ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತಾಜ್ಮಹಲ್
ತಾಜ್ಮಹಲ್
ಪ್ರಪಂಚದಲ್ಲಿಯೇ ಅತ್ಯಂತ ಸುಂದರ ಕಲಾಕೃತಿಗಳಲ್ಲೊಂದು ಜಗತ್ಪ್ರಸಿದ್ಧವಾಗಿರುವ ಸಮಾಧಿಮಂದಿರ, ಆಗ್ರದಲ್ಲಿ ಯಮುನಾ ನದಿಯ ದಡದ ಮೇಲಿದೆ. ಮೊಗಲ್ ಚಕ್ರವರ್ತಿ ಷಹಜಹಾನನ ಮೆಚ್ಚಿನ ರಾಣಿ ಮಮ್ತಾಜ್ ಮಹಲಳ ಗೋರಿಯ ಮೇಲೆ ನಿರ್ಮಿತವಾದ ಈ ಮಂದಿರಕ್ಕೆ ಆಕೆಯದೇ ಹೆಸರು. ಷಹಜಹಾನ್ ಇನ್ನೂ ರಾಜಕುಮಾರನಾಗಿದ್ದಾಗಲೇ ಅಂದರೆ ಅವನ ತಂದೆ ಜಹಂಗೀರ್ ಚಕ್ರವರ್ತಿಯಾಗಿದ್ದಾಗ 1612ರಲ್ಲಿ ಮುಮ್ತಾಜಳನ್ನು ಮದುವೆಯಾದ, ಆಗ ಜಹಂಗೀರನೇ ತನ್ನ ಸೊಸೆಗೆ ಮಮ್ತಾಜ್ ಮಹಲ್ (ಅರಮನೆಯ ಅಕ್ಕರೆಯ ಮಕುಟ) ಎಂಬ ಬಿರುದನ್ನಿತ್ತ. ಈ ಬಿರುದಿನಿಂದಲೇ ಆಕೆ ಜಗತ್ಪ್ರಸಿದ್ಧಳಾಗಿರುವುದು. ಇವರ ವೈವಾಹಿಕ ಜೀವನ ತುಂಬ ಅನ್ಯೋನ್ಯವಾಗಿತ್ತು. ಒಬ್ಬರನ್ನೊಬ್ಬರು ಅತ್ಯಂತ ವಿಶ್ವಾಸದಿಂದ ಕಂಡುಕೊಂಡರು. ಆದರೆ ಷಹಜಹಾನ್ ಚಕ್ರವರ್ತಿಯಾದ ಮೂರನೆಯ ವರ್ಷ ಎಂದರೆ 1630ರಲ್ಲಿ ದಂಗೆಯೊಂದನ್ನಡಗಿಸಲು ಬರ್ಹಾಂಪುರಕ್ಕೆ ಹೋಗಿದ್ದು ವಿಜಯೋತ್ಸಾಹದಲ್ಲಿದ್ದಾಗ ಅವನನ್ನೇ ಹಿಂಬಾಲಿಸಿದ್ದ ಮಮ್ತಾಜ್ ತನ್ನ ಹದಿನಾಲ್ಕನೆಯ ಮಗುವಿಗೆ ಜನ್ಮವಿತ್ತು ಅದೇ ಜೂನ್ 7ರಂದು ಅಸು ನೀಗಿದಳು. ಅವಳನ್ನುಳಿಸಿಕೊಳ್ಳಲು ಷಹಜಹಾನ್ ನಡೆಸಿದ ಪ್ರಯತ್ನಗಳೆಲ್ಲ ಮಣ್ಣುಪಾಲಾಯಿತು. ಅವರ ಹತ್ತೊಂಬತ್ತು ವರ್ಷಗಳ ವೈವಾಹಿಕ ಜೀವನ ಕೊನೆಗೊಂಡಿತು.
ಚಕ್ರವರ್ತಿ ಭರಿಸಲಾಗದ ದುಃಖದಿಂದ ಅತೀವವಾಗಿ ಕ್ಷೋಭೆಗೊಂಡ, ಶೋಕ ಸೂಚಕವಾಗಿ ಬಿಳಿಯ ಸರಳ ಉಡುಪು ಮಾತ್ರ ಧರಿಸಲಾರಂಭಿಸಿದ; ಏಕಾಂತ ವಾಸದಲ್ಲಿರಲಾರಂಭಿಸಿದ. ಕೇವಲ ಕೆಲವೇ ತಿಂಗಳುಗಳಲ್ಲಿ ಈ ದುಃಖದಿಂದ ಅವನ ಗಡ್ಡ ಬೆಳ್ಳಗಾಯಿತಂತೆ. ಇಡೀ ಚಕ್ರಾಧಿಪತ್ಯವೇ ಗೋಳಿಟ್ಟಿತು. ಅರಮನೆಯಲ್ಲಿ, ರಾಜ್ಯದಲ್ಲಿ ಅಮೋದ ಪ್ರಮೋದಗಳು ನಿಂತುವು. ಮಮ್ತಾಜಳ ನೆನಪಿಗಾಗಿ ಹಿಂದೆ ಯಾರೂ ಕಂಡರಿಯದಂಥ ಸ್ಮಾರಕವೊಂದನ್ನು ನಿರ್ಮಿಸಲು ನಿಶ್ಚಯಿಸಿದ ಚಕ್ರವರ್ತಿ ಬರ್ಹಾಂಪುರದಲ್ಲಿ ತಾತ್ಕಾಲಿಕವಾಗಿ ಗೋರಿಯೊಂದರಲ್ಲಿರಿಸಿದ್ಧ ಮಮ್ತಾಜಳ ದೇಹವನ್ನು ಆರು ತಿಂಗಳ ಅನಂತರ ಆಗ್ರಾಕ್ಕೆ ತರಿಸಿದ. ಸಮಾಧಿ ಮಂದಿರ ನಿರ್ಮಾಣಕ್ಕಾಗಿ ಯಮುನಾ ನದಿಯ ದಂಡೆಯ ಮೇಲೆ ವಿಶಾಲವಾದ ಸೂಕ್ತವಾದ ಸ್ಥಳವನ್ನಾರಿಸಿ ಅಲ್ಲಿ ಗೋರಿ ಮಾಡಲಾಯಿತು. ಅನಂತರ ಅದರ ಮೇಲೆ ಮಮ್ತಾಜಳ ಹೆಸರು ಅಮರವಾಗುವಂತೆ ಅತ್ಯಂತ ಭವ್ಯವಾದ ಮಂದಿರ ನಿರ್ಮಾಣವಾಯಿತು.
ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತನಾಗಿದ್ದ ಚಕ್ರವರ್ತಿ, ವಾಸ್ತುಶಿಲ್ಪ ನಿರ್ಮಾಣದಲ್ಲಿ ಅವನಿಗಿದ್ದ ಅತೀವ ಆಸಕ್ತಿ, ಆ ಹೊತ್ತಿಗಾಗಲೇ ವೈಭವಯುತವಾಗಿ ಬೆಳೆದುಬಂದು ಹಲವು ಹಂತಗಳನ್ನು ತಲಪಿದ್ದ ಮೊಗಲ್ ಶೈಲಿಯ ಮಾದರಿಗಳು, ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಅತ್ಯಂತ ಪ್ರೀತಿಪಾತ್ರಳಾದ ರಾಣಿಯ ನೆನಪಿಗೆ ಅನುಪಮವಾದ ಸ್ಮಾರಕವನ್ನು ನಿಲ್ಲಿಸುವ ಭಾವೋದ್ರೇಕ, ಇವುಗಳೊಂದಿಗೆ ಅರಿತ ನುರಿತ ಮೇಧಾವಿ ಶಿಲ್ಪಿಗಳ ತಂಡ ಎಲ್ಲವೂ ಒಂದುಗೂಡಿ ಈ ಬೃಹದ್ ವಾಸ್ತು ಕೃತಿಗೆ ಕಾರಣವಾದುವು. ಸುಮಾರು ಇಪ್ಪತ್ತು ವರ್ಷಗಳ ಕಾಲ ಇಪ್ಪತ್ತು ಸಹಸ್ರ ಜನರ ಎಡಬಿಡೆ ದುಡಿಮೆಯಿಂದ ರೂಪುಗೊಂಡ ಈ ಮಂದಿರದಲ್ಲಿ ಅತ್ಯುತ್ತಮವಾದ ಹಾಲುಬಿಳುಪಿನ ಅಮೃತಶಿಲೆ, ಕೆಂಪು ಮರಳುಗಲ್ಲು, ಬಗೆಬಗೆಯ ವರ್ಣದ ಅತ್ಯಂತ ಬೆಲೆಬಾಳುವ ಅಸಂಖ್ಯಾತ ಪ್ರಶಸ್ತ ಶಿಲೆಗಳನ್ನು ಬಳಸಲಾಗಿದೆ. ಈ ಕಟ್ಟಡವನ್ನು ರೂಪಿಸಿದ ಪ್ರಧಾನ ಶಿಲ್ಪಿ ಉಸ್ತಾದ್ ಈಶ. ನಿರ್ಮಾಣಕಾರ್ಯದ ಮೇಲ್ವಿಚಾರಣೆ ನಡೆಸಿದವರು ಮಕ್ರಾಮತ್ ಖಾನ್ ಮತ್ತು ಮೀರ್ ಅಬ್ದಯಲ್ ಕರೀಮ್. ಇದರ ಗೋಪುರಕ್ಕೆ ಭವ್ಯವಾದ ಆಕಾರವನ್ನು ಕೊಟ್ಟವ ಇಸ್ಮೈಲ್‍ಖಾನ್. ಅಲಂಕರಣ ಲಿಪಿಯ ವಿನ್ಯಾಸಕ ಅಮಾನತ್‍ಖಾನ, ಕುಂದಣದ ಕೆಲಸ ಮಾಡಿದವರು ಚಿರಂಜಿಲಾಲ್ ಮನ್ನೂಲಾಲ್ ಮೊದಲಾದವರು.
