ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಪತಿ

ವಿಕಿಸೋರ್ಸ್ದಿಂದ

ತಪತಿ - ಪಶ್ಚಿಮ ಭಾರತ ಒಂದು ಪ್ರಮುಖ ನದಿ. ತಾಪ ಎಂಬ ಸಂಸ್ಕøತ ಪದದಿಂದ ತಪತಿ ಎಂಬ ಹೆಸರು ಬಂದಿದೆಯೆಂದು ಹೇಳಲಾಗಿದೆ. ಸೂರ್ಯ ತನ್ನ ತಾಪವನ್ನು ತಾನೇ ಸಹಿಲಾರದೆ, ಅದರಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ತಪತಿ ನದಿಯನ್ನು ಸೃಷ್ಟಿಸಿದನೆಂದು ಹೇಳಲಾಗಿದೆ. ಸಾತ್ಪುರಾ ಶ್ರೇಣಿಯಲ್ಲಿ ಮೂಲ್ತಾಯ್ (ಮೂಲತಾಪಿ) ಸರೋವರದಲ್ಲಿ ಈ ನದಿ ಉಗಮಿಸಿ ಪಶ್ಚಿಮಾಭಿಮುಖವಾಗಿ ಹರಿದು ನಿಮಾರ್‍ನ ಕಾಲಿಬೆಟ್ ಮತ್ತು ಬೀರಾರಿನ ಚಿಕಲ್ದಾ ಶ್ರೇಣಿಗಳ ನಡುವೆ ಸಾತ್ಪುರಾ ಬೆಟ್ಟಗಳ ಕಡಿದಾದ ಬಂಡೆಗಳ ಮೇಲಿಂದ ಧುಮುಕಿ ಮುಂದುವರಿಯುತ್ತದೆ. ನದಿಯ ಆಚೀಚೆ ಕಡಿದಾದ ದಂಡೆಗಳೂ ಮೇಲೆ ಎತ್ತರದಲ್ಲಿ ದಟ್ಟವಾದ ಕಾಡುಗಳೂ ಇವೆ. ಬಂಡೆಗಲ್ಲಿನ ಕಿರಿದಾದ ಪಾತ್ರದಲ್ಲಿ ಹರಿಯುವ ನದಿ ತನ್ನ ಉಗಮದಿಂದ 192 ಕಿಮೀ. ದೂರದಲ್ಲಿ ಮಧ್ಯ ಪ್ರದೇಶದ ಖಾಂಡ್ವಾ ಮತ್ತು ಖಾರ್ಗೋನೆ ಜಿಲ್ಲೆಯ ನಿಮಾರ್ ಪ್ರದೇಶವನ್ನು ಪ್ರವೇಶಿಸುತ್ತದೆ. ಮುಂದೆಯೂ ಸುಮಾರು 48 ಕಿಮೀ. ದೂರ ಇದು ಕಿರಿದಾದ ಕಣಿವೆಯಲ್ಲಿ ಹರಿಯುತ್ತದೆ. ಬರ್ಹಾನ್‍ಪುರಕ್ಕೆ ಕೆಲವು ಕಿಮೀ. ಮೇಲೆ ನದಿಯ ಪಾತ್ರ ವಿಶಾಲವಾಗುತ್ತದೆ. ಸಾತ್ಪುರಾ ಬೆಟ್ಟಗಳ ಶ್ರೇಣಿಯನ್ನು ಬಿಟ್ಟು ಫಲವತ್ತಾದ ಮೆಕ್ಕಲುಮಣ್ಣಿನ ಮೈದಾನವನ್ನು ಪ್ರವೇಶಿಸುತ್ತದೆ. 32 ಕಿಮೀ. ಅಗಲದ ಈ ಮೈದಾನದ ನಡುವೆ ತಪತಿ ನದಿ ಹರಿದು, ಬರ್ಹಾನ್‍ಪುರ ಮತ್ತು ಜೈನಾಬಾದ್ ಪಟ್ಟಣಗಳನ್ನು ದಾಟಿ ಮಹಾರಾಷ್ಟ್ರದ ಖಾಂದೇಶ ಪ್ರದೇಶದಲ್ಲಿ ಮುಂದುವರೆಯುತ್ತದೆ. (ಎಸ್.ಎನ್‍ಎ.ಆರ್.)

