ್ಣ ತಿಳಿ ನೀಲಿ. ದಳಸಮೂಹದ ಗಂಟಲು ಭಾಗ ಮಾತ್ರ ಹಳದಿ ಬಣ್ಣಕ್ಕಿದೆ.

6 ತ. ಗ್ರ್ಯಾಂಡಿಪ್ಲೋರ : ಇದು ಭಾರತ ಮತ್ತು ಬರ್ಮಾಗಳ ಮೂಲ ನಿವಾಸಿ. ಇದಕ್ಕೆ ನೀಲಲತಾ ಎಂಬ ಹೆಸರುಂಟು. ಇದು ಬಲು ಎತ್ತರಕ್ಕೆ ಬೆಳೆಯುವುದು. ಹೂಗಳು ರೇಸಿóೀಮ್ ಮಾದರಿಯ ಗೊಂಚಲುಗಳಲ್ಲಿ ಜೋಡಣೆಗೊಂಡಿವೆ. ಹೂಗಳ ಬಣ್ಣ ತಿಳಿ ನೀಲಿ. ದಳ ಸಮೂಹದ ಗಂಟಲು ಭಾಗ ಬಿಳಿ. ಹೂಗಳು ಬೇಸಿಗೆ ಮತ್ತು ಶರದೃತುಗಳಲ್ಲಿ ಅರಳುವುವು.

7 ತ. ಕಾಕ್ಸಿನಿಯ : ಇದು ಹಿಮಾಲಯ ಮತ್ತು ಬರ್ಮಾಗಳ ಮೂಲ ನಿವಾಸಿ. ಇದು ಕೂಡ ಬಹಳ ಎತ್ತರ ಬೆಳೆಯುವ ಬಳ್ಳಿ. ಎಲೆಗಳ ಆಕಾರ ಅಂಡದಂತೆ ಹೂಗಳು ಶರದೃತು ಮತ್ತು ಚಳಿಗಾಲದಲ್ಲಿ ಅರಳುತ್ತವೆ.

8 ತ. ಮೈಸೂರೆನ್ಸಿಸ್ : ಇದರ ತವರು ಭಾರತ. ಉದ್ದವಾಗಿದ್ದು ತೂಗಾಡುತ್ತಿರುವ ರೆಂಬೆಗಳಿಂದ ಕೂಡಿ ಹಬ್ಬಿ ಬೆಳೆಯುವ ಪೊದೆ ಸಸ್ಯ ಇದು. ಹೂಗಳು ಉದ್ದನೆಯ ರೇಸಿóೀಮ್ ಗೊಂಚಲುಗಳಲ್ಲಿ ಜೋಡಣೆಗಳಿವೆ. ಹೂಗಳ ಬಣ್ಣ ಹಳದಿ. ಹೂಗಳು ವರ್ಷದ ಎಲ್ಲ ಕಾಲಗಳಲ್ಲಿಯೂ ಅರಳುವುವು. (ಎಸ್.ಐ.ಎಚ್.)