2700' ಉದ್ದ 1000' ಅಗಲವಿದ್ದು ಉತ್ತರ ದಕ್ಷಿಣವಾಗಿ ಚಾಚಿರುವ ಆಯಾಕಾರದ ಒಂದು ವಿಸ್ತೀರ್ಣವಾದ ಆವರಣ. ಅದನ್ನು ಸುತ್ತುವರಿದ ಪೌಳಿಗೋಡೆ. ದಕ್ಷಿಣಕ್ಕೆ ಹೆಬ್ಬಾಗಿಲು. ಉತ್ತರಕ್ಕೆ ತಾಜ್ ಮಂದಿರ. ತಾಜಿನ ಕಡೆ ಮುಖ ಮಾಡಿ ಅದರ ಪೂರ್ವಪಶ್ಚಿಮಗಳಲ್ಲಿ ಒಂದೇ ವಿನ್ಯಾಸದಲ್ಲಿರುವ ಮಸೀದಿ ಮತ್ತು ಯಾತ್ರಿಗಳು ತಂಗುತ್ತಿದ್ದ ಜಮತ್ ಖಾನ್. ತಾಜ್‍ಗೂ ಅದರ ಹೆಬ್ಬಾಗಿಲಿಗೂ ನಡುವೆ 1800' ಉದ್ದವಾದ ಉದ್ಯಾನ. ಉದ್ಯಾನದ ಮಧ್ಯದಲ್ಲಿ ಉದ್ದವಾದ ಹರಿವ ಕಾಲುವೆ, ಅಲ್ಲಲ್ಲಿ ಚಿಮ್ಮುವ ನೀರಿನ ಬುಗ್ಗೆಗಳು, ನಡುವೆ 75' ಚಚೌಕವಾದ ಕೊಳ. ಕೊಳದ ಎರಡು ಕಡೆಯೂ ಪೌಳಿಗೋಡೆಗೆ ಹೊಂದಿದಂತೆ ಒಂದಕ್ಕೊಂದು ಅನುರೂಪವಾದ ಮತ್ತೆರಡು ಕಟ್ಟಡಗಳು. ಹೆಬ್ಬಾಗಿಲಿನಿಂದ ಹೊರಗೆ ವಿಶಾಲವಾದ ಅಂಗಳ. ಅದರ ಇಕ್ಕೆಲಗಳಲ್ಲಿಯೂ ಯಾತ್ರಿಕರು ತಂಗುವುದಕ್ಕಾಗಿರುವ ಕೋಣೆಗಳು. ಅಂಗಳದಿಂದ ಹೊರಕ್ಕೆ ಒಂದು ಕಡೆ ಮಸೀದಿ ಮತ್ತೊಂದು ಕಡೆ ಮಮ್ತಾಜಳ ಒಡನಾಡಿಗಳಿಬ್ಬರ ಸಮಾಧಿ ಮಂದಿರ. ಇವು ತಾಜ್‍ಮಹಲಿಗೆ ಸೇರಿದ ಒಟ್ಟು ಕಟ್ಟಡಗಳ ವಿನ್ಯಾಸ. ತಾಜಿನ ಮುಂಭಾಗಕ್ಕೆ ಬರಬೇಕಾದರೆ ಷಹಜಹಾನ್ ತೋಟಗಳ ಮೂಲಕ ಬರಬೇಕು.
ಪ್ರವೇಶದ್ವಾರ ಅಷ್ಟಕೋನಾಕೃತಿಯ ಹಜಾರ. ಅಕ್ಕಪಕ್ಕಗಳಲ್ಲಿ ಎರಡಂತಸ್ತಿನ ಕಿರುಕೋಣೆಗಳು. ಮುಂದೆ ಹಿಂದೆ ಸುಂದರವಾಗಿ ಅಲಂಕೃತವಾದ ದ್ವಾರಗಳು. ಇದಕ್ಕೇ ಮೊದಲು ಬೆಳ್ಳಿಯ ಬಾಗಿಲುಗಳಿದ್ದು ಅವುಗಳಿಗೆ ಜೋಡಿಸಿದ್ದ 1100 ಬೆಳ್ಳಿಯ ಮೊಳೆಗಳ ತಲೆಗಳಿಗೆ ಆ ಕಾಲದ ಬೆಳ್ಳಿಯ ನಾಣ್ಯಗಳನ್ನು ಕೆತ್ತಿಸಲಾಗಿತ್ತು. ಕಾಲಕ್ರಮದಲ್ಲಿ ಈ ಬಾಗಿಲುಗಳನ್ನು ತೆಗೆದು ಈಗಿರುವ ಹಿತ್ತಾಳೆಯ ಬಾಗಿಲುಗಳನ್ನಳವಡಿಸಲಾಯಿತು. ಇಕ್ಕೆಲಗಳಲ್ಲಿರುವ ಕೋಣೆಗಳಲ್ಲಿ ತಾಜ್‍ಮಹಲನ್ನು ಕುರಿತ ವಸ್ತುಸಂಗ್ರಹಾಲಯವನ್ನೇರ್ಪಡಿಸಿದೆ. ದ್ವಾರಗಳ ದೊಡ್ಡ ಕಮಾನುಗಳ ಮೇಲೆ ಹನ್ನೊಂದು ಕಿರುಗುಮ್ಮಟಗಳುಳ್ಳ ಸಾಲುಮಂಟಪ. ನಾಲ್ಕು ಮೂಲೆಗಳಲ್ಲಿ ಅಷ್ಟಕೋನಾಕಾರದ ಮಂಟಪಗಳು ಇದ್ದು ತಾಜ್‍ನ ಮೂಲ ಮಂದಿರವನ್ನು ಗಣನೆಗೆ ತಾರದೆ ಇದೊಂದನ್ನೇ ನೋಡಿದಾಗ ಇದೇ ಒಂದು ತುಂಬ ನಾಜೂಕಿನ ಸುಂದರ ಕಟ್ಟಡವೆನಿಸದಿರದು. ಇಲ್ಲಿಂದ ಆವರಣದ ಹಿಂಭಾಗದಲ್ಲಿ 1800' ದೂರದಲ್ಲಿರುವ ತಾಜ್ ಮಂದಿರದ ದೂರನೋಟ ಮೋಹಕವಾದುದು. ಈ ಅಂತರದಿಂದ ನೋಡಿದಾಗ 313' ಚೌಕದ ಜಗತಿಯ ಮೇಲೆ ಒಟ್ಟು 240'ಗಳಿಗೂ ಹೆಚ್ಚು ಎತ್ತರವಿರುವ ಮಂದಿರ ಅಷ್ಟು ಬೃಹತ್ತಾದುದೆಂಬ ಕಲ್ಪನೆಯೇ ಬಾರದು.