ಇಲ್ಲಿ ಎಡದಂಡೆಯಲ್ಲಿ ತಪತಿಯನ್ನು ಸೇರುವ ಉಪನದಿ ಪೂರ್ಣಾ. ಅನಂತರ ಇದು ಬೀರಾರಿನ ಬೆಟ್ಟಗಳಿಂದ 240 ಕಿಮೀ. ದೂರ ಹರಿದು ಸಾತ್ಪುರಾ ಮತ್ತು ಸತ್ಮಾಲಾ ಶ್ರೇಣಿಗಳ ನಡುವಣ ವಿಶಾಲವಾದ ಫಲವತ್ತಾದ ಕಣಿವೆಯಲ್ಲಿ ಮುಂದೆ ಸಾಗುತ್ತದೆ. ಅನಂತರ ನದೀಕಣಿವೆ ಕಿರಿದಾಗುತ್ತದೆ. ಮುಂದೆ ನದಿ 96 ಕಿಮೀ. ದೂರ ಅರಣ್ಯ ಪ್ರದೇಶದಲ್ಲಿ ಸಾಗಿ ಸೂರತ್ ಜಿಲ್ಲೆಯ ಮೆಕ್ಕಲು ಮಣ್ಣಿನ ನೆಲದ ಮೂಲಕ ದಕ್ಷಿಣಾಭಿಮುಖವಾಗಿ ಹರಿದು ಸಮುದ್ರವನ್ನು ಸೇರುತ್ತದೆ. ನದಿಯ ಕೊನೆಯ 48 ಕಿಮೀ. ದೂರ ಅದು ಸಮುದ್ರದ ಭರತಕ್ಕೆ ಒಳಗಾಗುತ್ತದೆ. ನದಿಯ ದಂಡೆಗಳು 27 ರಿಂದ 54 ಮೀ. ಗಳಷ್ಟು ಎತ್ತರವಾಗಿರುವುದರಿಂದ ಇದು ನೀರಾವರಿಗೆ ಅಷ್ಟೇನೂ ಉಪಯುಕ್ತವಾಗಿಲ್ಲ. ನದಿಯ ಪಾತ್ರದಲ್ಲಿ ಅಲ್ಲಲ್ಲಿ ಬಂಡೆಗಳು ಅಡ್ಡಹಾಯ್ದಿವೆ. ಸಮುದ್ರದಿಂದ 32 ಕಿಮೀ. ದೂರ ಮಾತ್ರ ಈ ನದಿ ಯಾನಯೋಗ್ಯವಾಗಿದೆ.

ತಪತಿ ನದಿ ಸಾತ್ಪುರಾ ಬೆಟ್ಟಗಳ ತಪ್ಪಲಿನ ಸನಿಹದಲ್ಲೇ ಹರಿಯುವುದರಿಂದ ಅದರ ಬಲದಂಡೆಯ ಉಪನದಿಗಳೆಲ್ಲ ಬಲು ಸಣ್ಣವು. ಆದರೆ ಎಡದಂಡೆಯಲ್ಲಿ ಪೂರ್ಣಾ ನದಿಯ ಸಂಗಮದ ಅನಂತರ ಇನ್ನು ಕೆಲವು ಉಪನದಿಗಳು ಇದರೊಂದಿಗೆ ಕೂಡಿಕೊಳ್ಳುತ್ತವೆ. ಅವುಗಳ ಪೈಕಿ ಗಿರ್ನಾದ ಉದ್ದ 240 ಕಿಮೀ. ಇದು ಬಗ್ಲಾನ್ ಬೆಟ್ಟದಿಂದ ಹರಿದು ಬರುತ್ತದೆ. ಇತರ ಮುಖ್ಯ ಉಪನದಿಗಳು ಬೋರಿ, ಪಂಝ್ರಾ ಮತ್ತು ಬೋರಾಯ್. ಇವು ಪಶ್ಚಿಮ ಘಟ್ಟಗಳ ಉತ್ತರದ ತಲೆಯ ಭಾಗದಿಂದ ಹರಿದುಬರುತ್ತದೆ. ಗಿರ್ನಾ ಮತ್ತು ಪಂಝ್ರಾ ನದಿಗಳಿಗೆ ಹಲವು ಎಡೆಗಳಲ್ಲಿ ನೀರಾವರಿಗಾಗಿ ಅಣೆಕಟ್ಟು ಕಟ್ಟಲಾಗಿದೆ.

ತಪತಿ ನದಿಯ ಉದ್ದ 670 ಕಿಮೀ. ಕೆಳದಂಡೆ ಪ್ರದೇಶಗಳಲ್ಲಿ ಇದರ ಪ್ರವಾಹದಿಂದ ಆಗಾಗ್ಗೆ ಅನಾಹುತಗಳಾಗುವುದುಂಟು. ಸೂರತ್ ನಗರ ಹಲವು ಬಾರಿ ಇದರಿಂದ ಅಪಾಯಕ್ಕೆ ಒಳಗಾಗಿದೆ. ತಪತಿಯನ್ನು ಆ ಪ್ರದೇಶದ ಜನರು ಪವಿತ್ರ ನದಿಯೆಂದು ಪರಿಗಣಿಸುತ್ತಾರೆ. ಚಾಂಗದೇವ್, ಭೋಧಾನ್-ಇವು ಈ ನದಿಯ ದಡದಲ್ಲಿರುವ ಎರಡು ಪ್ರಮುಖ ಯಾತ್ರಾಸ್ಥಳಗಳು. ತಾಲ್ನೇನ್ ಕೋಟೆ ಮತ್ತು ಸೂರತ್ ನಗರ ಇವು ಈ ನದಿಯ ದಂಡೆಯ ಮೇಲಿರುವ ಎರಡು ಐತಿಹಾಸಿಕ ಪ್ರಾಮುಖ್ಯವುಳ್ಳ ಸ್ಥಳಗಳು. ನದಿಯ ಮುಖದಲ್ಲಿದ್ದ ಸುವಾಳಿ (ಸ್ವಾಳಿ) ಬಂದರು ಹಿಂದೆ ಪ್ರಸಿದ್ಧವಾಗಿತ್ತು. ಬ್ರೀಟಿಷರಿಗೂ ಪೋರ್ಚುಗೀಸರಿಗೂ ನಡುವೆ ಈ ಸ್ಥಳದಲ್ಲಿ ನೌಕಾಕದನ ನಡೆದಿತ್ತು. ಆದರೆ ಈಗ ಈ ಬಂದರು ಮಣ್ಣಿನಲ್ಲಿ ಹೂತುಹೋಗಿರವುದರಿಂದ ನಿರ್ಜನವಾಗಿದೆ.