ಹೆಬ್ಬಾಗಿಲಿನಿಂದ ತಾಜ್‍ಮಂದಿರದವರೆಗೆ ನೇರವಾದ ನೀರಿನ ಕಾಲುವೆಯಿದೆ. ಅದರ ನಡುವೆ 75' ಚೌಕ 5' ಆಳದ ಅಚ್ಚುಕಟ್ಟಾದ, ಅತ್ಯಂತ ಕರಾರುವಾಕ್ಕಾದ ಅಳತೆಯುಳ್ಳ ಸುಂದರ ಕೊಳ. ಕಾಲುವೆಯ ಎರಡು ಕಡೆಯೂ ಕೆಂಪು ಮರಳುಗಲ್ಲಿನಲ್ಲಿ ಸುಂದರ ವಿನ್ಯಾಸಗಳಿಂದಲಂಕೃತವಾದ ಕಾಲುದಾರಿಗಳು. ಪಕ್ಕದಲ್ಲಿ ಸಾಲು ಸೈಪ್ರೆಸ್ ಮರಗಳು, ಹಚ್ಚನೆಯ ಹುಲ್ಲುಗಾವಲು. ಈ ಸುಂದರ ತೋಟದ ವಿನ್ಯಾಸ ಅಲುಮರ್ದಾನ್ ಖಾನನದು. ತೋಟದ ಉತ್ತರದ ಕೊನೆಯಲ್ಲಿ ಪೂರ್ವಪಶ್ಚಿಮವಾಗಿ ಸುಮಾರು 1000' ಗಳಷ್ಟಿರುವ ಆವರಣದ ಪೂರ್ಣ ಅಡ್ಡಗಲಕ್ಕೂ ಇರುವ ವಿಸ್ತಾರವಾದ ನಾಲ್ಕಡಿ ಎತ್ತರದ ಒಂದು ಜಗತಿ. ಇದು ನದಿಯ ದಂಡೆಯವರೆಗೂ ಚಾಚಿಕೊಂಡಿದ್ದು ನದಿಯಲ್ಲಿ ನೀರು ತುಂಬಿ ಹರಿವಾಗ ಅದರ ಅಲೆಗೂ ಈ ಜಗತಿಯನ್ನು ತಾಡಿಸುತ್ತವೆ. ಜಗತಿಯ ಮೇಲೆ ತಾಜ್ ಮಹಲಿನ ಎರಡು ಕಡೆಯೂ ಇರುವ ಮಸೀದಿ ಮತ್ತು ಜಮತ್‍ಖಾನ್ ಮಂದಿರಗಳು, ಜಗತಿ ಮತ್ತು ಪೌಳಿಗೋಡೆಗಳು -ಎಲ್ಲವೂ ಕೆಂಪು ಮರಳುಗಲ್ಲಿನಿಂದಲೇ ನಿರ್ಮಿತವಾಗಿದ್ದು ಅನಫ್ರ್ಯರತ್ನದಂತಿರುವ ಹಾಲುಬಿಳಿಪಿನ ಅಮೃತಶಿಲೆಯ ಮೂಲ ಮಂದಿರ ತಾಜ್‍ಮಹಲಿಗೆ ಸಂಪುಟದಂತಿವೆ.
ಕೆಂಪು ಮರುಳುಗಲ್ಲಿನ ವಿಶಾಲವಾದ ಈ ಜಗತಿಯ ನಡುವೆ 18' ಎತ್ತರದ ಶಿಲೆಯಿಂದ ನಿರ್ಮಿತವಾದ ಮತ್ತೊಂದು ಉನ್ನತ ಜಗತಿ. 313' ಚಚ್ಚೌಕವಾಗಿರುವ ಈ ಜಗತ್ತಿನ ನಾಲ್ಕು ಮೂಲೆಗಳಲ್ಲೂ ಗುಂಡಾಗಿ ಮೇಲೆದ್ದಿರುವ 140' ಎತ್ತರದ ಮೂರು ಅಂತಸ್ತಿನ ಮಿನರೆಟ್ಟುಗಳು-ಇವುಗಳೊಳಗಿನ ಸುತ್ತೇಣಿಯ ಮೂಲಕ ಮೇಲೇರಿದರೆ ತುದಿಯಲ್ಲಿ ಎಂಟು ತೆಳಗಂಬಗಳ ಮೇಲೆ ನಿಂತಿರುವ ಮಂಟಪ. ಅದರ ಮೇಲೆ ಅರೆಗೋಳಾಕಾರದ ಗುಮ್ಮಟ. ಈ ಎತ್ತರವಾದ ಜಗತಿಯ ನಡುವೆ ಇರುವುದು 186' ಚೌಕದ ತಾಜ್‍ಮಹಲ್. ಮೂಲತಃ ಇದು ಒಂದು ಉನ್ನತವಾದ ಗುಮ್ಮಟವುಳ್ಳ ಚೌಕ ವಿನ್ಯಾಸದ ಕಟ್ಟಡ. ಇದಕ್ಕೆ ನಾಲ್ಕೂ ಕಡೆಯೂ ಪ್ರವೇಶದ್ವಾರವಿರುವಲ್ಲಿ, ಮುಂಚಾಚಿರುವಂತೆ ಒಂದು ಅಗಲವಾದ ಕಮಾನು. ಅದರ ಎರಡು ಕಡೆಯೂ ಒಂದರ ಮೇಲೊಂದರಂತಿರುವ ಸಣ್ಣ ಪ್ರಮಾಣದ ಕಮಾನುಗಳು. ಮೂಲೆಗಳನ್ನು 34' ಗಳಷ್ಟು ಸವರಿ ಅಲ್ಲಿಯೂ ಒಂದರ ಮೇಲೊಂದರಂತೆ ಕಮಾನುಗಳಿರುವುದರಿಂದ ಈ ಕಟ್ಟಡದ ಹೊರವಿನ್ಯಾಸ ಪೂರ್ಣವಾಗಿ ಚೌಕವಾಗಿಲ್ಲದೆ ಎಂಟು ಮೂಲೆಗಳನ್ನು ಹೊಂದಿದಂತಿದೆ. ಮಧ್ಯ ಹಜಾರದ ಮೇಲಿನ 80' ಎತ್ತರವಿರುವ ಬೃಹದ್ಗುಮ್ಮಟ ಮೊದಲು ಗುಂಡಾಗಿ ಕೊಳಗದಾಕಾರದಲ್ಲಿ ಮೇಲೆದ್ದು ಅನಂತರ ಅರ್ಧಕ್ಕಿಂತ ಸ್ವಲೊ ಹೆಚ್ಚಾದ ಗೋಲ ಪ್ರಮಾಣದಲ್ಲಿ ಆಕೃತಿಗೊಂಡಿದೆ. 58' ಗಳಷ್ಟು ವ್ಯಾಸವುಳ್ಳ ಈ ಗೋಲದ ಮೇಲಿನ ಕಂಚಿನ ಕಲಶವೇ 30' ಎತ್ತರವಿದೆ. ಈ ಬೃಹದ್ಗುಮ್ಮಟ ನಾಲ್ಕು ಕಡೆಯೂ 27' ವ್ಯಾಸವುಳ್ಳ ನಾಲ್ಕು ಕಿರುಗುಮ್ಮಟಗಳುಂಟು. ಕಮಾನಿನ ಸುತ್ತಲೂ ಸುಮಾರು 100' ಎತ್ತರವಿರುವ ಗೋಡೆಯ ಮೇಲೆ ಕುರಾನಿನ ಭಾಗಗಳನ್ನು ಕಂಡರಿಸಿದ್ದು ಮೇಲೆ ಹೋಗುತ್ತ ಅಕ್ಷರಗಳ ಗಾತ್ರ ದೊಡ್ಡದಾಗುತ್ತ ಹೋಗುತ್ತದೆ. ಇದರಿಂದ ನೋಡುವವರಿಗೆ ಎಲ್ಲ ಅಕ್ಷರಗಳೂ ಒಂದೇ ಗಾತ್ರಸವಂತೆ ಭಾಸವಾಗುತ್ತದೆ. ನಾಲ್ಕು ದಿಕ್ಕುಗಳಲ್ಲಿಯೂ ಪೂರ್ಣ ಅನುರೂಪವುಳ್ಳ ಅತ್ಯಂತ ಸಮರ್ಪಕವಾದ ಸಮ ಸೂತ್ರವುಳ್ಳ ರಚನೆ ಈ ಮಂದಿರದ್ದು.
ಒಳಹೊಕ್ಕರೆ ನಡುವೆ ಚೌಕನಾದ ದೊಡ್ಡ ಹಜಾರ. ಅದರ ಸುತ್ತಲೂ ಎರಡಂತಸ್ತಿನ ಕೋಣೆಗಳು. ಹಜಾರದ ಮೇಲೆ ತುಂಬ ಎತ್ತರವಾದ ಪೊಳ್ಳು ಗುಮ್ಮಟ. ಕೆಳಗೆ ನುಡುಸಿದ ಒಂದು ರಾಗಲಹರಿ ಮೇಲೆ ಮೊದಲು ಪ್ರತಿಧ್ವನಿಸಿ ಮಂದವಾಗಿ ಕರಗಿಹೋಗಿ ಮತ್ತೆ ಇದ್ದಕ್ಕಿಂದಂತೆ ದೂರದಲ್ಲೆಲ್ಲಿಯೂ ಹಲವು ಬಾರಿ ಗಂಭೀರವಾಗಿ ಮಾರ್ದನಿಸಿ ಗಂಧರ್ವಲೋಕದ ಅಪೂರ್ವ ಅನುಭವವನ್ನೊದಗಿಸುತ್ತದೆ. ಹಜಾರದ ನಟ್ಟ ನಡುವೆ ನೆಲಮಾಳಿಗೆಯಲ್ಲಿರುವ ಮಮ್ತಾಜ್‍ಮಹಲಳ ಗೋರಿಯ ಮೇಲೆ ಸರಿಯಾಗಿ ಸಮಾಧಿ ಶಿಲೆಯುಂಟು. ಇದರ ಒಂದು ಪಕ್ಕದಲ್ಲಿರುವ ಮತ್ತೊಂದು ಸಮಾಧಿ ಶಿಲೆ ಷಹಜಹಾನನ ಗೋರಿಯ ಮೇಲಿನದು. ಈ ಸಮಾಧಿ ಶಿಲೆಗಳನ್ನು ಸುತ್ತುವರಿದು ಒಂದು ಅಮೃತಶಿಲೆಯ ಅಡ್ಡ ತೆರೆಯೊಂದಿದ್ದು ಸಮೃದ್ಧವಾಗಿ ಅಲಂಕರಿಸುವ ಅದರ ಜಾಲಂಧರದ ಕಂಡರಣಿ ಸುಂದರ ಹೂಗಳ ಬಳ್ಳಿಗಳ ಆಕಾರ ತಳೆದಿದೆ. ಮೊದಲು ಈ ಅಡ್ಡ ತೆರೆಗಳು ಚಿನ್ನದ ಹಲಗೆಗಳಿಂದಲೇ ನಿರ್ಮಿತವಾಗಿದ್ದುವೆಂದೂ ಷಹಜಹಾನ್ ತೀರಿಕೊಂಡ ಮೇಲೆ ಔರಂಗಜೇಬ ಮಮ್ತಾಜ್ ಮಹಲಳ ಗೋರಿಯ ಪಕ್ಕದಲ್ಲಿಯೇ ಆತನ ಗೋರಿಯನ್ನೂ ಮಾಡಿಸಿ ಚಿನ್ನದ ತೆರೆಯನ್ನು ತೆಗೆಸಿ ಈಗಿನ ಅಮೃತಶಿಲೆಯ ತೆರೆಯನ್ನು ನಿಲ್ಲಿಸಿದನೆಂದೂ ತಿಳಿದುಬರುತ್ತದೆ.
ತಾಜ್‍ಮಹಲಿನ ಇಡೀ ಮಂದಿರ ಅತ್ಯಂತ ಶುದ್ಧವಾದ, ದಂತದಂತೆ ನಯಗೊಳಿಸಿದ ಹಾಲುಬಿಳುಪಿನ ಅಮೃತಶಿಲೆಯಿಂದ ನಿರ್ಮಿತವಾಗಿದೆ. ಗೋಡೆಗಳಲ್ಲಿ ನೂರಾರು ಬಗೆಯ ಬಣ್ಣ ಬಣ್ಣದ ಪ್ರಶಸ್ತ ಶಿಲೆಗಳನ್ನು ಕೆತ್ತಿಸಿ ಮಾಡಿರುವ ಕುಂದಣ ಕೆಲಸದಲ್ಲಿ ಹೂಗಳ ಬಳ್ಳಿಗಳ ಎಲೆಗಳ ಸ್ವಾಭಾವಿಕ ರಚನೆಗಳನ್ನು ಸಾಧಿಸಿರುವುದು ಅಮೋಘವಾದುದು. ಇಲ್ಲಿ ಉಬ್ಬಿಸಿ, ಬಿಡಿಸಿರುವ ಅಲಂಕರಣದ ಕೆಲಸ ಕಡಿಮೆಯೇ. ಒಟ್ಟು ಕಟ್ಟಡ ಸರಳವಾದುದಾಗಿ ಕಂಡರೂ ಅದರಲ್ಲಿನ ಅತಿ ಸೂಕ್ಷವಾದ ತೆರಪು ಚಿತ್ರದ ಕೆಲಸ ಅಪೂರ್ವವಾದುದು. ಈ ತೆರನಾದ ಅತ್ಯಂತ ಬೆಲೆಬಾಳುವ ಕುಂದಣದ ಕೆಲಸವನ್ನು ಸಮಾಧಿಶಿಲೆಗಳ ಮೇಲೆ ತೆರೆಗಳ ಮೇಲೆ, ಗೋಡೆಗಳ ಮೇಲೆ, ಅಕ್ಕ ಪಕ್ಕಗಳಲ್ಲಿರುವ ಮಸೀದಿ ಜಮತ್‍ಖಾನ, ಹೆಬ್ಬಾಗಿಲಿನ ಗೋಡೆಗಳ ಮೇಲೆಲ್ಲ ಕಾಣಬಹುದು. ಮೊಗಲ್ ಶೈಲಿಯಲ್ಲಿ ಕಾಲಕ್ರಮೇಣ ಬೆಳೆದುಬಂದ ಹಿಂದೂ ಮುಸ್ಲಿಂ ಶೈಲಿಗಳ ಮಧುರ ಸಮ್ಮಿಳನದ ಅತ್ಯುಚ್ಚಮಟ್ಟವನ್ನು ಇಲ್ಲಿ ಕಾಣಬಹುದು. ಮೊದಲಿನ ಮುಸ್ಲಿಂ ಶೈಲಿಯ ಕಟ್ಟಡಗಳಿರುವ ಸ್ಥೂಲರಚನೆಯನ್ನು ಕ್ರಮೇಣ ಕಡಿಮೆಮಾಡಿ ನವುರು ನಯ ನಾಜೂಕುಗಳಿಗೆ ಪ್ರಾಶಸ್ತ್ಯವಿತ್ತು ಬೆಳೆಸಿದ ಅಕ್ಬರನ ಕಾಲದ ಕಟ್ಟಡಗಳಿಗಿಂತ ಹೆಚ್ಚಾಗಿ ಜಹಂಗೀರನ ಕಾಲದ ಅದರಲ್ಲಿಯೂ ನೂರ್ಜಹಾನ್ ತನ್ನ ತಂದೆಯ ಸಮಾಧಿಯ ಮೇಲೆ ನಿರ್ಮಿಸಿದ ಇತ್ಮದ್ ಉದ್ದೌಲ ಮಂದಿರದ ಶೈಲಿ ತಾಜ್‍ಮಹಲ್ ಮಂದಿರದ ನಿರ್ಮಾಣಕ್ಕೆ ಸ್ಫೂರ್ತಿ.
ತಾಜ್‍ಮಹಲ್ ಅಮೃತಶಿಲೆಯಲ್ಲಿ ರಚಿತವಾದ ಒಂದು ಸುಂದರ ಕಾವ್ಯ. ಮುಂದೆ ನಿಂತೊಡನೆಯೇ ಯಾತ್ರಿಕರನ್ನು ಮಂತ್ರಮುಗ್ಧರನ್ನಾಗಿಸುವ ಅದರ ಶ್ರೇಷ್ಠ ಮಟ್ಟದ ವಾಸ್ತುಶಿಲ್ಪ ಸೌಂದರ್ಯೊಪಾಸಕರಿಗೆ ಒಂದು ರಸದೌತಣ. ಗಂಡು ಹೆಣ್ಣಿನ ಬಗ್ಗೆ ತೋರಿಸಬಹುದಾದ ಪ್ರೀತಿಯ ಅತ್ಯುಚ್ಚಮಟ್ಟದ ಪ್ರತೀಕ. ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತನಾಗಿದ್ದ ಚಕ್ರವರ್ತಿಯೊಬ್ಬನ ಪ್ರಾಜ್ವಲ್ಯ ಮಾನವಾದ ಕನಸಿನ ನನಸು. ಕಟ್ಟಿ ಶತಮಾನಗಳುರುಳಿದ್ದರೂ ಮಹೋನ್ನತವಾದ ಮನೋಜ್ಞ ಕಲೆಯಾಗಿ ಉಳಿದುಬಂದಿರುವುದು ಅದರ ಮೋಹಕ ವಿನ್ಯಾಸ. ಈಗಷ್ಟೇ ರಚಿಸಿ ಮುಗಿಸಿರುವಷ್ಟು ಅದು ಹೊಚ್ಚಹೊಸತು. ಸೂಕ್ತವಾದ ಸ್ಥಳವನ್ನಾಯುವುದರಿಂದ ಆರಂಭಿಸಿ ಅದರ ಅತ್ಯಂತ ಸೂಕ್ಷ್ಮ ಕೆತ್ತನೆಯವರೆಗೆ ಪೂರ್ಣ ಗಮನ ಕೊಟ್ಟು ಮುಗಿಸಿರುವ ಅದರ ರಚನೆ ದಂಗುಬಡಿಸುವಷ್ಟು ಆಶ್ವರ್ಯಕರ. ನಡುಹಗಲಿನ ಪ್ರಜ್ವಲಿಸುವ ಬಿಸಿಲನ್ನು ಪ್ರತಿಫಲಿಸುವ ಈ ಹಾಲುಗಲ್ಲಿನ ಮಂದಿರದ ದೂರನೋಟ ಆಚ್ಚರಿ ಹುಟ್ಟಿಸುವಷ್ಟು ಸುರಮ್ಯ. ಊಹೆಗೂ ನಿಲುಕದಷ್ಟು ಭವ್ಯ ಗಾಂಭೀರ್ಯವನ್ನು ಪಡೆದ ಅನುಪಮವಾದ ನೈಪುಣ್ಯದ ರಚನೆ ಅದರದು. ಗಂಭೀರವಾದ ಬೃಹದ್ಗಾತ್ರದ ಆ ಮಂದಿರದಲ್ಲಿ ಹಿಂದೆಂದೂ ಕಾಣದಂಥ ಲಾವಣ್ಯಮಯವಾದ ಸೊಬಗು ಮೈಗೂಡಿರುವುದು ಅಲ್ಲಿನ ಕಲೆಯ ಒಂದು ಚಮತ್ಕಾರ. ಆದ್ದರಿಂದಲೇ ಪ್ರಪಂಚದ ಆಶ್ವರ್ಯಗಳಲ್ಲಿ ಒಂದೆಂಬ ಹೆಗ್ಗಳಿಕೆ ಅದಕ್ಕೆ. ಅದರ ಅತ್ಯಂತ ಮೋಹಕ ನೋಟ ಹುಣ್ಣಿಮೆಯ ರಾತ್ರಿ ಬೆಳದಿಂಗಳಲ್ಲಿ; ಆಗಲೇ ಅದರ ನವುರು ಬಳುಕು ಅನುಭವಕ್ಕೆ ಬರುವುದು. ಅದನ್ನು ಕಣ್ಣಾರೆ ನೋಡದವರಿಗೆ ಅದರ ಸಂಪೂರ್ಣವಾದ ಅರಿವನ್ನುಂಟುಮಾಡಿ ಕೊಡುವುದು ಅಸಾಧ್ಯವೇ ಸರಿ - ಎಂದು ಫರ್ಗೂಸನ್ ಹೇಳಿದ್ದಾನೆ. ತಾಜನ್ನು ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಮಂದಿರವೆಂದು ಪರಿಗಣಿಸಲಾಗಿದೆ. ಆದರೆ ಅದು ಅಷ್ಟೇ ಅಲ್ಲ. ಅದು ಪ್ರೇಮದ ಘನೀಕರಣ. ತಾಜ್ ಮಂದಿರವನ್ನು ಯಾರು ತಾನೇ ವರ್ಣಿಸಬಲ್ಲರು? ಸೌಂದರ್ಯದ ಸಾರಭೂತ, ಅತ್ಯಂತ ಸುಂದರವಾದುದಕ್ಕಿಂತ ಹೆಚ್ಚು ಸುಂದರ. ದೈವೀಸೌಂದರ್ಯದ ಒಂದು ಕನಸು. ಒಂದಕ್ಕೊಂದು ಪೂರಕವಾದ ಅದರ ಬಗೆಬಗೆಯ ಅಲಂಕರಣಗಳ ಶ್ರೀಮಂತಿಕೆ, ನಿರ್ದುಷ್ಟ ಆಕಾರ, ಅತಿ ಸೂಕ್ಷ್ಮವಾದ ಶೃಂಗಾರ - ಇವುಗಳನ್ನು ವರ್ಣಿಸಲು ಮಾತು ಸಾಲವು. ಪ್ರಪಂಚದ ಮೂಲೆ ಮೂಲೆಗಳಲ್ಲಿ ಬಂದ ಬಗೆಬಗೆಯ ಪ್ರವಾಸಿಗಳು ಉದ್ಗರಿಸಿಸುವ ಇಂಥ ಮೆಚ್ಚಿಕೆಯ ಮಾತುಗಳಿಗೆ ಲೆಕ್ಕವಿಲ್ಲ.
ತಾಜ್‍ಮಹಲಿಗೆ ಎದುರಾಗಿ ನದಿಯ ಮತ್ತೊಂದು ದಡದಲ್ಲಿ ಕರಿಯ ಅಮೃತಶಿಲೆಯಲ್ಲಿ ಅದೇ ವಿನ್ಯಾಸದ ಮತ್ತೊಂದು ಸಮಾಧಿ ಮಂದಿರವೊಂದನ್ನು ತನಗಾಗಿ ನಿರ್ಮಿಸಲು ಷಹಜಹಾನ್ ಇಚ್ಛಿಸಿದ್ದು ಅದರ ಕೆಲಸ ಆರಂಭವಾಗಿತ್ತು. ಆದರೆ ಕೆಲಕಾಲದಲ್ಲಿಯೇ ಅವನ ಮಕ್ಕಳಲ್ಲಿ ರಾಜ್ಯಕ್ಕೆ ಬಡಿದಾಟವಾಗಿ ಔರಂಗಜೇಬ್ ವಿಜೇತನಾಗಿ ಬಂದಾಗ ಷಹಜಹಾನ್ ರಾಜಬಂಧಿಯಾಗಿ ಕೋಟೆಯಲ್ಲಿ ತನ್ನ ಉಳಿದ ದಿನಗಳನ್ನು ಕಳೆದುದರಿಂದ ಅವನ ಇಚ್ಛೆ ಪೂರೈಸಲಿಲ್ಲ. ತನ್ನಕಡೆಯ ಉಸಿರು ಬಿಡುವಾಗಲೂ ಆತ ತನ್ನ ಅತ್ಯಂತ ಮೆಚ್ಚಿಗೆಯ ಮಂದಿರವಾದ ತಾಜಿನತ್ತಲೇ ದೃಷ್ಟಿ ನೆಟ್ಟಿದ್ದನಂತೆ.
ಆದರೂ ಮಹಲಿನ ಶಿಲ್ಪಶೈಲಿಯ ಹಾಗೂ ಅದಕ್ಕಾಗಿ ಸೂರೆಯಾಗಿರುವ ಐಶ್ವರ್ಯದ ಬಗೆಗೆ ಅಸಮಾಧಾನ ಸೂಚಿಸಿರುವವರೂ ಕೆಲವರುಂಟು. ಪ್ರಸಿದ್ಧ ಪ್ರವಾಸಿಗ ಹಾಗೂ ಕಾದಂಬರಿ ಲೇಖಕ ಆಲ್ಡಸ್ ಹಕ್ಸ್ಲೀಗೆ ತಾಜನ್ನು ನೋಡಿದಾಗ ಆಶಾಭಂಗವಾಯಿತಂತೆ. ಅದಕ್ಕಾಗಿ ಆದ ನಂಬಲಾಗದಷ್ಟು ಹೆಚ್ಚಿನ ವೆಚ್ಚ ಹಾಗೂ ಅದರ ಸುತ್ತಲ ಆವರಣ ಅದನ್ನು ಅನೇಕರು ಮೆಚ್ಚುವಂತೆ ಮಾಡಿರಬಹುದು. ಆದರೆ ಅದರ ವಾಸ್ತುಶಿಲ್ಪ ಸೈಲಿಯ ಸೊಬಗು ತೀರ ಶುಷ್ಕ ಮತ್ತು ಅಭಾವಾತ್ಮಕವಾಗಿದ್ದು ಅದರಲ್ಲಿ ಕಲ್ಪನಾದಾರಿದ್ರ್ಯ ಅಭಿರುಚಿಯ ಕೊರತೆ ಎದ್ದು ಕಾಣುತ್ತದೆ - ಎಂದು ಆತ ಹೇಳಿದ್ದಾನೆ. ಕೆಲವರಿಗಂತೂ ಅದು ನಿರಂಕುಶ ಪ್ರಭುಗಳ ದಬ್ಬಾಳಿಕೆಯ ಮತ್ತು ಜೀವನವಿಡೀ ದುಡಿಸಿದ ಬಡಜನತೆಯ ದುಡಿಮೆಯ ಪ್ರತೀಕವಾಗಿ ಕಂಡುಬಂದಿದೆ. ಪಿ.ಎನ್, ಓಕ್ ಎಂಬ ವಿದ್ವಾಂಸರು ಅದು ಹಂದೂರಾಜನ ಅರಮನೆಯಾಗಿತ್ತೆಂದೂ ಅದನ್ನು ಅನಂತರ ಗೋರಿಯಾಗಿ ಉಪಯೋಗಿಸಲಾಯಿತೆಂದೂ ಹೇಳಿರುವುದುಂಟು. ವೈಸ್ರಾಯ್ ಆಗಿದ್ದ ವಿಲಿಯಂ ಬೆಂಟಿಂಕ್ ತಾಜನ್ನು ಕೆಡವಿಸಿ ಅದರ ಕಲ್ಲನ್ನು ಮಾರಿಬಿಡುವಂತೆ ಸಲಹೆ ಮಾಡಿದ್ದನಂತೆ. (ಎಂ.ಎಸ್)